ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆ ಕ್ಷೇತ್ರಕ್ಕೆ ಪ್ರತೀ ವರ್ಷ ಭೇಟಿ ನೀಡುವ ದೇವೇ ಗೌಡರು ಈ ಬಾರಿಯೂ ಕ್ಷೇತ್ರ ದರ್ಶನ ಮಾಡಿದ್ದಾರೆ. ಈ ಬಾರಿ ಬಿಡುವಿನ ನಡುವೆ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ಓದುತ್ತಾ ಕುಳಿತಿದ್ದರು.
ಭಾನುವಾರ ಸಂಜೆ ಹೆಲಿಕ್ಟಾಪರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಬೇಕಿದ್ದ ದೇವೇ ಗೌಡರು ಪ್ರತಿಕೂಲ ಹವಾಮಾನದ ಕಾರಣದಿಂದ ಹೆಲಿಕಾಪ್ಟರ್ ಬಾರದೆ ವಿಮಾನ ಮೂಲಕ ಮಂಗಳೂರು ಬಂದು ಅಲ್ಲಿಂದ ವಾಹನದಲ್ಲಿ ಕುಕ್ಕೆಗೆ ತಡರಾತ್ರಿ ತಲಪಿದರು.
ದೇವೇ ಗೌಡರಿಗೆ ಆಶ್ಲೇಷ ನಕ್ಷತ್ರದಂದು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಆಗಬೇಕಿತ್ತು, ಪೂಜೆ ಸಲ್ಲಿಸಬೇಕಿತ್ತು. ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ನಕ್ಷತ್ರ ವಿಶೇಷವಾದ ದಿನವಾಗಿದೆ. ದೇವೇ ಗೌಡರು ಪ್ರತೀ ಬಾರಿ ವಿಶೇಷ ಪೂಜೆ, ಸೇವೆ ಸಲ್ಲಿಸಲು ಬಂದಿರುವುದು ಕೂಡಾ ಆಶ್ಲೇಷ ನಕ್ಷತ್ರದಂದೇ. ಈ ಬಾರಿ ಪತ್ನಿ ಚೆನ್ನಮ್ಮ ಸಹಿತ ಆಗಮಿಸಿದ ದೇವೇ ಗೌಡರು ಸಹಾಯಕರ ಮೂಲಕ ಕ್ಷೇತ್ರಕ್ಕೆ ಸುತ್ತು ಹಾಕಿ ಪೂಜೆ ಸಲ್ಲಿಸಿದರು.
ದೇವೇ ಗೌಡರ ಜೀವನೋತ್ಸಾಹ ಎಲ್ಲರಿಗೂ ಮೆಚ್ಚುಗೆಯಾಗುವಂತಹದ್ದು.90 ವರ್ಷದ ದೇವೇ ಗೌಡರು ಈಗಲೂ ಧ್ಯಾನದಂತಹ ಕೆಲಸಕ್ಕೂ ಸಮಯ ಮೀಸಲಿಡುತ್ತಾರೆ. ಭಾನುವಾರ ರಾತ್ರಿ 10 ಘಂಟೆ ರಾತ್ರಿ ಮಂಗಳೂರು ತಲುಪಿ ಅಲ್ಲಿಂದ 1.30 ಕ್ಕೆ ಕುಕ್ಕೆ ಗೆ ಬಂದರು.6 ಘಂಟೆಗೆ ಮತ್ತೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಪೂಜೆಗೆ ಹೊರಟು ಕಾರಿನಲ್ಲಿ ಕುಳಿತು ಚೆನ್ನಮ್ಮ ಅವರನ್ನು ಕಾಯುತ್ತಿದ್ದರು. ಈ 10 ನಿಮಿಷದ ಕಾಲವನ್ನು ವ್ಯರ್ಥ ಮಾಡದೆ ತನ್ನ ಬಳಿಯೇ ಇದ್ದ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ವಾಚಿಸಿದರು. ಈ ಬಗ್ಗೆ ಜೆಡಿಎಸ್ ಮುಖಂಡ ಎಂ ಬಿ ಸದಾಶಿವ ಅವರು ತಮ್ಮ ಪೇಸ್‌ಬುಕ್ ವಾಲಲ್ಲಿ ಬರೆದುಕೊಂಡಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡರು ಏಕಾಏಕಿ ಈ ಪುಸ್ತಕವನ್ನು ತೆರೆದು ಓದಲು ಸಾಧ್ಯವಿಲ್ಲ, ಈ ಹಿಂದೆಯೂ ಅವರು ಶ್ಲೋಕ, ಪ್ರಾರ್ಥನೆಯ ಪುಸ್ತಕಗಳನ್ನು ಓದಿರುತ್ತಾರೆ. ವ್ಯಕ್ತಿಯ ಬದುಕಿನ ಯಶಸ್ಸಿನ ಹಿಂದೆ, ಜೀವನೋತ್ಸಾಹದ ಹಿಂದೆ ಇಂತಹ ಸಂಗತಿಗಳೂ ಕಾರಣವಾಗುತ್ತದೆ.
ಜೆಡಿಎಸ್ ಮುಖಂಡ ಎಂ ಬಿ ಸದಾಶಿವ ಅವರು ಈ ಬಗ್ಗೆ ಪೇಸ್‌ಬುಕ್ ವಾಲಲ್ಲಿ ಬರೆದುಕೊಂಡಿದ್ದಾರೆ. ಅನೇಕರು ದೇವೇ ಗೌಡರ ಜೀವನೋತ್ಸಾಹದ ಬಗ್ಗೆ, ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.