ಒಂದಲ್ಲ, ಎರಡಲ್ಲ 25 ವರ್ಷಗಳಿಂದ ರಸ್ತೆ ದುರಸ್ತಿಗೆ ಬೇಡಿಕೆ..!. ಇದೀಗ ಹೋರಾಟ , ಪ್ರತಿಭಟನೆಯ ದಾರಿ. ವಿರೋಧಗಳ ನಡುವೆಯೂ ಒಂದಾದ ಜನರು. ಬ್ಯಾನರ್ ಅಳವಡಿಕೆ, ಅನುಮತಿ ಕಾರಣ ನೀಡಿ ಬ್ಯಾನರ್ ತೆರವು…!. ಈ ರಸ್ತೆ ಹೋರಾಟ ನಡೆಯುತ್ತಿರುವುದು ಸುಳ್ಯ ತಾಲೂಕಿನಲ್ಲಿ. ದುಗಲಡ್ಕ-ನೀರಬಿದಿರೆ-ಕೋಡಿಯಾಲಬೈಲು-ಸುಳ್ಯ ರಸ್ತೆ ದುರಸ್ತಿಗಾಗಿ.
ಕಳೆದ 25 ವರ್ಷಗಳಿಂದ ದುಗಲಡ್ಕ-ನೀರಬಿದಿರೆ-ಕೋಡಿಯಾಲಬೈಲು-ಸುಳ್ಯ ರಸ್ತೆ ಬಳಕೆಯ ಜನರು ರಸ್ತೆ ದುರಸ್ತಿಗೆ ರಾಜಕಾರಣಿಗಳಿಗೆ ಮನವಿ ಸಲ್ಲಿಸಿ ರಾಜಕಾರಣಿಗಳ ಭರವಸೆಯ ಮಾತಿಗೆ ಬದ್ಧರಾಗಿದ್ದರು. ಆದರೆ ಪ್ರತೀ ಚುನಾವಣೆಯ ನಂತರ ಈ ಭರವಸೆಗಳೆಲ್ಲಾ ಸುಳ್ಳು ಎಂದು ಅರಿವಾಗುತ್ತಲೇ ಒಂದಾದರು. ಹೋರಾಟ ಆರಂಭಿಸಿದರು. ಸಹಜವಾಗಿಯೇ ಹೋರಾಟ ಆರಂಭವಾದಾಗ ವಿರೋಧಗಳು ಬಂದವು. ವಿಪಕ್ಷಗಳ ಪಿತೂರಿ ಎನ್ನುತ್ತಾ ಹೋರಾಟ ದಿಕ್ಕು ತಪ್ಪಿಸುವ ವ್ಯವಸ್ಥೆ ನಡೆದರೂ ಜನರು ಒಂದಾದರು. ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವ ಮಂದಿಗೆ ಪಕ್ಷಗಳು, ರಾಜಕೀಯಕ್ಕಿಂತ ಅವರ ಆರೋಗ್ಯ ಹಾಗೂ ವ್ಯವಸ್ಥಿತ ರಸ್ತೆಯೇ ಕನಸಾಗಿತ್ತು. ಹೀಗಾಗಿ ಒಂದಾಗಿ ಹಂತ ಹಂತವಾದ ಹೋರಾಟ ನಡೆಯಿತು.
ಕಳೆದ ವಾರ ರಸ್ತೆ ದುರಸ್ತಿಗೆ ಒತ್ತಾಯಿಸಿ ರಸ್ತೆಯ ಫೋಟೊಗಳ ಸಹಿತ ಬ್ಯಾನರ್ ಅಳವಡಿಕೆ ಮಾಡಿದರು. ಜನಪ್ರತಿನಿಧಿಗಳೇ ದುಗಲಡ್ಕ-ನೀರಬಿದಿರೆ-ಕೋಡಿಯಾಲಬೈಲು-ಸುಳ್ಯ ರಸ್ತೆ ಇನ್ನಾದರೂ ರಸ್ತೆ ದುರಸ್ತಿ ಮಾಡಿ ಎಂದು ಬ್ಯಾನರ್ ಹಾಕಿದರು. ಸಾರ್ವಜನಿಕ ರಸ್ತೆ ಸಮಸ್ಯೆಗೆ ಹಾಕಿದ ಬ್ಯಾನರನ್ನು ಅನುಮತಿ ಕಾರಣ ನೀಡಿ ನಗರ ಪಂಚಾಯತ್ ಮರುದಿನವೇ ತೆಗೆಸಿತು. ಕಾನೂನು ಪಾಲಿಸಿಲ್ಲ ಎಂದು ಬ್ಯಾನರ್ ತೆಗೆದಿರುವ ನಗರ ಪಂಚಾಯತ್ ದುಗ್ಗಲಡ್ಕದಲ್ಲಿ ಇನ್ನು ಅನೇಕ ಬ್ಯಾನರುಗಳಿವೆ. ಅದನ್ನೆಲ್ಲ ಬಿಟ್ಟು ಇದು ಒಂದೇ ಬ್ಯಾನರನ್ನ ಉದ್ದೇಶ ಪೂರ್ವಕ ತೆರವುಗೊಳಿಸಿರುವುದು ಏಕೆ ಎಂದು ಸಾರ್ವಜನರಿಕರು ಕಟುವಾಗಿ ಪ್ರಶ್ನೆ ಮಾಡಿದರು. ಈ ಬ್ಯಾನರ್ ತೆರವುಗೊಳಿಸುವುದಕ್ಕೆ ಸ್ಪಂದಿಸಿದಷ್ಟೇ ಮುತುವರ್ಜಿಯನ್ನು ಈ ರಸ್ತೆಗೆ ಉಪಯೋಗಿಸುತ್ತಿದ್ದರೆ ಅದ್ಯಾವಾಗಲೋ ಈ ರಸ್ತೆ ಆಗುತ್ತಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರ 25 ವರ್ಷದ ಸಮಸ್ಯೆಗೆ ಮೊದಲು ಸ್ಪಂದಿಸಿ. ಬ್ಯಾನರ್ ತೆಗೆಯುವುದರ ಆಸಕ್ತಿ ಅಲ್ಲೂ ಬರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಿಂದ ಹಿಡಿದು ಗ್ರಾಮಾಡಳಿತ ಪ್ರದೇಶದವರೆಗೂ ಎಲ್ಲ ಆಡಳಿತ ಒಂದೇ ಪಕ್ಷದಲ್ಲಿ ಇದೆ,ಹೊಂದಾಣಿಕೆಯ ಕೊರತೆಯೋ ಮಾಹಿತಿಯ ಕೊರತೆಯೇ ಗೊತ್ತಿಲ್ಲ. ಆಶ್ವಾಸನೆ ಸುಮಾರು ವರ್ಷಗಳಿಂದ ಇದೇ ,ಹಾಕಿದ ಡಾಮರು ಕಿತ್ತು ಹೋಗಿದೆ,ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ಆಗಿದೆ.ನಗರದಿಂದ ಹೊರಡುವ ಒಂದು ಮುಖ್ಯ ರಸ್ತೆಯೇ ಹೀಗಿದ್ದರೆ ಹೊರಗಿನಿಂದ ಬಂದವರು ನಮ್ಮ ಬಗ್ಗೆ ಏನು ಯೋಚಿಸಿಯಾರು ? – ಗಿರೀಶ್ ಪಾಲಡ್ಕ, ಸ್ಥಳೀಯ ನಿವಾಸಿ