ಅನುಕ್ರಮ

ಡಿಜಿಟಲೀಕರಣದತ್ತ ಶಿಕ್ಷಣದ ಧುೃವೀಕರಣ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಇದೇ 2024 ಸೆಪ್ಟೆಂಬರ್ 18ರಿಂದ 20ರ ತನಕ ದಿಲ್ಲಿಯಲ್ಲಿ ಜರಗಿದ ಮೂರು ದಿನಗಳ ಶಿಕ್ಷಣದ ಮಹಾ ಸಮ್ಮೇಳನಕ್ಕೆ ಆಹ್ವಾನ ಬಂದಿತ್ತು. ಏಶಿಯಾದಲ್ಲೇ ಅತಿ ದೊಡ್ಡದಾದ ಮತ್ತು ಶಿಕ್ಷಣದ ಮೂಲಕ ಐಕ್ಯತೆಯನ್ನು ಸಾಧಿಸುವ ಸಮ್ಮೇಳನವೆಂದು ಅದರ ಪ್ರಕಟಣೆಯಲ್ಲಿತ್ತು. ಶಿಕ್ಷಣ ಯಾವೆಲ್ಲ ಮಜಲುಗಳನ್ನು  ಕ್ರಮಿಸಿದೆ ಎಂಬುದನ್ನು ಒಮ್ಮೆ ನೋಡಿಯೇ ಬಿಡೋಣ ಎಂತ ಯೋಚಿಸಿದೆ. ಶಾಲೆಯನ್ನು ನಡೆಸುತ್ತಿರುವ ನನಗೆ ಇಂತಹ ಮಾಹಿತಿ ಉಪಯುಕ್ತವಾಗಬಹುದೆಂಬ ಆಲೋಚನೆಯೂ ಇತ್ತು. ಉಚಿತ ನೋಂದಣಿಯ ಸೌಲಭ್ಯವನ್ನು ಸಂಘಟಕರು ನೀಡಿ ಆಹ್ವಾನಿಸಿದ್ದರಿಂದ ಹೋಗಿಯೇ ಬಿಡೋಣವೆಂದು ತೀರ್ಮಾನಿಸಿದೆ.
ಹೋದದ್ದು ಒಳ್ಳೆಯದಾಯಿತೆಂದು ಅಲ್ಲಿಗೆ ತಲುಪಿದಾಗಲೇ ಅನ್ನಿಸಿತು. ಬಲು ವಿಸ್ತಾರವಾದ ಆಧುನಿಕ ಸೌಲಭ್ಯಗಳ ಹವಾನಿಯಂತ್ರಿತ ಸಭಾಂಗಣದ ಒಂದು ಬದಿಯಲ್ಲಿ ದೊಡ್ಡದಾದ ಸಮ್ಮೇಳನ ಸಭಾಂಗಣ ಮತ್ತು ಇನ್ನೊಂದು ಬದಿಯಲ್ಲಿ ಅಷ್ಟೇ ದೊಡ್ಡದಾದ ಸರಕು ಮಾರಾಟದ ಮಳಿಗೆಗಳ ಅಚ್ಚುಕಟ್ಟಾದ ವ್ಯವಸ್ಥೆ. ಆಧುನಿಕ ಡಿಜಿಟಲ್ ಸರಕುಗಳನ್ನು ಅಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರು. ಶಿಕ್ಷಣವು ಸರಕಿನ ಪರಿಭಾಷೆಗೆ ಪಲ್ಲಟಗೊಂಡಿರುವುದಕ್ಕೆ ಇಲ್ಲಿ ಸ್ಪಷ್ಟವಾದ ಸಾಕ್ಷಿ ಸಿಕ್ಕಿತು. ಸಮ್ಮೇಳನಕ್ಕೊಂದು ಉದ್ಘಾಟನೆ ಎಂಬ ಸಮಯ ಕಳೆಯುವ ಯಾವ ಔಪಚಾರಿಕ ಸಮಾರಂಭವೂ ಇಲ್ಲದೆ ನೇರವಾಗಿ ವಿಚಾರಗೋಷ್ಠಿಯನ್ನು ಆರಂಭಿಸಿದರು. ಹೀಗೆ ಉದ್ದೇಶಿತ ಕೆಲಸಕ್ಕೆ ತೊಡಗುವ ಅವರ ಕ್ರಮ ನನಗೆ ಉತ್ತಮವೆನ್ನಿಸಿತು. ನಾವು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ವಿದ್ಯಾರ್ಥಿಗಳಿಗೆ ನಡೆಸುವ ಪ್ರತಿಭಾಕಾರಂಜಿ ಹಾಗೂ ಇತರ ಸ್ಪರ್ಧೆಗಳ ಉದ್ಘಾಟನೆಯ ಹೆಸರಿನಲ್ಲಿ ಸಮಯ ಹಾಳು ಮಾಡುವ ಕ್ರಮ ನಿಲ್ಲಿಸಿದರೆ ಉತ್ತಮ ಎಂಬ ಚಿಂತನೆಗೆ ಇಲ್ಲಿ ಸಾಕ್ಷಿ ಸಿಕ್ಕಿತು.
ಈ ಸಮ್ಮೇಳನದ ಆಹ್ವಾನ ಪತ್ರದಲ್ಲಿ ಪ್ರಕಟಿಸಿದ್ದ ದಿಕ್ಸೂಚಿ ಚಿಂತನೆ ಚೆನ್ನಾಗಿತ್ತು. ಇಂದಿನ ಗೊಂದಲಮಯ, ಸಂದಿಗ್ಧ, ಸಂಕೀರ್ಣ ಮತ್ತು ದ್ವಂದ್ವಮುಖಿ ಆಲೋಚನೆಗಳ ನಡುವೆ “ಕಲಿಯುವುದು ಹೇಗೆಂದು ಕಲಿಯುವುದೇ” (Learning how to learn) ದೊಡ್ಡ ಸವಾಲು. ರಾಶಿ ರಾಶಿ ಮಾಹಿತಿ ಮತ್ತು ಹೊಸ ತಂತ್ರಜ್ಞಾನ ಎಷ್ಟು ಸಿಕ್ಕಿದರೂ ಅದು ಬಹುಬೇಗ ಹಳೆಯದಾಗುತ್ತದೆ. ಹಾಗಾಗಿ  ಹೊಸ ಶೋಧನೆ ಮತ್ತು ಹೊಂದಾಣಿಕೆಗಳ ಅಗತ್ಯವಿದೆ. ಬದುಕಿನ ಎಲ್ಲ ಆಯಾಮಗಳ ಮೇಲೆ ಕೃತಕ ಬುದ್ಧಿಮತ್ತೆಯು ಹಿಡಿತ ಸಾಧಿಸುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹೊಸ ಹೊಂದಾಣಿಕೆಗಳೊಂದಿಗೆ ಸ್ಪಂದಿಸುವ ಅಗತ್ಯವಿದೆ. ವಿಶ್ವಮಟ್ಟದಲ್ಲಿ ಸಂಭವಿಸುತ್ತಿರುವ ಈ ಪ್ರಯೋಗಗಳಿಗೆ ಶಾಲೆಗಳು ಹೇಗೆ ಸಿದ್ಧಗೊಳ್ಳಬೇಕೆಂಬ ಬಗ್ಗೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಅಂದರೆ ಕಲಿಕೆಯ ಹೊಸ ಸೌಲಭ್ಯಗಳನ್ನು ಹಾಗೂ ತಜ್ಞರನ್ನು ಶಿಕ್ಷಣದ ಚೌಕಟ್ಟಿನೊಳಗೆ ಸೇರಿಸಿಕೊಂಡು ಕಲಿಕಾ ಪ್ರಕ್ರಿಯೆಯನ್ನು ಆಧುನೀಕರಣಗೊಳಿಸಬೇಕು. ಇದಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೇಗೆ ತಯಾರಾಗಬೇಕು? ಶಿಕ್ಷಣ ವ್ಯವಸ್ಥೆಯಲ್ಲಿ ಹೊರಗುತ್ತಿಗೆಯ ಪಾತ್ರ ಮತ್ತು ಪ್ರಮಾಣ ಎಷ್ಟಿರಬೇಕು? ಅಂತಾರಾಷ್ಟ್ರೀಯ ಕಲಿಕಾ ವಿಧಾನಗಳ ಪ್ರಯೋಜನವನ್ನು ಹೇಗೆ ಪಡೆಯಬಹುದು? ಈ ಪ್ರಶ್ನೆಗಳಿಗೆ ಉತ್ತರವಾಗಿ ಶಿಶುಕೇಂದ್ರಿತವಾಗಿ ಜರಗಬೇಕಾದ ವ್ಯಕ್ತಿತ್ವ ವಿಕಸನದ ಪ್ರಕ್ರಿಯೆಗಳನ್ನು ಪರಿಚಯಿಸುವ ಸರಕುಗಳಿರಲಿಲ್ಲ. ಬದಲಾಗಿ ಸ್ಪೂನ್ ಫೀಡಿಂಗ್ ವಿಧಾನಗಳನ್ನು ಆಶ್ರಯಿಸಿದ ಡಿಜಿಟಲ್ ಗೆಜೆಟ್ ಗಳ ಭರಾಟೆಯೇ ಜೋರಾಗಿತ್ತು.
ಈ ಸಮ್ಮೇಳನದಲ್ಲಿ ಕಂಡು ಬಂದ ಒಂದು ವಾಸ್ತವವೆಂದರೆ ಶಿಕ್ಷಣದ ಆಧುನೀಕರಣದ ಪ್ರಕ್ರಿಯೆಯು ಸಿದ್ಧ ಮಾಹಿತಿಗಳ ಯಾಂತ್ರಿಕ ಕಲಿಕೆಯತ್ತ ಮಕ್ಕಳನ್ನು ತಳ್ಳುತ್ತದೆ. ಬಾಯಿಪಾಠದ ಕಲಿಕೆಯನ್ನು ಟೀಕಿಸುತ್ತಲೇ ಅದಕ್ಕೇ ಮಕ್ಕಳು ಬಲಿ ಬೀಳುವಂತಹ ಉತ್ತರಗಳ ಜಾಲಕ್ಕೆ ಸೆಳೆಯುತ್ತದೆ. ಮಕ್ಕಳು ತಮ್ಮ ಬುದ್ಧಿಮತ್ತೆಯನ್ನು ಬಳಸದೇನೆ ಡಿಜಿಟಲ್ ಗೆಜೆಟ್ಗಳಲ್ಲಿ ಸಿದ್ಧ ಉತ್ತರಗಳನ್ನು ಪಡೆದು ಪರೀಕ್ಷೆ ಬರೆದು ಅಂಕ ಗಳಿಸಬಹುದಾಗಿದೆ. ಈ ಡಿಜಿಟಲ್ ಮಾಹಿತಿಯೆಲ್ಲವೂ ಇಂಗ್ಲಿಷ್‍ನಲ್ಲಿರುವುದರಿಂದ ಆಧುನೀಕರಣದ ಲಾಭವನ್ನು ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುವ ಮಕ್ಕಳಷ್ಟೇ ಪಡೆಯಬಹುದಾಗಿದೆ. ಅದರಲ್ಲೂ ವೈವಿಧ್ಯಮಯ ಗೆಜೆಟ್‍ಗಳು ವಿವಿಧ ಬೆಲೆಗಳಲ್ಲಿ ಲಭ್ಯವಿರುವುದರಿಂದ ಉತ್ತಮವಾದುವುಗಳನ್ನು ಖರೀದಿಸುವ ಸಾಮರ್ಥ್ಯವು ಶ್ರೀಮಂತ ಹೆತ್ತವರಿಗಷ್ಟೇ ಇರುತ್ತದೆ.
ಸರಕು ಮಾರಾಟದ ಸುಮಾರು 600ರಷ್ಟು ಮಳಿಗೆಗಳಲ್ಲಿ ಪ್ರತಿಯೊಂದರಲ್ಲಿ ನಾಲ್ಕೈದು ಮಂದಿ ವ್ಯಾಪಾರಿ ಮಾಹಿತಿದಾರರಿರುತ್ತಿದ್ದರು. ನಮ್ಮನ್ನು ಸಮೀಪಕ್ಕೆ ಕರೆದು ತಮ್ಮ ಗೆಜೆಟ್ ಹೇಗೆ ಉಳಿದವುಗಳಿಗಿಂತ ಹೆಚ್ಚು ಉಪಯುಕ್ತ ಎಂದು ಹೇಳಲು ತರಬೇತಿ ಹೊಂದಿರುತ್ತಿದ್ದರು. ಇದಲ್ಲದೆ ಆಧುನಿಕ ತರಗತಿ ಕೊಠಡಿಯ ನಿರ್ಮಾಣ, ಇಂಟರಾಕ್ಟಿವ್ ಬೋರ್ಡ್, ಖಾಲಿ ವೈಟ್ ಬೋರ್ಡ್ ನಲ್ಲಿ ಬರೆಯುವುದು ಮತ್ತು ಉಜ್ಜುವುದು, ಮಾಹಿತಿಯನ್ನು ಗೆಜೆಟ್‍ನ ಸ್ಮರಣೆಯಲ್ಲಿ ಇಟ್ಟುಕೊಳ್ಳುವ ಉಪಾಯಗಳು ಇತ್ಯಾದಿಗಳನ್ನು ವಿವರಿಸುತ್ತಿದ್ದರು. ತಮ್ಮ ಸಂಸ್ಥೆಯ ಜಾಹಿರಾತಿಗಾಗಿ ದುಬಾರಿ  ಪಾಂಫ್ಲೆಟ್ ಗಳನ್ನು ಹಂಚುತ್ತಿದ್ದರು. ಅಲ್ಲಿಗೆ ಬಂದವರಲ್ಲಿ ಹೆಚ್ಚಿನವರು ಆಂಗ್ಲಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುವವರೇ ಆಗಿದ್ದರಿಂದ ಈ ಮಾಹಿತಿಗಳಿಗೆ ಅವರು ಕಿವಿಗೊಡುತ್ತಿದ್ದರು. ತಮ್ಮ ಶಾಲೆಯನ್ನು ಸ್ಥಳೀಯವಾಗಿ ವಿಶಿಷ್ಟವೆಂದು ತೋರಿಸುವ ಉತ್ಸಾಹಿಗಳು ಸೂಕ್ತ ಗೆಜೆಟ್‍ಗಳು ಕಡಿಮೆ ಕ್ರಯದಲ್ಲಿ ಎಲ್ಲಿ ಸಿಗುತ್ತವೆಂದು ಹುಡುಕುತ್ತಿದ್ದರು. ಪೋಷಕರನ್ನು ಆಕರ್ಷಿಸಲು ಸಾಕಾಗುವಂತಹ ಗೆಜೆಟ್‍ಗಳು ಅವರಿಗೆ ಬೇಕಾಗಿದ್ದುವು. ಆದರೆ ಹಣದ ಚಿಂತೆ ಇಲ್ಲದ ಹೆತ್ತವರು ದುಬಾರಿ ಬೆಲೆಯ ವಸ್ತುಗಳನ್ನು ಮಾರುವ ಅಂಗಡಿಗಳಲ್ಲೇ ತಮ್ಮ ಆಯ್ಕೆಗಳನ್ನು ಮಾಡುತ್ತಿದ್ದರು. ಇಲ್ಲಿ ಖರೀದಿ ಮಾಡಿದವರು ಕೊಂಡುಕೊಂಡ ಗೆಜೆಟ್‍ಗಳನ್ನು ಅವರೇ ಹೊತ್ತೊಯ್ಯ ಬೇಕಿರಲಿಲ್ಲ. ಅವುಗಳನ್ನು ಸುಭದ್ರವಾಗಿ ಮನೆಗೆ ಕಳಿಸುವ ವ್ಯವಸ್ಥೆ ವ್ಯಾಪಾರಿಗಳಲ್ಲೇ ಇದೆ. ಇನ್ನು ಮಕ್ಕಳ ಆಟದ ಸಾಮಗ್ರಿಗಳು, ಪೀಠೋಪಕರಣಗಳು, ಶಾಲಾ ಯುನಿಫಾರಂಗಳು, ಶೂಗಳು ಹೀಗೆ ಪ್ರತಿಷ್ಟೆಯ ಸರಕುಗಳ ಮಾರಾಟ ಮಳಿಗೆಗಳು ಸಾಕಷ್ಟಿದ್ದುವು.
ಇಲ್ಲಿ ನಾನು ವಿವರಿಸಿದ್ದಕ್ಕಿಂತ ಅದೆಷ್ಟೊ ಪಟ್ಟು ಹೆಚ್ಚಿನ ವೈವಿಧ್ಯತೆ ಅಲ್ಲಿತ್ತು. ನನ್ನದು ಕನ್ನಡ ಮಾಧ್ಯಮದ ಶಾಲೆ ಎಂದಾಗ ಅನೇಕರು ಅಚ್ಚರಿಪಟ್ಟರು. ಯಾಕೆ ಕನ್ನಡ? ಎಂದು ಪ್ರಶ್ನೆ ಕೇಳಿದವರು ಅನೇಕರಿದ್ದಾರೆ. “ಮಕ್ಕಳು ಅರ್ಥೈಸಿಕೊಂಡು ಕಲಿಯಬೇಕೆಂಬುದು ನನ್ನ ಸಿದ್ಧಾಂತ. ಪರಿಸರದಲ್ಲಿ ಮಾತಾಡುವ ಭಾಷೆಯಲ್ಲಿ ಕಲಿತರೆ ಅದು ಜ್ಞಾನವಾಗುತ್ತದೆ. ಇಲ್ಲವಾದರೆ ಅದು ತಾತ್ಕಾಲಿಕವಾದ ಮಾಹಿತಿಯಾಗಿ ಮರೆತು ಹೋಗುತ್ತದೆ”. ನನ್ನ ಈ ಸಿದ್ಧಾಂತವನ್ನು ಸತ್ಯವೆಂದು ಅನೇಕರು ಒಪ್ಪಿದ್ದಾರೆ. ಆದರೆ ಆಧುನಿಕ ಯುಗದ ಪ್ರವಾಹದಲ್ಲಿ ತಾವು ಇಂಗ್ಲಿಷ್ ಮಿಡಿಯಂ ಶಾಲೆಯನ್ನು ಸ್ಥಾಪಿಸಿದ್ದಾಗಿ ವಿವರಿಸಿದವರಿದ್ದಾರೆ.
ಫಿನ್‍ಲ್ಯಾಂಡ್‍ನ ಶಿಕ್ಷಣ ಪದ್ಧತಿ ಈಗ ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಫಿನ್ನಿಶ್ ಪದ್ಧತಿಯನ್ನು ವಿವರಿಸಲು ಪ್ರತ್ಯೇಕ ವಿಚಾರಗೋಷ್ಟಿಯೂ ಇತ್ತು. ಅದರ ಯಶಸ್ಸಿನ ಹಿಂದೆ ಅದನ್ನು ಉಚಿತವಾಗಿ ನೀಡುತ್ತಿರುವುದೂ ಒಂದು ಕಾರಣ. ಮಕ್ಕಳಲ್ಲಿರುವ ಪೂರ್ಣ ಪ್ರತಿಭೆಗಳನ್ನು ಹೊರತರಲು ಶಾಲಾ ಪರಿಸರದ ಎಲ್ಲಾ ಮಕ್ಕಳಿಗೂ ಪ್ರವೇಶಾವಕಾಶ ಇರುವುದು ಗುಣಾತ್ಮಕವಾದ ಅಂಶ. ನಮ್ಮಲ್ಲಿಯೂ ಸರಕಾರವು ಅಂತಹ ಒಂದು ಹೆಜ್ಜೆಯನ್ನಿಟ್ಟರೆ ನಮ್ಮ ಮಕ್ಕಳೂ ಗುಣಮಟ್ಟದ ಶಿಕ್ಷಣದ ಭಾಗೀದಾರರಾಗಬಹುದು.
ಏನಿದ್ದರೂ ಭಾರತದಲ್ಲಿ ಈಗ ಒಂದು ವಿರೋಧಾಭಾಸ ಎದುರಾಗಿದೆ. ಸಮಾಜದಲ್ಲಿ ಸರ್ವರಿಗೂ ಉಚಿತವಾದ ಸಮಾನ ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ರೂಪುಗೊಂಡು ಸಾಮಾಜಿಕ ಸಮಾನತೆಯನ್ನು ಸಾಧಿಸುವ ಸಾಧ್ಯತೆ ಇಲ್ಲವಾಗಿದೆ. ಅಷ್ಟರಮಟ್ಟಿಗೆ ಶಿಕ್ಷಣ ಹರಿದು ಹಂಚಲ್ಪಟ್ಟಿದೆ. ಸರಿಯಾಗಿ ಶಿಕ್ಷಣ ನೀಡದ ಸರಕಾರಿ ಶಾಲೆಗಳು, ಸಿಲೆಬಸ್, ಬಾಯಿಪಾಠ, ಪರೀಕ್ಷೆ, ಅಂಕಗಳ ವಿತರಣೆಯೇ ಕಾರ್ಯಸೂಚಿಯಾಗಿರುವ ಇಂಗ್ಲಿಷ್ ಮಿಡಿಯಂ ಶಾಲೆಗಳು, ಡಿಜಿಟಲ್ ಸೌಲಭ್ಯಗಳನ್ನು ಬಳಸಿ ಕಲಿಸುವ ಇಂಗ್ಲಿಷ್ ಶಾಲೆಗಳು, ಆಧುನಿಕ ಸಂಪೂರ್ಣ ಡಿಜಿಟಲೀಕರಣಗೊಂಡ ಶಾಲೆಗಳು, ರಾಜ್ಯಪಠ್ಯ, ಸಿಬಿಎಸ್‍ಸಿ, ಐಸಿಎಸ್‍ಇ, ಒಪನ್ ಸ್ಕೂಲ್ ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳು, ಪಬ್ಲಿಕ್ ಸ್ಕೂಲ್‍ಗಳೆಂಬ ನಾಮಧರಿಸಿದ ಪ್ರೈವೇಟ್ ಶಾಲೆಗಳು ಹೀಗೆ ಪ್ರತಿಷ್ಟೆಯ ಸ್ಪರ್ಧೆಯು  ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತಿವೆ. ಹೆತ್ತವರ ಪೋಷಣೆಯ ಸಾಮರ್ಥ್ಯಕ್ಕನುಸಾರವಾಗಿ ಮಕ್ಕಳಿಗೆ ಶಾಲೆಗಳು ಲಭ್ಯವಾಗುತ್ತವೆ. ಹಾಗಾಗಿ ಈ ದೇಶದ ಎಳೆಯವರಿಗೆ ಸರ್ವ ಸಮಾನತೆಯೆಂಬುದು ಒಂದು ಕನಸು ಮಾತ್ರ.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಅಡಿಕೆ ಬೆಳೆಗಾರರಿಗೆ ನಿಜವಾದ ಸಮಸ್ಯೆ ಯಾವುದು ? ಮುಂದೆ ಇರುವ ಸವಾಲುಗಳು ಯಾವುದು ?

ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…

9 hours ago

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್

ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…

16 hours ago

ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |

ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ  ಹೆಚ್ಚಾಗುವ…

17 hours ago

ಹವಾಮಾನ ವರದಿ | 15-04-2025 | ಕೆಲವು ಕಡೆ ತುಂತುರು ಮಳೆ | ಎ.19 ರಿಂದ ಕೆಲವು ಕಡೆ ಉತ್ತಮ ಮಳೆ ಸಾಧ್ಯತೆ |

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…

20 hours ago

ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ಹರಿಯಾಣ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…

2 days ago