ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಐಕ್ಯುಎಸಿ ಘಟಕ ಹಾಗೂ ಸುಳ್ಯದ ಕಲ್ಮಡ್ಕದ ಬಾಬಿ ಫಿಶರ್ಸ್ ಚೆಸ್ ಅಸೋಸಿಯೇಶನ್ ನ ಆಶ್ರಯದಲ್ಲಿ ಜಿಲ್ಲಾ ಮಟ್ಟದ “ವಿವೇಕಾನಂದ ಜ್ಯೂನಿಯರ್ ಚೆಸ್ ಪಂದ್ಯಾಟ” ನಡೆಯಿತು. ಪಂದ್ಯಾಟದಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆ ವಿದ್ಯಾರ್ಥಿನಿ ಸಾನಿಧ್ಯ ಎಸ್ ರಾವ್ , ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಅಭಿನವ. ಪಿ , ಪ್ರೌಢ ಮತ್ತು ಪದವಿ ಪೂರ್ವ ವಿಭಾಗದಲ್ಲಿ ಎಸ್ ಡಿ ಎಂ ಪಿಯುಸಿ ಕಾಲೇಜಿನ ಶ್ರೇಯಸ್ ಎಂ.ಎಸ್ ವಿಜೇತರಾದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ, ಕಲ್ಮಡದ ಬಿ ಎಫ್ ಸಿ ಎ ನಿರ್ದೇಶಕ ಪಿ. ಜಿ. ಎಸ್ ಎನ್ ಪ್ರಸಾದ್, ಚದುರಂಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಮಂದಿ ಸಾಧನೆಯನ್ನು ಮೆರೆದಿದ್ದಾರೆ. ಇದಕ್ಕೆ ಡಿ. ಗುಕೇಶ್ ಅವರು ಜಲ್ವಂತ ಸಾಕ್ಷಿಯಾಗಿದ್ದಾರೆ. ಸಾಧಕರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಚದುರಂಗಾಟದಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಮಾತನಾಡಿ,
ವಿದ್ಯಾರ್ಥಿಗಳು ಪುಸ್ತಕಕ್ಕೆ ಮಾತ್ರ ಸೀಮಿತರಾಗದೆ, ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಮಕ್ಕಳು ಸರ್ವಾಂಗೀಣವಾಗಿ ಬೆಳೆಯಲು ಸಾಧ್ಯ ಎಂದರು.
ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಾಬಿ ಫಿಶರ್ಸ್ ಚೆಸ್ ಅಸೋಸಿಯೇಶನ್ ನ ಹಿರಿಯ ಸದಸ್ಯ, ಚದುರಂಗ ಆಟಗಾರ ಮೋಹನ್ ಕುಮಾರ್ ಕಲ್ಮಡ್ಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಸ್ವಾಗತಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ. ಎಸ್. ವಂದಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.