ಕೊರೋನಾ ಸಂಕಷ್ಟದಿಂದ ಹೊರ ಬರಲಾಗದ ಜನರಿಗೆ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವಾಗಲೇ ರಾಜ್ಯ ಸರಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಎಂದು ಆರೋಪಿಸಿದರು.
ಅವರು ಸೋಮವಾರ ಮಂಗಳೂರು ನಗರದ ಬಿಜೈ ಬಳಿ ಇರುವ ಮೆಸ್ಕಾಂ ಕೇಂದ್ರ ಕಚೇರಿ ಎದುರು ಡಿವೈಎಫ್ಐ, ಎಸ್ಎಫ್ಐ ಮತ್ತು ಜೆಎಂಎಸ್ ಸಂಘಟನೆಗಳ ಜಂಟಿ ಸಹಭಾಗಿತ್ವದಲ್ಲಿ ವಿದ್ಯುತ್ ದರ ಏರಿಕೆ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಹೋಗಿದೆ ಜನಸಾಮಾನ್ಯರ ನೈಜ ಸಮಸ್ಯೆಗಳ ಪರಿಹಾರ ಮಾಡದೆ ಜಾತಿ ಧರ್ಮದ ಹೆಸರಲ್ಲಿ ಗಲಾಟೆ ಹಚ್ಚಲು ಪ್ರಚೋದನೆ ಕೊಡುತ್ತಿದೆ. ಜನರನ್ನು ಭಾವನಾತ್ಮಕವಾಗಿ ವಿಂಗಡಿಸಿ ಜನರ ಬದುಕನ್ನು ನರಕಕ್ಕೆ ತಳ್ಳುತ್ತಿದೆ ಎಂದು ಅವರು ಟೀಕಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ರಾಜ್ಯ ಸರಕಾರ ಪ್ರತಿ ಯುನಿಟಿಗೆ 0.50ಪೈಸೆಯಷ್ಟು ಏರಿಸಿದೆ. ಮೆಸ್ಕಾಂ ಇಲಾಖೆ ಈ ಹಿಂದೆ ಫೆಬ್ರವರಿಯಲ್ಲಿ 2021-22 ಅವಧಿಯ ಆರ್ಥಿಕ ವರುಷದಲ್ಲಿ 943 ಕೋಟಿ ಆದಾಯ ಕೊರತೆ ನೀಗಿಸಲು 1.67 ರೂ ಸುಂಕವನ್ನು ಏರಿಕೆ ಮಾಡಿತ್ತು. ಈಗ ಮತ್ತೆ ರಾಜ್ಯದಲ್ಲಿ ಏರಿಕೆ ಮಾಡಲಾಗುತ್ತಿದೆ ಇದು ತೀರಾ ಅನ್ಯಾಯ. ಮೆಸ್ಕಾಂ ರಾಜ್ಯದಲ್ಲೇ ಅತ್ಯಧಿಕ ಲಾಭಧಾಯಕ ಸಂಸ್ಥೆ ಆಗಿದ್ದರೂ ಈ ಇಲಾಖೆಯಲ್ಲಿರುವ 4035 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಸಲು ಇಂಧನ ಸಚಿವ ಸುನಿಲ್ ಕುಮಾರ್ ವಿಫಲರಾಗಿದ್ದಾರೆ. ದ.ಕ ಜಿಲ್ಲೆಯೊಂದರಲ್ಲೇ 1424 ಹುದ್ದೆ ಖಾಲಿ ಬಿದ್ದಿದೆ ಎಂದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಭಾರತಿ ಬೋಳಾರ ಮಾತನಾಡಿದರು. ಡಿವೈಎಫ್ಐ ಮುಖಂಡರಾದ ಮನೋಜ್ ವಾಮಂಜೂರ್, ಸುನಿಲ್ ತೇವುಲ, ರಫೀಕ್ ಹರೇಕಳ, ರಜಾಕ್ ಮುಡಿಪು, ಹನೀಫ್ ಬೆಂಗರೆ, ತಯ್ಯೋಬ್ ಬೆಂಗ್ರೆ, ಸಲೀಮ್ ಶಾಡೋ, ಜಗದೀಶ್ ಬಜಾಲ್, ಜಯಲಕ್ಷ್ಮೀ, ಅಸುಂತಾ ಡಿಸೋಜ, ಪ್ರಮಿಳಾ ದೇವಾಡಿಗ, ವಿದ್ಯಾರ್ಥಿ ಮುಖಂಡರಾದ ವಿನತ್, ಮಾಧುರಿ ಬೇಳಾರ ಮುಂತಾದವರು ಉಪಸ್ಥಿತರಿದ್ದರು. ನವೀನ್ ಕೊಂಚಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ, ನಿತಿನ್ ಕುತ್ತಾರ್ ವಂದಿಸಿದರು.