ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಇದೀಗ ಸಾಮಾಜಿಕ ಜಾಲತಾಣಗಳ ಮೇಲೂ ಇಲಾಖೆಗಳು ಕಣ್ಣಿಟ್ಟಿದೆ. ಸಿಕ್ಕಾಪಟ್ಟೆ ಪೋಸ್ಟ್ ಮಾಡುವವರು ಇದನ್ನು ಗಮನಿಸಿಕೊಳ್ಳುವುದು ಉತ್ತಮ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಕ್ಷೇಪಾರ್ಹ ಪೊಸ್ಟ್‌ಗಳನ್ನು ಅಥವಾ ಯಾವುದೇ ಕಾನೂನುಬಾಹಿರ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ಹೊರಡಿಸಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ, ಜಿಲ್ಲಾ ಪೊಲೀಸ್ ಕಚೇರಿಯಲ್ಲಿ, ಪುತ್ತೂರು ಮತ್ತು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರುಗಳ ಕಚೇರಿಗಳಲ್ಲಿ ಮಾನಿಟರ್ ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗುವಂತಹ ಪೋಸ್ಟ್‌ಗಳು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವ ಸುದ್ದಿ ಹಾಕುವುದು , ಸುಳ್ಳು ಸುದ್ದಿ ಹರಡುವುದು, ಅಶ್ಲೀಲ, ಅಸಭ್ಯ ವಿಷಯಗಳನ್ನು ಒಳಗೊಂಡ ಪೋಸ್ಟ್ , ಯಾವುದೇ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಚಾರಿತ್ರ್ಯಹರಣ ಹಾಗೂ ಮಾನಹಾನಿ ಉಂಟಾಗುವಂತಹ ಪೋಸ್ಟ್ ಗಳನ್ನು ಹಾಕುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇಂತಹ ಯಾವುದೇ ಕಾನೂನುಬಾಹಿರ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.