ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತವಾಗಿ ಮೇವು ಬೆಳೆಯುವ ಬೀಜಗಳನ್ನು ವಿತರಿಸಲಾಗುತ್ತಿದೆ. ಬರ ಪರಿಹಾರ ನಿಧಿಯಡಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯು ರೈತರಿಗೆ ಮೇವಿನ ಬೀಜದ ಕಿರು ಪೊಟ್ಟಣಗಳನ್ನು ನೀಡುತ್ತಿದೆ.
ಬಳ್ಳಾರಿ ತಾಲೂಕಿನ ರೂಪನಗುಡಿ ಪಶು ಚಿಕಿತ್ಸಾ ಕೇಂದ್ರದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಸದಾಶಿವ ಮಲಪ್ಪ ಉಪ್ಪಾರ ಅವರು ರೈತರಿಗೆ ಮೇವು ಬೀಜದ ಪೊಟ್ಟಣಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬೀಜಗಳನ್ನು ಹೇಗೆ ಬಿತ್ತನೆ ಮಾಡಬೇಕು, ಬೆಳೆಯ ನಿರ್ವಹಣೆ ಹೇಗೆ ಮಾಡಬೇಕು ಹಾಗೂ ಯಾವ ಹಂತದಲ್ಲಿ ಕಟಾವು ಮಾಡಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ನೀಡಿದರು.
ಜಿಲ್ಲೆಯ 60 ಪಶು ಚಿಕಿತ್ಸಾ ಕೇಂದ್ರಗಳ ಮೂಲಕ 10 ಸಾವಿರಕ್ಕೂ ಹೆಚ್ಚು ಮೇವು ಬೀಜದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಡಾ. ಸದಾಶಿವ ಮಲಪ್ಪ ಉಪ್ಪಾರ ತಿಳಿಸಿದ್ದಾರೆ. ರೈತರಿಗೆ ನೆರವಾಗುವ ಉದ್ದೇಶದಿಂದ ಮೂರು ವಿಧದ ಬಿತ್ತನೆ ಬೀಜಗಳ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದಿದ್ದಾರೆ.
ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ಎದುರಾಗಿತ್ತು. ಸರ್ಕಾರದಿಂದ ಮೇವು ಬೀಜಗಳನ್ನು ವಿತರಿಸುತ್ತಿರುವುದು ರೈತರಿಗೆ ಅನುಕೂಲವಾಗಿದೆ ಎಂದು ರೈತರು ಹೇಳಿದ್ದಾರೆ.

ರೈತ ಲಿಂಗರಾಜ ಅವರು ಮಳೆ ಇಲ್ಲದೆ ರಾಸುಗಳಿಗೆ ಮೇವು ಕೊರತೆಯಾಗಿತ್ತು. ಇದೀಗ ಮೇವು ಬೀಜ ವಿತರಿಸುತ್ತಿರುವುದು ಉಪಯುಕ್ತವಾಗಿದೆ ಎಂದರು.
ಶಂಕರ್ ಅವರು ಮೆಕ್ಕೆಜೋಳದ ಬಿತ್ತನೆ ಬೀಜ ನೀಡಿರುವುದು ಸಹಾಯಕವಾಗಿದೆ ಎಂದು ತಿಳಿಸಿದರು. ರೈತರಿಗೆ ಸರ್ಕಾರ ಮೇವು ಬೀಜ ನೀಡುತ್ತಿರುವುದು ಸಂತಸ ತಂದಿದೆ ಎಂದು ಶಂಕ್ರಪ್ಪ ಹೇಳಿದರು.
ಬರ ಪರಿಸ್ಥಿತಿಯಲ್ಲಿ ಜಾನುವಾರುಗಳ ಮೇವಿನ ಲಭ್ಯತೆಯನ್ನು ಕಾಪಾಡಿಕೊಳ್ಳಲು ಸ್ಥಳೀಯವಾಗಿ ಮೇವು ಬೆಳೆ ಬೆಳೆಯುವ ಮೂಲಕ ರೈತರು ತಮ್ಮ ಜಾನುವಾರುಗಳ ಮೇವಿನ ಅಗತ್ಯವನ್ನು ಪೂರೈಸಿಕೊಳ್ಳಲು ಸಾಧ್ಯವಾಗಲಿದೆ.
Amid drought conditions in Ballari district, the Karnataka government is distributing free fodder seed kits to farmers to prevent a shortage of feed for livestock. Under drought relief funds, the Department of Animal Husbandry and Veterinary Services is distributing small packets of fodder seeds through 60 veterinary treatment centres across the district. More than 10,000 fodder seed kits, including three types of seeds, are being distributed. Officials are also guiding farmers on sowing, crop management and harvesting. Farmers have welcomed the initiative, saying reduced rainfall has already affected fodder availability for cattle.


