ಬಿದಿರು(Bamboo) ನಾನಾರಿಗಲ್ಲದವಳು ಎಂಬ ಸಂತ ಶಿಶುನಾಳ ಶರೀಪರ(Shishunala Sharifa) ಹಾಡನ್ನು ನೀವು ಕೇಳಿರುತ್ತೀರಿ. ಬಿದಿರು ಮಾನವನ(Human) ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೂ ಬಹುಉಪಯೋಗಿ ಸಸ್ಯ. ಜೀವನದಲ್ಲಿ ಪ್ರತಿಹಂತದಲ್ಲಿಯೂ ಬಿದಿರಿನ ಉಪಯುಕ್ತತೆಯನ್ನು ಶರೀಪರ ತತ್ತ್ವಪದ ಹೇಳುತ್ತದೆ. ಬಿದಿರಿನ ಮಹತ್ವ, ಬಿದಿರಿನ ಬಹುಉಪಯೋಗಿ ಗುಣ, ಬಿದಿರಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 18ರಂದು ವಿಶ್ವ ಬಿದಿರಿನ ದಿನವನ್ನು ಕೂಡ ಆಚರಿಸಲಾಗುತ್ತದೆ.
ಬಿದಿರಿನ ಪ್ರಯೋಜನವೇನು? : ಬಿದಿರು ಮೊಡವೆ ವಿರೋಧಿ. ಸಂಕೋಚಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ಚರ್ಮಕ್ಕೆ ನವ ಯೌವನ ನೀಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಬಿದಿರು ತ್ವಚೆಯು ತನ್ನ ಕಾಂತಿ ಮತ್ತು ದೃಢತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಚರ್ಮಕ್ಕೆ ಇದು ಮಾಂತ್ರಿಕ ಮದ್ದು. ಬಿದಿರಿನಲ್ಲಿ ನೈಸರ್ಗಿಕ ಸಿಲಿಕಾ ಇದ್ದು ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಗಟ್ಟಿಗೊಳಿಸುತ್ತದೆ ಅಂದರೆ ಸುಕ್ಕುಬಿದ್ದು ಜೋತುಬೀಳುವುದನ್ನು ತಪ್ಪಿಸಿ ಸ್ಟಿಫ್ ಆಗಿರುವಂತೆ ನೋಡುತ್ತದೆ. ಇದು ಚರ್ಮವನ್ನು ಮಾಲಿನ್ಯ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ.
ಇಂತಹ ಇನ್ನಷ್ಟು ಹಲವು ಪ್ರಯೋಜನಗಳು ಬಿದಿರಿನಲ್ಲಿದೆ :
- ಕ್ಷಿಪ್ರ ಬೆಳವಣಿಗೆ: ಬಿದಿರು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವಾಗಿದೆ. ಇದು 24 ಗಂಟೆಗಳಲ್ಲಿ 47.6 ಇಂಚುಗಳಷ್ಟು ಬೆಳೆದ ದಾಖಲೆ ಇದೆ.
- ಅಧಿಕ ಆಮ್ಲಜನಕ ಬಿಡುಗಡೆ: ಬಿದಿರಿನ ಮರವು ಇತರ ಮರಗಳಿಗಿಂತ 35% ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
- ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುವಿಕೆ: ಬಿದಿರು ಪ್ರತಿ ವರ್ಷ ಹೆಕ್ಟೇರಿಗೆ 17 ಟನ್ಗಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇಂಗಾಲದ ಪ್ರಮಾಣ ಅಧಿಕವಾಗಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಂತಹ ಗಂಭೀರ ಸಮಸ್ಯೆಗಳಿಗೆ ಅದು ಅತಿ ಪ್ರಮುಖ ಕಾರಣವಾಗುತ್ತಿರುವಾಗ ಸಾಕಷ್ಟು ಪ್ರಮಾಣದ ಕಾರ್ಬನ್ ಹೀರುವ ಬಿದಿರು ಮಹತ್ವದ ಸಸ್ಯವೆನಿಸುತ್ತದೆ.
- ಹೆಚ್ಚು ಗೊಬ್ಬರದ ಅಗತ್ಯವಿಲ್ಲ: ಬಿದಿರು ಬೆಳೆಯಲು ಅಧಿಕ ಗೊಬ್ಬರ, ಪೋಷಕಾಂಶಗಳ ಅಗತ್ಯವಿಲ್ಲ. ಇದು ತನ್ನ ಎಲೆಗಳನ್ನು ಬೀಳಿಸುವ ಮೂಲಕ ಸ್ವಯಂ ಪೋಷಣೆ ಮಾಡಿಕೊಳ್ಳುತ್ತದೆ. ಎಲೆಗಳು ಅವೇ ಮುಂದೆ ಗೊಬ್ಬರವಾಗಿಯೂ ಕಾರ್ಯ ನಿರ್ವಹಿಸುತ್ತವೆ.
- ಬರ ಸಹಿಷ್ಣು ಸಸ್ಯ: ಬಿದಿರು ಒಣ ಪ್ರದೇಶದಲ್ಲೂ ಹುಲುಸಾಗಿ ಬೆಳೆಯುತ್ತದೆ. ಇವು ಬರ ಸಹಿಷ್ಣು ಸಸ್ಯಗಳಾಗಿವೆ.
- ವಾಣಿಜ್ಯ ಉದ್ದೇಶದ ಮೃದು ಪ್ರಭೇಧದ ಮರಗಳಿಗೆ ಸೂಕ್ತ ಪರ್ಯಾಯ: 20-30 ವರ್ಷಗಳನ್ನು ತೆಗೆದುಕೊಳ್ಳುವ ಮೃದುವಾದ ಮರಗಳಿಗೆ ಹೋಲಿಸಿದರೆ 3-5 ವರ್ಷಗಳಲ್ಲಿ ಕೊಯ್ಲಿಗೆ ಬರುವ ಸಾಮರ್ಥ್ಯವಿರುವ ಬಿದಿರು ಲಾಭದಾಯಕ.
- ನಿರ್ಮಾಣ ವಸ್ತು: ಬಿದಿರು ಅತ್ಯಂತ ಬಲವಾಗಿದ್ದು, ಕುಟ್ಟು ಹೊಡಿಯದ ಮರವಾಗಿದೆ. ಹಾಗಾಗಿ ಇದನ್ನು ಮನೆ, ಬೇಲಿ ಸೇರಿ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಬಳಸಿಕೊಳ್ಳಬಹುದು.
- ಮಣ್ಣಿನ ಸವೆತಕ್ಕೆ ಪರಿಹಾರ: ಬಿದಿರಿನ ಅಸಂಖ್ಯಾತ ಬೇರುಗಳು, ಪ್ರತಿ ವರ್ಷ ವಿಸ್ತರಿಸುವ ಹೊಸ ಹೊಸ ರೈಜೋಮ್‌ಗಳು ವ್ಯಾಪಕ ಜಾಲವನ್ನು ಆವರಿಸಿಕೊಂಡು ಮಣ್ಣಿನ ಸವೆತವನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾಗಿವೆ.
- ನೈಸರ್ಗಿಕ ಹವಾನಿಯಂತ್ರಕ: ಬಿದಿರು ಬೇಸಿಗೆಯಲ್ಲಿ ತನ್ನ ಸುತ್ತಲಿನ ಗಾಳಿಯನ್ನು ಸಾಕಷ್ಟು ತಂಪಾಗಿಸುತ್ತದೆ.
- ಮರ ರೂಪಿ ಹುಲ್ಲು: ಬಿದಿರು ಒಂದು ಹುಲ್ಲಿನ ಜಾತಿ ಸಸ್ಯ. ಆದರೂ ಕೂಡ ಇದು ನೋಡಲು ಮರದಂತೆ ಕಾಣುತ್ತದೆ.
- 40- 50 ವರ್ಷಕ್ಕೆ ಒಮ್ಮೆ ಹೂ- ಕಾಯಿ (ಧಾನ್ಯ): ಬಿದಿರು ಸಾಮೂಹಿಕವಾಗಿ 40- 50 ವರ್ಷಕ್ಕೆ ಒಮ್ಮೆ ಹೂ ಕಾಯಿ ಬಿಡುತ್ತದೆ. ಇದು ಧಾನ್ಯವಾಗಿ (ಬಿದಿರಕ್ಕಿ) ಉದುರಿದಾಗ ಬಿದಿರು ಕೂಡ ಸಾಮೂಹಿಕವಾಗಿ ಸಾಯುತ್ತದೆ. ಈ ಪ್ರಕ್ರಿಯೆಗೆ ಸಸ್ಯ ವಿಜ್ಞಾನದಲ್ಲಿ ‘gregarious flowering’ ಎಂದು ಕರೆಯುತ್ತಾರೆ.
- ಬಿದಿರಿನ ಕುಲಕಸುಬಿನ ಮೇದರ ಜನಾಂಗ: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ಮೇದರ ಜನಾಂಗ ಹಿಂದೆ ಬಿದಿರಿನ ಕರಕುಶಲ ವಸ್ತುಗಳನ್ನು ತಯಾರು ಮಾಡುವ ಕುಲಕಸುಬನ್ನು ಮಾಡುತ್ತಿದ್ದರು. ಇತ್ತೀಚೆಗೆ ಪ್ಲಾಸ್ಟಿಕ್ ವಸ್ತುಗಳ ಹಾವಳಿಯಲ್ಲಿ ಬಿದಿರಿನ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಇವರಲ್ಲಿ ಬಹಳಷ್ಟು ಜನ ಬೇರೆ ವೃತ್ತಿಯತ್ತ ಚಿತ್ತ ಹರಿಸಿದ್ದಾರೆ.
ಮಾಹಿತಿ ಮೂಲ : ಪರಿಸರ ಪರಿವಾರ, ಕರ್ನಾಟಕ ಶಿಕ್ಷಕರ ಬಳಗ