ರೈತ ದೇಶದ ಬೆನ್ನೆಲುಬು… ರೈತರೇ ಈ ದೇಶದ ಆಸ್ತಿ.. ಕೃಷಿಯೇ ಉಸಿರು.. ಹೀಗೆಂದು ಹೇಳುವ ಯಾವ ರಾಜಕಾರಣಿಯೂ, ಅಧಿಕಾರಿಯೂ ಈಗ ರೈತರ ಮಾತನ್ನು ಕೇಳುವುದು ಬಿಡಿ, ಅವರ ಸಮಸ್ಯೆ ಏನು ಎಂದು ಕೇಳುತ್ತಿಲ್ಲ. ಚುನಾವಣೆ ಸಮಯ ಬಂದರೆ ಕೃಷಿಕರಿಗೆ ಯಾವತ್ತೂ ಕಷ್ಟವೇ ಆಗಿದೆ. ಚುನಾವಣೆ ಬಂದರೆ ರೈತರಿಗೆ 300 ರೂಪಾಯಿ ವೆಚ್ಚ..!..ಇಂತಹ ಚುನಾವಣೆಯಲ್ಲಿ ಕೃಷಿಕರು ಏಕೆ ಭಾಗವಹಿಸಬೇಕು ಎಂದು ಸ್ವಾಭಿಮಾನಿ ಕೃಷಿಕರ ನಡುವೆ ಚರ್ಚೆ ಆರಂಭವಾಗಿದೆ.
ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಇದೇ ವೇಳೆ ಪ್ರತೀ ಚುನಾವಣೆಯಂತೆ ಈ ಬಾರಿಯ ಚುನಾವಣೆಯಲ್ಲೂ ರೈತರಿಗೆ ಮತ್ತೆ ಸಂಕಷ್ಟ. ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗುತ್ತಿದ್ದಂತೆಯೇ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಕೃಷಿ ರಕ್ಷಣೆಗೆಂದು ಲೈಸನ್ಸ್ ಪಡೆದು ಕೃಷಿಕರು ಬಳಕೆ ಮಾಡುತ್ತಿರುವ ಕೋವಿಯನ್ನು ಡಿಪಾಸಿಟ್ ಇಡಲು ಆದೇಶವಾಗುತ್ತದೆ, ಪೊಲೀಸ್ ಇಲಾಖೆಗಳಿಂದ ಸೂಚನೆ ಬರುತ್ತದೆ, ಒತ್ತಾಯವೂ ಬರುತ್ತದೆ. ಹೀಗೆ ಡಿಪಾಸಿಟ್ ಇಡುವುದಕ್ಕೆ ನಗದು 250-350 ರೂಪಾಯಿವರೆಗೆ ನೀಡಲು ಇರುತ್ತದೆ. ಚುನಾವಣೆಯಲ್ಲಿ ರೈತರ ಹೆಸರಿನಲ್ಲಿ ಗೆಲ್ಲುವ ಯಾರೊಬ್ಬರೂ ರೈತರಿಗೆ ಆಗುವ ಈ ವೆಚ್ಚದ ಬಗ್ಗೆಯೂ ಮಾತನಾಡುವುದಿಲ್ಲ, ರೈತರ ಸಂಕಷ್ಟದ ಬಗ್ಗೆಯೂ ಮಾತನಾಡುತ್ತಿಲ್ಲ. ಕೇಳಿದರೆ, “ಅದು ಕಾನೂನು.. ಎನ್ನುತ್ತಾ ಹ್ಹೆ ಹ್ಹೆ ಎನ್ನುತ್ತಾರೆ…!”.
ಮಾತೆತ್ತಿದ್ದರೆ ರೈತ ಈ ದೇಶದ ಬೆನ್ನೆಲುಬು ಎನ್ನುತ್ತಾರೆ, ರೈತನೇ ಆಸ್ತಿ ಎನ್ನುತ್ತಾರೆ… ರೈತನೇ ಸಲಕವೂ ಎನ್ನುತ್ತಾರೆ, ಚುನಾವಣೆ ಹತ್ತಿರ ಬರುವಾಗ…!. ಆದರೆ ಚುನಾವಣೆ ಬರುವಾಗ, ರೈತ ತನ್ನ ಬೆಳೆ ರಕ್ಷಣೆಗಾಗಿ ಲೈಸನ್ಸ್ ಪಡೆದು ಮಂಗ, ಸೇರಿದಂತೆ ಕಾಡುಪ್ರಾಣಿಗಳನ್ನು ಬೆದರಿಸಲು ಉಪಯೋಗಿಸುವ ಕೋವಿಯನ್ನೂ ಡಿಪಾಸಿಟ್ ಇಡಲು ಸೂಚನೆಯಾಗುತ್ತದೆ. ಈಗ ದೇಶದ ಬೆನ್ನೆಲುಬು ಎಂದು ತಲೆಬಾಗುವ ಯಾವ ರಾಜಕಾರಣಿಯೂ ಮಾತನಾಡುವುದಿಲ್ಲ. ಬೆನ್ನೆಲುಬು ಮುರಿದು ಮಾಡಿರುವ ಕೃಷಿ ನಾಶವಾಗುತ್ತದೆ, ಡಿಪಾಸಿಟ್ ಇಡಲೂ ಹಣ ನೀಡಬೇಕು… ಈಗ ರೈತರ ಸಂಕಷ್ಟದ ಬಗ್ಗೆಯೂ ಹೇಳುವುದಿಲ್ಲ.. ಕೇಳುವುದೂ ಇಲ್ಲ. ಅಂದರೆ ಈ ದೇಶದಲ್ಲಿ ರೈತ ಕಳ್ಳನೇ…? ಈ ದೇಶದಲ್ಲಿ ರೈತನೇ ಗಲಭೆಕೋರನೇ…? ರೈತನೇ ಕ್ರಿಮಿನಲ್ ಕೇಸು ಉಳ್ಳವನೇ..? ಶಾಂತಿ ಭಂಗ ಉಂಟು ಮಾಡುವವನೇ..? ಚುನಾವಣೆಯ ಸಮಯದಲ್ಲಿ ರೈತನೇ ಈ ದೇಶದಲ್ಲಿ ಗಲಭೆ ಮಾಡುವವನೇ..?, ಇಂದು ಪರಿಸ್ಥಿತಿ ಹಾಗಾಗಿದೆ. ರೈತನೇ ಈ ದೇಶದಲ್ಲಿ ಕಳ್ಳ ಎನ್ನುವ ಹಾಗಾಗಿದೆ. ಈ ಕಾರಣದಿಂದಲೇ ಚುನಾವಣೆಯಲ್ಲಿ ಮತದಾನ ಮಾಡದೇ ಇದ್ದರೆ ಹೇಗೆ ..? ಎಂದು ಕೃಷಿಕರ ನಡುವೆ ಚರ್ಚೆ ಆರಂಭವಾಗಿದೆ.
ಕಳೆದ ಕೆಲವು ವರ್ಷಗಳಿಂದ ಕೃಷಿಕರು ಚುನಾವಣೆಯ ಸಮಯದಲ್ಲಿ ಕೋವಿ ಡಿಪಾಸಿಟ್ ಇಡುವುದರ ಬಗ್ಗೆ ಮಾತನಾಡುತ್ತಿದ್ದಾರೆ, ಕ್ರಿಮಿನಲ್ ಹಿನ್ನಲೆಯುಳ್ಳವರ ಕೋವಿ ಡಿಪಾಸಿಟ್ ಇರಿಸಲು ಸೂಚನೆ ನೀಡಿ, ಸಾಮಾನ್ಯ ರೈತರ ಕೋವಿಯನ್ನು ಡಿಸಾಟಿಟ್ ಇಡುವುದಕ್ಕೆ ವಿನಾಯಿತಿ ನೀಡಿ , ಕೇಸು ಇದ್ದವರ ಆಯುಧಗಳನ್ನು ಡಿಪಾಸಿಟ್ ಇಡಲು ಹೇಳಿ… ಸಾಮಾನ್ಯ ರೈತನದ್ದು ಏಕೆ ಎನ್ನುತ್ತಿದ್ದಾರೆ. ಇದಕ್ಕೆ ಯಾವುದೇ ಸ್ಪಂದನೆ ಇಲ್ಲದೇ ಇದ್ದಾಗ ನ್ಯಾಯಾಲಯದ ಮೊರೆಯೂ ಹೋಗಿದ್ದಾರೆ. ಕೇರಳದಲ್ಲಿ ನ್ಯಾಯಾಲಯವು ವಿನಾಯಿತಿಗೆ ಸೂಚಿಸಿದೆ, ಕರ್ನಾಟಕದಲ್ಲಿ ಸ್ಕ್ರೀನಿಂಗ್ ಕಮಿಟಿ ನಿರ್ಧಾರ ಮಾಡಲು ಹೇಳಿದೆ. ಆದರೆ ಇದೀಗ ಈ ಎಲ್ಲಾ ಸಮಿತಿಗಳು ಇದ್ದರೂ ರೈತರಿಗೆ ಕೋವಿ ಡಿಪಾಸಿಟ್ ನಿಂದ ವಿನಾಯಿತಿ ಇಲ್ಲ..!. ಈಗ 250-350 ರೂಪಾಯಿ ನೀಡಿ ಡಿಪಾಸಿಟ್ ಇಡಬೇಕಾಗಿದೆ. ದ ಕ ಜಿಲ್ಲೆಯಲ್ಲಿ ಕೆಲವೇ ಕೆಲವು ಕೃಷಿಕರಿಗೆ ವಿನಾಯಿತಿ ಸಿಕ್ಕಿದ್ದರೆ, ಅದಕ್ಕಿಂತ ಹೆಚ್ಚಾಗಿ ಇತರ ಜನರಿಗೆ ಆತ್ಮರಕ್ಷಣೆಗೆ ವಿನಾಯಿತಿ ಸಿಕ್ಕಿದೆ…!. ಅಂದರೆ ಈ ದೇಶದಲ್ಲಿ ರೈತ ವಿಶ್ವಾಸಕ್ಕೆ ಅನರ್ಹ ಎಂಬುದರ ಸೂಚನೆ ಇದುವೇ…?. ಅಂದ ಹಾಗೆ, ರೈತನಲ್ಲಿ ಕೋವಿ ಮಾತ್ರವಲ್ಲ ಹಾರೆ, ಗುದ್ದಲಿ, ಕತ್ತಿಗಳೂ ಇವೆ. ಚುನಾವಣೆಯ ಶಾಂತಿಯ ದೃಷ್ಟಿಯಿಂದ ಇದನ್ನೂ ಡಿಪಾಸಿಟ್ ಇಡುವಂತೆ ಸೂಚಿಸಿದರೆ ಇನ್ನೂ ಉತ್ತಮ ಎನ್ನುವ ವ್ಯಂಗ್ಯ ಈಗ ಶುರುವಾಗಿದೆ. ಅಚ್ಚರಿ ಎಂದರೆ ಕೇಸು ಇದ್ದ ಕೆಲವರಿಗೆ ಆಯುಧ ಡಿಪಾಸಿಟ್ ಇಡಲು ವಿನಾಯಿತಿ ಸಿಕ್ಕಿದೆ…!
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಇದಕ್ಕಾಗಿ ಏನೆಲ್ಲಾ ಕ್ರಮಗಳು ಅದನ್ನು ಮಾಡಲೇಬೇಕು. ಅದು ಆಡಳಿತದ ಜವಾಬ್ದಾರಿಯೂ ಹೌದು. ಇದನ್ನು ಕೃಷಿಕರೂ ಒಪ್ಪುತ್ತಾರೆ. ಆದರೆ ಯಾವ ಕ್ರಿಮಿನಲ್ ಹಿನ್ನೆಲೆಯೂ ಇಲ್ಲದ ಕೃಷಿಕರನ್ನೂ ಸಂಶಯದ ದೃಷ್ಟಿಯಿಂದ ನೋಡುವುದೇಕೆ..?, ಅಷ್ಟೇ ಅಲ್ಲ, ಚುನಾವಣೆಯ ಸಮಯದ ಹೊರತಾದ ಸಂದರ್ಭದಲ್ಲಿ ಒಬ್ಬ ಕೃಷಿಕ ತನ್ನ ಕೃಷಿ ರಕ್ಷಣೆಗಾಗಿ ಉಪಯೋಗಿಸುವ ಕೋವಿಯಿಂದ ಗಲಾಟೆ ಮಾಡಿರುವ, ದಾಖಲಾಗಿರುವ ಪ್ರಕರಣ ಎಷ್ಟಿದೆ..? ಪ್ರತೀ ಸಂದರ್ಭದಲ್ಲೂ ಸಾಮಾನ್ಯವಾಗಿ ಈ ಸಂಖ್ಯೆಗಳನ್ನೂ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಹಾಗೊಂದು ವೇಳೆ ಒಂದು ವೇಳೆ ಚುನಾವಣೆಯ ಸಮಯದಲ್ಲಿ ಅಶಾಂತಿಯ ಕೃತ್ಯ ಕೃಷಿಕನಿಂದ ನಡೆದರೆ, ಅಂತಹ ಕೃಷಿಕರ ಆಯುಧ ಪರವಾನಿಗೆಯನ್ನು ರದ್ದು ಮಾಡುವ ಅವಕಾಶವೂ ಇರುವಾಗ ಏಕೆ ಗೊಂದಲ..?.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ರೈತರು ಮಾತ್ರಾ ಟಾರ್ಗೆಟ್ ಆಗುವುದು ಏಕೆ, ಅಷ್ಟೇ ಅಲ್ಲ ಹಣವೂ ಪಾವತಿ ಮಾಡಿ, ರೈತರ ಸಂಕಷ್ಟದ ಬಗ್ಗೆ ಮಾತನಾಡದ ಅದೇ ರಾಜಕಾರಣಿಗಳಿಗೆ, ಪಕ್ಷಗಳಿಗೆ ಮತ ನೀಡುವುದಾದರೂ ಏಕೆ..? ಇದು ಈಗ ಕೃಷಿಕರ ನಡುವೆ ಇರುವ ಚರ್ಚೆ.
ಯಾವುದೇ ಕಾನೂನುಗಳು, ಯಾವುದೇ ಆದೇಶಗಳು ಜನರಿಂದ ಆಯ್ಕೆಯಾದ, ರೈತರಿಂದ ಆಯ್ಕೆಯಾದ ಸಮಿತಿಗಳೇ ರಚನೆ ಮಾಡುತ್ತವೆ. ಕಾನೂನು ರಚನೆಗಳಲ್ಲಿ ವ್ಯತ್ಯಾಸ ಮಾಡಲೂ ಅವಕಾಶ ಇದೆ. ಹೀಗಿರುವಾಗ ಪ್ರತೀ ಚುನಾವಣೆಯ ಸಮಯದಲ್ಲಿ ರೈತರನ್ನು ಕಳ್ಳರನ್ನಾಗಿಸುವುದು ಏಕೆ? ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಬೇಕಾದ ಪ್ರಶ್ನೆಯಾಗಿದೆ. ಆದರೆ ರೈತನ ಧ್ವನಿ ಕ್ಷೀಣವಿದೆ. ಪ್ರಭುತ್ವದ ಧ್ವನಿ ಜೋರಾಗಿದೆ ಅಷ್ಟೇ…!. ರೈತರ ಓಟು ಕೇಳುವ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ, ಸ್ವಾಭಿಮಾನಿ ರೈತರು ಈ ಬಗ್ಗೆ ಮತ ಕೇಳಲು ಬರುವ ಪಕ್ಷಗಳಲ್ಲಿ ಕೇಳುವ ಹಾಗೆ ಆಗಲಿ.
ಕೋವಿ ಹೊಂದಿರುವ ಕೃಷಿಕರುಗಳಲ್ಲಿ ದಕ್ಷಿಣ ಕನ್ನಡ, ಕೊಡಗು,ಉಡುಪಿ, ಚಿಕ್ಕಮಗಳೂರು,ಶಿವಮೊಗ್ಗ, ಉತ್ತರಕನ್ನಡ ಭಾಗಶ: ಕೃಷಿಕರು ಹೆಚ್ಚಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೃಷಿಕರಿಗೆ ವಿನಾಯಿತಿ ಸಿಕ್ಕಿದೆ. ಸುಮಾರು 700 ಕ್ಕೂ ಹೆಚ್ಚು ಮಂದಿ ಕೋವಿ ಠೇವಣಾತಿಯಿಂದ ವಿನಾಯಿತಿ ಬೇಕು ಎಂದು ಮನವಿ ಮಾಡಿದ್ದರು, ಅದರಲ್ಲಿ ಹೆಚ್ಚಿನವರು ಸ್ಕ್ರೀನಿಂಗ್ ಕಮಿಟಿಗೆ ಅರ್ಜಿಯನ್ನೂ ಹಾಕಿದ್ದರು. ಬಹುತೇಕ ಎಲ್ಲರದೂ ತಿರಸ್ಕೃತವಾಗಿದೆ.
ಅಲ್ಲದೆ, ಚುನಾವಣೆ ಸಂದರ್ಭಗಳಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಗಳು ಚುನಾವಣಾ ಕಾರ್ಯ ನಿಮಿತ್ತ ವಿವಿಧ ಕರ್ತವ್ಯಗಳಲ್ಲಿ ನಿಯೋಜನೆಗೊಂಡಿರುವುದರಿಂದ ಮತ್ತು ಬಂದೋಬಸ್ತ್ ಮುಂತಾದ ವಿಚಾರದಲ್ಲಿ ಮಗ್ನರಾಗಿರುವುದರಿಂದ ಪ್ರತಿಯೊಬ್ಬ ಪರವಾನಿಗೆದಾರರನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗದೇ ಇರಬಹುದು ಹಾಗೂ ಗಲಭೆಗಳು ನಡೆದಲ್ಲಿ ನಿಯಂತ್ರಿಸಲು ಸಾಧ್ಯವಾಗದೆ ಕಾನೂನು ಸುವ್ಯವಸ್ಥೆಗೆ ತೊಡಕಾಗಿ ಪರಿಸ್ಥಿತಿಯು ಹತೋಟಿ ಮೀರಿ ಹೋಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಸಾಧಕ ಭಾದಕಗಳ ಕುರಿತು ಚರ್ಚಿಸಿ ಯಾವುದೇ ಗಲಭೆ/ದೊಂಬಿಗಳಿಗೆ ಅವಕಾಶ ನೀಡದೆ ಆ ಮೂಲಕ ಚುನಾವಣೆಯು ಶಾಂತಿಯುತವಾಗಿ ನಡೆಸುವಂತಾಗಲು ಮುಂಜಾಗ್ರತಾ ಕ್ರಮವಾಗಿ ಆತ್ಮ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವಂತಹ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವುದು ಸೂಕ್ತವಾಗಿರುತ್ತದೆ. ಚುನಾವಣಾ ಸಂದರ್ಭಗಳಲ್ಲಿ ಪೊಲೀಸ್ ಪಡೆಗಳು ಹಾಗೂ ಪ್ಯಾರಾ ಮಿಲಿಟರಿ ಪಡೆಗಳು ಭದ್ರತೆಯ ವಿಷಯದಲ್ಲಿ ಪಾಲ್ಗೊಳ್ಳುವುದರಿಂದ ಸಾಕಷ್ಟು ಪೊಲೀಸ್ ಸಿಬ್ಬಂದಿಗಳು ಚುನಾವಣಾ ಕಾರ್ಯ ನಿಮಿತ್ತ ಜಿಲ್ಲೆಯಾದ್ಯಂತ ಚುರುಕಾಗಿ ಓಡಾಟ ನಡೆಸುತ್ತಿರುವುದರಿಂದ ಇಡೀ ಜಿಲ್ಲೆಯಾದ್ಯಂತ ಭದ್ರತೆಯ ಭಾವನೆ ಇರುವುದರಿಂದ ಆತ್ಮ / ಕೃಷಿ ರಕ್ಷಣೆಗಾಗಿ ಆಯುಧ ಪರವಾನಿಗೆ ಪಡೆದವರಿಗೆ ಭದ್ರತೆಯ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆಯಾಗಿರುತ್ತದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…