ಕೊರೋನಾ ವೈರಸ್ ಹಬ್ಬಬಹುದೆಂಬ ಆತಂಕದಿಂದ ಹೋಟೆಲಿನಿಂದ ಅನೇಕರು ದೂರವಿದ್ದರು. ಇಂತಹವರಿಗೆ ಮನೆಯಲ್ಲಿ ಆಹಾರ ತಯಾರಿಸಿ ಪೂರೈಸಿದರೆ ಹೇಗೆ? ಯೋಚನೆ ಗರಿಗೆದರಿತು. ಇವರ ‘ಬುತ್ತಿಯೂಟ’ದ ಕಲ್ಪನೆಗೆ ಪುತ್ತೂರಿನ ಅನೇಕರು ಸ್ಪಂದಿಸಿದರು. ಸುಮಾರು ಎರಡು ತಿಂಗಳಾಯಿತು, ಈಗ ಆದರ್ಶ ಸುಮಾರು ಐವತ್ತರಷ್ಟು ಮಂದಿಗೆ ಮಧ್ಯಾಹ್ನ, ರಾತ್ರಿಯ ‘ಬುತ್ತಿಯೂಟ’ ಸಿದ್ಧಪಡಿಸಿ ಒದಗಿಸುತ್ತಾರೆ.
ಇದಕ್ಕಾಗಿ ತಮ್ಮ ಮನೆಯ ಒಂದು ಪಾಶ್ರ್ವವನ್ನು ‘ದೇವಕಾರ್ಯ’ ಆಹಾರೋತ್ಪನ್ನ ಘಟಕವನ್ನಾಗಿ ಪರಿವರ್ತಿಸಿದ್ದಾರೆ. ‘ಮನೆ ರುಚಿ – ಮನ ಖುಷಿ’ ಎನ್ನುವುದು ಉದ್ಯಮದ ಟ್ಯಾಗ್‍ಲೈನ್. ಊಟದ ಮೆನು ‘ಕಿಸೆಸ್ನೇಹಿ’! ಐವತ್ತು ರೂಪಾಯಿ. ಅನ್ನ, ಸಾಂಬಾರ್, ಪಲ್ಯ, ಮೆಣಸು, ಮಜ್ಜಿಗೆ, ಉಪ್ಪಿನಕಾಯಿ.. ಬುತ್ತಿ ಪಾತ್ರೆ ಅಥವಾ ಬಳಸಿ ಬಿಸಾಡಬಹುದಾದ ಪೊಟ್ಟಣಗಳಲ್ಲಿ ಸರಬರಾಜು.
ಬೆಳಿಗ್ಗೆ ಹತ್ತೂವರೆ ತನಕ ಆರ್ಡರ್ ಸ್ವೀಕಾರ. ಬೆಳಿಗ್ಗೆ ಎಂಟು ಗಂಟೆಯ ಒಳಗೆ ಸೂಚಿಸಿದವರಿಗೆ ಕುಚ್ಚಲಕ್ಕಿಯ ಅನ್ನ. ನಂತರ ಆದೇಶ ನೀಡಿದವರಿಗೆ ಬೆಳ್ತಿಗೆ. ವಾಹನದಲ್ಲಿ ಮನೆ, ಕಚೇರಿಗಳಿಗೆ ವಿತರಣೆ. ಮಧ್ಯಾಹ್ಣ ಒಂದು ಗಂಟೆಯೊಳಗೆ ಎಲ್ಲಾ ಆರ್ಡರುಗಳು ಮುಗಿದುಹೋಗುತ್ತದೆ. ಸದ್ಯ ಪುತ್ತೂರು ನಗರ ವ್ಯಾಪ್ತಿ. ಆದೇಶ ನೋಡಿಕೊಂಡು ವಿಸ್ತರಿಸುವ ಯೋಚನೆಯಿದೆ.
ಈ ಕಲ್ಪನೆಯ ಬೀಜಾಂಕುರವಾದುದು ಹೇಗೆ? ಆದರ್ಶ ಹೇಳುತ್ತಾರೆ, “ಲಾಕ್‍ಡೌನ್ ಸಮಯದಲ್ಲಿ ಒಬ್ಬರು ಹಿರಿಯರು ಮನೆಗೆ ಬಂದು ತನಗೆ ಊಟದ ವ್ಯವಸ್ಥೆ ಮಾಡಿಕೊಡಬೇಕೆಂದು ವಿನಂತಿಸಿದರು. ಇವರ ಬೇಡಿಕೆಯು ನನ್ನ ಈ ಸ್ಟಾರ್ಟಪ್ ಯೋಜನೆಗೆ ನಾಂದಿಯಾಯಿತು. ಶೈಕ್ಷಣಿಕ ಸಂಸ್ಥೆಗಳು ಆರಂಭವಾದ ಮೇಲೆ ಏನಿಲ್ಲವೆಂದರೂ ನೂರರಿಂದ ನೂರೈವತ್ತರಷ್ಟು ಗ್ರಾಹಕರು ಸಿಗಬಹುದೆಂಬ ವಿಶ್ವಾಸವಿದೆ.”
ಭಾವ ರಾಕೇಶ್, ತಂಗಿ ಅನನ್ಯ, ಪತ್ನಿ ಸುಮಿತ್ರಾ, ತಾಯಿ ಸರ್ವೇಶ್ವರೀ, ತಂದೆ ಸುಬ್ರಹ್ಮಣ್ಯ – ಇವರೆಲ್ಲಾ ಆದರ್ಶರ ‘ದೇವಕಾರ್ಯ’ದ ಆಧಾರ ಸ್ತಂಭಗಳು. ಬುತ್ತಿಯೂಟ ಅಲ್ಲದೆ ಚಿಕ್ಕ ಪುಟ್ಟ ಕಚೇರಿ ಸಮಾರಂಭ, ಮನೆಯ ಸಮಾರಂಭಗಳಿಗೂ ಭೋಜನದ ವ್ಯವಸ್ಥೆಯನ್ನು ಪೂರೈಸುತ್ತಾರೆ.
ಈಚೆಗೆ ಸಿಹಿತಿಂಡಿಗಳನ್ನು ಒದಗಿಸುವಂತೆ ಗ್ರಾಹಕರಿಂದ ವಿನಂತಿ ಬಂದಿದೆ. ವಾರಕ್ಕೊಮ್ಮೆ ಒಂದೊಂದು ಸಿಹಿತಿಂಡಿಯನ್ನು ತಯಾರಿಸುವ ಅಡಿಗಟ್ಟು ಮಾಡಿಕೊಂಡಿದ್ದಾರೆ. ವಿವಿಧ ಬಗೆಯ ಹೋಳಿಗೆಗಳು, ಹಲ್ವ, ಲಾಡು, ಜಿಲೇಬಿ.. ಹೀಗೆ ವೈವಿಧ್ಯ ಸಿಹಿತಿಂಡಿಗಳು.
ಬೆಳಿಗ್ಗೆ ಕಚೇರಿಗೆ ತೆರಳುವವರಿಗೆ ಬುತ್ತಿ ತಯಾರಿಸುವುದು ಒಂದು ಸವಾಲು. ಬೆಳಿಗ್ಗೆ ಮಾಡಿದ ಅನ್ನ, ಸಾಂಬಾರ್ ಮಧ್ಯಾಹ್ನಕ್ಕೆ ಬಿಸಿ ಕಳೆದುಕೊಂಡಿರುತ್ತದೆ. ಜತೆಗೆ ಕೊರೋನಾ ಭಯ. ಈ ಎಲ್ಲಾ ಒತ್ತಡಗಳ ಹಿನ್ನೆಲೆಯಲ್ಲಿ ‘ದೇವಕಾರ್ಯ’ದ ವ್ಯವಸ್ಥೆ ಅನೇಕರಿಗೆ ತೃಪ್ತಿ ನೀಡಿದೆ.
ಲಾಕ್‍ಡೌನಿನಿಂದಾಗಿ ಆದರ್ಶ ಅಧೀಕರರಾಗಲಿಲ್ಲ. ತನ್ನ ಕಾಲ ಮೇಲೆ ನಿಲ್ಲುವ ಛಲ. “ಈ ವ್ಯವಸ್ಥೆಯಲ್ಲಿ ನಾನು ಯಶಸಸ್ಸಾಗುತ್ತೇನೆ, ನೊಡ್ತಾ ಇರಿ,” ಎಂದು ವಿಶ್ವಾಸದಿಂದ ನುಡಿಯುತ್ತಾರೆ.
ಆದರ್ಶ : 84319 32033