ಈ ಬಾರಿಯ ಹವಾಮಾನ ವೈಪರೀತ್ಯಕ್ಕೆ(Climate change) ಭಾರಿ ಕಾರಣವಾಗಿದ್ದ ಎಲ್ ನಿನೋ(L nino, ನಿಧಾನವಾಗಿ ತನ್ನ ಪವರ್ ಅನ್ನು ಕಳೆದುಕೊಳ್ಳುತ್ತಿದೆ. ಇದೀಗ ಅದಕ್ಕೆ ವಿರುದ್ಧವಾಗಿ ಲಾ ನಿನಾ(La nino) ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ. ಹೀಗಾಗಿ ವಿಶ್ವದಾದ್ಯಂತ ದಾಖಲೆಯ ತಾಪಮಾನ(Temperature) ಮತ್ತು ವಿಪರೀತ ಹವಾಮಾನಕ್ಕೆ ಕಾರಣವಾದ 2023/24ರ ಎಲ್ ನಿನೋ ಹವಾಮಾನ ಪರಿಸ್ಥಿತಿಯು ಈ ವರ್ಷದ ಕೊನೆಯಲ್ಲಿ ಲಾ ನಿನಾ ಪರಿಸ್ಥಿತಿಗಳಿಗೆ ಪರಿವರ್ತನೆಯಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ತಿಳಿಸಿದೆ.
ಜಗತ್ತು 2023-24ರಲ್ಲಿ ಈ ಹಿಂದೆ ಎಂದೂ ಕಾಣದಂಥ ತೀವ್ರ ಉಷ್ಣಾಂಶದ ಏಪ್ರಿಲ್ ತಿಂಗಳಿಗೆ ಮತ್ತು ದಾಖಲೆಯ ಹೆಚ್ಚಿನ ತಾಪಮಾನದ ಸತತ ಹನ್ನೊಂದನೇ ತಿಂಗಳಿಗೆ ಸಾಕ್ಷಿಯಾಗಿದೆ. ಡಬ್ಲ್ಯುಎಂಒ ಪ್ರಕಾರ, ಕಳೆದ 13 ತಿಂಗಳುಗಳಿಂದ ಸಮುದ್ರದ ಮೇಲ್ಮೈ ತಾಪಮಾನವು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಎಲ್ ನಿನೋ ಇದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಪರಿಸ್ಥಿತಿಯಾಗಿದೆ. ಆದರೆ ಈ ಬಾರಿ ಅಸಾಮಾನ್ಯ ತಾಪಮಾನ ಏರಿಕೆ, ಮಾನವ ಚಟುವಟಿಕೆಗಳಿಂದ ಹಸಿರುಮನೆ ಅನಿಲಗಳ ಬಿಡುಗಡೆಯಿಂದ ವಾತಾವರಣ ಮತ್ತು ಸಾಗರದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಶಕ್ತಿಯಿಂದಾಗಿ ಎಲ್ ನಿನೋ ತೀವ್ರವಾಗಿದೆ ಎಂದು ಡಬ್ಲ್ಯುಎಂಒ ಹೇಳಿದೆ.
ಸದ್ಯ ಚಾಲ್ತಿಯಲ್ಲಿರುವ, ಆದರೆ ದುರ್ಬಲಗೊಳ್ಳುತ್ತಿರುವ ಎಲ್ ನಿನೊ ಹವಾಮಾನ ಪರಿಸ್ಥಿತಿಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದ ಲಕ್ಷಾಂತರ ಜನರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾರಣಾಂತಿಕವಾದ ಬಿಸಿಲಿನ ಹೊಡೆತ ಎದುರಿಸುವಂತಾಗಿತ್ತು. ಡಬ್ಲ್ಯುಎಂಒ ಗ್ಲೋಬಲ್ ಪ್ರೊಡಕ್ಷನ್ ಸೆಂಟರ್ಸ್ ಆಫ್ ಲಾಂಗ್-ರೇಂಜ್ ಫೋರ್ ಕಾಸ್ಟ್ನ ಇತ್ತೀಚಿನ ಮುನ್ಸೂಚನೆಗಳ ಪ್ರಕಾರ ಜೂನ್-ಆಗಸ್ಟ್ನಲ್ಲಿ ತಟಸ್ಥ ಪರಿಸ್ಥಿತಿಗಳು ಉಂಟಾಗಬಹುದಾದ ಅಥವಾ ಎಲ್ ನಿನೋ ಲಾ ನಿನಾಗೆ ಪರಿವರ್ತನೆಯಾಗುವ ಸಮಾನ ಸಂಭಾವ್ಯತೆಗಳಿವೆ.
ಲಾ ನಿನಾ ಪರಿಸ್ಥಿತಿಗಳು ಏರ್ಪಡುವ ಸಾಧ್ಯತೆಗಳು ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಶೇಕಡಾ 60 ರಷ್ಟು ಮತ್ತು ಆಗಸ್ಟ್ನಿಂದ ನವೆಂಬರ್ವರೆಗೆ ಶೇಕಡಾ 70 ರಷ್ಟಾಗಿರಲಿದೆ. ಈ ಸಮಯದಲ್ಲಿ ಎಲ್ ನಿನೋ ಮತ್ತೆ ಮರುಕಳಿಸುವ ಸಾಧ್ಯತೆಯು ನಗಣ್ಯ ಎಂದು ಡಬ್ಲ್ಯುಎಂಒ ಹೇಳಿದೆ. ಎಲ್ ನಿನೋ ಭಾರತದಲ್ಲಿ ದುರ್ಬಲ ಮಾನ್ಸೂನ್ ಮಾರುತಗಳು ಮತ್ತು ಶುಷ್ಕ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಹಾಗೂ ಇದಕ್ಕೆ ವಿರುದ್ಧವಾಗಿ ಲಾ ನಿನಾ ಭಾರತದಲ್ಲಿ ಹೇರಳವಾದ ಮಾನ್ಸೂನ್ ಮಳೆಗೆ ಕಾರಣವಾಗುತ್ತದೆ.
ಕಳೆದ ತಿಂಗಳು, ಭಾರತ ಹವಾಮಾನ ಇಲಾಖೆ ಭಾರತದಲ್ಲಿ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಅನುಕೂಲಕರ ಲಾ ನಿನಾ ಪರಿಸ್ಥಿತಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದ ಕೃಷಿ ವಲಯಕ್ಕೆ ಮಾನ್ಸೂನ್ ನಿರ್ಣಾಯಕವಾಗಿದೆ. ನಿವ್ವಳ ಕೃಷಿ ಪ್ರದೇಶದ 52 ಪ್ರತಿಶತದಷ್ಟು ಜನ ಮಾನ್ಸೂನ್ ಮೇಲೆ ಅವಲಂಬಿತರಾಗಿದ್ದಾರೆ. ದೇಶಾದ್ಯಂತ ವಿದ್ಯುತ್ ಉತ್ಪಾದನೆಯ ಹೊರತಾಗಿ ಕುಡಿಯುವ ನೀರಿಗೆ ಅಗತ್ಯವಾದ ಜಲಾಶಯಗಳನ್ನು ಮರುಪೂರಣ ಮಾಡಲು ಕೂಡ ಇದು ನಿರ್ಣಾಯಕವಾಗಿದೆ.
- ಅಂತರ್ಜಾಲ ಮಾಹಿತಿ