ರಾಜ್ಯ ವಿಧಾನಸಭೆಗೆ ಚುನಾವಣೆಯ ತಯಾರಿ ಆರಂಭವಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ನಿಧಾನವಾಗಿ ಚುನಾವಣಾ ಘೋಷಣೆಗಳೂ ಆರಂಭವಾಗಿವೆ. ಕೆಲವು ಕಡೆ ಟೆಂಡರ್ ತಯಾರಿಯೂ ನಡೆದಿದೆ. ಈಗ ಜನರೂ ಯೋಚಿಸುತ್ತಿದ್ದಾರೆ, ಟೆಂಡರ್ ಅಲ್ಲ, ಕಾಮಗಾರಿಯೇ ಆರಂಭವಾಗಬೇಕು ಎನ್ನುತ್ತಿದ್ದಾರೆ. ಹೀಗಾಗಿ ಈ ಬಾರಿ ಚುನಾವಣಾ ಟ್ರೆಂಡ್ ಈಗಲೇ ಸಿದ್ಧವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಬಹುಮತದಿಂದ ಅಧಿಕಾರ ಹಿಡಿಯಬೇಕೆಂದು ಹವಣಿಕೆಯಲ್ಲಿದ್ದರೆ, ಕಾಂಗ್ರೆಸ್ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿದೆ. ಈ ನಡುವೆ, ಈ ಬಾರಿ ಎಎಪಿ ಕೂಡಾ ರಾಜಕೀಯ ವೇದಿಕೆ ಸಿದ್ಧ ಮಾಡಿದೆ.
ಈಗಿನ ರಾಜಕೀಯ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ರಾಜ್ಯ ಬಿಜೆಪಿಯಲ್ಲಿನ ಗೊಂದಲ ಹಾಗೂ ಒಳಗೊಳಗೇ ಇರುವ ಅಸಮಾಧಾನಗಳೂ ಈ ಬಾರಿ ಬಹುದೊಡ್ಡ ಹೊಡೆತ ನೀಡಲಿದೆ. ದಕ್ಷಿಣ ಕನ್ನಡದಲ್ಲೂ ಆಂತರಿಕ ಅಸಮಾಧಾನಗಳು ಹಿಂದಿಗಿಂತಲೂ ಈ ಬಾರಿ ಅಧಿಕವಾಗಿದೆ ಎನ್ನುವುದು ಸಮೀಕ್ಷಾ ವರದಿ. ಈ ಅಸಮಾಧಾನಗಳನ್ನು ಯಾವ ಪಕ್ಷಗಳು ಸೆಳೆದುಕೊಳ್ಳುತ್ತವೆ ಎನ್ನುವುದರಲ್ಲಿ ಗೆಲುವಿನ ಲೆಕ್ಕಾಚಾರಗಳು ಸಿದ್ಧವಾಗುತ್ತವೆ ಎಂದು ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿಸಿದೆ.
ಇದೀಗ ಆಗಸ್ಟ್ ತಿಂಗಳಲ್ಲಿ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈಗಿನ ಸ್ಥಿತಿಯಂತೆ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಲಿದೆ. ಕರಾವಳಿ ಜಿಲ್ಲೆಯಲ್ಲಿ ಕೂಡಾ ಬಿಜೆಪಿಗೆ ಹಿನ್ನಡೆಯಾಗಲಿದೆ. ಎಲ್ಲೆಡೆಯೂ ಆಂತರಿಕ ಕಲಹಗಳು ಹೆಚ್ಚಾಗಿವೆ ಎಂಬುದು ಸಮೀಕ್ಷಾ ವರದಿ. ರಾಜ್ಯದಲ್ಲಿ ಕಾಂಗ್ರೆಸ್ 95-105 ರ ನಡುವೆ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಕಂಡುಬಂದಿದೆ. ಬಿಜೆಪಿ 70ರಿಂದ 80 ಸ್ಥಾನಕ್ಕೆ ಕುಸಿಯಲಿದೆ. ಜೆಡಿಎಸ್ 20 ಸ್ಥಾನ ಪಡೆಯಲಿದೆ ಎನ್ನುವ ಲೆಕ್ಕಾಚಾರದ ಫಲಿತಾಂಶ ಸಿಕ್ಕಿದೆ ಎನ್ನಲಾಗಿದೆ. ಉಳಿದ 20 ರಿಂದ 30 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನ ಆಮ್ ಆದ್ಮಿ ಪಕ್ಷ ಸೆಳೆಯಲಿದೆ. ಜೊತೆಗೆ ಕೆಆರ್ ಎಸ್ ಹಾಗೂ ಪಕ್ಷೇತರರು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.
ರಾಜ್ಯ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನಕ್ಕೆ ಬಹುಮುಖ್ಯವಾಗಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪ್ರವಾಹ ಸಂದರ್ಭ ನಿರ್ಲಕ್ಷ್ಯ ಸೇರಿದಂತೆ ಹಲವು ಸಂಗತಿಗಳನ್ನು ಜನರು ತಿಳಿಸಿದ್ದರು. ಆದರೆ ರಾಜ್ಯ ಬಿಜೆಪಿಯಲ್ಲಿ ಮಾತ್ರಾ ಸಮಾಧಾನಹೊಂದಿರುವ ಜನರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರವಾದ ಅಭಿಪ್ರಾಯ ಹೊಂದಿರುವುದು ಸಮೀಕ್ಷಾ ವರದಿ ಹೇಳಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತವಾಗಿತ್ತು.ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಜನರು ಪರ್ಯಾಯ ರಾಜಕೀಯ ಶಕ್ತಿಗಳ ಕಡೆಗೂ ಆಸಕ್ತರಾಗಿರುವುದು ಗಮನಕ್ಕೆ ಬಂದಿದೆ.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಪರವಾಗಿ ಹಲವಾರು ಮಂದಿ ಧನಾತ್ಮಕ ಅಭಿಪ್ರಾಯ ಮಂಡಿಸಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷವು ಬೆಂಗಳೂರು, ಮಂಗಳೂರು ಸೇರಿಂದತೆ ವಿವಿದೆಡೆ ಸಂಘಟನೆಯನ್ನು ಬಲಗೊಳಿಸುತ್ತಿದೆ. ಹಲವು ಬಾರಿ ಆಂತರಿಕ ಸಮೀಕ್ಷೆಯನ್ನೂ ನಡೆಸಿ ಜನರ ನಾಡಿ ಮಿಡಿತ ತಿಳಿದಿದೆ. ಹೀಗಾಗಿ ಈ ಬಾರಿ ಆಮ್ ಆದ್ಮಿ ಕೂಡಾ ರಾಜ್ಯದಲ್ಲಿ ಗಟ್ಟಿಯಾದ ರಾಜಕೀಯ ವೇದಿಕೆ ಸೃಷ್ಟಿ ಮಾಡುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತನ್ನು ನೀಡುವ ಭರವಸೆ ನೀಡುತ್ತಿದೆ. ಹೀಗಾಗಿ ಕನಿಷ್ಟ 30 ಸ್ಥಾನ ಪಡೆಯಲು ಪ್ರಯತ್ನ ನಡೆಸುತ್ತಿದೆ.