ಕಳೆದ ಬಾರಿ ನಮ್ಮ ಪವರ್ ಸ್ಪ್ರೇಯರ್ ಕೈಕೊಟ್ಟ ಅನುಭವವನ್ನು ಹಂಚಿಕೊಂಡಿದ್ದೆ. ಆಗ ಅನೇಕರು ತಮ್ಮ ಅನುಭವಗಳನ್ನು ಹೇಳಿ, ಹಲವು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಆ ಸಲಹೆಗಳಂತೆ ದುರಸ್ತಿ ಕೂಡ ಮಾಡಿಸಿದ್ದೆ. ಈ ಬಾರಿ ಔಷಧ ಸಿಂಪಡಣೆ ಆರಂಭವಾಗುವ ಮೊದಲೇ ಯಂತ್ರವನ್ನು ಪರೀಕ್ಷಿಸಿ ಸಿದ್ಧಗೊಳಿಸೋಣ ಎಂದು ಸ್ಪ್ರೇಯರ್ ಚಾಲನೆ ಮಾಡಿದೆ. ಆದರೆ ಮತ್ತೆ ಸಮಸ್ಯೆ ಎದುರಾಯಿತು.
ಈ ಬಾರಿ ತೊಂದರೆ ಬೇರೆ ರೀತಿಯದ್ದಾಗಿತ್ತು. ಕಾರ್ಬ್ಯುರೇಟರ್‌ನಲ್ಲಿ ಎಂಜಿನ್‌ಗೆ ಗಾಳಿ ಹರಿಯುವ ಸ್ಕ್ರೂ ಒಳಗೆ ಅಂಟಿನಂತಹ ಪದಾರ್ಥ ಜಮೆಯಾಗಿತ್ತು. ಸರಿಯಾದ ಪ್ರಮಾಣದಲ್ಲಿ ಗಾಳಿ ಸಿಗದೇ ಎಂಜಿನ್ ಆಗಾಗ ಬಂದ್ ಆಗುತ್ತಿತ್ತು. ಕೊನೆಗೆ ಇಡೀ ಕಾರ್ಬ್ಯುರೇಟರ್ ತೆಗೆದು ಸ್ವಚ್ಛಗೊಳಿಸಿದ ಬಳಿಕವೇ ಸಮಸ್ಯೆ ಬಗೆಹರಿಯಿತು.
ಈ ಘಟನೆ ಮತ್ತೊಮ್ಮೆ ಒಂದು ಪಾಠ ಕಲಿಸಿತು. ಕೆಲಸದ ದಿನ ಬೆಳಿಗ್ಗೆ ಯಂತ್ರವನ್ನು ಚಾಲನೆ ಮಾಡುವುದಕ್ಕಿಂತ, ಒಂದು ದಿನ ಮೊದಲೇ ಪರೀಕ್ಷಿಸಿ ಸಿದ್ಧಗೊಳಿಸುವುದು ಈಗ ಅನಿವಾರ್ಯವಾಗಿದೆ. ಮಾನಸಿಕವಾಗಿಯೂ, ತಾಂತ್ರಿಕವಾಗಿಯೂ ಈ ಪೂರ್ವಸಿದ್ಧತೆಯೂ ದಿನಚರಿಯ ಭಾಗವಾಗುತ್ತಿರುವುದು ಈಚೆಗೆ ಮತ್ತೊಂದು ಹೊರೆಯಾಗಿದೆ.
ಈ ಅನುಭವದ ಮಧ್ಯೆ ಒಂದು ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. E20 ಪೆಟ್ರೋಲ್ ನಿಜವಾಗಿಯೂ ಯಾರಿಗೆ ಹೆಚ್ಚು ಪ್ರಯೋಜನ?
ಸರ್ಕಾರ ಹೇಳುವ ಉದ್ದೇಶಗಳು ನಿಸ್ಸಂದೇಹವಾಗಿ ಉತ್ತಮವೇ. ಕಚ್ಚಾ ತೈಲ ಆಮದು ಅವಲಂಬನೆ ಕಡಿಮೆ ಮಾಡುವುದು, ಕಬ್ಬು ಹಾಗೂ ಜೋಳದಂತಹ ಬೆಳೆಗಳಿಗೆ ಹೆಚ್ಚುವರಿ ಮಾರುಕಟ್ಟೆ ಕಲ್ಪಿಸುವುದು, ವಾಹನಗಳಿಂದ ಹೊರಬರುವ ಕಾರ್ಬನ್ ತಗ್ಗಿಸುವುದು ಹಾಗೂ ದೇಶದ ಇಂಧನ ಭದ್ರತೆಯನ್ನು ಬಲಪಡಿಸುವುದು ಇವೆಲ್ಲವೂ ರಾಷ್ಟ್ರದ ದೃಷ್ಟಿಯಿಂದ ಸ್ವಾಗತಾರ್ಹ ಗುರಿಗಳು. ಆದರೆ ಹಳ್ಳಿಯ ಸಾಮಾನ್ಯ ವಾಹನ ಬಳಕೆದಾರನ ಅನುಭವವೂ ಅಷ್ಟೇ ಮುಖ್ಯ. ನೀತಿಗಳ ಯಶಸ್ಸನ್ನು ಅಳೆಯುವುದು ಕೇವಲ ಕಾಗದದಲ್ಲಲ್ಲ; ಜನರ ನಿತ್ಯಜೀವನದಲ್ಲೂ ಆಗಬೇಕು.
ತಜ್ಞರ ಅಭಿಪ್ರಾಯದ ಪ್ರಕಾರ, 2023ಕ್ಕೂ ಮೊದಲು ತಯಾರಾದ ಸುಮಾರು 1.5 ಕೋಟಿ ವಾಹನಗಳ ಸೇವಾ ದಾಖಲೆಗಳಲ್ಲಿ E20 ಪೆಟ್ರೋಲ್‌ನಿಂದ ಎಂಜಿನ್‌ಗೆ ನೇರ ಹಾನಿಯಾಗಿದೆ ಎಂಬ ಸ್ಪಷ್ಟ ವೈಜ್ಞಾನಿಕ ಪುರಾವೆ ಇಲ್ಲ. ಆದರೆ ವಾಹನ ತಯಾರಕ ಕಂಪನಿಗಳೇ ಸುಮಾರು 3 ರಿಂದ 3.5 ಶೇಕಡಾವರೆಗೆ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಳ್ಳುತ್ತವೆ.
ಇಲ್ಲಿಯೇ ಪ್ರಶ್ನೆ ಆರಂಭವಾಗುತ್ತದೆ. ಮೈಲೇಜ್ ಕಡಿಮೆಯಾದರೆ ವಾಹನ ಹೆಚ್ಚು ಪೆಟ್ರೋಲ್ ಬಳಸಬೇಕಾಗುತ್ತದೆ. ಹಾಗಾದರೆ ಇಂಧನ ಉಳಿತಾಯದ ಗುರಿ ಎಷ್ಟು ಮಟ್ಟಿಗೆ ಈಡೇರುತ್ತದೆ? ಎಥನಾಲ್ ಮಿಶ್ರಣದಿಂದ ಇಂಧನದ ಬೆಲೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಅದರ ಲಾಭ ಸಾಮಾನ್ಯ ಗ್ರಾಹಕರ ಜೇಬಿಗೆ ತಲುಪಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಇನ್ನೊಂದೆಡೆ, ಪವರ್ ಸ್ಪ್ರೇಯರ್, ಪಂಪ್‌ಸೆಟ್, ಜನರೇಟರ್ ಸೇರಿದಂತೆ ಸಣ್ಣ ಎಂಜಿನ್ ಹೊಂದಿರುವ ಕೃಷಿ ಯಂತ್ರೋಪಕರಣಗಳಲ್ಲಿ ಆಗಾಗ ತೊಂದರೆ ಕಾಣಿಸುತ್ತಿದೆ ಎನ್ನುವುದು ಅನೇಕ ಬಳಕೆದಾರರ ಅನುಭವ. ಇದು ವೈಜ್ಞಾನಿಕವಾಗಿ ಇನ್ನಷ್ಟು ಅಧ್ಯಯನವಾಗಬೇಕಾದ ವಿಷಯವಾಗಬಹುದು. ಆದರೆ ಸಾವಿರಾರು ಬಳಕೆದಾರರು ಒಂದೇ ರೀತಿಯ ಅನುಭವ ಹಂಚಿಕೊಳ್ಳುತ್ತಿರುವಾಗ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದೂ ಸರಿಯಲ್ಲ.
ಯಂತ್ರ ಕೆಟ್ಟರೆ ಹಣ ಮಾತ್ರವಲ್ಲ, ರೈತನ ಸಮಯವೂ ನಷ್ಟವಾಗುತ್ತದೆ. ಕೃಷಿಯಲ್ಲಿ ಕೆಲವೊಮ್ಮೆ ಒಂದು ದಿನದ ವಿಳಂಬವೇ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ.
ಈ ನಡುವೆ ಇಥೆನಾಲ್ ಮಿಶ್ರಣ ಕಾರ್ಯಕ್ರಮ ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ₹1.6 ಲಕ್ಷ ಕೋಟಿಗೂ ಅಧಿಕ ಹೆಚ್ಚುವರಿ ಆದಾಯ ತಂದುಕೊಟ್ಟಿದೆ ಎಂದು ವರದಿಗಳು ತಿಳಿಸುತ್ತವೆ. ಇದು ಖಂಡಿತವಾಗಿಯೂ ಸಕಾರಾತ್ಮಕ ಬೆಳವಣಿಗೆ.
ಆದರೆ ಮತ್ತೊಂದು ಪ್ರಶ್ನೆ ಉಳಿಯುತ್ತದೆ. ಎಥನಾಲ್‌ಗೆ ಬೇಡಿಕೆ ಹೆಚ್ಚಾದರೆ ಕಬ್ಬು ಬೆಳೆಗಾರರಿಗೆ ಉತ್ತಮ ಆದಾಯ ಸಿಗಬೇಕು ಎಂಬುದು ಉದ್ದೇಶ. ಆದರೆ ಇಂದಿಗೂ ಅನೇಕ ಕಬ್ಬು ಬೆಳೆಗಾರರು ಬೆಲೆ, ಬಾಕಿ ಪಾವತಿ ಹಾಗೂ ಮಾರುಕಟ್ಟೆ ಸಮಸ್ಯೆಗಳಿಂದ ಸಂಪೂರ್ಣ ಮುಕ್ತರಾಗಿಲ್ಲ. ಹಾಗಾದರೆ ಈ ನೀತಿಯ ನೇರ ಲಾಭ ಅಂತಿಮವಾಗಿ ಯಾರಿಗೆ ತಲುಪುತ್ತಿದೆ?
ಈ ಪ್ರಶ್ನೆ ಹೊಸದಲ್ಲ. ಒಂದು ಕಾಲದಲ್ಲಿ ಜೈವಿಕ ಇಂಧನದ ಹೆಸರಿನಲ್ಲಿ ಜಟ್ರೋಫಾ, ಹೊಂಗೆ ಸೇರಿದಂತೆ ಹಲವು ಗಿಡಗಳನ್ನು ನೆಡಲು ಪ್ರೋತ್ಸಾಹ ನೀಡಲಾಯಿತು. ನಾವೂ ನೆಟ್ಟೆವು. ಗಿಡಗಳು ದೊಡ್ಡದಾದವು. ಕೆಲವು ಕಡೆ ಕಾಯಿ ಕೂಡ ಬಂತು. ಆದರೆ ಖರೀದಿಸಲು ಯಾರೂ ಬರಲಿಲ್ಲ. ಲಾಭವಾದದ್ದು ಗಿಡ ಮಾರಿದವರಿಗೆ. ನಷ್ಟ ಅನುಭವಿಸಿದದ್ದು ರೈತ.
ಇಂದೂ “ರೈತರಿಗೆ ಲಾಭ” ಎಂಬ ಮಾತು ಕೇಳಿಸುತ್ತಿದೆ. ರೈತರ ಆದಾಯ ಹೆಚ್ಚಬೇಕು ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇಲ್ಲ. ಆದರೆ ಹೇಗೆ? ಯಾವ ರೈತರಿಗೆ? ಆ ಲಾಭ ನಿಜವಾಗಿಯೂ ಅವರ ಕೈಗೆ ತಲುಪುತ್ತಿದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕಿದೆ.
ಇದು E20 ವಿರುದ್ಧದ ಅಭಿಪ್ರಾಯವಲ್ಲ. ದೇಶಕ್ಕೆ ಪರ್ಯಾಯ ಇಂಧನ ಅಗತ್ಯ. ಆದರೆ ಯಾವುದೇ ಹೊಸ ತಂತ್ರಜ್ಞಾನ ಅಥವಾ ನೀತಿ ಯಶಸ್ವಿಯಾಗಬೇಕಾದರೆ, ಅದರ ಲಾಭ-ನಷ್ಟಗಳನ್ನು ಕೊನೆಯ ಬಳಕೆದಾರನ ಅನುಭವದ ಆಧಾರದ ಮೇಲೂ ಅಳೆಯಬೇಕು. ಅದಕ್ಕೆ ಸಾಕಷ್ಟು ಪೂರ್ವತಯಾರಿಯೂ ಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ನೀತಿ ರೂಪಿಸುವವರು, ವಾಹನ ತಯಾರಕರು, ಸಂಶೋಧಕರು ಮತ್ತು ಬಳಕೆದಾರರು ಒಂದೇ ವೇದಿಕೆಯಲ್ಲಿ ಕೂತು ಈ ಅನುಭವಗಳನ್ನು ಪರಿಶೀಲಿಸುವ ಸಮಯ ಬಂದಿದೆ. ದೇಶದ ಹಿತ ಮುಖ್ಯ. ಆದರೆ ಆ ಹಿತದ ಭಾರ ಸಂಪೂರ್ಣವಾಗಿ ಸಾಮಾನ್ಯ ನಾಗರಿಕನ ಹೆಗಲಿನ ಮೇಲೆಯೇ ಬೀಳಬಾರದು.

