ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

September 25, 2026
7:14 PM
ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ ಹೊತ್ತುಕೊಂಡು ಹೋಗುವುದರಿಂದ ಸಣ್ಣ ಸಂಗತಿಗಳೂ ದೊಡ್ಡ ಸಮಸ್ಯೆಗಳಾಗಬಹುದು. ಹಿಂದಿನ ಅನುಭವ ಪಾಠವಾಗಲಿ, ಶಿಕ್ಷೆಯಾಗಬಾರದು; ಅಗತ್ಯವಿಲ್ಲದ ಭಾವನಾತ್ಮಕ ಬ್ಯಾಗೇಜ್‌ ಇಳಿಸಿದಾಗ ಬದುಕಿನ ಮುಂದಿನ ಹೆಜ್ಜೆ ಹಗುರವಾಗಬಹುದು.

ಪ್ರತಿಯೊಬ್ಬರೂ ತಮ್ಮದೇ ಆದ “ಬದುಕಿನ ಬ್ಯಾಗೇಜು” ಹೊತ್ತುಕೊಂಡೇ ನಡೆಯುತ್ತಾರೆ. ಆದರೆ ಬದುಕು ಮುಂದೆ ಸಾಗಬೇಕಾದರೆ, ಕೆಲವು ಹೊರೆಗಳನ್ನು ಕೆಲವೊಮ್ಮೆ ಇಳಿಸಲೇಬೇಕು.

ಮನಸ್ಸಿನೊಳಗೆ ಉಳಿಯುವ ನೋವುಗಳು, ಹಳೆಯ ಸಂಬಂಧಗಳ ಗಾಯಗಳು, ತಿರಸ್ಕಾರಗಳು, ಅವಮಾನಗಳು, ಈಡೇರದ ನಿರೀಕ್ಷೆಗಳು, ಯಾರೋ ಆಡಿದ ಒಂದು ಮಾತು, ಕಳೆದುಕೊಂಡ ಅವಕಾಶ, ಅವಕಾಶಗಳ ನಿರೀಕ್ಷೆ. … ಇವೆಲ್ಲವೂ ಕಾಲ ಕಳೆದರೂ ನಮ್ಮೊಳಗೆ ಉಳಿದುಕೊಳ್ಳಬಹುದು. ಹೊರಗಿನಿಂದ ನಾವು ಮುಂದೆ ಸಾಗಿರುತ್ತೇವೆ. ಆದರೆ ಒಳಗೆ ಮಾತ್ರ ಕೆಲವು ಘಟನೆಗಳಲ್ಲೇ ಸಿಲುಕಿಕೊಂಡಿರುತ್ತೇವೆ… ಅದೇ “Emotional Baggage”.

ಇದರ ಪರಿಣಾಮವನ್ನು ಕೆಲವೊಮ್ಮೆ ನಾವು ಗುರುತಿಸುವುದೇ ಇಲ್ಲ. ಇಂದಿನ ಒಂದು ಸಣ್ಣ ಘಟನೆಗೆ ನಾವು ಅತಿಯಾಗಿ ಪ್ರತಿಕ್ರಿಯಿಸುತ್ತೇವೆ. ಯಾರೋ ಸ್ವಲ್ಪ ಜೋರಾಗಿ ಮಾತನಾಡಿದರೆ ನೋವಾಗುತ್ತದೆ. ಯಾರೋ ಮಾತು ಕೇಳದಿದ್ದರೆ ನಿರ್ಲಕ್ಷ್ಯವೆಂದು ಅನಿಸುತ್ತದೆ. ಯಾರೋ ಪ್ರಶ್ನಿಸಿದರೆ ತಿರಸ್ಕಾರವೆಂದು ಭಾಸವಾಗುತ್ತದೆ. ಏಕೆಂದರೆ, ಈಗ ಪ್ರತಿಕ್ರಿಯಿಸುತ್ತಿರುವುದು ಇಂದಿನ ಘಟನೆ ಮಾತ್ರವಾಗಿರದೇ ಇರಬಹುದು. ಹಿಂದಿನ ಯಾವುದೋ ಅನುಭವವೂ ನಮ್ಮೊಳಗಿಂದ ಮಾತನಾಡುತ್ತಿರಬಹುದು. ಇದು ಅನೇಕರಿಗೆ ಅರ್ಥವಾಗುವುದಿಲ್ಲ.. ಪರಿಸ್ಥಿತಿ ತಿಳಿದಿರುವುದಿಲ್ಲ.. ಹೀಗಾಗಿ ಪರಿಣಾಮ ಬೇರೆಯದೇ ಇರುತ್ತದೆ. ಮತ್ತಷ್ಟು ಡ್ಯಾಮೇಜುಗಳು ತಿಳಿಯದೇ ಆಗಿರುತ್ತದೆ.

ಕೆಲವು ದಿನಗಳ ಹಿಂದೆ ಹೀಗೇ ಮಾತನಾಡುತ್ತಿರಬೇಕಾದರೆ ಒಂದು ಮದುವೆಯ ಘಟನೆ ಮಾತಿನ ನಡುವೆ ಬಂತು. ಈ ಮಾತಿನ ಕೊನೆಗೆ ಇದಕ್ಕೆಲ್ಲಾ “ಬ್ಯಾಗೇಜು”ಗಳೇ ಕಾರಣ ಎಂದು ಮಾತು ನಿಂತಿತ್ತು. ಈ ಬ್ಯಾಗೇಜು ಏನು..? ಯಾಕೆ ಇಂತಹ ಬ್ಯಾಗೇಜು ಇಳಿಸಿ ಬಿಡಬೇಕು..? ಎಂದು ಅನೇಕ ದಿನಗಳಿಂದ ತಲೆಯೊಳಗೆ ಸುತ್ತುತ್ತಿತ್ತು.

ಇಂದಿನ ವೈವಾಹಿಕ ಸಂಬಂಧಗಳಲ್ಲಿ ಈ ಬ್ಯಾಗೇಜುಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಬಹುದು.  ಮದುವೆಯಾಗಿ ಕೆಲವೇ ದಿನಗಳಲ್ಲಿ ಬಿರುಕು ಮೂಡುತ್ತದೆ. “ಅವನು ಅಡುಗೆಗೆ ಸಹಾಯ ಮಾಡುವುದಿಲ್ಲ.”  “ಅವಳಿಗೆ ಅಡುಗೆ ಮಾಡಲು ಗೊತ್ತಿಲ್ಲ.”  “ಅವನು ನನ್ನ ಮಾತು ಕೇಳುವುದಿಲ್ಲ.”  “ಅವಳು ನನ್ನ ಮನೆಯವರನ್ನು ಅರ್ಥಮಾಡಿಕೊಳ್ಳುವುದಿಲ್ಲ.” ….. ಇಂತದ್ದೇ  ಹಲವು ಸಣ್ಣ ಕಾರಣಗಳು.  ಎರಡು ಮನೆಯವರಿಗೂ ಇವು ದೊಡ್ಡ ಸಮಸ್ಯೆಗಳಾಗುತ್ತವೆ. ಆದರೆ ಸ್ವಲ್ಪ ಆಳವಾಗಿ ನೋಡಿದರೆ, ಇವೆಲ್ಲವೂ ಬಹಳ ಸಲ ಕಾರಣಗಳೇ ಅಲ್ಲದ ಕಾರಣಗಳು..!.

ಅಡುಗೆಯೇ ನಿಜವಾದ ಸಮಸ್ಯೆಯೇ?  ಅಥವಾ ಅದರ ಹಿಂದೆ ಹಳೆಯ ಕೋಪವಿದೆಯೇ?,  ಹಿಂದಿನ ಸಂಬಂಧದ ನೋವು ಇದೆಯೇ?,  ಬಾಲ್ಯದಲ್ಲಿ ಅನುಭವಿಸಿದ ನಿರ್ಲಕ್ಷ್ಯವಿದೆಯೇ?, ತಿರಸ್ಕಾರದ ಭಯವಿದೆಯೇ?, ಅತಿಯಾದ ನಿರೀಕ್ಷೆಗಳಿವೆಯೇ?, “ನನ್ನನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ” ಎಂಬ ಹಳೆಯ ನೋವು ಇದೆಯೇ?.  ಬಹುಶಃ ಸಮಸ್ಯೆ ಅಡುಗೆಯಲ್ಲ, ಸಮಸ್ಯೆ ಇರುವುದು “ಬ್ಯಾಗೇಜಿ”ನಲ್ಲಿರಬಹುದು.

ಒಬ್ಬರು ತಮ್ಮ ಹಿಂದಿನ ನೋವನ್ನು ಹೊತ್ತುಕೊಂಡು ಬಂದಿರಬಹುದು. ಮತ್ತೊಬ್ಬರು ತಮ್ಮದೇ ಆದ ಭಯ ಮತ್ತು ನಿರೀಕ್ಷೆಗಳನ್ನು ಹೊತ್ತುಕೊಂಡು ಬಂದಿರಬಹುದು. ಇಬ್ಬರ ಬದುಕಿನ ಬ್ಯಾಗೇಜುಗಳು ಹೊಸ ಸಂಬಂಧದೊಳಗೆ ಮುಖಾಮುಖಿಯಾಗಬಹುದು. ಆಗ ಸಣ್ಣ ಸಂಗತಿಗಳೇ ದೊಡ್ಡದಾಗುತ್ತವೆ. ಮಾತು ದೊಡ್ಡದಾಗುತ್ತದೆ. ಅಸಮಾಧಾನ ದೊಡ್ಡದಾಗುತ್ತದೆ. ಕೊನೆಗೆ ಸಂಬಂಧವೇ ಪ್ರಶ್ನೆಯಾಗುತ್ತದೆ.

ಆದರೆ, ಎಲ್ಲಾ ಮುರಿದ ಸಂಬಂಧಗಳನ್ನೂ ಬ್ಯಾಗೇಜಿನಿಂದಲೇ ವಿವರಿಸಲಾಗುವುದಿಲ್ಲ, ವಿವರಿಸಬೇಕಾಗಿಲ್ಲ.  ಕೆಲವು ಸಂಬಂಧಗಳಲ್ಲಿ ಹಣ, ಹಿಂಸೆ, ದೌರ್ಜನ್ಯ, ವ್ಯಸನ, ನಿರಂತರ ಅವಮಾನ ಅಥವಾ ಸುರಕ್ಷತೆಯ ಕೊರತೆಯಂತಹ ಗಂಭೀರ ಸಮಸ್ಯೆಗಳಿರುತ್ತವೆ. ಅಂತಹ ಸಂಬಂಧಗಳಿಂದ ಹೊರಬರುವುದು ಅಗತ್ಯವಾಗಬಹುದು. ಪ್ರತಿಯೊಂದು ಸಂಬಂಧವನ್ನೂ ಹೇಗಾದರೂ ಉಳಿಸಿಕೊಳ್ಳಲೇಬೇಕು ಎನ್ನುವುದೂ ಸರಿಯಲ್ಲ.

ಆದರೆ ನಿಜವಾದ ಸಮಸ್ಯೆಯೇ ಇಲ್ಲದ ಕಡೆ ಹಳೆಯ ನೋವುಗಳು ಹೊಸ ಬದುಕನ್ನು ನಿರ್ಧರಿಸುತ್ತಿದ್ದರೆ, ಅಲ್ಲಿ ಒಮ್ಮೆ ನಮ್ಮನ್ನೇ ನಾವು ಕೇಳಿಕೊಳ್ಳಬೇಕು,  “ನನ್ನ ಸಮಸ್ಯೆ ನಿಜವಾಗಿಯೂ ಈಗ ಎದುರಾಗಿರುವ ವ್ಯಕ್ತಿಯೊಂದಿಗಿದೆಯೇ? ಅಥವಾ ನನ್ನ ಹಿಂದಿನ ಬದುಕಿನೊಂದಿಗೆ ಇನ್ನೂ ಮುಗಿಯದ ಮಾತುಕತೆ ನನ್ನೊಳಗೇ ನಡೆಯುತ್ತಿದೆಯೇ?”  ಈ ಪ್ರಶ್ನೆ ಬಹಳ ಮುಖ್ಯ.

ಹಿಂದೆ ಯಾರೋ ನಮ್ಮನ್ನು ನೋಯಿಸಿದ್ದರೆ, ಆ ನೋವು ನಿಜ. ಯಾರೋ ಕೆಲವರು ನಿಮ್ಮನ್ನು ವಿಷಯದ ದಾಳವಾಗಿ ಬಳಸಿಕೊಂಡಿದ್ದರೆ, ಅದು ಅನುಭವ. ಆದರೆ ಅದರ ನೆರಳನ್ನು ಪ್ರತಿಯೊಂದು ಹೊಸ ಸಂಬಂಧದ ಮೇಲೂ ಬೀರುವ ಅಗತ್ಯವಿಲ್ಲ. ಯಾವುದೋ ಸಿದ್ದಾಂತ ನಿಮ್ಮನ್ನು ದಾರಿ ತಪ್ಪಿಸಿದ್ದರೆ, ಅದು ಪಾಠ. ಯಾರೋ ನಮ್ಮನ್ನು ತಿರಸ್ಕರಿಸಿದ್ದರೆ, ಅವರ ಮಾತನ್ನೇ ನಮ್ಮ ಬದುಕಿನ ಅಳತೆಯನ್ನಾಗಿ ಮಾಡಿಕೊಳ್ಳಬೇಕಿಲ್ಲ. ಒಂದು ಸಂಬಂಧ ಮುರಿದಿದ್ದರೆ, ಮುಂದಿನ ಸಂಬಂಧವೂ ಹಾಗೆಯೇ ಆಗುತ್ತದೆ ಎಂದು ನಂಬಬೇಕಿಲ್ಲ. ಹಿಂದಿನ ಅನುಭವ ಪಾಠವಾಗಬೇಕು ; ನಮಗೇ ಶಿಕ್ಷೆಯಾಗಬಾರದು.

ಕೆಲವೊಮ್ಮೆ ಕ್ಷಮಿಸುವುದು ಎದುರಿನ ವ್ಯಕ್ತಿಗಾಗಿ ಅಲ್ಲ. ನಮ್ಮ ಮನಸ್ಸು ಆ ಘಟನೆಯಿಂದ ಮುಕ್ತವಾಗಲು. ಕೆಲವೊಮ್ಮೆ ಬಿಟ್ಟುಬಿಡುವುದು ಸೋಲಲ್ಲ. ಅದು ನಮ್ಮ ನೆಮ್ಮದಿಯನ್ನು ಆಯ್ಕೆ ಮಾಡುವುದು. ಮತ್ತೂ ಕೆಲವೊಮ್ಮೆ ನಮ್ಮನ್ನೇ ನಾವು ಕ್ಷಮಿಸಿಕೊಳ್ಳಬೇಕು. “ಅಂದು ಹಾಗೆ ಮಾಡಬಾರದಿತ್ತು.”, “ಅಂದು ಆ ವ್ಯಕ್ತಿಯನ್ನು ನಂಬಬಾರದಿತ್ತು.”, “ಅಂದು ಆ ಮಾತು ಹೇಳಬಾರದಿತ್ತು.”, ಹೌದು. ತಪ್ಪಾಗಿರಬಹುದು.

ಆದರೆ… ಅದು ಅಂದಿನ ನೀವು. ಇಂದಿನ ನೀವು ಅದೇ ವ್ಯಕ್ತಿಯಲ್ಲ. ಅನುಭವ ನಿಮ್ಮನ್ನು ಬದಲಿಸಿದೆ. ಹಾಗಾಗಿ ಹಿಂದಿನ ತಪ್ಪನ್ನು ಇಂದಿನ ಬದುಕಿನ ಶಿಕ್ಷೆಯನ್ನಾಗಿ ಮಾಡಿಕೊಳ್ಳಬೇಡಿ, ಮಾಡಿಕೊಳ್ಳಬೇಕಾಯಿಯೂ ಇಲ್ಲ. ಅದನ್ನೇ ಕೆರೆಯುತ್ತಲೂ ಇರಬೇಕಾಗಿಲ್ಲ. ಬದುಕು ಒಂದು ಪ್ರಯಾಣ. ಎಲ್ಲವನ್ನೂ ಜೊತೆಗಿಟ್ಟುಕೊಂಡೇ ಕೊನೆಯವರೆಗೂ ನಡೆಯಬೇಕಿಲ್ಲ.

ಒಮ್ಮೆ ನಮ್ಮ ಒಳಗಿನ ಬ್ಯಾಗ್‌ ತೆರೆದು ನೋಡಬೇಕು.  ಈ ಕೋಪ ಇನ್ನೂ ಬೇಕೇ? ಈ ನೋವು ಬೇಕೇ ? ಈ ಹಳೆಯ ನಿರೀಕ್ಷೆ ಬೇಕೇ ? ಈ ಅಪರಾಧ? ಈ ಭಯ?  ಇದೆಲ್ಲಾ ನಮ್ಮ ಮುಂದಿನ ಹೆಜ್ಜೆಗೆ ಇವುಗಳಲ್ಲಿ ಎಷ್ಟು ನಿಜವಾಗಿಯೂ ಅಗತ್ಯ? ಅಗತ್ಯವಿಲ್ಲದಿದ್ದರೆ…ಇಳಿಸಿಬಿಡೋಣ.

ಎಲ್ಲವನ್ನೂ ಮರೆತುಬಿಡಬೇಕಿಲ್ಲ. ಕೆಲವು ನೆನಪುಗಳು ಇರಲಿ. ಕೆಲವು ಪಾಠಗಳು ಇರಲಿ. ಆದರೆ ಬದುಕನ್ನು ಭಾರವಾಗಿಸುವುದನ್ನು ಮಾತ್ರ ಪ್ರತಿದಿನ ಹೊತ್ತುಕೊಂಡು ಹೋಗಬೇಕಿಲ್ಲ. ಕೆಲವು ಕೋಪಗಳು ಅಲ್ಲಿಯೇ ಮುಗಿಯಲಿ. ಕೆಲವು ನಿರೀಕ್ಷೆಗಳು ಅಲ್ಲಿಯೇ ಇಳಿಯಲಿ. ಕೆಲವು ಹಳೆಯ ಲೆಕ್ಕಾಚಾರಗಳು ಅಲ್ಲಿಯೇ ಕೊನೆಗೊಳ್ಳಲಿ. ಕೆಲವು ನೋವುಗಳು ನಮ್ಮನ್ನು ರೂಪಿಸಿದವು ಎಂಬುದನ್ನು ಒಪ್ಪಿಕೊಂಡು, ಅವುಗಳ ಜೊತೆ ಬದುಕುವುದನ್ನು ನಿಲ್ಲಿಸೋಣ. ಏಕೆಂದರೆ ಬದುಕಿನ ಮುಂದಿನ ತಿರುವಿಗೆ ಹೋಗಲು ಯಾವಾಗಲೂ ಹೊಸ ದಾರಿ ಬೇಕಾಗುವುದಿಲ್ಲ. ಕೆಲವೊಮ್ಮೆ ಹಳೆಯ ಬ್ಯಾಗೇಜನ್ನು ಇಳಿಸಿದರೆ ಸಾಕು. ಆಗ ಬದುಕಿನ ಮುಂದಿನ ತಿರುವು ಬಹುಶಃ ದೂರದಲ್ಲಿಲ್ಲ. ಆದರೆ ಅಲ್ಲಿ ತಲುಪಲು… ಬ್ಯಾಗ್‌ ಹಗುರವಾಗಿರಬೇಕು ಅಷ್ಟೇ..

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ
September 25, 2026
1:19 PM
by: ದ ರೂರಲ್ ಮಿರರ್.ಕಾಂ
ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ
September 25, 2026
12:51 PM
by: ದ ರೂರಲ್ ಮಿರರ್.ಕಾಂ
ಪಿಎಂ-ಕುಸುಮ್ ಯೋಜನೆಯಿಂದ ರೈತರ ನೀರಾವರಿಗೆ ಸೌರಶಕ್ತಿ
September 25, 2026
12:41 PM
by: ದ ರೂರಲ್ ಮಿರರ್.ಕಾಂ
ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ
September 25, 2026
12:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror