ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಕುಜುಂಬಾರ್ ಎಂಬಲ್ಲಿ ಸೇತುವೆ ನಿರ್ಮಿಸುವಂತೆ ಬೇಡಿಕೆ ಈಡೇರಿಸಿದ್ದರೂ, ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಆ ಭಾಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದೆ, ಹೊಳೆಗೆ ಮರದ ಸಂಕ ನಿರ್ಮಿಸಲು ಶ್ರಮಸೇವೆ ನಡೆಸಿದ ಘಟನೆ ನಡೆದಿದೆ.
ಕಡಬ ತಾಲೂಕಿನ ಕುಜುಂಬಾರು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ಬೇಡಿಕೆ, ಮನವಿ ಸಲ್ಲಿಸಿದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಇಲ್ಲಿನ ಜನ ಸೇತುವೆ ನಿರ್ಮಿಸದ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರದೊಂದಿಗೆ ಬ್ಯಾನರ್ ಅಳವಡಿಸಿದ್ದರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಆಗಮಿಸಿ ಜನರ ಮನವೊಲಿಸಿದ್ದರು. ಸೇತುವೆ ನಿರ್ಮಿಸದಿದ್ದಲ್ಲಿ ಮತದಾನ ಬಹಿಷ್ಕಾರ ಎಂಬ ನಿರ್ಧಾರಕ್ಕೂ ಅಂದೇ ಬಂದಿದ್ದರು.
ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ಭರವಸೆ ಸಿಗದ ಹಿನ್ನಲೆಯಲ್ಲಿ ಕುಜುಂಬಾರು ಪರಿಸರದ ಸುಮಾರು 30 ಮನೆಗಳ 80 ಕ್ಕೂ ಅಧಿಕ ಜನರು ಮತ ಚಲಾಯಿಸಿಲ್ಲ. ಬದಲಿಗೆ, ಹೊಳೆಗೆ ಸಂಪರ್ಕ ಕಲ್ಪಿಸುವ ಪಾಲ ನಿರ್ಮಾಣದಲ್ಲಿ ಶ್ರಮಸೇವೆ ನಡೆಸಿ ಸಂಬಂಧಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಲವು ವರ್ಷಗಳಿಂದ ಬೇಡಿಕೆ ಇರಿಸಿದ್ದೇವೆ. ಆದರೂ ಸ್ಪಂಧಿಸುತ್ತಿಲ್ಲ, ಭರವಸೆ ನೀಡಿ ಕೈತೊಳೆದುಕೊಳ್ಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಂದು ವಿಧಾನ ಸಭಾ ಚುನಾವಣೆ ಬಹಿಷ್ಕರಿಸಿದ್ದೇವೆ. ಮುಂದೆಯೂ ಸೇತುವೆ ಆಗದಿದ್ದರೆ, ಎಂಪಿ ಚುನಾವಣೆಯನ್ನು ಬಹಿಷ್ಕಾರಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನಿಮ್ಮ ಓಟು ನಮಗೆ ಅಗತ್ಯವಿಲ್ಲ ಎಂಬ ಮಾತನ್ನೂ ನಾವು ಕೇಳಬೇಕಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

