ಅಡಿಕೆ(Arecanut) ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಮಹಾರಾಷ್ಟ್ರದಲ್ಲಿ 11.5 ಕೋಟಿ ರೂಪಾಯಿ ಮೌಲ್ಯದ 288 ಮೆಟ್ರಿಕ್ ಟನ್ ಅಡಿಕೆ ಹಾಗೂ 16.5 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದೆ. ಎರಡು ದಿನಗಳಿಂದ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿತ್ತು. ನಕಲಿ ದಾಖಲೆ ಸಿದ್ಧಪಡಿಸಿ ಇಂಡೋನೇಷ್ಯಾದಿಂದ ಮ್ಯಾನ್ಮಾರ್ ಗಡಿ ಮೂಲಕ ಭಾರೀ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ನಡೆಸಲಾಗಿತ್ತು.
ಮಹಾರಾಷ್ಟ್ರದ ಗೊಂಡಿಯಾ ಮತ್ತು ನಾಗ್ಪುರ ಜಿಲ್ಲೆಗಳ ಮಸ್ಕಸಾತ್, ಇಟ್ವಾರಿ ಮತ್ತು ಕಲಾಮ್ನಾ ಗೋದಾಮುಗಳು ಸೇರಿದಂತೆ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗುರುವಾರ ಜಾರಿ ನಿರ್ದೇಶನಾಲಯದ 130 ಇಡಿ ಸಿಬ್ಬಂದಿಗಳು 17 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭ ಕಳ್ಳಸಾಗಣೆಯ ಅಡಿಕೆ ದಾಸ್ತಾನುಗಳು, ದಾಖಲೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ. ನಾಗ್ಪುರ, ಮುಂಬೈ ಮತ್ತು ಇತರ ಸ್ಥಳಗಳಿಂದ ಇಡಿ ಅಧಿಕಾರಿಗಳ ತಂಡವು ಬೆಳಿಗ್ಗೆ ಸಶಸ್ತ್ರ ಭದ್ರತೆಯ ನಡುವೆ ತನಿಖೆಯನ್ನು ಸಂಜೆಯವರೆಗೂ ನಡೆಸಿತ್ತು. ಗೋಯಲ್ ಟ್ರೇಡಿಂಗ್‌ನ ಪ್ರಕಾಶ್ ಗೋಯಲ್, ಅಲ್ತಾಫ್ ಕಲಿವಾಲಾ, ವಾಸಿಂ ಬಾವ್ಲಾ, ಹೇಮಂತ್‌ಕುಮಾರ್ ಗುಲಾಬ್‌ಚಂದ್ ಮತ್ತು ದಿಗ್ವಿಜಯ್ ಟ್ರಾನ್ಸ್‌ಪೋರ್ಟ್ ಕಂಪನಿಯ ಹಿಮಾಂಶು ಭದ್ರ ಸೇರಿದಂತೆ ಅಡಿಕೆ ಡೀಲರ್‌ಗಳ ಗೋಡೌನ್‌ಗಳು, ಕಚೇರಿಗಳು ಮತ್ತು ವಸತಿ ಆವರಣದಲ್ಲಿ ಶೋಧ ನಡೆಸಿತ್ತು.ನಾಗ್ಪುರ ಮೂಲದ ಅನೇಕ ವ್ಯಾಪಾರಿಗಳು ವಿವಿಧ ಸಾಮಾಜಿಕ ಮುಖಂಡರ ಜೊತೆ ಶಾಮೀಲಾಗಿ ಕಳಪೆ ಗುಣಮಟ್ಟದ ಅಡಿಕೆ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎಂದು ಇಡಿ ಬಹಿರಂಗಪಡಿಸಿದೆ.
ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಭಾರತಕ್ಕೆ ಇಂಡೋನೇಷಿಯಾದ ಅಡಿಕೆಯನ್ನು ಕಳ್ಳಸಾಗಣೆ ಮಾಡುವ ಇಂಡೋನೇಷಿಯಾದ ಅಡಿಕೆ ಪೂರೈಕೆದಾರರು, ಕಮಿಷನ್ ಏಜೆಂಟ್‌ಗಳು, ಲಾಜಿಸ್ಟಿಕ್ ಪೂರೈಕೆದಾರರು, ಸಾಗಣೆದಾರರು, ಹವಾಲಾ ಸಾಗಾಣಿಕೆದಾರರು ಮತ್ತು ಖರೀದಿದಾರರ ದೊಡ್ಡ ನೆಟ್ವರ್ಕ್ ಇದರಲ್ಲಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ರಾಜಕಾರಣಿಗಳ ಬೆಂಬಲ, ದೊಡ್ಡ ವ್ಯಕ್ತಿಗಳ ಕೈವಾಡವೂ ಇರುವುದರ ಬಗ್ಗೆ ಇಡಿ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. ಮ್ಯಾನ್ಮಾರ್ ಗಡಿ ಮೂಲಕ ಭಾರತದೊಳಕ್ಕೆ ಬರುವ ಅಡಿಕೆಯು ನೇರವಾಗಿ ಮಹಾರಾಷ್ಟ್ರದ ನಾಗ್ಪುರ ಮತ್ತು ಗೊಂಡಿಯಾ ಜಿಲ್ಲೆಗಳಿಗೆ ಕಳ್ಳಸಾಗಣೆ ಮೂಲಕ ತರಲಾಗುತ್ತಿತ್ತು.
ಇಡಿ(ED) ಎಫ್‌ಐಆರ್ ಪ್ರಕಾರ ನಾಗ್ಪುರ ಮೂಲದ ಅನೇಕ ವ್ಯಾಪಾರಿಗಳು, ಪ್ರಮುಖರ ಜೊತೆಗೂಡಿ, ಇಂಡೋನೇಷಿಯನ್ ಮೂಲದ ಕಳಪೆ ಅಡಿಕೆ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಮತ್ತು ಅದು ದಕ್ಷಿಣ ಏಷ್ಯಾದ ವ್ಯಾಪಾರ ಒಪ್ಪಂದದ ಸದಸ್ಯ ರಾಷ್ಟ್ರಗಳಿಂದ ತರಲಾಗಿದೆ ಎಂದು ನಕಲಿ ದಾಖಲೆ , ಪ್ರಮಾಣಪತ್ರ ಬಳಸಲಾಗಿದೆ. ಮತ್ತು ಕಡಿಮೆ ಮೌಲ್ಯದ ಬಿಲ್‌ಗಳು ಬಳಸಿಕೊಂಡು ಸರ್ಕಾರಕ್ಕೆ ಕಸ್ಟಮ್ಸ್ ಸುಂಕದ ಪಾವತಿಯನ್ನು ತಪ್ಪಿಸಲಾಗಿದೆ ಎಂದು ದಾಖಲಾಗಿದೆ.
ಅಡಿಕೆ ಕಳ್ಳಸಾಗಾಣಿಕೆಯ ತನಿಖೆ ಮುಂದುವರಿದಿದ್ದು ಬರ್ಮಾದಿಂದ ಅಡಿಕೆ ಕಳ್ಳಸಾಗಣೆದಾರರ ಮೋಸ್ಟ್ ವಾಂಟೆಡ್ ಕಿಂಗ್‌ಪಿನ್ ಜಸ್ಬೀರ್ ಸಿಂಗ್ ಚಟ್ವಾಲ್ ಬಂಧನದ ನಂತರ ಇಡಿ ತನಿಖೆ ಆರಂಭಿಸಿತ್ತು. ಅಸ್ಸಾಂ ಪೊಲೀಸರು ಒಂದು ವರ್ಷಕ್ಕೂ ಹೆಚ್ಚು ಕಾಲ ಆತನಿಗಾಗಿ ಹುಡುಕಾಟ ನಡೆಸಿತ್ತು, ಆದರೆ ಈತನಿಗೆ ರಾಜಕೀಯ ಬೆಂಬಲ ಇದ್ದುದರಿಂದ ಬಂಧನ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಈತನನ್ನು ಹಿಡಿಯಲು ಪೊಲೀಸರು, ಮಹಾರಾಷ್ಟ್ರ, ದೆಹಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಬಲೆ ಬೀಸಿದ್ದರು. ಅಂತಿಮವಾಗಿ, ಗುವಾಹಟಿ ಪೊಲೀಸರ ವಿಶೇಷ ದಳವು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಅಡಿಕೆ ಕಳ್ಳಸಾಗಾಣಿಕೆಯ ಬಹುದೊಡ್ಡ ಜಾಲವು ಇದೀಗ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ, ತ್ರಿಪುರಾ, ಮೇಘಾಲಯಗಳಲ್ಲಿ ಕಳೆದ ಕೆಲವು ಸಮಯಗಳಿಂದ ಅಡಿಕೆ ಖರೀದಿದಾರರು, ಅಡಿಕೆ ಬೆಳೆಗಾರರು, ಅಧಿಕಾರಿಗಳು, ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿತ್ತು. ಅಡಿಕೆ ಕಳ್ಳದಾರಿಯ ಮೂಲಕ ಭಾರತದ ಮಾರುಕಟ್ಟೆಗೆ ಬರುವುದು ತಡೆಯಲು ಹಲವು ಪ್ರಯತ್ನ ನಡೆಯುತ್ತಿತ್ತು. ಇದೀಗ ಅಡಿಕೆ ಆಮದು ಬಹುದೊಡ್ಡ ಜಾಲ ಪತ್ತೆಯಾಗಿದೆ. ಇನ್ನಷ್ಟು ತನಿಖೆ ನಡೆಯುತ್ತಿದೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…