ದಾವಣಗೆರೆ ಜಿಲ್ಲೆಯ 216 ಗ್ರಾಮ ಪಂಚಾಯತಿಗಳಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಡಿಜಿಟಲ್ ಇಂಡಿಯಾ ಮುಂದುವರೆದ ಭಾಗವಾಗಿ ಡಿಜಿಟಲ್ ಲೈಬ್ರರಿಗಳ ಅನುಷ್ಠಾನದಿಂದ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ಅವರಿಗೆ ಕಂಪ್ಯೂಟರ್ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಹೆಚ್ಚಳ ಮಾಡುವ ಸಲುವಾಗಿ, ಡಿಜಿಟಲ್ ಲೈಬ್ರರಿ ಆರಂಭಿಸಿದ್ದು, ಪ್ರೌಢ ಶಾಲೆ, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳನ್ನು ಮೂರು ತಂಡಗಳನ್ನಾಗಿ ವಿಂಗಡಿಸಿ ತರಬೇತಿ ನೀಡಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್.
ಉಚಿತವಾಗಿ ಡಿಜಿಟಲ್ ಲೈಬ್ರರಿ ಬಳಕೆ ಮಾಡುತ್ತಿದ್ದು, ಟೈಪಿಂಗ್, ಇ-ಮೇಲ್ , ಎಕ್ಸೆಲ್ ನಂತಹ ಬೇಸಿಕ್ ಕಂಪ್ಯೂಟರ್ ಜ್ಞಾನ ಕಲಿಯುತ್ತಿದ್ದೇವೆ. ಶಾಲೆ ಮುಗಿದ ಬಳಿಕ ಗ್ರಂಥಾಲಯಕ್ಕೆ ತೆರಳಿ, ಅಂತರ್ಜಾಲದಲ್ಲಿನ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಗ್ರಾಮೀಣ ಭಾಗದ ವಿದ್ಯಾರ್ಥಿ ವಿದ್ಯಾರ್ಥಿ ರೋಹನ್ ಹೇಳುತ್ತಾರೆ.