ಇದೊಂದು ಲೆಕ್ಕ. 09+11+12+20+18+27 =70 ..! ಇನ್ನೊಮ್ಮೆ ಕೂಡಿಸಿ. ಸರಿಯಾಗದೇ ಇದ್ದರೆ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಕೇಳಬೇಕು. ಇಂತಹದ್ದೊಂದು ಎಡವಟ್ಟು ಲೆಕ್ಕ ಮಾಡಿರುವುದು ಎಕನಾಮಿಕ್ಸ್ ಉಪನ್ಯಾಸಕರೊಬ್ಬರು.ಆದರೆ ಈ ಎಡವಟ್ಟು ವಿದ್ಯಾರ್ಥಿನಿಯೊಬ್ಬ ಭವಿಷ್ಯದ ಮೇಲೆ ಹೊಡೆತ ಬೀಳುತ್ತಿತ್ತು. ಆದರೆ ಏನೋ ಎಡವಟ್ಟಾಗಿದೆ ಎಂದು ವಿದ್ಯಾರ್ಥಿನಿಗೆ ಪಕ್ಕಾ ಗೊತ್ತಾದ ಕಾರಣ ಧೈರ್ಯದಿಂದ ಇದ್ದರು. ಈಗ ಉತ್ತರ ಸಿಕ್ಕಿತು. 27 ಅಂಕವನ್ನು ಕೂಡಿಸಲೇ ಇಲ್ಲ…!. ಹೀಗಾಗಿ ಈಗ ವಿದ್ಯಾರ್ಥಿನಿಯ ಅಂಕ 97.
ಹೌದು. ಈ ಎಡವಟ್ಟು ಆಗಿರುವುದು ಕುಕ್ಕೆ ಸುಬ್ರಹ್ಮಣ್ಯದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿಂದು ಭಾರ್ಗವಿ ಅವರಿಗೆ. ರಾಧಾಕೃಷ್ಣ ಭಟ್ ಅಡ್ಕ ಗುತ್ತಿಗಾರು ಇವರ ಪುತ್ರಿಯಾಗಿರುವ ಬಿಂದು ಭಾರ್ಗವಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಕನಾಮಿಕ್ಸ್‌ನಲ್ಲಿ 95 ರಿಂದ 97 ಅಂಕದ ನಿರೀಕ್ಷೆಯಲ್ಲಿದ್ದರು. ಆದರೆ ಫಲಿತಾಂಶ ಬಂದಾಗ ಕೇವಲ 70 ಅಂಕ. ವಿದ್ಯಾರ್ಥಿನಿಗೆ ಒಮ್ಮೆ ಆತಂಕವಾಗಿತ್ತು. ಇಷ್ಟೆಲ್ಲಾ ಬರೆದು ಹೀಗೇಕಾಯಿತು ಎಂದು.ಇದು ಎಕನಾಮಿಕ್ಸ್ ಬೇರೆ. ಲೆಕ್ಕಗಳು ಪಕ್ಕಾ ಇದ್ದರೆ ಅಂಕವೂ ಪಕ್ಕಾವೇ. ಹಾಗಾಗಿ ಎಲ್ಲವೂ ಬರೆದ ನಂತರವೂ ಹೀಗೇಕಾಯಿತು ಎಂದು ಆತಂಕಕ್ಕೆ ಒಳಗಾದಳು. ಆಗ ವಿದ್ಯಾರ್ಥಿನಿಯ ಮನೆಯವರು ಧೈರ್ಯ ತುಂಬಿ ಉತ್ತರ ಪತ್ರಿಕೆಯ ನಕಲು ತಂದಾಗ ಸತ್ಯ ತಿಳಿಯಿತು. 27 ಅಂಕವನ್ನು ಸೇರ್ಪಡೆ ಮಾಡಲೇಇಲ್ಲ..!. ಹೀಗಾಗಿ ವಿದ್ಯಾರ್ಥಿನಿಗೆ ಈಗ ಅಂಕ 97.
ಇಲಾಖೆಗಳು ಇಂತಹ ಎಡವಟ್ಟುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪರೀಕ್ಷೆ ಚೆನ್ನಾಗಿ ಬರೆದು ತಪ್ಪಾಗಿ ಅಂಕ ಕೂಡಿಸಿ ಫಲಿತಾಂಶ ಪ್ರಕಟವಾಗಿ ವಿದ್ಯಾರ್ಥಿಗಳು ಮಾನಸಿಕ ಆಘಾತಕ್ಕೆ ಒಳಗಾದರೆ ಯಾರು ಹೊಣೆ. ಹೀಗಾಗಿ ಇಂತಹ ಗಂಭೀರವಾದ ಎಡವಟ್ಟುಗಳು ಆಗದಂತೆ ಇಲಾಖೆಗಳು ಎಚ್ಚರ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಯಾವುದೇ ವಿದ್ಯಾರ್ಥಿಗಳಿಗೆ ಇದೊಂದು ಪಾಠ. ನಿರೀಕ್ಷೆಯಷ್ಟು ಅಂಕ ಬಾರದೇ ಇದ್ದಾಗ ಯಾವುದೇ ಆತಂಕಕ್ಕೆ ಒಳಗಾಗದೆ ಪರಿಶೀಲನೆ ನಡೆಸುವುದು ಉತ್ತಮ.