ಕಳೆದ ವಾರ ರಾಜ್ಯದ ಅಲ್ಲಲ್ಲಿ ಕೊಂಚ ಮಳೆಯಾದರೂ, ಬಿಸಿಲ ಧಗೆ ಕಡಿಮೆಯಾಗಲಿಲ್ಲ. ಉರಿಯುವ ಬೆಂಕಿಗೆ ನೀರು ಸುರಿದಂತಾಗಿ ಬೇಗೆ ಇನ್ನು ಜಾಸ್ತಿಯಾಗಿದೆ. ರಾಜ್ಯದಲ್ಲಿ ಸರಿಯಾದ ಮಳೆಯಾಗದೇ (Rain) , ಜೊತೆಗೆ ಬಿಸಿಲ ಬೇಗೆಯ ಪರಿಣಾಮದಿಂದ ಕೃಷಿಕರು ಸಂಕಷ್ಟ ಪಡುತ್ತಿದ್ದಾರೆ. ಇದರ ಪರಿಣಾಮ ಕೆಲ ತರಕಾರಿಗಳ ದರ (Vegetable Price Hike) ಏರಿಕೆಯಾಗಿದೆ. ಕಳೆದೊಂದು ವಾರದಿಂದ ಬೀನ್ಸ್ ಕೆಜಿಗೆ 170 ರಿಂದ 200 ರೂ. ಗಡಿ ದಾಟಿದೆ. ಅತ್ತ ಕ್ಯಾರೆಟ್ ಕೂಡ ಏರಿಕೆಯಾಗಿದೆ. ಮೆಣಸಿನಕಾಯಿ ದರ ಕೂಡ ಅದೇ ದಾರಿಯಲ್ಲಿದೆ.
ಬೆಂಗಳೂರು(Bengaluru) ಸೇರಿದಂತೆ ಇನ್ನು ಕೆಲವು ನಗರಗಳಿಗೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚು ಬಿನ್ಸ್ ಮತ್ತು ಮೆಣಸಿನಕಾಯಿ ಪೂರೈಕೆಯಾಗುತ್ತದೆ. ಈ ಭಾಗದಲ್ಲೆಲ್ಲ ತಾಪಮಾನ ಏರಿಕೆಯಾಗಿದ್ದು, ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇನ್ನೂ ಕ್ಯಾರೆಟ್ ತಮಿಳುನಾಡು ಭಾಗದಿಂದ ಹೆಚ್ಚು ಪೂರೈಕೆಯಾಗುತ್ತಿದ್ದು, ಅಲ್ಲಿಯೂ ಕೂಡ ಇದೇ ಪರಿಸ್ಥಿತಿ ಹಿನ್ನೆಲೆ ಬೆಲೆ ಗಗನಕ್ಕೇರಿದೆ.
ಕೇವಲ ತರಕಾರಿ ಮಾತ್ರವಲ್ಲದೇ ಹಣ್ಣುಗಳ ದರದಲ್ಲೂ ಕೂಡ ಏರಿಕೆ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೂನ್ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಜೂನ್‍ನಲ್ಲಿ ಈ ಬಾರಿ ಉತ್ತಮ ಮಳೆಯಾದರೆ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಮಾತು. ಕೆಲ ತಿಂಗಳಿನಿಂದ ಒಂದಲ್ಲ ಒಂದು ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿರುವ ಜನ, ಅಗತ್ಯ ತರಕಾರಿಗಳ ಬೆಲೆ ಏರಿಕೆಯಿಂದ ಮತ್ತಷ್ಟು ಹೈರಾಣಾಗಿದ್ದಾರೆ.
ಕೃಷಿಕರಷ್ಟೇ ಅಲ್ಲ, ಮಾರಾಟಗಾರರೂ ಸಂಕಷ್ಟ ಪಡುತ್ತಿದ್ದಾರೆ. ಬಿಸಿಲಿನ ಕಾರಣದಿಂದ ತರಕಾರಿ ಒಣಗುತ್ತಿದೆ. ಸೊಪ್ಪು ತರಕಾರಿ ಕತೆ ಹೇಳತೀರದು. ಹೀಗಾಗಿ ಮಾರಾಟಗಾರರಿಗೂ ಸಮಸ್ಯೆಯಾಗುತ್ತಿದೆ, ನಷ್ಟ ಹೆಚ್ಚಾಗುತ್ತಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ.
- ಅಂತರ್ಜಾಲ ಮಾಹಿತಿ