ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ವಿವಿಧ ಕಾರಣಗಳನ್ನು ಹೇಳಲಾಗುತ್ತಿದೆ. ಈ ನಡುವೆ ಸ್ವಪಕ್ಷದ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಪಕ್ಷದ ಸೋಲಿನ ಹಿಂದಿನ ಹಲವು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿ ಕೈಗೊಂಡ ತಪ್ಪು ನಿರ್ಧಾರ, ಗುಜರಾತ್ ಮಾದರಿ ಪ್ರಯೋಗ ಹಾಗೂ ಮೀಸಲಾತಿ ಪರಿಷ್ಕರಣೆಯಿಂದ ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಖಾಸಗಿ ವಾಹಿನಿ ಟಿವಿ9 ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳು ನಮ್ಮನ್ನು ಹಾಳುಮಾಡಿದವು. ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದರು. ಅನ್ನಭಾಗ್ಯ ಅಕ್ಕಿ 5 ಕೆಜಿಗೆ ಸೀಮಿತಗೊಳಿಸಿದ್ದರಿಂದ ಬಿಜೆಪಿ ಸೋತಿದೆ. ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯಿತು ಎಂದು ಜನರು ಹೇಳುತ್ತಿದ್ದರು. ಆವಾಗಲೇ ನಮಗೆ ಸೋಲಾಗಿಯಿತು ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಹಿಂದೆ ಸರಿಸಿದ್ದೇ ದೊಡ್ಡ ತಪ್ಪು ಎಂದು ಹೇಳಿದ ರೇಣುಕಾಚಾರ್ಯ, ತನ್ನ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಮಾಡಿದ ಕೆಲಸಕ್ಕೆ ಈ ಸೋಲು ತೀವ್ರ ಬೇಸರವನ್ನು ತಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿಯಲ್ಲಿ ಜಾತಿ ಸಮೀಕರಣ ಆಗಲಿಲ್ಲ. ಕಾಂಗ್ರೆಸ್ ದಲಿತರಿಗೆ ಮಲ್ಲಿಕಾರ್ಜುನ ಖರ್ಗೆ, ಕುರುಬ ಸಮಾಜಕ್ಕೆ ಸಿದ್ದರಾಮಯ್ಯ, ವಾಲ್ಮೀಕಿ ಸಮಾಜಕ್ಕೆ ಸತೀಶ್ ಜಾರಕಿಹೊಳಿ ನಾಯಕರಿದ್ದಾರೆ. ಆದರೆ ಇಂತಹ ಪ್ಲಾನ್ ಬಿಜೆಪಿಯಲ್ಲಿ ಮಾಡಲೇ ಇಲ್ಲ ಎಂದರು.