ಗೋವುಗಳಲ್ಲಿ ದೇವರಿದ್ದಾನೆಯೇ….?

July 13, 2024
7:51 PM
ಸಕಲ ವಸ್ತು-ಜೀವಿಗಳಲ್ಲಿ ಭಗವಂತ ವ್ಯಾಪಿಸಿದ್ದಾನೆ ಎಂಬ ಸತ್ಯದ ಅರಿವಿನ ಆಧಾರದಲ್ಲಿ ಗೋವು ಅಥವಾ ಇನ್ನಾವುದೇ ಜೀವಿಗಳಲ್ಲಿ ಮತ್ತು ಸ್ಥಿರ-ಚರ-ಜಡ ವಸ್ತುಗಳಲ್ಲಿ ಭಗವಂತನ ಚೈತನ್ಯ ಇದೆ.

ಗೋವುಗಳಲ್ಲಿ ಸಕಲದೇವತೆಗಳೂ ವಾಸ ಮಾಡುತ್ತಾರೆ ಆದ್ದರಿಂದ ಗೋವಿಗೆ ಮಾಡುವ ಸೇವೆ,ಪೂಜೆ,ಗ್ರಾಸ ಎಲ್ಲವೂ ದೇವತೆಗಳನ್ನು ತಲುಪುತ್ತದೆ. ಎಂಬುದು ನಮ್ಮನಂಬಿಕೆ. ಆದರೆ ಕೆಲವೊಮ್ಮೆ ಗೋವಿನಲ್ಲಿ ದೇವತೆಗಳಿದ್ದಾರೆ ಎಂಬುದನ್ನು ಯಾಕೆ ಹೇಳ್ತಾರೆ ಕಾರಣ ಏನು? ದೇವತೆಗಳಿದ್ದರೆ ಆ ಗೋವುಗಳನ್ನು ಕಳ್ಳತನ ಮಾಡುವ ವಧೆ ಮಾಡುವ ದುಷ್ಟರನ್ನು ದೇವರೇ ಶಿಕ್ಷಿಸಬೇಡವೇ? ಆದ್ದರಿಂದ ಗೋವಿನಲ್ಲಿ ದೇವತೆಗಳಿದ್ದಾರೆ ಎಂಬುದು ಮೌಢ್ಯವೇ? ಇತ್ಯಾದಿ ಪ್ರಶ್ನೆಗಳೂ ಕೆಲವರಿಗೆ ಕಾಡಬಹುದು. ಅದಕ್ಕೆ ಸಮರ್ಪಕವಾದ ಉತ್ತರ ಕೊಡುವುದು ಅಗತ್ಯ.

Advertisement

ಗೋವಿನಲ್ಲಿ ದೇವತೆಗಳಿದ್ದಾರೆ ಎಂಬ ವಿಚಾರಕ್ಕೆ ವೇದ ಶಾಸ್ತ್ರ ಪುರಾಣಗಳೇ ಆಧಾರ. ವೇದ ಶಾಸ್ತ್ರ ಪುರಾಣಗಳು ಸ್ವರ್ಗಲೋಕದ ಇರುವಿಕೆಯನ್ನು ಮತ್ತು ಇಂದ್ರಾದಿ ದೇವತೆಗಳ ಇರುವಿಕೆಯನ್ನು ಪ್ರತಿಪಾದಿಸುತ್ತವೆ. ಆದ್ಧರಿಂದ ಅವುಗಳ ಪ್ರಕಾರ ಸ್ವರ್ಗಧೇನುವಾದ ಕಾಮಧೇನು ಮತ್ತು ಅವಳ ಸಂತತಿಯು ಒಂದು ಕಾಲದಲ್ಲಿ ಭೂಮಿಯಲ್ಲಿ ಋಷಿ ಮುನಿಗಳ ಯಾಗಕಾರ್ಯಕ್ಕೆ ಪ್ರತ್ಯಕ್ಷವಾಗಿ ನೆರವಾಗಲು ಭೂಮಿಗೆ ಬರುತ್ತಿತ್ತು ಎಂಬುದು ಯುಗಾಂತರದಲ್ಲಿ ನಡೆದ ಸಂಗತಿ. ಆಗ ಆ ಸ್ವರ್ಗಧೇನುವನ್ನು ದೇವಮಯಿಯಾಗಿ ಕಂಡ ಭಾವನೆಯೇ ಮುಂದುವರೆದು, ಮುಂದಕ್ಕೆ ಗೋವುಗಳೆಲ್ಲ ಅವಳ ಸಂತತಿ ಎಂಬ ಕಾರಣಕ್ಕೆ ಎಲ್ಲ ಗೋವುಗಳನ್ನು ದೇವತಾ ಭಾವನೆಯಿಂದ ಜನ ಕಾಣುವ ಪೂಜಿಸುವ ಪದ್ಧತಿ ಬೆಳೆದುಬಂತು.

ಇದಲ್ಲದೆ, ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಕೃಷಿಗೆ,ಯಜ್ಞಕ್ಕೆ,ಔಷಧಿಗಳಿಗೆ ಅನಿವಾರ್ಯವಾಗಿದ್ದ ಗೋವನ್ನು ಸಕಲದೇವತೆಗಳ ಆವಾಸವೆಂದು ಕಂಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪ್ರತಿಯೊಂದು ಜೀವಿಗೂ ಆಹಾರ ಬೇಕೇ ಬೇಕು. ಎಲ್ಲ ಭೌತಿಕ ದೃಷ್ಟಿಗೆ ಕಾಣುವ ಜೀವಜಾಲಕ್ಕೆ ಒಂದಿಲ್ಲೊಂದು ಬಗೆಯ ಆಹಾರಕ್ಕೆ ಮೂಲ ಭೂಮಿ,ಅದರ ಜೊತೆಗೆ ನೀರು, ಗಾಳಿ, ಅಗ್ನಿ ಆಕಾಶಗಳೆಂಬ ಪಂಚಭೂತಗಳ ಸಂಯೋಗ ಬೇಕು. ಆದರೆ ಇವಿಷ್ಟೇ ಸಾಕೇ? ಸಾಲದು ಅಲ್ಲಿ ಚಟುವಟಿಕೆ ನಡೆಸುವ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳೂ ಇರಲೇಬೇಕು. ಅಂತಹ ಸೂಕ್ಷ್ಮಾಣು ಜೀವಿಗಳು ಹಲವು ವಿಧಗಳಲ್ಲಿರಬಹುದು. ಉಪಕಾರಿ-ಅಪಕಾರಿ ಎರಡೂ ಇರಬಹುದು. ಒಟ್ಟಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆ ನಡೆಯುವುದರಿಂದಲೇ ಗಿಡಗಳು ಬೆಳೆಯುವುದು ಹಾಗೂ ಆಹಾರ ಉತ್ಪನ್ನವಾಗುವುದು. ಅಂತಹ ಉಪಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆಯ ಚಕ್ರ ನಡೆಯುವುದೇ ಗೋವುಗಳ ಮೂಲಕ. ಆದ್ದರಿಂದ ಸಕಲ ಜೀವಿಗಳ ಆಹಾರ ಉತ್ಪತ್ತಿಗೆ ಮೂಲ ಗೋವು ಎಂಬುದನ್ನು ಅರ್ಥೈಸಿಕೊಂಡಕಾರಣವೇ ಗೋವಿಗೆ ದೈವಿಕ ಸ್ಥಾನವನ್ನು ಕೊಟ್ಟಿದ್ದಾರೆ.

ಸನಾತನ ಧರ್ಮದ ಅಂತಃಸ್ಸತ್ವವೇ ಭಗವಂತನೆಂಬ ಪರಮಸತ್ಯವನ್ನು ಕಂಡು ಅನುಭವಿಸುವ ತನಕ,ಭಗವಂತನಲ್ಲಿ ಲೀನವಾಗುವ ತನಕ ಜನನ ಮರಣಗಳು ಜೀವನಿಗೆ ಇದೆ ಎಂದು ಅರಿತು ಬದುಕುವುದು. ಆದ್ದರಿಂದ ಸಕಲರಲ್ಲಿ ಸರ್ವತ್ರ ವ್ಯಾಪಿಸಿದ ಭಗವಂತನನ್ನು ಸಾಕ್ಷಾತ್ಕರಿಸುವವರೆಗೆ ಜೀವನು ಹುಟ್ಟು ಸಾವುಗಳ ಚಕ್ರದಲ್ಲಿ ತಿರುಗುತ್ತಾನೆ. ಈ ಅನ್ವೇಷಣೆಗೆ ತೊಡಗಿದ ಮಂದಿ ಅನುಸರಿಸಿದ ಮಾರ್ಗ ನಮ್ಮದು ಅದಕ್ಕಾಗಿ ಇದು ಸನಾತನ ಧರ್ಮ.

ಆದ್ದರಿಂದ, ಈ ತತ್ವವನ್ನು ಮನಗಂಡ ಋಷಿಗಳು ನಾನಾ ಮಾರ್ಗದಿಂದ ಭಗವಂತನ್ನು ಕಾಣುವ ಬಗೆಯನ್ನು ತೋರಿಸಿದ್ರು. ಹಾಗಾಗಿ ಸಕಲ ವಸ್ತು-ಜೀವಿಗಳಲ್ಲಿ ಭಗವಂತ ವ್ಯಾಪಿಸಿದ್ದಾನೆ ಎಂಬ ಸತ್ಯದ ಅರಿವಿನ ಆಧಾರದಲ್ಲಿ ಗೋವು ಅಥವಾ ಇನ್ನಾವುದೇ ಜೀವಿಗಳಲ್ಲಿ ಮತ್ತು ಸ್ಥಿರ-ಚರ-ಜಡ ವಸ್ತುಗಳಲ್ಲಿ ಭಗವಂತನ ಚೈತನ್ಯ ಇದೆ. ಮತ್ತು ಅವುಗಳಲ್ಲಿ ಕೆಲವು ಹೆಚ್ಚಿನ ಅಂಶವನ್ನು ಹೊಂದಿವೆ.ಹಾಗೂ ಕೆಲವು ಕಡಿಮೆ ಹೊಂದಿವೆ. ಹೀಗೆ ಇರುವ ನಂಬಿಕೆ ಸತ್ಯವೆಂದು ಅರಿವಾಗುವ ತನಕ ದ್ವಂದ್ವ ಇದ್ದೇ ಇದೆ. ಸಾಮಾನ್ಯ ಜನ ಜೀವನದಲ್ಲಿ ಯಾವಾಗಲೂ ಎಲ್ಲವನ್ನೂ ದೇವತಾಭಾವನೆಯಿಂದ ಕಾಣುತ್ತಾ ವ್ಯಾವಹಾರಿಕ ಬದುಕು ಸಾಧ್ಯವಿಲ್ಲ. ಹಾಗಾಗಿ ಕೊಲ್ಲುವ ಹುಲಿಯಲ್ಲಿ ಮತ್ತು ಕೊಲ್ಲಲ್ಪಡುವ ಜಿಂಕೆಯಲ್ಲೂ ದೇವರಿದ್ದಾನೆ. ಎಂಬುದು ತಾತ್ವಿಕವಾಗಿ ಸತ್ಯವಾದರೂ, ವ್ಯಾವಹಾರಿಕವಾಗಿ ನಮ್ಮೆದುರಿಗೇ ಹುಲಿ ಬಂದಾಗ ದೇವರಿದ್ದಾನೋ ಇಲ್ವೋ ಎಂದು ಪರೀಕ್ಷಿಸುವ ಸಾಹಸ ಮಾಡಬಾರದು. ಆ ಸಮಯಕ್ಕೆ ಆತ್ಮರಕ್ಷಣೆಯೇ ನಮ್ಮ ಕರ್ತವ್ಯ .ಅದನ್ನೇ ಮಾಡಬೇಕು.

ಸಕಲ ಚರಾಚರಗಳಲ್ಲಿಯೂ ದೇವರಿದ್ದಾನೆ ಎಂಬ ತತ್ವವನ್ನು ಅರಿಯುವ ತನಕ ಬದುಕು ಸಾಗಿಸುವುದು ಹೇಗೆ ಎಂಬುದಕ್ಕೆ ನಾನಾ ಋಷಿಮುನಿಗಳು,ದಾರ್ಶನಿಕರು,ತತ್ವಜ್ಞಾನಿಗಳು ತೋರಿದ ಬದುಕಿನ ಮಾರ್ಗವೇ ವಿವಿಧ ಮತ ಪಂಥಗಳಿಂದ ಸಂಪ್ರದಾಯಗಳಿಂದ ಕೂಡಿದ ಈ ಸನಾತನ ಧರ್ಮ. ಸನಾತನ ಧರ್ಮವನ್ನು ಪಾಲಿಸಲು ಯೋಗ್ಯವಾದ ಶಾಸನವನ್ನು ಮಾಡುವುದು ಆಡಳಿತದ ಕರ್ತವ್ಯ. ಹಿಂದೆ ಸನಾತನ ಧರ್ಮಾಚರಣೆಯ ಮಂದಿಯೇ ಬಹುವಾಗಿ ಇದ್ದ ಈ ಅಖಂಡ ಭಾರತ ಇಂದು ಸನಾತನ ಧರ್ಮಾಚರಣೆಯನ್ನು ಎತ್ತಿಹಿಡಿಯದ ಭಾಗಶಃ ಮಾತ್ರ ಎಲ್ಲರ ಜೊತೆ ಬದುಕಲು ನಿರ್ದಿಷ್ಟ ಶಾಸನ ವ್ಯವಸ್ಥೆ ಯಿರುವ ದೇಶವಾದ ಕಾರಣ ಗೋ ವಧೆಯನ್ನು ನಮ್ಮಿಂದ ಅಂದರೆ ಗೋವನ್ನು ಪೂಜನೀಯವಾಗಿ ಕಾಣುವ ಸಾಮಾನ್ಯ ಜನರಿಂದ ತಡೆಯಲು ಅಸಾಧ್ಯವಾಗಿದೆ. ಗೋವಿನೊಳಗೆ ಸಕಲ ದೇವತೆಗಳೂ ಇದ್ದಾರಲ್ವಾ ? ಯಾರೋ ಒಬ್ಬರು ದೇವರು ಪ್ರತ್ಯಕ್ಷವಾಗಿ ಬಂದು ಗೋ ಹಂತಕರನ್ನು ಶಿಕ್ಷಿಸಿ ಗೋವಧೆಯನ್ನು ತಡೆಯಬಹುದಲ್ಲವೇ?

ದೇವರು ಬರುವುದಿಲ್ಲವೇ? ಅಂತ ಕೇಳಿದ್ರೆ , ದೇವರು ಪ್ರತ್ಯಕ್ಷನಾಗಿ ಬರುವುದಿಲ್ಲ. ನಾವು ನಂಬಿದ್ರೆ ಬುದ್ಧಿಯಲ್ಲಿ ಕುಳಿತು ಸರಿಯಾದ ದಾರಿ ತೋರುತ್ತಾನೆ.ಧರ್ಮ-ಅಧರ್ಮ ಎರಡೂ ಅವನದೇ ಸೃಷ್ಟಿ. ಆದ್ದರಿಂದ ಧರ್ಮಾಚರಣೆಯ ಸರಿಯಾದ ಮಾರ್ಗ ಯಾವುದು ಹಾಗೂ ಎಲ್ಲರೂ ಆ ಮಾರ್ಗದಲ್ಲಿ ಬದುಕಲು ಬೇಕಾದ ಶಾಸನವ್ಯವಸ್ಥೆ ರೂಪಿಸುವುದು ಹೇಗೆ ಎಂಬ ಬುದ್ಧಿಯನ್ನೂ ದೇವರೇ ತೋರಿಸ್ತಾನೆ ಅಂತಷ್ಟೇ ಹೇಳಬಹುದು..

ಆದ್ದರಿಂದ ಭಾರತೀಯ ದೇಶೀ ತಳಿಯ ಗೋವುಗಳ ಹಿತ ಕಾಯವ ಶಾಸನವನ್ನು ರೂಪಿಸುವ ಧರ್ಮಿಷ್ಠ ಶಾಸನ ವ್ಯವಸ್ಥೆ ರೂಪುಗೊಳಿಸುವಂತಹ ಪ್ರಜೆಗಳು ಈ ದೇಶದಲ್ಲಿ ಇನ್ನಷ್ಟು ಹುಟ್ಟಿಬರಲಿ ಹಾಗೂ ಗೋ ಹಂತಕರು ನಾಶಹೊಂದಲಿ.

ಬರಹ :
ಮುರಲೀಕೃಷ್ಣ.ಕೆ.ಜಿ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

ಅಳತೆ ಬಲ್ಲವ ಅಡುಗೆಯ ನಳಮಹಾರಾಜ…..
April 9, 2025
9:00 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹಿಂದೂ ಧರ್ಮ ಮತ್ತು ರಾಷ್ಟ್ರದ ಏಕತೆ
April 9, 2025
8:00 AM
by: ಡಾ.ಚಂದ್ರಶೇಖರ ದಾಮ್ಲೆ
ಗೆಲ್ಲುವುದಕ್ಕೂ-ಸೋಲುವುದಕ್ಕೂ ಈಗ ಸೋಶಿಯಲ್‌ ಮೀಡಿಯಾ ಸಾಕು..!
April 8, 2025
7:31 AM
by: ಮಹೇಶ್ ಪುಚ್ಚಪ್ಪಾಡಿ
ಬೃಹಸ್ಪತಿ ಅಂದರೆ ಜ್ಞಾನವಂತ
April 6, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group