ಇಂದಿನ ಶಾಲಾ ಮಕ್ಕಳು ಕಲಿಯುವುದು ಹೇಗೆಂದೇ ತಿಳಿಯದ ಮುಗ್ಧರು ಎಂಬುದು ಒಂದು ಕಹಿ ಸತ್ಯ. ಶಾಲೆಗೆ ಹೋಗಿ ಬರುವುದರಿಂದಲೇ ವಿದ್ಯೆ ತಲೆಗೆ ಹತ್ತಬೇಕೆಂಬುದು ಅವರ ಬಯಕೆ. ಅರ್ಥಾತ್ ಕಲಿಯುವ ಒಂದು ಕೆಲಸ ತಮಗಿದೆ ಎಂಬುದು ಅಂತರ್ಗತವಾಗದ ಅನೇಕ ಮಕ್ಕಳಿದ್ದಾರೆ. ಮೊಬೈಲ್ ಮತ್ತು ಟಿ.ವಿ. ನೋಡಲು ಅವರಿಗೆ ಬೇಕಷ್ಟು ಸಮಯವಿದೆಯೆಂದೇ ಅವರು ತಿಳಿದಿದ್ದಾರೆ. ಹಾಗಾಗಿ ಮನೆಯಲ್ಲಿ ಕಲಿತು ಬನ್ನಿ ಅಥವಾ ಬರೆದು ತನ್ನಿ ಎಂಬ ಮನೆಗೆಲಸದ ಕಡೆಗೆ ಅವರು ನಿರ್ಲಕ್ಷ್ಯ ತಾಳುತ್ತಾರೆ. ಅದನ್ನು ಅರೆ-ಬರೆಯಾಗಿ ಮಾಡುತ್ತಾರೆ. ಅಕ್ಷರ ಹಾಳು, ಸ್ಪೆಲ್ಲಿಂಗ್ ತಪ್ಪು, ಅಪೂರ್ಣ ಬರಹ ಮುಂತಾದುವು ಅನೇಕ ವಿದ್ಯಾರ್ಥಿಗಳ ಮನೆಗೆಲಸದಲ್ಲಿ ಕಂಡುಬರುವ ದೋಷಗಳು. ಬಹುತೇಕ ವಿದ್ಯಾರ್ಥಿಗಳು ಹಾಗೆ ಮಾಡುವುದಕ್ಕೆ ಹೆತ್ತವರ ನಿರ್ಲಕ್ಷ್ಯವೇ ಕಾರಣ. ಇದರಿಂದ ಶಿಕ್ಷಕರು ತಾವು ಅಸಹಾಯಕರೆಂದು ಮಕ್ಕಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವುದಿಲ್ಲ. ಪರಿಣಾಮವಾಗಿ ಒಟ್ಟು ಕಲಿಕೆಯ ಗುಣಮಟ್ಟದ ಕುಸಿತ ಕಂಡುಬರುತ್ತದೆ.
ಡಿಜಿಟಲ್ ಗೀಳು ಮಕ್ಕಳ ಬುದ್ಧಿಯನ್ನು ಹಾಳು ಮಾಡುವ ಒಂದು ಕಾಯಿಲೆ. ಅದಕ್ಕೊಂದು ಉದಾಹರಣೆ ಇಲ್ಲಿದೆ. ಒಂದು ರೈಲು ಪ್ರಯಾಣದಲ್ಲಿ ನಡೆದ ಘಟನೆ ಇದು. ಮೊಬೈಲ್ ತನಗೆ ಬೇಕೆಂದು ಒಂದು ಸೀಟ್‍ನಲ್ಲಿದ್ದ ತಾಯಿ ಮತ್ತು ಮಗುವಿನ ನಡುವೆ ಜಗಳ ಏರ್ಪಟ್ಟಿತ್ತು. ಸುಮಾರು ಐದು ವರ್ಷದ ಮಗು ತನಗೆ ಗೇಮ್ಸ್ ಆಡಲು ಬೇಕೇ ಬೇಕೆಂದು ಹಟ ಹಿಡಿಯಿತು. ಆದರೆ ತಾಯಿಗೆ ಪ್ರಯಾಣದ ಬೇಸರ ಕಳೆಯಲು ಒಂದು ಸಿನೆಮಾ ನೋಡುವ ಆಸೆ ಇತ್ತು. ಕೊನೆಗೆ ಅಪ್ಪನ ಮಧ್ಯಸ್ಥಿಕೆಯಲ್ಲಿ ಹತ್ತು ನಿಮಿಷ ಗೇಮ್ಸ್ ಆಡಿ ಮಗ ತಾಯಿಗೆ ಮೊಬೈಲನ್ನು ಕೊಡುವುದೆಂಬ ಒಪ್ಪಂದವಾಯಿತು. ಆದರೆ ಹದಿನೈದು ನಿಮಿಷಗಳ ಬಳಿಕವೂ ಮಗು ಕೊಡಲಿಲ್ಲ, ಆಗ ತಾಯಿ ಅದನ್ನು ಸೆಳೆದುಕೊಳ್ಳಬೇಕಾಯಿತು. ಆ ಮಗು ಸಿಟ್ಟಿನಲ್ಲಿ ಹಾರಾಡಿದಾಗ ಅಪ್ಪ ಎತ್ತಿಕೊಂಡು ಕಿಟಿಕಿಯ ಹೊರಗೆ ಪ್ರಕೃತಿಯ ದೃಶ್ಯಗಳನ್ನು ತೋರಿಸುತ್ತ ಸಮಾಧಾನಿಸಬೇಕಾಯಿತು. ಇಂತಹ ಮೊಬೈಲ್ ಗೀಳು ಇದೊಂದೇ ಸೀಟ್‍ನಲ್ಲಿ ನಡೆಯುತ್ತಿದ್ದ ವಿದ್ಯಮಾನವಲ್ಲ. ಇನ್ನುಳಿದ ಸೀಟುಗಳಲ್ಲಿಯೂ ಎಳೆಯ ಮಕ್ಕಳು ಅಪ್ಪನ ಕಿಸೆಯಿಂದ ಅಥವಾ ಅಮ್ಮನ ವ್ಯಾನಿಟಿ ಬ್ಯಾಗ್‍ನಿಂದ ಮೊಬೈಲ್ ಸೆಳೆದುಕೊಂಡು ವೇಗವಾಗಿ ಬೆರಳಾಡಿಸುತ್ತ ಏನೇನೋ ಆಟಗಳಲ್ಲಿ ಮುಳುಗಿ ನಗುತ್ತ ಖುಷಿಯಲ್ಲಿದ್ದರು. “ಇನ್ನು ಸಾಕು, ಕೊಡು ಇತ್ತ” ಎಂಬ ಹೆತ್ತವರ ಬೇಡಿಕೆಗಳು ಆ ಮಕ್ಕಳ ಕಿವಿಗೆ ಬೀಳುತ್ತಲೇ ಇರಲಿಲ್ಲ.
ಆ ಬೋಗಿಯಲ್ಲಿ ಮಕ್ಕಳು ಮಾತ್ರವಲ್ಲ, ಅನೇಕ ಯುವಕರು, ಮಹಿಳೆಯರು, ಹಿರಿಯರೂ ಕೂಡಾ ಮೊಬೈಲ್‍ನ ಸೆರೆಯಾಗಿದ್ದರು. ಆದರೆ ಒಂದು ಸೀಟಿನಲ್ಲಿದ್ದ ತಾಯಿ ಮತ್ತು ಮಗುವಿನ ಲೋಕ ಬೇರೆಯದೇ ಇತ್ತು. ಆಕೆಯಲ್ಲಿದ್ದ ಚೀಲದೊಳಗೆ ಕೆಲವು ಪುಸ್ತಕಗಳಿದ್ದುವು. ಆಕೆ ಒಂದು ಪುಸ್ತಕ ತೆಗೆದು ಓದತೊಡಗಿದಳು. ಆಕೆಗೆ ಅಂಟಿಕೊಂಡು ಕುಳಿತಿದ್ದ ಸಣ್ಣ ಹುಡುಗನೂ ಅದೇ ಚೀಲದಿಂದ0 ಒಂದು ಪುಸ್ತಕ ತೆಗೆದು ಓದತೊಡಗಿದ. ಸ್ವಲ್ಪ ಹೊತ್ತು ಓದಿದ ಪುಸ್ತಕವನ್ನು ಆಕೆ ಒಳಗಿಟ್ಟು ಮತ್ತೊಂದು ಪುಸ್ತಕವನ್ನು ಚೀಲದಿಂದ ತೆಗೆದಳು. ಆಕೆಯ ಮಗನೂ ಹೊಸತೊಂದು ಚಿತ್ರಪುಸ್ತಕವನ್ನು ತೆಗೆದ. ರೈಲಿನಲ್ಲಿ ಬೇರೆಲ್ಲ ಮಕ್ಕಳು ಮೊಬೈಲ್‍ನಲ್ಲಿ ಮುಳುಗಿದ್ದರೆ ಇದೊಂದು ಮಗು ಓದುವಿಕೆಯಲ್ಲಿ ತಲ್ಲೀನವಾಗಿತ್ತು. ಆ ತಾಯಿ ನಡುನಡುವೆ ತಾನು ಓದುವ ಪುಸ್ತಕದಲ್ಲಿ ಏನಿದೆಯೆಂದು ಮಗುವಿಗೆ ವಿವರಿಸುತ್ತಿದ್ದಳು. ಇದಕ್ಕೆ ಪ್ರತಿಯಾಗಿ ಆ ಮಗುವೂ ತನ್ನ ಪುಸ್ತಕದಲ್ಲಿ ಏನಿದೆಯೆಂದು ಹೇಳುತ್ತಿತ್ತು. ಈಕೆ ಅತ್ಯಾಸಕ್ತಿಯನ್ನು ತೋರಿ, “ಹೌದಲ್ವ, ಜಾಣ” ಎಂದು ಹೊಗಳಿದಳು. ಆಕೆ ಆಸಕ್ತಿ ತೋರಿಸುತ್ತಿದ್ದಂತೆ ಮಗು ಹೆಚ್ಚುಹೆಚ್ಚಾಗಿ ಆಕೆಯ ಗಮನ ಸೆಳೆಯುತ್ತಿತ್ತು. ಹೀಗೆ ಇಬ್ಬರೂ ಒಂದೇ ಪುಸ್ತಕದ ಓದಿನಲ್ಲಿ ಲೀನವಾಗುತ್ತಿದ್ದರು. ಒಂದು ಪುಸ್ತಕದ ಓದು ಮುಗಿದಂತೆ ತಾಯಿ ಮತ್ತೊಂದು ಪುಸ್ತಕವನ್ನು ಆಯ್ದು ಕೊಡಲಿಲ್ಲ. ಮಗುವಿಗೇ ಚೀಲದಿಂದ ಬೇರೊಂದು ಪುಸ್ತಕವನ್ನು ಆಯ್ದುಕೊಳ್ಳುವ ಅವಕಾಶ ನೀಡಿದಳು. ಒಮ್ಮೊಮ್ಮೆ ಹೊರಗೆ ನೋಡುತ್ತ ವಿಸ್ತಾರವಾದ ಭೂಭಾಗದಲ್ಲಿ ಕಾಣುತ್ತಿದ್ದ ಮರಗಿಡ, ಬೆಳೆ, ಹೊಳೆಗಳ ಬಗ್ಗೆ ಹೇಳುತ್ತಿದ್ದಳು. ಹೂಹಣ್ಣುಗಳ ಹೆಸರು ತಿಳಿಸುತ್ತಿದ್ದಳು. ಸ್ವಲ್ಪ ಹೊತ್ತು ಮಗುವಿಗೆ ನಿದ್ರೆ ಬಂದಾಗ ಅಮ್ಮ ತಾನು ಓದುತ್ತಿದ್ದ ಪುಸ್ತಕವನ್ನೆತ್ತಿಕೊಂಡಳು. ಇದನ್ನು ಗಮನಿಸುತ್ತಿದ್ದ ಎದುರಿನ ಸೀಟ್‍ನಲ್ಲಿದ್ದ ಹಿರಿಯರು ಆಕೆಯಲ್ಲಿ ಕೇಳಿದರು, “ನಿಮ್ಮ ಈ ಮಗನನ್ನು ಪುಸ್ತಕ ಓದುವಂತೆ ಹೇಗೆ ಮಾಡಿದಿರಿ?” ಆಕೆ ತೀರಾ ಸರಳವಾಗಿ ಉತ್ತರಿಸಿದಳು, “ನಾನು ಪುಸ್ತಕವನ್ನು ಓದುವ ಮೂಲಕ.”
ಆ ತಾಯಿ ಮಗ ಇಬ್ಬರೂ ಮೈಸೂರಿಂದ ಬೆಂಗಳೂರಿನವರೆಗಿನ ಪ್ರಯಾಣದುದ್ದಕ್ಕೂ ಪುಸ್ತಕಗಳನ್ನೇ ಓದುತ್ತಿದ್ದರು. ಕೆಂಗೇರಿ ದಾಟುತ್ತಲೇ ಆಕೆ ಮೊಬೈಲ್ ಹೊರತೆಗೆದು ತನ್ನವರಿಗೆ “ರೈಲು ಕೆಂಗೇರಿ ದಾಟಿತು” ಎಂದು ತಿಳಿಸಿ ಮತ್ತೆ ಮೊಬೈಲನ್ನು ಚೀಲಕ್ಕೆ ತುರುಕಿದಳು. ಅಂದರೆ ಆಕೆಗೆ ಮೊಬೈಲಿನ ಸರಿಯಾದ ಉಪಯೋಗ ತಿಳಿದಿತ್ತು. ಹಾಗೆಯೇ ಮಗುವಿನಲ್ಲಿ ಓದುವ ಆಸಕ್ತಿ ಬೆಳೆಸಲು ಆ ಆಸಕ್ತಿಯನ್ನು ತಾನೂ ಬೆಳೆಸಿಕೊಳ್ಳಬೇಕೆಂದು ಅರಿತಿದ್ದಳು.
ಪುಸ್ತಕಗಳಲ್ಲೇ ಮುಳುಗಿದ್ದ ಇವರನ್ನು ವಾಶ್‍ರೂಂಗೆ ಹೋಗಿ ಬರುತ್ತಿದ್ದ ಇತರ ಪ್ರಯಾಣಿಕರು “ವಿಚಿತ್ರ ಇದ್ದಾರಪ್ಪಾ” ಎನ್ನುವಂತೆ ನೋಡುತ್ತಿದ್ದರು. ಮೊಬೈಲ್‍ನ ಆಟಗಳಲ್ಲಿ ಮುಳುಗಿದ್ದ ಇತರ ಮಕ್ಕಳಿಗೆ ನಿದ್ರೆಯೂ ಬರಲಿಲ್ಲ. ಅವರು ರೈಲಿನ ಕಿಟಕಿಗಳಿಂದ ಹೊರಗೆ ನೋಡುತ್ತಲೂ ಇರಲಿಲ್ಲ. ಈ ಎರಡೂವರೆ ಗಂಟೆಗಳ ಪ್ರಯಾಣದ ಅವಧಿಯನ್ನು ಮಗುವಿನಲ್ಲಿ ಓದುವ ಅಭ್ಯಾಸವನ್ನು ಬೆಳೆಸಲು ಬಳಸಿಕೊಂಡ ಒಬ್ಬಾಕೆ ತಾಯಿ ಉಳಿದವರಿಗೆ ಮಾದರಿಯಾಗಿದ್ದಳು. “ನೋಡು, ಆ ಹುಡುಗ ಹೇಗೆ ಓದುತ್ತಿದ್ದಾನೆ. ನೀನೂ ಸ್ವಲ್ಪ ಓದು” ಎಂದು ಒಂದಿಬ್ಬರು ಅಮ್ಮಂದಿರು ಮಕ್ಕಳಿಗೆ ಗದರಿಸಿ ಅವರ ಕೈಯಿಂದ ಮೊಬೈಲ್ ಎಳೆದುಕೊಂಡು ತಾವು ಸಿನೆಮಾ ನೋಡತೊಡಗಿದರು. ಮೊಬೈಲ್‍ವಂಚಿತರಾದ ಆ ಮಕ್ಕಳು ಮೊಬೈಲ್ ಗೇಮ್ಸ್‍ಗಳಲ್ಲಿ ಮಗ್ನರಾಗಿದ್ದ ಬೇರೆ ಮಕ್ಕಳ ಬಳಿ ಕುಳಿತು ಇಣುಕಿ ನೋಡತೊಡಗಿದರು.
ಮಕ್ಕಳು ಓದಬೇಕೆಂದರೆ ಉಪಾಯ ಇಷ್ಟೇ – ಹೆತ್ತವರೂ ಓದಬೇಕು! ಮಕ್ಕಳಿಗೆ ಉತ್ತಮ ಅಭ್ಯಾಸಗಳಿಗೆ ಹೆತ್ತವರೇ ಮಾದರಿಗಳಾಗಬೇಕು. ಅದನ್ನು ಮರೆತು “ಮಗು ಓದುವುದಿಲ್ಲವೆಂದು” ಹಳಿದು ಫಲವಿಲ್ಲ. “ಎಷ್ಟು ನೆನಪಿಸಿದರೂ ನಮ್ಮ ಮಗು ಓದುವುದೇ ಇಲ್ಲ” ಎಂತ ನನ್ನಲ್ಲಿ ಅಸಮಾಧಾನ ವ್ಯಕ್ತಪಡಿಸುವ ಹೆತ್ತವರಲ್ಲಿ, “ನೀವು ಏನಾದರೂ ಓದುವ ಹವ್ಯಾಸವನ್ನು ಇಟ್ಟುಕೊಂಡಿರುತ್ತೀರಾ?” ಎಂದು ಕೇಳುತ್ತೇನೆ. “ನಾವೆಂಥದಿನ್ನು ಓದುವುದು? ನಮ್ಮ ಕೆಲಸವೇ ಸಾಕಷ್ಟಾಗುತ್ತದೆ” ಎನ್ನುತ್ತಾರೆ. “ಮಕ್ಕಳಿಗೆ ಏನಾದರೂ ಕೆಲಸ ಹೇಳುತ್ತೀರಾ? ನಿಮ್ಮ ಕೆಲಸವನ್ನು ಅವರೊಂದಿಗೆ ಹಂಚಿಕೊಳ್ತೀರಾ?” “ಇಲ್ಲಪ್ಪಾ. . . ಅವರಿಗೆ ಯಾವ ಕೆಲಸವನ್ನೂ ಹೇಳುವುದಿಲ್ಲ. ಓದುವುದೊಂದೇ ಅವರು ಮಾಡಬೇಕಾದ ಕೆಲಸ. ಅದನ್ನೇ ಅವರು ಮಾಡುತ್ತಿಲ್ಲ” ಎಂದು ಉತ್ತರಿಸುತ್ತಾರೆ. ಮಕ್ಕಳು ಏನೂ ಕೆಲಸ ಮಾಡಬೇಕಾಗಿಲ್ಲ ಎಂಬ ಮನೋಸ್ಥಿತಿಯೇ ಋಣಾತ್ಮಕವಾದದ್ದು. ಅದರ ಬದಲು “ನಾವಿಬ್ಬರೂ ಸೇರಿ ಇದ್ದ ಕೆಲಸ ಮುಗಿಸಿಕೊಳ್ಳೋಣ. ಮತ್ತೆ ಇಬ್ಬರೂ ಕುಳಿತು ಓದೋಣ” ಎಂಬ ಒಪ್ಪಂದವನ್ನು ಹೆತ್ತವರು ಮಕ್ಕಳೊಡನೆ ಮಾಡಿಕೊಳ್ಳಬೇಕು. ಓದುವಲ್ಲಿ, ಅರ್ಥ ಮಾಡಿಕೊಳ್ಳುವಲ್ಲಿ, ಸುಂದರ ಕೈ ಬರಹದ ಅಭ್ಯಾಸದಲ್ಲಿ ಹಾಗೂ ತನ್ನ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದರಲ್ಲಿ ಮಗುವಿನ ಗುಣಗಳ ಅಂತರ್ಗತೀಕರಣದಲ್ಲಿ ಹೆತ್ತವರ ಪಾಲುದಾರಿಕೆ ಇರಬೇಕಾಗುತ್ತದೆ. ಹಾಗಾಗಿ ಏನಾದರೂ ಕೆಲಸ ಹೇಳಿದರೆ ಮಗುವಿನ ಓದುವ ಸಮಯವನ್ನು ಕಸಿದುಕೊಂಡಂತಾಗುವುದಿಲ್ಲ. ಬದಲಾಗಿ ಕೆಲಸದಲ್ಲಿ ಮಕ್ಕಳಿಗೆ ಅವಕಾಶ ಕೊಡುವುದೂ ಬದುಕಿನ ಕಲಿಕೆಯ ಒಂದು ಭಾಗವೇ ಆಗಿದೆ. ಹಾಗೆಯೇ ಮನೆಕೆಲಸ ಬೇಗ ಮುಗಿದರೆ ಮಕ್ಕಳ ಕಲಿಕೆಯಲ್ಲಿ ಪಾಲ್ಗೊಳ್ಳಲು ಹೆತ್ತವರಿಗೆ ಸಮಯ ಸಿಗುತ್ತದೆ.
ಈಗ ಪ್ರಶ್ನೆ ಇರುವುದು ಏನನ್ನು ಓದಬೇಕೆಂಬುದು. ಹೆತ್ತವರಲ್ಲಿ ಕೇಳಿದರೆ ಪಾಠಗಳನ್ನು ಓದಬೇಕೆಂದಷ್ಟೇ ಅವರ ಬಯಕೆ. ಅಂಕಗಳನ್ನು ಗಳಿಸಲು ಬೇರೆ ದಾರಿ ಇಲ್ಲ. ಅಂಕ ಗಳಿಕೆಗೆ ಬೇರೆ ದಾರಿ ಇರುತ್ತಿದ್ದರೆ ಪಾಠ ಓದಬೇಕೆಂದೇನೂ ಹೆತ್ತವರ ಆಗ್ರಹ ಇರುತ್ತಿರಲಿಲ್ಲ. ಪಠ್ಯಪುಸ್ತಕಗಳು ಮಕ್ಕಳಿಗೆ ಆಸಕ್ತಿದಾಯಕವಾಗಿವೆಯೇ? ಮಕ್ಕಳು ಅರ್ಥಮಾಡಿಕೊಂಡು ಕಲಿಯಲು ಎಷ್ಟು ಸಮಯ ಬೇಕು? ಬೇರೆ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಶಿಕ್ಷಣದಲ್ಲಿ ಅವಕಾಶವಿದೆಯೇ? ಈ ಪ್ರಶ್ನೆಗಳನ್ನು ಪೋಷಕರಾಗಲೀ ಶಿಕ್ಷಕರಾಗಲೀ ಕೇಳುತ್ತಾರೆಯೇ?
ಈ ಪ್ರಶ್ನೆಗಳಿಗೆ ಸಕಾರಾತ್ಮಕ ಉತ್ತರವನ್ನು ಕೊಡಬೇಕಿದ್ದರೆ ಹೆತ್ತವರೂ ಮಕ್ಕಳ ಚೀಲಗಳಲ್ಲಿ ತುಂಬಿರುವ ಪುಸ್ತಕಗಳನ್ನು ಹೊರತೆಗೆದು ಓದಬೇಕು. ಅವುಗಳ ಯುಕ್ತಾಯುಕ್ತತೆಯನ್ನು ಪರಿಶೀಲಿಸಿ ಕಲಿತುಕೊಳ್ಳಲು ಎಷ್ಟು ಸಮಯ ಬೇಕು ಎಂಬುದನ್ನು ನಿರ್ಧರಿಸಬೇಕು. ಪ್ರಶ್ನೋತ್ತರ ಚರ್ಚೆಗಳ ಮೂಲಕ ಕಲಿಕೆಗೆ ತೊಡಗಿದರೆ ಮಕ್ಕಳ ಯಶಸ್ಸಿನ ಬಗ್ಗೆ ಚಿಂತೆಯೇ ಇರುವುದಿಲ್ಲ.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement