ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾದ ಅಡಿಕೆ ತೋಟ ವಿಸ್ತರಣೆಯ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳವಾಗಿ ಪ್ರಚಾರಕ್ಕೆ ಬರುತ್ತಿದೆ. ಅಲ್ಲಿನ ನೀರಿನ ಟ್ಯಾಂಕಿಯ ವ್ಯವಸ್ಥೆ, ಮಾರ್ಗದ ವ್ಯವಸ್ಥೆ, ನೀರು ಹರಿದು ಹೋಗುವ ವ್ಯವಸ್ಥೆ, ಮೈಸೂರು ಪಾಕಿನ ತುಂಡುಗಳಂತೆ ಅಡಿಕೆಯ ಗುಂಡಿಗಳು, ಕೋಟ್ಯಾಧಿಕ ಲೀಟರಿನ ನೀರ ಹೊಂಡಗಳು, ಮನೆಯ ಮಂಚದಲ್ಲಿ ಮಲಗಿದ್ದಲ್ಲಿಂದಲೇ ನೀರಾವರಿ ಮಾಡುವ ಸ್ವಯಂ ಚಾಲಿತ ವ್ಯವಸ್ಥೆ ಎಲ್ಲವೂ ಬಲು ಆಕರ್ಷಣೀಯ. ಹೊಸತು ಮಾಡಬೇಕೆಂಬ ಅರೆ ಮನಸ್ಸು ಇದ್ದವರಿಗೂ ಸ್ಪೂರ್ತಿ ಕೊಡುವಂತೆ ಇರುತ್ತದೆ. ಆ ಮಟ್ಟಿಗೆ ಆಧುನಿಕ ತಂತ್ರಜ್ಞಾನಕ್ಕೆ, ವ್ಯವಸ್ಥೆಗೊಳಿಸುವ ರೀತಿಗೆ ಒಂದು ನಮಸ್ಕಾರ ಸಲ್ಲಲೇ ಬೇಕು.…..ಮುಂದೆ ಓದಿ….
ಕೃಷಿ ಎಂದ ಮೇಲೆ ಒಳಿತು ಕೆಡುಕಿನ ಎರಡು ಮುಖಗಳು ಇದ್ದೇ ಇದೆ. ಒಳಿತಿನ ಮುಖವನ್ನು ಮೇಲೆ ಹೇಳಿದೆ. ನಾನೊಬ್ಬ ಕೃಷಿ ಪ್ರೇಮಿಯೂ, ಪರಿಸರ ಪ್ರೇಮಿಯೂ ಆದಕಾರಣ ಆಧುನಿಕ ಕೃಷಿ ವಿಸ್ತರಣೆಯ ಇನ್ನೊಂದು ಮುಖದತ್ತ ನನಗನಿಸಿದ ಒಂದು ಚಿಂತನೆ.
ಕೃಷಿ ಎಂಬುದು ಬದುಕಿನ ಅಗತ್ಯತೆಗಳನ್ನು ಪೂರೈಸುವ ಒಂದು ಉದ್ಯೋಗ. ಕೃಷಿ ಮಾಡುವಾಗ ಪ್ರಕೃತಿಗೂ ಹೊರೆಯಾಗದಂತೆ, ನಮ್ಮ ಆರ್ಥಿಕ ಚಟುವಟಿಕೆಗಳಿಗೂ ಕುಂದು ಉಂಟಾಗದಂತೆ, ನೀರ ಲಭ್ಯತೆಯನ್ನು ನೋಡಿಕೊಂಡು ಮಾಡುತ್ತಿದ್ದುದು ಕೃಷಿ ವಿಸ್ತರಣೆ. ಯಾವ ಕೃಷಿಯನ್ನು ಎಲ್ಲಿ ಮಾಡಬೇಕು? ಎಷ್ಟು ಮಾಡಬೇಕು? ಮಾಡಿದ ಜಾಗೆ ಆ ಕೃಷಿಗೆ ಸುಸ್ಥಿರತೆಯನ್ನು ತರಬಲ್ಲುದೆ? ಎಂಬುದನ್ನೆಲ್ಲ ವಿಮರ್ಶಿಸಿಕೊಂಡು ಕೃಷಿ ವಿಸ್ತರಣೆ ನಡೆಯುತ್ತಿತ್ತು.
ಈ ನಿಟ್ಟಿನಲ್ಲಿ ನೋಡಿದಾಗ ಗಾಳಿಯ ಒತ್ತಡದಿಂದ ರಕ್ಷಿಸುವ, ದಕ್ಷಿಣ ದಿಕ್ಕಿನ ಬಿಸಿಲಿನ ಪೆಟ್ಟನ್ನು ಸಹಿಸಿಕೊಳ್ಳುವ, ಕೆರೆ ಮಾಡಿದಾಗ ನೀರು ಸಿಗಬಹುದು ಎಂಬ ಜಾಗ ನೋಡಿ ಅಡಿಕೆ ತೋಟದ ವಿಸ್ತರಣೆ ನಡೆಯುತ್ತಿತ್ತು. ದಕ್ಷಿಣ ದಿಕ್ಕಿನ ಭೂಮಿ ಎತ್ತರವಾಗಿ ಇರಲೇಬೇಕು ಎಂಬ ಕಡ್ಡಾಯವೇ ಇತ್ತು. ಅಂತಹ ವಿಸ್ತರಣೆ ನಡೆಯುತ್ತಿದ್ದುದು ನೂರು ಗಟ್ಟಲೆ ಗಿಡದ ಮೂಲಕ ಪರಿಸರಕ್ಕೆ ಪೂರಕವಾಗಿ.
ಆದರೆ, ಇಂದು ಹೆಚ್ಚಿನ ವಿಸ್ತರಣೆಗಳು ನಡೆಯುವುದು ತಗ್ಗು ಪ್ರದೇಶಗಳಿಗೆ ನೀರುಣಿಸುವ ಎತ್ತರದ ಬೆಟ್ಟಗಳಲ್ಲಿ. ಹುಡುಕಿದರೂ ಒಂದೇ ಒಂದು ಹಸಿರು ಕಾಣದಂತೆ ಸಂಪೂರ್ಣವಾಗಿ ಬೋಳಿಸಿ ಯಾವ ಕಾರಣಕ್ಕೂ ಅಲ್ಲಿ ಬಿಂದು ನೀರೂ ಇಂಗದಂತೆ ಮಾಡಿ, ಪ್ರಕೃತಿ ಮಾತೆ ಕೋಟ್ಯಾಂತರ ವರ್ಷಗಳಿಂದ ಇಂಗಿಸಿಕೊಟ್ಟ ನೀರನ್ನು ತೂತು ಬಾವಿಗಳ ಮೂಲಕ ಎತ್ತಿ ಟ್ಯಾಂಕುಗಳಲ್ಲಿ ತುಂಬಿಸಿ ಸಾವಿರಗಟ್ಟಲೆಯಲ್ಲಿ ಹಾಕಿದ ಅಡಿಕೆ ಗಿಡಗಳಿಗೆ ನೀರುಣಿಸಿ ಮಾಡುವ ಕೃಷಿ ಎಷ್ಟು ಸುಸ್ಥಿರ ಇರಬಹುದು? ತಂತ್ರಜ್ಞಾನದ ದುರುಪಯೋಗದ ಇನ್ನೊಂದು ಮುಖ ಅಂತ ಅನಿಸುವುದಿಲ್ಲವೇ?
ಕೋಟ್ಯಾಂತರ ವರ್ಷಗಳಿಂದ ಕಾಡೆಬ್ಬಿಸಿ ಭೂಮಿಯ ಸಾವಯವ ಇಂಗಾಲದ ಮಟ್ಟವನ್ನು, ಫಲವತ್ತತೆಯನ್ನು ಸಮೃದ್ಧವಾಗಿಟ್ಟ ಭೂಮಿಗೆ, ಮತ್ತೆ ಅದೇ ಜೀವಧಾರಕ ಗುಣವನ್ನು ಉಳಿಸಿಕೊಳ್ಳಲು ಇಷ್ಟೊಂದು ದೊಡ್ಡ ಪ್ರಮಾಣಕ್ಕೆ ಸಾವಯವ ಪದಾರ್ಥಗಳನ್ನು ನಮ್ಮಲ್ಲಿಯೇ ಉತ್ಪತ್ತಿ ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಡವೇ ? ಹಿಂದೆ ಕೃಷಿ ನಡೆಯುತ್ತಿದ್ದುದು ದನ ಭಲದ ಮೂಲಕವಾಗಿ. ಆದರೆ ಇಂದು ದನ ಹೋಗಿ ಧನಭಲದ ಮೂಲಕಕ್ಕೆ ಪರಿವರ್ತನೆಗೊಂಡಿದೆ.
ಬೆಟ್ಟದ ನೆತ್ತಿಯಲ್ಲಿ ಕೋಟ್ಯಾಧಿಕ ಲೀಟರಿನ ನೀರಗುಂಡಿಗಳು ಕೇಂದ್ರೀಕೃತ ಭಾರದಿಂದಾಗಿ ಭೂಕುಸಿತಕ್ಕೆ ಕಾರಣವಾಗದೆ? ಈ ಸಂದರ್ಭದಲ್ಲಿ ಹಿರಿಯ ದಾರ್ಶನಿಕರೊಬ್ಬರ ಮಾತೊಂದು ನೆನಪಾಯಿತು. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕೃತಕ ಪೀಡೆ ಕೀಟನಾಶಕಗಳು, ಇಂದಿದ್ದ ಗುಡ್ಡಗಳನ್ನು ನಾಳೆಗೆ ಇಲ್ಲದಂತೆ ಮಾಡುವ ಬೃಹತ್ ಯಂತ್ರಗಳು ದುರ್ಯೋಧನನ ಹಿಂದಿರುವ ಕರ್ಣ, ಶಕುನಿ,ದುಶ್ಯಾಸನರಂತೆ. ದುರ್ಯೋಧನನಿಗೆ ಸಾತ್ವಿಕತೆಯನ್ನು ಎದುರಿಸುವ ನೈತಿಕತೆ ಇರಲಿಲ್ಲ. ಅವನ ಬಲವೇ ಈ ದುಷ್ಟ ತ್ರಿಮೂರ್ತಿಗಳು. ಅವರಿಲ್ಲದಿದ್ದರೆ ದುರ್ಯೋಧನ ದುಸ್ಸಾಹಸಕ್ಕೆ ಇಳಿಯುತ್ತಿರಲಿಲ್ಲ. ಅದೇ ರೀತಿ ಆಧುನಿಕ ಕೃಷಿ ಎಂಬ ಮಾತು ಬಹು ಮಾರ್ಮಿಕ.
ಮಹಾತ್ಮ ಗಾಂಧಿ ಹೇಳಿದ ಒಂದು ಮಾತು ಸಾರ್ವಕಾಲಿಕ ಸತ್ಯ. ಈ ಭೂಮಿ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವಷ್ಟು ಸಮರ್ಥವಾಗುಂಟು. ಆದರೆ ನಮ್ಮ ದುರಾಸೆಯನ್ನು ಪೂರೈಸಲು ಸಾಧ್ಯವಿಲ್ಲ. ಹೌದಲ್ಲವೇ!! ಕೆರೆಯಲ್ಲಿ ಸಿಗುತ್ತಿದ್ದ ನೀರು ತೂತು ಬಾವಿಗೆ ಹೋಯಿತು. ತೂತು ಬಾವಿಗಳು ಆಳ ಆಳಕ್ಕೆ ಹೋಯಿತು. ಮುಂದಿನ ಭವಿಷ್ಯದ ಪೀಳಿಗೆಗೆ ನಾವೇನು ಕೊಡಬಹುದು?
ಪ್ರಕೃತಿಯಲ್ಲಿ ನಾವು ಯಾರು? ಕಗ್ಗದ ಕವಿಯ ಮಾತನ್ನೊಮ್ಮೆ ನೆನಪಿಸಿಕೊಳ್ಳೋಣ.
ಬಿಳಲಲ್ಲ, ಬೇರಲ್ಲ,ಮುಂಡ ಕಾಂಡಗಳಲ್ಲ |
ತಳಿರಲ್ಲ, ಮಲರಲ್ಲ,ಕಾಯಿ ಹಣ್ಣಲ್ಲ||
ಎಲೆ ನೀನು, ವಿಶ್ವ ವೃಕ್ಷದೊಳ್ ಎಲೆಯಳೊಂದು ನೀಂ |
ತಿಳಿದದನು ನೆರವಾಗು ಮಂಕುತಿಮ್ಮ.
ಹೌದಲ್ಲ, ವಿಶಾಲವಾದ ಪ್ರಕೃತಿಯೆಂಬ ವೃಕ್ಷದಲ್ಲಿ ನಾವು ಕೇವಲ ಒಂದು ಎಲೆ.ಇಂದು ಚಿಗುರಿದೆ, ನಾಳೆ ಒಣಗಿ ಉದುರಿ ಹೋಗುತ್ತದೆ. ಅದನ್ನು ಯೋಚಿಸಿ ಪ್ರಕೃತಿಯೆಂಬ ಮಹಾನ್ ವೃಕ್ಷಕ್ಕೆ ಒಂದಷ್ಟು ಕೊಡುಗೆಯನ್ನು ನೀಡುವ ಯೋಚನೆ ಮಾಡೋಣ.
ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…
ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…
ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…