ಸುಳ್ಯದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಎರಡು ವಾರಗಳ ಹಿಂದೆ ಸುಳ್ಯ ನಗರದ ಕಸದ ಬಗ್ಗೆ ಚಿತ್ರನಟ, ಸಾಮಾಜಿಕ ಕಾರ್ಯಕರ್ತ ಅನಿರುದ್ಧ ಅವರು ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇಡೀ ರಾಜ್ಯಾದ್ಯಂತ ಚರ್ಚೆಯೂ ಆಗಿತ್ತು. ಇದೀಗ ದೇವಚಳ್ಳ ಗ್ರಾಮದ ಯುವಕನೊಬ್ಬ ಕಚೇರಿಗೆ ಅಲೆದು ಅಲೆದು ಯಾವುದೇ ಫಲ ಸಿಗದೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಿರುವ ಮನವಿಯ ವಿಡಿಯೋ ಕೂಡಾ ವೈರಲ್ ಆಗಿದೆ.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ನಿವಾಸಿ ಶರತ್ ಕುಮಾರ್ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಕೆಲವು ಸಮಯದ ಹಿಂದೆ ಮಕ್ಕಳಿಗೆ ಶಿಕ್ಷಣ ಹಾಗೂ ಕೃಷಿಯ ಉದ್ದೇಶದಿಂದ ಊರಿಗೆ ಮರಳಿದ್ದರು. ಎಲಿಮಲೆ ಬಳಿ ನಿವೇಶನ ಖರೀದಿ ಮಾಡಿದ್ದರು. ಹಲವು ಬಾರಿ ಅಲೆದಾಟದ ಬಳಿಕ ನಿವೇಶನ ಕನ್ವರ್ಶನ್ ಮಾಡಿಸಿಕೊಂಡಿದ್ದರು. ಅದಾದ ಬಳಿಕ ಅಲ್ಲಿಯೇ ವಾಸ ಇದ್ದು 9/11 ಗೆ ಪಡೆಯಲು ಅಲೆದಾಟ ಮಾಡುತ್ತಲೇ ಇದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಹೋದರೂ ನಿವೇಶನ 9/11 ಹಾಗೂ ಮನೆ ನಂಬರ್ ದೊರೆತಿಲ್ಲ. ಇದರಿಂದಾಗಿ ಮನೆ ಪೂರ್ಣಗೊಳಿಸಲು ಬೇಕಾದ ಬ್ಯಾಂಕ್ ಸಾಲ ಮಾಡಲೂ ಸಾಧ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ ವ್ಯವಸ್ಥೆಯ ಬಗ್ಗೆ ರೋಸಿ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಅವರ ಗಮನ ಸೆಳೆಯಲು ಮನವಿ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಹಲವು ಮಂದಿ ಶರತ್ ಕುಮಾರ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಂತಹ ಸಮಸ್ಯೆ ಕೃಷಿ ಹಾಗೂ ಗ್ರಾಮೀಣ ಭಾಗವನ್ನು ನೆಚ್ಚಿ ಬಂದಿರುವ ನನ್ನಂತಹವರಿಗೆ, ಸಮಾಜದಲ್ಲಿನ ಬಡವರಿಗೆ ಬಾರದೇ ಇರಲಿ ಎಂದು ಮನವಿ ಮಾಡಿದ್ದಾರೆ ಶರತ್ ಕುಮಾರ್.
ಸುಳ್ಯದಲ್ಲಿ ಕಳೆದ ವಾರ ಕಸದ ಬಗ್ಗೆಯೂ ಇದೇ ಮಾದರಿಯ ಚರ್ಚೆಯಾಗಿತ್ತು. ಸುಳ್ಯದ ಸುಪ್ರೀತ್ ಮೋಂಟಡ್ಕ ಅವರು ಚಿತ್ರನಟ ಅನಿರುದ್ಧ ಅವರ ಗಮನಕ್ಕೆ ಸುಳ್ಯದ ಕಸದ ಬಗ್ಗೆ ಗಮನಕ್ಕೆ ತಂದಿದ್ದರು. ಈ ಬಗ್ಗೆ ಅನಿರುದ್ಧ ಅವರು ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ವಿಡಿಯೋ ಮಾಡಿ ಗಮನ ಸೆಳೆದಿದ್ದರು. ಆ ವಿಡಿಯೋ ಕೂಡಾ ವೈರಲ್ ಆಗಿತ್ತು.
ಸುಳ್ಯದಲ್ಲಿ ಇಲಾಖೆಗಳಿಂದ ತೊಡಗಿ ಹಲವು ಮೂಲಭೂತ ಸಮಸ್ಯೆಗಳಿಗೆ ಮುಕ್ತಿ ಸಿಗದೇ ಇರುವುದು ಇದೀಗ ಜನರೇ ಅಸಹನೆ ವ್ಯಕ್ತಪಡಿಸುವಂತಾಗಿದೆ. ಸುಳ್ಯದ ಹಲವು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಯಾಗುತ್ತಿದೆ. ಆದರೂ ಪರಿಹಾರ ಮಾತ್ರಾ ಕಾಣುತ್ತಿಲ್ಲ.
ಗ್ರಾಮೀಣ ಭಾಗ, ಕೃಷಿಯ ಕಡೆಗೆ ಆಸಕ್ತರಾಗಿ , ಮಕ್ಕಳ ಶಿಕ್ಷಣದ ಕಡೆಗೂ ಗಮನಹರಿಸಿ ಊರಿಗೆ ಮರಳಿರುವ ಯುವಕನೊಬ್ಬ ಸಂಕಷ್ಟ ಪಡುವಂತಾಗಿದೆ. ಆತ್ಮನಿರ್ಭರ ಹೆಸರಿನಲ್ಲಿ ಯುವಕರು ಹಳ್ಳಿಯಲ್ಲಿ ನೆಲೆಯೂರಲು ಬೇಕಾದ ವ್ಯವಸ್ಥೆ ಮಾಡಿಸಲಾಗುತ್ತದೆ ಎನ್ನುವ ಯಾರೊಬ್ಬರೂ ಶರತ್ ಅವರ ಸಮಸ್ಯೆ ನಿವಾರಣೆಗೆ ಮುಂದಾಗದೇ ಇರುವುದು ದೌರ್ಭಾಗ್ಯ.