ಮಹಾಭಾರತವು ‘ಯುಧಿಷ್ಠಿರ’(ಧರ್ಮರಾಯ)ನನ್ನು ಧರ್ಮದ ಪ್ರತಿನಿಧಿಯನ್ನಾಗಿ ಚಿತ್ರಿಸುತ್ತದೆ. ಏನು ಮಾತನಾಡುವುದಿದ್ದರೂ ಅಳೆದು, ತೂಗುವ ಜಾಯಮಾನ. ಬದುಕಿನಲ್ಲಿ ಸಂಯಮ, ಸಜ್ಜನಿಕೆ, ಶಾಂತಿ, ಸಹಿಷ್ಣು, ಅಜಾತಶತ್ರುವಾಗಿ ಬದುಕಲು ಮಾದರಿ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡ ಸಂಯಮಿ. ವಿದ್ವಜ್ಜನರ ಜ್ಞಾನಪೀಯುಷಗಳನ್ನುಂಡ ಜ್ಞಾನವಂತ. ………ಮುಂದೆ ಓದಿ……..
ಧರ್ಮರಾಯನ ವ್ಯಕ್ತಿತ್ವವನ್ನು ಓದದ, ಕೇಳದ ವರ್ತಮಾನವು ಅವನನ್ನು ಹೇಗೆ ಕಾಣುತ್ತದೆ? ಮಿತಭಾಷಿಯಾಗಿರಬೇಕು, ಚಿಂತಕನಾಗಿರಬೇಕು, ಪರದೂಷಣೆಯಿಂದ ದೂರವಿರಬೇಕು, ಸಚ್ಚಾರಿತ್ರ್ಯ ಹೊಂದಿರಬೇಕು. ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿರಬೇಕು. ಮಾತುಗಳನ್ನು ಕೇಳುವಲ್ಲಿ ಮತ್ತು ಆಡುವಲ್ಲಿ ಸಮತೂಕವಿರಬೇಕು.. ಈ ಗುಣಗಳು ಇದ್ದವರನ್ನು ‘ಅವರು ಧರ್ಮರಾಯನಿಗೆ ಸರಿಸಮ’ವೆಂದು ಕೊಂಡಾಡುತ್ತೇವೆ. ಯಾವಾಗ? ಮೃತರಾದ ಬಳಿಕ!
“ವ್ಯಕ್ತಿಯನ್ನು ಹೊಗಳುವುದಿದ್ದರೆ ಜೀವಿತ ಕಾಲದಲ್ಲಿ ಹೊಗಳಿಬಿಡಿ. ಅವರ ಸಾಧನೆಗಳ ಲೇಖನ ಬರೆಯುವುದಿದ್ದರೂ ಮೊದಲೇ ಬರೆದುಬಿಡಿ. ಅವರಿಗೂ ಖುಷಿಯಾಗುತ್ತದೆ. ಅವರು ತೀರಿದ ಮೇಲೆ ಬರೆದು ಏನು ಪ್ರಯೋಜನ? ನೀವು ಯಾವ ವ್ಯಕ್ತಿಗೆ ಮಾಧ್ಯಮ ಬೆಳಕು ಹಾಕುವಿರಾ ಅವರಿಗದು ಸ್ಫೂರ್ತಿಯಾಗಿ ಬದುಕಿಗೆ ಪೂರಕವಾಗುತ್ತದೆ. ಮೃತನಾದ ಮೇಲೆ ಮಾಡುವ ಗುಣಗಾನಗಳಲ್ಲಿ ಗಂಟಲ ಮೇಲಿನ ಮಾತುಗಳು ಮಾನ್ಯವಾಗುತ್ತದೆ. ಬದುಕಿನಲ್ಲಿ ಕೆಟ್ಟದ್ದನ್ನೇ ಮಾಡಿದರೂ ಮರಣಾ ನಂತರ ಹೊಗಳುವವರೇ ಅಧಿಕ..” ಹಿಂದೊಮ್ಮೆ ಹಿರಿಯರಾಡಿದ ಮಾತುಗಳು ನೆನಪಾಗುತ್ತದೆ.
ಅನ್ಯಾನ್ಯ ಕಾರಣಗಳಿಗಾಗಿ ನ್ಯಾಯಾಲಯದಲ್ಲಿ ಭೂವ್ಯಾಜ್ಯಗಳು ನಡೆಯುತ್ತಿರುತ್ತವೆ. ಕರಾವಳಿ ಭಾಗದಲ್ಲಿ ‘ಕೋರ್ಟಿನಲ್ಲಿ ನಂಬ್ರ ಮಾಡಿದ್ದೇನೆ’ ಎಂದರೆ ಸ್ವ-ಪ್ರತಿಷ್ಠೆ ಮತ್ತು ಸ್ವಾಭಿಮಾನದ ದಿನಮಾನಗಳಿದ್ದುವು. ಅದಕ್ಕಾಗಿ ಹಣ, ಆಯುಷ್ಯವನ್ನು ಕಳೆದುಕೊಂಡರೂ ವಿಷಾದವಿಲ್ಲ. ನಂಬ್ರ ಮಾಡಿದವರಿಗೆ ಜಯ ಸಿಗಬಹುದೆನ್ನುವ ಖಾತ್ರಿಯಿಲ್ಲ. ನ್ಯಾಯ ಯಾರ ಪರ ಇದೆಯೋ ಅವರ ಪರವಾಗಿ ಕೋರ್ಟು ತೀರ್ಪು ನೀಡುತ್ತದೆ. ಇಲ್ಲಿ ಜಯಾಪಜಯಗಳು ಮುಖ್ಯವಲ್ಲ. ‘ಕೋರ್ಟಿನಲ್ಲಿ ದಾವೆ ಹೂಡುವುದು’ ವ್ಯಕ್ತಿತ್ವದ ಭಾಗವೆಂದು ಸ್ವೀಕರಿಸಿದ ಓರ್ವ ಕೃಷಿಕರು ಹೇಳಿದ್ದರು, “ರಾಜಿಯಲ್ಲಿ ಮುಗಿಸುವುದಿಲ್ಲ. ಹೋರಾಟ ಹೋರಾಟವೇ. ನಾನೇನು ಧರ್ಮರಾಯನೇ?” ಅಂದರೆ ಧರ್ಮರಾಯನಂತೆ ನಾನು ಸಜ್ಜನನಲ್ಲವೆಂದು ಅವರೇ ಒಪ್ಪಿಕೊಂಡುಬಿಟ್ಟರು!
ಕಚೇರಿಗಳಲ್ಲಿ ಭ್ರಷ್ಟಾಚಾರದ ಸೋಂಕು ಅಂಟಿಸಿಕೊಳ್ಳದ ಅಧಿಕಾರಿ, ಸಿಬ್ಬಂದಿ ಇರುತ್ತಾರೆ. “ಅವರು ಧರ್ಮರಾಯನಂತೆ.. ಕೆಲಸ ಮಾಡಿಕೊಡುತ್ತಾರೆ. ಒಂದು ನಯಾ ಪೈಸೆ ಸ್ವೀಕರಿಸುವುದಿಲ್ಲ. ಎಲ್ಲಾ ಕಚೇರಿಗಳಲ್ಲೂ ಇಂತಹವರೇ ಇರಲಪ್ಪ,” – ಅಪರೂಪದಲ್ಲಿ ಹಾರೈಕೆಗಳು ಕೇಳಿಬರುತ್ತವೆ. “ಐನೂರು ಕೊಡಿ. ಕೆಲಸ ಆಗ್ತದೆ. ನಾನು ಅವರಂತೆ ಧರ್ಮರಾಯನಲ್ಲ”, ಅದೇ ಸ್ಥಳದಲ್ಲಿ ಲಂಚಾವತಾರವೂ ಇಣುಕುತ್ತದೆ. ಪಾಪ, ಧರ್ಮರಾಯನನ್ನು ಇಂತಹ ಮನಸ್ಥಿತಿಗಳಿಗೆ ಥಳಕು ಹಾಕುವುದು ಅವಮಾನ. ಧರ್ಮರಾಯನ ವ್ಯಕ್ತಿತ್ವಗಳನ್ನು ಅರಿತುಕೊಂಡೂ, ‘ತಾನು ಹಾಗಲ್ಲ’ವೆಂದು ಪರೋಕ್ಷವಾಗಿ ಒಪ್ಪಿಕೊಂಡ ಹಾಗಾಗುವುದಿಲ್ವಾ. ಇಂತಹವರೇ ಸರಕಾರಿ ವ್ಯವಸ್ಥೆಗಳ ‘ಕೊರೊನಾ’!
ಮಾಜಿ ಪ್ರಧಾನಿ ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಆಡಿದ ಮಾತುಗಳು : “ಧರ್ಮರಾಯನು ಜೂಜಾಟವಾಡಿದ್ದಾನೆ. ‘ಇದು ಮೋಸ, ನಾನು ಮೋಸಗಾರನ ಜತೆಯಲ್ಲಿ ಆಡುತ್ತಿದ್ದೇನೆ” ಎಂದು ತಿಳಿದು ಆಟವಾಡಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಅದೇ ರೀತಿ ಮೋಸ ಹೋಗುವುದು ಗೊತ್ತಿದ್ದರೂ ಚುನಾವಣೆಗೆ ನಿಂತು ಸೋತೆ.” ಧರ್ಮರಾಯನ ಬದುಕಿನಲ್ಲಿ ದ್ಯೂತ ವ್ಯಸನವಾಗಿರಲಿಲ್ಲ. ಯುದ್ಧಕ್ಕೆ ಕರೆದಾಗ, ದ್ಯೂತಕ್ಕೆ ಆಹ್ವಾನಿಸಿದಾಗ ಸಮರ್ಥನಾದವನು ಒಲ್ಲೆ ಎನ್ನಬಾರದಂತೆ. ದೇವೇಗೌಡರು ತಾನು ಮೋಸ ಹೋದ ರೀತಿಯನ್ನು ಕತೆಗಳ ಮೂಲಕ ವ್ಯಕ್ತಪಡಿಸಿದ್ದರು. ‘ಮೋಸವಿದೆಯೆಂದು ತಿಳಿದೂ ಚುನಾವಣೆಯಲ್ಲಿ ಸ್ಪರ್ಧಿಸಿದೆ,’ ಮಾಜಿ ಪ್ರಧಾನಿಗಳ ಮನದ ಮಾತು ವರ್ತಮಾನದ ಕನ್ನಡಿ.
ಹಿಂದೂ ಧರ್ಮವು ಮುಕ್ಕೋಟಿ ದೇವತೆಗಳನ್ನು ಆರಾಧಿಸುತ್ತದೆ. ದೇವರಿಗೆ ಗುಡಿ, ಗೋಪುರ, ಮಂದಿರಗಳು, ಆರಾಧನಾ ರೀತಿಗಳು ಅನನ್ಯ. ಬೆಂಗಳೂರಿನಲ್ಲಿ ‘ಧರ್ಮರಾಯ’ ದೇವರಿಗೆ ದೇವಸ್ಥಾನವಿದೆ. “ಇದು ದೇಶದಲ್ಲೇ ಧರ್ಮರಾಯನ ಏಕೈಕ ದೇವಾಲಯ. ಹಿಂದೂ ಕಲಾ ಶೈಲಿಯಲ್ಲಿ ರೂಪುಗೊಂಡಿದೆ. ಹನ್ನೊಂದನೇ ಶತಮಾನದಲ್ಲಿ ನಿರ್ಮಾಣವಾಗಿದೆ” ಎನ್ನಲಾಗಿದೆ. ಇಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ ಬೆಂಗಳೂರು ಕರಗ.
ಸುಮಾರು ಕಾಲು ಶತಮಾನದ ಹಿಂದೆ – ನನ್ನೂರಲ್ಲಿರುವ ದೇವಾಲಯದ ಅರ್ಚಕರು ಸಾತ್ವಿಕರಾಗಿದ್ದರು. ಧರ್ಮರಾಯನಂತೆ ಅಜಾತಶತ್ರು. ಗ್ರಾಮದವರಿಗೆ ಅವರೆಂದರೆ ಪ್ರೀತಿ. ಅವರ ಮಾತುಗಳಿಂದ ಮನ ಅರಳುತ್ತವೆ ವಿನಾ ಕೆರಳುವುದಿಲ್ಲ. ಯಾರು ಕೆರಳಿಸಿದರೂ, ಅಪಹಾಸ್ಯ ಮಾಡಿದರೂ, ಜಾತಿನಿಂದನೆ ಮಾಡಿದರೂ ಸಣ್ಣ ನಗುವಿನ ಪ್ರತ್ಯುತ್ತರ. ಈಗ ‘ತಟ್ಟೆಕಾಸು’ ಪದವು ನವಮಾಧ್ಯಮಗಳಲ್ಲಿ ರಾಚುತ್ತಿವೆ. ಆಗ ಅರ್ಚಕರು ತನಗೆ ಲಭಿಸಿದ ಚಿಕ್ಕಾಸು ತಟ್ಟೆಕಾಸಿನಿಂದ ತುತ್ತನ್ನು ಉಂಡವರು. ವಿಶೇಷ ಸಂದರ್ಭಗಳಲ್ಲಿ ತಟ್ಟೆಯಲ್ಲಿ ಸ್ವಲ್ಪ ಹೆಚ್ಚು ಕಾಸು ಕಂಡಾಗ, ಆ ತಟ್ಟೆಗೆ ಕೈ ಹಾಕಿ ಕಾಸು ಕಸಿದುಕೊಂಡವರ ನೆನಪು ಮಾಸಿಲ್ಲ. ಅವರು ತೀರಿಕೊಂಡಾಗ “ಧರ್ಮರಾಯನಂತಹ ಅರ್ಚಕರು ಇನ್ನು ಸಿಗುವುದಿಲ್ಲ, ಬಿಡಿ” ಅಂದವರೇ ಹೆಚ್ಚು. ಈಗಲೂ ಅವರ ಸಮಕಾಲೀನರು ಜ್ಞಾಪಿಸಿಕೊಳ್ಳುತ್ತಿದ್ದಾರೆ.
ಕೆಲವೊಮ್ಮೆ ಕಿಚಾಯಿಸಲು ‘ಧರ್ಮರಾಯ’ ಬಂದುಬಿಡುತ್ತಾನೆ! ಹತ್ತಾರು ಮಂದಿ ಸೇರುವ ಸಮಾರಂಭದಲ್ಲಿ ‘ತಾನಾಯಿತು, ತನ್ನ ಪಾಡಾಯಿತು’ ಎಂದು ಓರ್ವ ಮಗುಮ್ಮಾಗಿ ಕುಳಿತಿರುತ್ತಾನೆ. ಆಗ ಇತರರ ಪಾಲಿಗೆ ಆತ ‘ಧರ್ಮರಾಯ’! ಗೇಲಿ, ತಮಾಶೆಗಾದರೂ ಅರ್ಥವಿದೆ. ‘ಅನಾವಶ್ಯಕವಾಗಿ ಹರಟದೆ, ಯಾರ ತಂಟೆಗೂ ಬಾರದೆ, ಪರನಿಂದೆಗೆ ಜಾರದೆ, ತನ್ನಲ್ಲಿದ್ದ ವಿಕಾರವನ್ನು ಆಕಾರಗೊಳಿಸದೆ ಅವರ ಪಾಡಿಗೆ ಅವರಿದ್ದಾರೆ ಎಂದು ಊಹಿಸಿದರೆ ತಪ್ಪಾಗಲಾರದು.
ಕೀರ್ತಿಶೇಷ ದೇರಾಜೆ ಸೀತಾರಾಮಯ್ಯನವರು ಧರ್ಮ ಮತ್ತು ರಾಜಕಾರಣದ ಅಗತ್ಯವನ್ನು ಕೃಷ್ಣನ ಮೂಲಕ ಧರ್ಮರಾಯನಿಗೆ ಹೇಳುತ್ತಾರೆ, “ಹಿಂಸೆಯಿಂದ ರಾಜ್ಯ ಸಂಪಾದನೆಯು ನೀಚ ಸಾಧನೆ. ತನಗಾಗಿ ಪರರನ್ನು ಕೊಲ್ಲಬಾರದು. ಭೂಮಿಯಲ್ಲಿ ‘ಸಾರ್ವತ್ರಿಕ ಸಮಾನತಾ ಅಧಿಕಾರ’ ಎಲ್ಲವೂ ಒಪ್ಪಬೇಕಾದುದೇ. ಆದರೆ ಇಲ್ಲಿ ನಿನ್ನ ಹೊಣೆ ಏನೆಂಬುದನ್ನು ವಿವೇಚಿಸು. ದುಷ್ಟನೂ, ದುರ್ವಿಚಾರಿಯೂ, ಅಧರ್ಮಿಯೂ ಆದ ಪ್ರಭುವು (ದುರ್ಯೋಧನ) ಮೋಸದಿಂದ ನಿಮ್ಮನ್ನು (ಪಾಂಡವರು) ಸೋಲಿಸಿದ್ದಾನೆ. ಈ ಸೋಲನ್ನು ಸತ್ಯಧರ್ಮಗಳಿಂದಲೇ ನೀವು ಗೆದ್ದಿದ್ದೀರಿ. ಈಗ ಒದಗಿದ (ಕುರುಕ್ಷೇತ್ರ) ಯುದ್ಧ ಧರ್ಮಾಧರ್ಮಗಳಿಗೆ. ಧರ್ಮವನ್ನತಿಕ್ರಮಿಸಿ ಮುಂದೆ ಬಂದ ಅಧರ್ಮ ನಾಶವಾಗಲೇ ಬೇಕು. ಕಾರಣ, ಧರ್ಮ ಸನಾತನವಾದುದು. ಧರ್ಮ ಎಂತಹುದು ಎಂದರಿತ ಮೇಲೆಯೇ ಅಧರ್ಮದ ನಿಶ್ಚಯ. ಧರ್ಮಕ್ಕಾಗಿ ಎಷ್ಟೋ ಕಷ್ಟಪಡಬಹುದು. ಆದರೆ ಸುಖಕ್ಕಾಗಿ ಆಧರ್ಮವನ್ನಾಚರಿಸಬಾರದು. ಧರ್ಮದ ದೃಷ್ಟಿಯಲ್ಲಿ ಧರ್ಮರಾಜನಾನ ನೀನು ಮುಂದಾಳು. ಕೌರವನು ನಿನ್ನ ಹಾಗೂ ಧರ್ಮದ ದ್ವೇಷಿ. ನೀನೂ, ನಿನ್ನ ಪಂಗಡವೂ, ಧರ್ಮಕ್ಕಾಗಿ ಉಳಿಯಲೇ ಬೇಕು. ಧರ್ಮದ್ವೇಷಿಯ ತಂಡ ನಿರ್ಮೂಲವಾಗಬೇಕು. ಜಗದಾಧಾರವಾದ ಧರ್ಮ ಜಗತ್ತಿಗಾಗಿ ಬೇಕು. ಧರ್ಮಕ್ಕಾಗಿ ನೀನು ಬೇಕು. ನೀನು ಬೇಕೇ ಬೇಕೆಂದಾದರೆ ನಿನ್ನ ಇದಿರು ಪಕ್ಷ ನಾಶವಾಗತಕ್ಕದ್ದೇ. ಆದ್ದರಿಂದ ನಿನಗಾಗಿ ರಾಜ್ಯವಲ್ಲ. ರಾಜ್ಯಕ್ಕಾಗಿ ನೀನು.”
ಹಿರಿಯ ಕಲಾವಿದ ಪ್ರೊ.ಎಂ.ಎಲ್.ಸಾಮಗರು ಧರ್ಮರಾಯನ ಮನಃಸ್ಥಿತಿಯನ್ನು ವಿವರಿಸುವುದು ಹೀಗೆ: “ಶಾಸ್ತ್ರ ಸಾರುವ ಧರ್ಮ, ತನ್ನ ಮನಸ್ಸು ಒಪ್ಪುವ ಧರ್ಮ, ಮಾನವ ಸಹಜ ಧರ್ಮ, ತಾರ್ಕಿಕ ಸತ್ಯ ತೀರ್ಮಾನಿಸುವ ಧರ್ಮ, ಮನುಷ್ಯನ ಭಾವನಾತ್ಮಕ ಸತ್ಯ (ಧರ್ಮ)ದಂತೆ ಆಚರಿಸಬೇಕೆನ್ನುವ ಧರ್ಮ.. ಹೀಗೆ ಹಲವು ಮುಖಗಳಲ್ಲಿ ಅರ್ಥೈಸಬೇಕಾದ ಧರ್ಮಗಳ ತಾಕಲಾಟವು ಧರ್ಮರಾಯ ಪಾತ್ರದಲ್ಲಿ ಬಿಂಬಿತವಾಗಿದೆ. (‘ಮಹಾಭಾರತದ ಮಹಾಪಾತ್ರಗಳು’ ಕೃತಿಯಲ್ಲಿ) ಪುರಾಣಗಳು ಕಟ್ಟಿಕೊಟ್ಟ ಪಾತ್ರ ಸ್ವಭಾವಗಳನ್ನು ನಮಗೆ ಬೇಕಾದಂತೆ ಅರ್ಥೈಸುವುದು, ತಿರುಚುವುದೂ ಕಲೆಯಲ್ಲ, ಕೊಲೆ! ಏನೇ ಇರಲಿ, ಧರ್ಮರಾಯನ ಬಯೋಡಾಟ ಒಮ್ಮೆ ನೋಡೋಣ.
ಧರ್ಮರಾಯ : ಪಾಂಡುವಿನ ಅಪೇಕ್ಷೆಯಂತೆ ಕುಂತಿಯು ಯಮಧರ್ಮನಿಂದ ‘ಯುಧಿಷ್ಠಿರ’, ಮಾರುತನಿಂದ ‘ಭೀಮಸೇನ’, ಇಂದ್ರನಿಂದ ‘ಅರ್ಜುನ’ ಮತ್ತು ಮಾದ್ರಿಗೆ ಉಪದೇಶ ಮಾಡಿ ಅಶ್ವಿನಿ ದೇವತೆಗಳಿಂದ ‘ನಕುಲ, ಸಹದೇವ’ರನ್ನು ಪಡೆದಳು. ಮೊದಲ ಮಗುವನ್ನು ಪ್ರಸವಿಸುವಾಗ “ಈ ಶಿಶು ಮುಂದೆ ಧರ್ಮಾತ್ಮನಾಗಿ, ಸತ್ಯಸಂಧನಾಗಿ ರಾಜನಾಗುತ್ತಾನೆ. ಮೂರು ಲೋಕದಲ್ಲಿಯೂ ಮಾನಿತನಾಗುತ್ತಾನೆ.” – ಆಕಾಶವಾಣಿಯಾಗುತ್ತದೆ.
ಹಸ್ತಿನಾವತಿಯಲ್ಲಿ ಪಾಂಡುಪುತ್ರರಿಗೆ ಸ್ವಾಗತ ದೊರೆಯುತ್ತದೆ. ಆ ಕಾಲಕ್ಕೆ ಧೃತರಾಷ್ಟ್ರನಿಗೆ ನೂರು ಮಕ್ಕಳು ಜನಿಸಿದ್ದು ಹಸ್ತಿನಾವತಿಯ ಅರಮನೆಗೆ ಮಕ್ಕಳ ಸೌಭಾಗ್ಯ ಪ್ರಾಪ್ತವಾಗುತ್ತದೆ. ಪಾಂಡವರು, ಕೌರವರು ಆಟಪಾಠಗಳಲ್ಲಿ ಬೆಳೆಯುತ್ತಿದ್ದರು. ಜತೆಜತೆಗೆ ದಾಯಾದ್ಯ ಮಾತ್ಸರ್ಯಗಳು ಗೂಡುಕಟ್ಟುತ್ತಿದ್ದುವು. ಹಿರಿಮಗನಾದ ಯುಧಿಷ್ಠಿರ(ಧರ್ಮರಾಯ)ನಿಗೆ ಪಟ್ಟವಾಗುತ್ತದೆ. ಪ್ರಜಾಕ್ಷೇಮವನ್ನು ಬಯಸುವ ರಾಜನಾಗಿ ಖ್ಯಾತನಾದ. ಪ್ರಜೆಗಳ ಪ್ರೀತಿಯ ರಾಜನಾಗಿ ಮೆರೆದ. ಇದು ಸುಯೋಧನನಿಗೆ (ಕೌರವ) ಅಪಥ್ಯವಾಯಿತು.
ವಾರಣಾವತದಲ್ಲಿ ‘ಅರಗಿನ ಮನೆ’ಯನ್ನು ನಿರ್ಮಿಸಿ ಪಾಂಡವರ ನಾಶಕ್ಕೆ ಹುನ್ನಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಅರಗಿನ ಮನೆಯಿಂದ ಪಾರಾಗಿ ಏಕಚಕ್ರನಗರದ ವಾಸವನ್ನು ಮುಗಿಸಿ, ಪಣವನ್ನು ಗೆದ್ದು ದ್ರೌಪದಿಯನ್ನು ವರಿಸಿದರು. ಕರ್ಣ, ಶಕುನಿ, ದುಶ್ಶಾಸನರ ಪ್ರೇರಣೆಯಿಂದ ದ್ಯೂತವನ್ನಾಡಿದ. ಸೋತ ಪಾಂಡವರು ಹನ್ನೆರಡು ವರುಷ ವನವಾಸ, ಒಂದು ವರುಷ ಅಜ್ಞಾತವಾಸವನ್ನು ಪೂರೈಸಿದರು. ಮುಂದೆ ಇಂದ್ರಪ್ರಸ್ಥದಲ್ಲಿ ತಮ್ಮಂದಿರೊಡನೆ ನೆಲೆಯಾದ ಧರ್ಮರಾಯನು ರಾಜಸೂಯ ಅಧ್ವರವನ್ನು ಮಾಡಿದ. ಲೋಕ ಲೋಕಗಳು ಧರ್ಮರಾಯನ ಗುಣಗಾನವನ್ನು ಮಾಡಿದುವು. ಶ್ರೀಕೃಷ್ಣ ಸಂಧಾನವು ವಿಫಲವಾಗಿ ಮಹಾಭಾರತ ಸಂಗ್ರಾಮವಾಯಿತು. ಧರ್ಮವೇ ಗೆದ್ದಿತು. ಧರ್ಮರಾಯನು ಹಸ್ತಿನಾವತಿಯ ರಾಜನಾದನು.
ಪಾಂಡವರ ಬದುಕು ಒಂದು ಧರ್ಮದ ಮೂಟೆ. ಅದರಲ್ಲೂ ಧರ್ಮರಾಯನು ‘ತಣ್ಣೀರನ್ನು ತಣಿಸಿ ಕುಣಿಯುವ’ ಜಾಯಮಾನದವನು. ತನ್ನ ವ್ಯಕ್ತಿತ್ವದ ರೂಪೀಕರಣದಿಂದಾಗಿ ‘ಧರ್ಮ’ ಶಬ್ದಕ್ಕೆ ಪರ್ಯಾಯ ಪದವಾದ! ಧರ್ಮಭೀರುವಾಗಿ ‘ಧರ್ಮ’ಕ್ಕೆ ಹೆದರುವಾತ. ನಂಬಿದ ಆದರ್ಶ, ಜೀವನ ಮೌಲ್ಯಗಳಿಗೆ ಲೋಪವಾಗದಂತೆ ಎಚ್ಚರ. ಕುಟುಂಬ ಕಲಹದಿಂದ ನೋಂದು ‘ನನಗೆ ರಾಜ್ಯ ಬೇಡ, ಕಾನನವೇ ವಾಸಿ’ಯೆಂದಿರುವುದು ಅವನ ಸಹಿಷ್ಣು ಮನಸ್ಥಿತಿಯ ದ್ಯೋತಕ. ಎಂತಹ ಕಷ್ಟ ಬಂದಾಗಲೂ ದುಡುಕದೆ, ಕೋಪಗೊಳ್ಳದೆ ಧರ್ಮದ ಹಾದಿ ಹಿಡಿದು; ಅದರಲ್ಲಿ ಮರುಗಿ, ಸುಖಿಸಿದ ಮಹಾತ್ಮ. ಕೌರವನಿಂದ ಅಡಿಗಡಿಗೆ ತೊಂದರೆಯನ್ನು ಅನುಭವಿಸುತ್ತಾ ಇರುವಾಗಲೂ ‘ಅವನು ನನ್ನ ತಮ್ಮ’ನೆಂದ ಹಿರಿಯ ಅಣ್ಣನಿವನು.
ಬರಹ :
ನಾ.ಕಾರಂತ ಪೆರಾಜೆ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel