ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ 396 ಸಂಘಗಳ 35,707 ಸಕ್ರಿಯ ಸದಸ್ಯರಿಂದ 2,86,576 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 29,396 ಸಕ್ರಿಯ ಸದಸ್ಯರಿಂದ 1,89,806 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ಕಂಡ ಅಂಕಿ ಅಂಶಗಳ ಪ್ರಕಾರ ಸಕ್ರಿಯ ಸದಸ್ಯತ್ವವು ಕಡಿಮೆಯಾಗಲು ರಾಸುಗಳು ಗರ್ಭಾವಸ್ಥೆಯಲ್ಲಿರುವುದು, ಸ್ವಾಭಾವಿಕವಾಗಿ ಹೈನುಗಾರರು ವಯಸ್ಸಿನ ಕಾರಣದಿಂದ ಹೈನುಗಾರಿಕೆಯಿಂದ ನಿವೃತ್ತಿ, ನಗರೀಕರಣ, ಪಟ್ಟಣಕ್ಕೆ ವಲಸೆ ತೆರಳಿರುವುದು, ಕೋವಿಡ್ ಕಾಯಿಲೆ ಕಡಿಮೆಯಾಗಿ ಪರ್ಯಾಯ ಉದ್ಯೋವಕಾಶಗಳು ಪ್ರಾರಂಭಗೊಂಡಿರುವುದು ಪ್ರಮುಖ ಕಾರಣಗಳಾಗಿರುತ್ತವೆ.
ಒಕ್ಕೂಟದ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ದಿನವಹಿ ಸರಾಸರಿ 3,52,085 ಲೀ. ಹಾಲು ಮತ್ತು 60,019 ಕೆ.ಜಿ ಮೊಸರು ಮಾರಾಟವಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ 3,75,992 ಲೀ. ಹಾಲು ಮತ್ತು 70,193 ಕೆ.ಜಿ ಮೊಸರು ಮಾರಾಟವಾಗುತ್ತಿದೆ. ಅಂದರೆ, ದಿನವಹಿ 24,000 ಲೀ. ಹಾಲು ಹಾಗೂ 10,000 ಲೀ. ಮೊಸರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಕಳೆದ ಸಾಲಿಗೆ ಹೋಲಿಸಿದಾಗ ಸರಾಸರಿ ಶೇ.25 ರಷ್ಟು ಹೆಚ್ಚು ಮಾರಾಟವಾಗುತ್ತಿದೆ. ಹೆಚ್ಚುವರಿ ಮಾರಾಟದಿಂದಾಗಿ ಒಕ್ಕೂಟಕ್ಕೆ ಇನ್ನೂ ದಿನವಹಿ 40,000 ಲೀ. ಹಾಲಿನ ಅವಶ್ಯಕತೆ ಇದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರವು ಕಳೆದ ಸಾಲಿನ ಡಿಸೆಂಬರ್ 2021ರ ಮಾಹೆಯಲ್ಲಿ ದ.ಕ. ಜಿಲ್ಲೆಯಲ್ಲಿ 2,761 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3,090 ಮೆ.ಟನ್ ಸೇರಿ ಒಟ್ಟು 5,851 ಮೆ.ಟನ್ ಮಾರಾಟವಾಗಿರುತ್ತದೆ. ಆದರೆ ಪ್ರಸ್ತುತ ಡಿಸೆಂಬರ್ 2022ರ ಮಾಹೆಯಲ್ಲಿ ದ.ಕ. ಜಿಲ್ಲೆಯಲ್ಲಿ 3,384 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3,748 ಮೆ.ಟನ್ ಸೇರಿ ಒಟ್ಟು 7133 ಮೆ.ಟನ್ ಪಶು ಆಹಾರ ಮಾರಾಟವಾಗಿ ಡಿಸೆಂಬರ್ 22 ರ ಮಾಹೆಯಲ್ಲಿ ಡಿಸೆಂಬರ್ 21 ರ ಮಾಹೆಗಿಂತ 1,282 ಮೆ.ಟನ್‍ನಷ್ಟು ಉತ್ತಮ ಗುಣಮಟ್ಟದ ಸಮತೋಲನ ಪಶು ಆಹಾರ ಹೆಚ್ಚುವರಿ ಮಾರಾಟವಾಗಿರುತ್ತದೆ. ಪಶು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಪ್ರತಿ ಮಾಹೆಯಾನ ಪಶು ಆಹಾರದ ಮಾದರಿಯನ್ನು ಪರೀಕ್ಷಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ.
ಅಕಾಲಿಕ ಮಳೆಯಿಂದ ಪಶು ಆಹಾರದ ಕಚ್ಚಾ ಪದಾರ್ಥಗಳಾದ ಮೆಕ್ಕೆಜೋಳ, ಅಕ್ಕಿ ತೌಡು, ಕಾಕಂಬಿ ಬೆಲೆಯು ಕನಿಷ್ಟ ಶೇ.20 ರಷ್ಟು ಗಣನೀಯವಾಗಿ ಹೆಚ್ಚಳವಾಗಿರುವ ಕಾರಣದಿಂದ ಪಶು ಆಹಾರದ ಮಾರಾಟ ದರದ ಮೇಲಿನ ಅನುದಾನವನ್ನು ಕಹಾಮವು ಹಿಂಪಡೆದಿರುವ ಕಾರಣ ಪ್ರಸ್ತುತ ಪಶು ಆಹಾರ ದರವು ಹೆಚ್ಚಳವಾಗಿರುತ್ತದೆ.
ಒಕ್ಕೂಟದಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ನವಂಬರ್ ತಿಂಗಳಿನಿಂದ ಸದಸ್ಯರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.05 ರೂ.ಗಳನ್ನು ವಿಶೇಷ ಪ್ರೋತ್ಸಾಹಧನವಾಗಿ ಸದಸ್ಯರಿಗೆ ನೀಡುವುದರಿಂದ ಪ್ರತಿ ತಿಂಗಳು ಒಕ್ಕೂಟದಿಂದ ಸರಾಸರಿ 3 ಕೋಟಿಯಷ್ಟು ಹಣ ಹೆಚ್ಚುವರಿಯಾಗಿ ಹಾಲಿನ ಬಟವಾಡೆಗಾಗಿ ವಿನಿಯೋಗಿಸಲಾಗುತ್ತಿದ್ದು, ಇದರಿಂದ ಒಕ್ಕೂಟವು ನಷ್ಟವಾಗಲು ಕಾರಣವಾಗಿರುತ್ತದೆ.
ಈ ರೀತಿಯಲ್ಲಿ ವಿಶೇಷ ಪ್ರೋತ್ಸಾಹಧನವನ್ನು ಮುಂದುವರೆಸಿದಲ್ಲಿ ಮುಂದಿನ ಮೂರು ತಿಂಗಳಲ್ಲಿ 9 ರಿಂದ 10 ಕೋಟಿಯಷ್ಟು ಒಕ್ಕೂಟವು ನಷ್ಟ ಹೊಂದಬೇಕಾಗುತ್ತದೆ. ಅಲ್ಲದೆ, ಒಕ್ಕೂಟದಲ್ಲಿ 63 ರಿಂದ 64 ಕೋಟಿಯಷ್ಟು ಹಣ ಅಭಿವೃದ್ಧಿ ನಿಧಿಯಾಗಿ ಸಂಗ್ರಹಣೆಯಾಗಿದ್ದು, ಇದರಿಂದ ಬರುವ ಅಂದಾಜು 3 ಕೋಟಿ ಬಡ್ಡಿಯನ್ನು ಹಾಲಿನ ಖರೀದಿಗೆ ವಿನಿಯೋಗಿಸಿದಾಗ ಒಂದು ತಿಂಗಳು ಹಾಲಿನ ಪ್ರೋತ್ಸಾಹಧನವನ್ನು ಮಾತ್ರ ನೀಡಲು ಸಾಧ್ಯವಾಗುವುದು. ಆದ್ದರಿಂದ ಹಾಲಿನ ಉತ್ಪಾದಕರನ್ನು ಉತ್ತೇಜಿಸುವುದು ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು 2023ರ ಜ.11ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ರೂ. 2.05 ರೂ.ಗಳ ವಿಶೇಷ ಪ್ರೋತ್ಸಾಹಧನದಲ್ಲಿ 1.05 ರೂ .ಅನ್ನು ಮಾತ್ರ ಹಿಂದಕ್ಕೆ ಪಡೆದುಕೊಂಡು ಉಳಿಕೆ 1 ರೂ.ಗಳ ವಿಶೇಷ ಪ್ರೋತ್ಸಾಹಧನವನ್ನು ಮುಂದುವರೆಸಲಾಗಿದೆ.
ರಾಜ್ಯದಾದ್ಯಂತ ಹಾಲಿನ ಶೇಖರಣೆ ಕಡಿಮೆಯಾಗಿದ್ದು ಒಕ್ಕೂಟವು ಹಾಲನ್ನು ಇತರ ಒಕ್ಕೂಟಗಳಿಂದ ಪ್ರಸ್ತುತ ಖರೀದಿಸುತ್ತಿಲ್ಲ. ಒಕ್ಕೂಟವು ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ವಿವಿಧ ಯೋಜನೆಗಳಾದ ಪ್ರೋತ್ಸಾಹಧನ, ಕರು ಸಾಕಾಣಿಕೆ ಯೋಜನೆ, ಹಸಿರು ಮೇವು ಯೋಜನೆ, ಹಾಲು ಹೆಚ್ಚಳ ಕಾರ್ಯಕ್ರಮವನ್ನು ಒಕ್ಕೂಟದ ಅನುದಾನದ ಮೂಲಕ ನಿರಂತರ ನೀಡಲಾಗುತ್ತಿದ್ದು ಅಲ್ಲದೆ ಒಕ್ಕೂಟದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವುದರಿಂದಲೇ ಹಾಲಿನ ಗುಣಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಇನ್ನು ಮುಂದೆಯೂ ಸಹ ಉನ್ನತ ಸ್ಥಾನದಲ್ಲಿರಲು ಸಮಸ್ತ ಹೈನು ಬಾಂಧವರು ಕೈಜೋಡಿಸುವಂತೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.