ಪ್ರಧಾನಿ ಮೋದಿ ಬಂಡೀಪುರಕ್ಕೆ ಭೇಟಿ ನೀಡಿದ್ದ ವೇಳೆ 22 ಕಿ.ಮೀ ಸಫಾರಿಯಲ್ಲಿ ಒಂದೇ ಒಂದೂ ಹುಲಿ ಕಾಣದೇ ಇರುವುದು ಅಚ್ಚರಿ ಮೂಡಿಸಿತ್ತು.
ಬೆಳಿಗ್ಗೆ 7:15 ರಿಂದ 9:30 ವರೆಗೆ ಸಫಾರಿಯಲ್ಲಿ ಒಂದೇ ಒಂದು ಹುಲಿ ಕಾಣದ್ದಕ್ಕೆ, ಸಫಾರಿ ವೇಳೆ ವಾಹನ ಚಾಲನೆ ಮಾಡಿದ್ದ 29 ವರ್ಷದ ಚಾಲಕ ಮಧುಸೂಧನ್ ಬಗ್ಗೆಯೂ ಅಲ್ಲಲ್ಲಿ ಟೀಕೆ ವ್ಯಕ್ತವಾಗುತ್ತಿದ್ದು, ಆತ ಹುಲಿ ಕಾಣ ಸಿಗುವ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳದ್ದಕ್ಕೆ ಕ್ರಮ ಕೈಗೊಳ್ಳುವಂತೆ ಕೆಲವು ಬಿಜೆಪಿ ನಾಯಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ.
ಪ್ರಧಾನಿ ಸಂಚರಿಸಿದ್ದ ವಾಹನದ ನೋಂದಣಿಯನ್ನೇ ರದ್ದು ಮಾಡಬೇಕೆಂದೂ ಕೆಲವು ಟ್ವೀಟ್ ಗಳು ಬಂದಿವೆ. ಆದರೆ ಸಫಾರಿ ವೇಳೆ ಹುಲಿ ಕಾಣದ್ದಕ್ಕೆ ಇರುವ ನೈಜ ಕಾರಣವೆಂದರೆ ಅದು ಪ್ರಧಾನಿ ಭದ್ರತಾ ಸಿಬ್ಬಂದಿಗಳು! ಅಂದರೆ ಎಸ್ ಪಿಜಿ. ಅಚ್ಚರಿಯಾಯ್ತಾ? ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡುವುದಕ್ಕೂ ಮುನ್ನ 5 ದಿನಗಳ ಹಿಂದೆ ಪ್ರಧಾನಿ ಸಫಾರಿ ಮಾಡಬೇಕಿದ್ದ ಜಾಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಸ್ ಪಿಜಿ, ಸ್ಥಳೀಯ ಪೊಲೀಸರು, ನಕ್ಸಲ್ ನಿಗ್ರಹ ಪಡೆ ಹಾಗೂ ಇನ್ನಿತರ ಭದ್ರತಾ ಪಡೆಗಳು ಹಲವು ಬಾರಿ ಸಫಾರಿ ಕೈಗೊಂಡು ತಪಾಸಣೆ ಮಾಡಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಬಿಟಿಆರ್ ನ ಹಿರಿಯ ಅಧಿಕಾರಿಯೊಬ್ಬರು, ಪ್ರಧಾನಿ ಭೇಟಿಗೆ 5 ದಿನಗಳ ಹಿಂದೆ ಭದ್ರತಾ ದೃಷ್ಟಿಯಿಂದ ತಪಾಸಣೆ, ಡ್ರಿಲ್ ಗಳನ್ನು ಅದೇ ಮಾರ್ಗದಲ್ಲಿ ಕೈಗೊಂಡಿದ್ದ ಅಧಿಕಾರಿಗಳಿಗೆ ಹುಲಿಗಳು ಕಂಡುಬಂದಿದ್ದವು. ಆಗ ಕಂಡುಬಂದಿದ್ದ ಹುಲಿಗಳ ಫೋಟೋಗಳನ್ನು ಭದ್ರತಾ ಸಿಬ್ಬಂದಿಗಳೂ ಕ್ಲಿಕ್ಕಿಸಿದ್ದರು. ಆದರೆ ಪ್ರಧಾನಿ ಮೋದಿ ಅವರಿಗೆ ಹುಲಿಗಳು ಆಗಷ್ಟೇ ನಡೆದುಹೋಗಿರುವ ಹೆಜ್ಜೆ ಗುರುತು ಕಂಡಿತೇ ಹೊರತು ಹುಲಿಗಳು ಕಾಣಲಿಲ್ಲ. ಆದರೆ ಪ್ರಧಾನಿ ಸಫಾರಿ ಕೈಗೊಳ್ಳುವ ವೇಳೆಗೆ ಅವು ಸುರಕ್ಷಿತವಾದ, ಹೆಚ್ಚು ಗದ್ದಲಗಳಿಲ್ಲದ ಪ್ರದೇಶಗಳಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪ್ರಧಾನಿ ಸಫಾರಿಗೆ ಗುರುತಿಸಲಾದ ಮಾರ್ಗದಲ್ಲಿ ಹುಲಿಗಳು ತಿಂದು, ನಿದ್ದೆ ಮಾಡಿ ಅಲ್ಲಿಯೇ ಇರುತ್ತವೆ. ಭದ್ರತಾ ದೃಷ್ಟಿಯಿಂದ ಪ್ರಧಾನಿ ಇದ್ದ ಸಫಾರಿ ವಾಹನ ಬೆಂಗಾವಲು ಪಡೆ ಮಧ್ಯದಲ್ಲಿರುವಂತೆ ಯೋಜಿಸಲಾಗಿತ್ತು. ಆದರೆ ಸಫಾರಿ ವೇಳೆ ಎಂದಿಗೂ ಮುಂದೆ ಇರುವ ವಾಹನದಿಂದ ಪ್ರಾಣಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಮನವಿ ಮಾಡಿದ್ದೆವು. ಆದ್ದರಿಂದ ಭದ್ರತಾ ಸಿಬ್ಬಂದಿಗಳು ಹೆಚ್ಚುವರಿ ಸಫಾರಿ ಸುತ್ತುಗಳನ್ನು ಕೈಗೊಂಡಿದ್ದರು. ಈ ರೀತಿ ಮುಂದೆ ಇರುವ ವಾಹನದಿಂದ ಸಫಾರಿ ಕೈಗೊಂಡಾಗ ಹುಲಿ, ಚಿರತೆಗಳು ಸ್ಪಷ್ಟವಾಗಿ ಗೋಚರಿಸಿ ಅವುಗಳ ಫೋಟೋಗಳನ್ನೂ ಭದ್ರತಾ ಅಧಿಕಾರಿಗಳು ಕ್ಲಿಕ್ಕಿಸಿದ್ದರು ಹಾಗೂ ಪ್ರಧಾನಿ ಮೋದಿ ಅವರು ಮುಂದಿನ ವಾಹನದಲ್ಲಿರಬೇಕು ಎಂಬ ಅಂಶವನ್ನೂ ಒಪ್ಪಿದ್ದರು.
ಇನ್ನು ಪ್ರಧಾನಿ ಮೋದಿ ಬರುವುದಕ್ಕೂ ಹಿಂದಿನ ದಿನ ಅಂದರೆ ಶನಿವಾರ ರಾತ್ರಿ, ಪ್ರಧಾನಿ ಮೋದಿ ಸಫಾರಿ ನಡೆಸುವ ಪ್ರದೇಶಗಳಲ್ಲಿ ಪ್ರಾಣಿಗಳ ಚಟುವಟಿಕೆಗಳಿಗೆ ಅಡ್ಡಿಯಾಗದಿರಲೆಂದು ಗದ್ದಲ ಇರುವುದು ಬೇಡ ಎಂದು ಬಿಟಿಆರ್ ಸಿಬ್ಬಂದಿಗಳು ಮನವಿ ಮಾಡಿದ್ದರು. ಶನಿವಾರ ರಾತ್ರಿ ಡ್ರಿಲ್ ನಡೆಯಲಿಲ್ಲ. ಇದು ಕಾರಣ ಪ್ರಧಾನಿ ಮೋದಿ ಅವರಿಗೆ ಕನಿಷ್ಟ 40 ಆನೆಗಳ ಹಿಂಡನ್ನು ಹಾಗೂ 20-30 ಗೌರ್‌ಗಳು, ಸುಮಾರು 30 ಸಾಂಬಾರ್ ಜಿಂಕೆಗಳು ಮತ್ತು ಇತರ ವನ್ಯಜೀವಿಗಳನ್ನು ನೋಡಲು ಸಾಧ್ಯವಾಯಿತು. ಆದರೆ ಸಫಾರಿಯ ಪ್ರಮುಖ ಉದ್ದೇಶವಾಗಿದ್ದ ಹುಲಿಗಳನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ವಿವರಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಹುಲಿ ಕಾಣದ್ದಕ್ಕೆ ಬಿಟಿಆರ್ ಅಧಿಕಾರಿಗಳ ಬಳಿ ನಯವಾಗಿ ದೂರು ಹೇಳಿದ್ದಾರೆ. ಹೀಗೇಕೆ ಆಯಿತು ಎಂಬ ಕಾರಣ ನೀಡಿದಾಗ, ಪ್ರಧಾನಿ ಮೋದಿ ಭದ್ರತಾ ಸಿಬ್ಬಂದಿಗಳೆಡೆಗೆ ತಿರುಗಿ, ಅವರು ತಮ್ಮನ್ನು ಹುಲಿ ನೋಡುವುದರಿಂದ ವಂಚಿತರನ್ನಾಗಿಸಿದ್ದಾರೆ ಎಂದು ನೆನಪಿಸಿದ್ದನ್ನು ಬಿಟಿಆರ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಹಾಗೆಯೇ ಮೋದಿ ಸಫಾರಿಗೆ ತೆರಳಿದ್ದ ವಾಹನದ ನೋಂದಣಿಯನ್ನು ರದ್ದುಗೊಳಿಸುವ ಮಾಹಿತಿ ಸುಳ್ಳು, ವೈರಲ್ ಆಗುತ್ತಿರುವ ನಂಬರ್ ಪ್ಲೇಟ್ ನ ವಾಹನ ಹಳೆಯದ್ದಾಗಿದ್ದು ಅದು ಈಗ ಬಳಕೆಯಲ್ಲಿಯೇ ಇಲ್ಲ. ಹಾಗೆಯೇ ಚಾಲಕ ಮಧುಸೂಧನ್ ಅವರದ್ದೂ ತಪ್ಪಿಲ್ಲ. ಭದ್ರತೆಯ ಹೆಸರಿನಲ್ಲಿ ಸಫಾರಿ ಮಾರ್ಗದಲ್ಲಿ ಪದೇ ಪದೇ ವಾಹನಗಳು ಸಂಚರಿಸಿದ್ದರಿಂದ ಹುಲಿ ಕಂಡುಬಾರದೇ ಇರುವ ಸಾಧ್ಯತೆಗಳೂ ಇದೆ ಎಂದು ಹೇಳಿದ್ದಾರೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…