ಇಂದು ಎಲ್ಲೆಲ್ಲೂ ನೈತಿಕತೆ, ಸತ್ಯ, ಸಭ್ಯತೆ ಕುಸಿದಿದೆ. ಬದುಕುವುದು ನಮ್ಮ ಹಕ್ಕಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ, ಪರಸ್ಪರ ಹೊಂದಿಕೊಂಡು ಗೌರವಪೂರ್ವಕವಾಗಿ ಕೃತಜ್ಞತೆಯೊಂದಿಗೆ ಸಾರ್ಥಕ ಜೀವನ ಮಾಡುವುದು ನಮ್ಮ ಉದ್ದೇಶವಾಗಬೇಕು. ಇದಕ್ಕಾಗಿ ಇಂದು ನೈತಿಕತೆ, ಸತ್ಯ, ಸಭ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಎಸ್.ಎನ್. ಸೇತುರಾಮ್ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಪ್ರಕಟಿಸಲಾದ “ಜ್ಞಾನ ವಿಕಾಸ” ಮತ್ತು “ಜ್ಞಾನ ಪ್ರಕಾಶ” ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳವಾಗಿದೆ. ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ವಿಭಿನ್ನವಲ್ಲ. ಎಲ್ಲವೂ ಒಂದೇ ಆಗಿದೆ. ಆದರೆ ಕಾನೂನಿನಲ್ಲಿ ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ಬೇರೆ ಬೇರೆಯಾಗಿದ್ದು, ಅನೈತಿಕತೆ ಅಪರಾಧ ಅಲ್ಲ ಎಂಬ ಭಾವನೆ ಈಗ ಮೂಡಿ ಬಂದಿದೆ. ಪರಸ್ಪರ ಪ್ರೀತಿ-ವಿಶ್ವಾಸದಿಂದ, ಕೃತಜ್ಞತೆ ಹಾಗೂ ಗೌರವದಿಂದ ಬದುಕುವ ಸಭ್ಯ, ಸುಸಂಸ್ಕೃತ ನಾಗರಿಕರು ಈ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದೆ ಎಂದು ಹೇಳಿದರು.
ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ನೀಡಿ ಅಭಿನಂದಿಸಿದ ಸಿನಿಮಾ ನಟ ಮಾಸ್ಟರ್ ಆನಂದ್ ಮಾತನಾಡಿ, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳ ದರ್ಶನದಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಈವರೆಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆ ಸಾರ್ಥಕಜೀವನ ನಡೆಸುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ, ಜ್ಞಾನ ಸಂಗ್ರಹದೊಂದಿಗೆ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಪ್ರತಿಭಾ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು. ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತುಬಿಡ ಮಂಜುನಾಥ” ಎಂಬ ಮಾತು ಪ್ರಚಲಿತವಿದೆ. ಇಲ್ಲಿ ಮಾತೇ ಮಾಣಿಕ್ಯ. ಸತ್ಯ, ಧರ್ಮ, ನ್ಯಾಯ, ನೀತಿಯೊಂದಿಗೆಎಲ್ಲರೂ ಸಾರ್ಥಕಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ಸಹನಿರ್ದೇೀಶಕಎಸ್.ಜಿ. ನಾಗೇಶ್, ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.