ಒಂದು ಕಾಲದಲ್ಲಿ ಬ್ರಾಹ್ಮಣರಿಗೆ(Brahman) ಗೋದಾನ(Godana) ಕೊಡುವುದು ಬಹಳ ಶ್ರೇಷ್ಠವಾಗಿತ್ತು. ಯಾವಾಗ ಬ್ರಾಹ್ಮಣರಲ್ಲಿ ಶಿಕ್ಷಣಕ್ಕೆ(Education) ಹೆಚ್ಚು ಒತ್ತು ಕೊಟ್ಟು ಬ್ರಾಹ್ಮಣರ ಕುಟುಂಬದ ಹೊಸ ಪೀಳಿಗೆ ಹೆಚ್ಚಿನ ವಿಧ್ಯಾಭ್ಯಾಸ ಮಾಡಿಕೊಂಡು ಪಟ್ಟಣ(City) ಸೇರಿದ ಲಗಾಯ್ತಿನಿಂದ ಬ್ರಾಹ್ಮಣರ ಮನೆಯಲ್ಲಿ ಈಗ ಪೂಜೆಗೂ ಹಾಲಿಗೂ ಗೋವಿಲ್ಲದ ಪರಿಸ್ಥಿತಿ ಬಂದಿದೆ…!
ನಿಜ … ಇದೀಗ ಬ್ರಾಹ್ಮಣರಲ್ಲಿ ಬೊಜ್ಜ ಇತ್ಯಾದಿ ಸಂಧರ್ಭದಲ್ಲಿ ಗೋದಾನ ಹಿಡಿಯೋರೇ ಇಲ್ಲ..!! ಜೀವಂತ ಗೋವಿನ
ಬದಲಿಗೆ ಬೆಳ್ಳಿ ಗೋದಾನ ಚಾಲ್ತಿಗೆ ಬಂದಿದೆ. ಯಾವುದೋ ಕಾಲದಲ್ಲಿ ಗೋದಾನಕ್ಕೆ ಬಹಳ ಮೌಲ್ಯ ಇತ್ತು. ಈಗಿಲ್ಲ…
ಭೂದಾನ ಕೊಡ್ತಾರೆ…!!! ಅದೂ ಪ್ರಯೋಜನ ಇಲ್ಲದ ಬಂಜರು ಭೂಮಿಯನ್ನು.. ಎಲ್ಲಾ ದಾನಗಳೂ ಕಾಟಾಚಾರ ಆಗಿದೆ.
ಒಂದು ಇಪ್ಪತ್ತೈದು ವರ್ಷಗಳ ಹಿಂದೆ ಗೋದಾನಕ್ಕೆ ಮನೆಯವರು ಒಳ್ಳೆಯ ಒದಕಲು ದನವನ್ನ ಹಿಡಿದು ದಾನ ಕೊಟ್ಟು ಒಂದೇ ಏಟಿಗೆ ಒದೆಯೋ ದನದ ಸಮಸ್ಯೆ ಮತ್ತು ದಾನ ಕೊಡುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ತಿದ್ದರು. ಈಗ ಗೋ ದಾನಕ್ಕೆ ಮೌಲ್ಯ ಕಳೆದು ಹೋಗಿದೆ.
ಗೋದಾನ ಹಿಡಿಯುವ ಬ್ರಾಹ್ಮಣರು ತಮ್ಮ ಮನೆಯ ಗೋವನ್ನೇ ಕರ್ತೃಗಳ ಮನೆಗೆ ಪಿಕ್ಅಪ್‌ನಲ್ಲಿ ತಂದು ದಾನ ಹಿಡಿದ ಶಾಸ್ತ್ರ ಮಾಡಿ ನಂತರ ಆ ಗೋವಿನ ಮೌಲ್ಯದ ಮೊತ್ತ ಪಡೆದು ಮನೆಗೆ ಗೋವಿನೊಂದಿಗೆ ಮರಳುತ್ತಾರೆ. ಈ “ಸುಧಾರಿತ ದಾನಕ್ಕೆ” ಪಾಪದ ಅರೆ ಸಿಂಧಿ ಗೋವುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಖಾಯಂ ದಾನ ಹಿಡಿಯುವವರ ಮನೆಯ ಗೋದಾನದ ಕರು ದನಕ್ಕೆ ಈ ಪಿಕ್ಅಪ್ ಹತ್ತುವುದು ಇಳಿಯುವುದು, ಪೂಜೆ ಮಾಡಿಸಿಕೊಳ್ಳುವುದು ಅವಕ್ಕೆ ಅಭ್ಯಾಸ ವಾಗಿರುತ್ತದೆ. ಕರ್ತೃಗಳಿಗೂ ಒಳ್ಳೆಯ ಗೋಪೂಜೆ ಮಾಡಿ ದಾನ ಕೊಟ್ಟ ಖುಷಿಯಾಗುತ್ತದೆ.
ಬಂಧುಗಳೇ…, ದಯಮಾಡಿ ಗೋದಾನದ ವಿಚಾರ ಬಂದಾಗ ಹೀಗೆ ಕಾಟಾಚಾರದ ಹೆಚ್ಎಫ್ ಜಾನುವಾರುಗಳೋ, ಒದಕಲು ದನಗಳನ್ನೋ ಅಥವಾ ಬೆಳ್ಳಿ ಬಂಗಾರದ ಗೋದಾನ ಮಾಡದೇ ಸಮೀಪದ ದೇಸಿ ಹಸು ಸಾಕುವವರಿಗೆ ಹುಲ್ಲು ತರಲು, ಹಿಂಡಿ ತರಲು, ನಿರ್ವಹಣೆ ಬಾಬ್ತು ಹಣವನ್ನು ನೀಡಿದರೆ ಅದು ಶ್ರೇಷ್ಠ “ಗೋದಾನ”ವಾಗುತ್ತದೆ. ಗೋದಾನ ಎಂದಾಕ್ಷಣ ಹಾಲುಕೊಡುವ ಹಸು ಕರುವೇ ಆಗಬೇಕು ಎಂಬುದು ಮೌಡ್ಯ. ಹತ್ತಾರು ದೇಸಿ ಹಸುಗಳ ಸಾಕಿ ಕೊಂಡು ಕಷ್ಟ ಬಿಟ್ಟು ಸಾಕುವ ಗೋಪಾಲಕರು ಯಾವುದೇ ಜಾತಿಯವರಾದರೂ ಈ ಬಗೆಯ ಗೋದಾನಕ್ಕೆ ಅರ್ಹರು.
ಈ ಗೋದಾನಕ್ಕೆ ಜಾತಿ ನೋಡದಿರಿ. ದೇಸಿ ತಳಿ ಹಸುಗಳನ್ನು ಸಾಕುವವರೇ ಪುಣ್ಯವಂತ ಗೋಪಾಲಕರು, ಗೋಪಾಲಕೃಷ್ಣ ರೂಪಿಗಳು. ಇಂತಹ ಗೋಪಾಲಕರ “ಗೋಪಾಲನೆ” ಗೆ ಹಣ ಗೋಗ್ರಾಸವನ್ನು ನೀಡಿದರೆ ಅದೇ ಈ ಕಾಲದ ಶ್ರೇಷ್ಠ ಗೋದಾನ ವಾಗುತ್ತದೆ. ಅದು ಭಗವಂತನಿಗೆ ಈ ಮೂಲಕ ತಲುಪುತ್ತದೆ. ದಯಮಾಡಿ ಗೋದಾನದ ಸಂಧರ್ಭದಲ್ಲಿ ಈ ಕಾಟಾಚಾರದ “ಬೆಳ್ಳಿ ಬಂಗಾರದ ಗೋವಿನ ಮೂರ್ತಿ ಯ ಗೋದಾನ ಮಾಡದಿರಿ “. ದೇವರು ಇಂತಹ ಕಾಟಾಚಾರದ ಪುರೇತರ ಅನುಕೂಲದ “ದಾನವನ್ನು” ಒಪ್ಪಿಕೊಳ್ಳೋಲ್ಲ. ಏಕೆಂದರೆ ಈ ನಾಡಿನಲ್ಲಿ ಇನ್ನೂ ಪಾಪದ ದೇಸಿ ಹಸುಗಳು ಇವೆ. ಅವಿದ್ದೂ “ಬೆಳ್ಳಿ ಗೋದಾನ ” ಮಾಡುವುದು ದೇವರಿಗೆ ಮಾಡುವ ವಂಚನೆಯಾಗುತ್ತದೆ. ದಯಮಾಡಿ ಇಂತಹ ಕಾಟಾಚಾರದ ಲೋಹದ ಮೂರ್ತಿಯ ಗೋದಾನ ಬೇಡ ಎಂದು ಸಮಸ್ತ ದೇಸಿ ತಳಿ ಗೋವುಗಳ ಪರವಾಗಿ ಕೋರುತ್ತಿದ್ದೇನೆ