ಮಲೆನಾಡಿನ ಉಳ್ಳವರ ಒತ್ತುವರಿ ಮತ್ತು ಬಡವರ ಜೀವನೋಪಾಯ

February 26, 2024
2:26 PM
ಕಾಫಿ ಬೆಳೆಗಾರರ ಒತ್ತುವರಿ ತೆರವು ಹಾಗೂ ಅದರ ಪರಿಣಾಮಗಳ ಬಗ್ಗೆ ನಾಗರಾಜ ಕೂವೆ ಅವರು ಬರೆದ ಬರಹ ಇಲ್ಲಿದೆ...

ವಿಧಾನಸಭಾ ಅಧಿವೇಶನದಲ್ಲಿ(Vidhana sabhe Session) ಮಾತನಾಡಿದ ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡರು, ‘ಕಾಫಿ ಬೆಳೆಗಾರರು(Coffee planters) ಒತ್ತುವರಿ ಮಾಡಿರುವ ಭೂಮಿಯನ್ನು(Land Encroachment) ಅವರಿಗೆ ಗುತ್ತಿಗೆಗೆ(lease)ಕೊಡಬೇಕು’ ಎಂದಿದ್ದಾರೆ. ಅದಕ್ಕಾಗಿ ‘ಕಾಫಿ ಪರಿಸರಕ್ಕೆ ಪೂರಕವಾದುದು, ಮರದ ನೆರಳಿನಲ್ಲಿ ಬೆಳೆಯುವ ಅದರಿಂದ 60 ಮಿಲಿಯನ್ ಗೂ ಹೆಚ್ಚಿನ ಮರಗಳ ರಕ್ಷಣೆಯಾಗಿದೆ, ಕಾಫಿ ತೋಟಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಕೆರೆಗಳಿದ್ದು ಅಂತರ್ಜಲದ ಅಭಿವೃದ್ಧಿಯಾಗಿದೆ, ಯಾವುದೇ ನದಿ ಕಲುಷಿತವಾಗದಂತೆ ಬೆಳೆಗಾರರು ರಕ್ಷಣೆ ಮಾಡಿದ್ದಾರೆ, 15 ಲಕ್ಷ ಕಾರ್ಮಿಕರು ಕಾಫಿಯನ್ನು ಅವಲಂಬಿಸಿದ್ದಾರೆ, ಅವರಿಗೆ ಕಾರ್ಮಿಕ ಕಾಯ್ದೆಯಡಿ ವೇತನ, ಉಚಿತ ವಸತಿ, ವಿದ್ಯುತ್, ಆರೋಗ್ಯ ಸವಲತ್ತುಗಳನ್ನು ಕೊಡಲಾಗುತ್ತಿದೆ, ಸುಮಾರು 8 ರಿಂದ 10 ಕೋಟಿ ವಿದೇಶಿ ವಿನಿಮಯ(Foreign exchange) ಸರ್ಕಾರಕ್ಕೆ ಬರುತ್ತಿದೆ’ ಇತ್ಯಾದಿ ಕಾರಣಗಳನ್ನು ಕೊಟ್ಟಿದ್ದಾರೆ. ತಮ್ಮ ವಾದಕ್ಕೆ, ‘ಒಂದು ವೇಳೆ ಸರ್ಕಾರ ಕಾಫಿ ಬೆಳೆಗಾರರ ಒತ್ತುವರಿ ತೆರವುಗೊಳಿಸಿದರೆ, ಲಕ್ಷಾಂತರ ಜನ ನಿರುದ್ಯೋಗಿಗಳಾಗುತ್ತಾರೆ, ಸರ್ಕಾರಕ್ಕೆ ಆರ್ಥಿಕ ನಷ್ಟವಾಗುತ್ತದೆ, ಪರಿಸರ ಹಾಳಾಗುತ್ತದೆ’ ಇತ್ಯಾದಿ ಸಮರ್ಥನೆಗಳನ್ನು ಕೊಟ್ಟಿದ್ದಾರೆ. ಇದನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡೋಣ.

Advertisement
Advertisement
Advertisement

ಮಲೆನಾಡಿನಲ್ಲಿ ಗುತ್ತಿಗೆಯ ಭೂಮಿಯಿರುವುದು ಶ್ರೀಮಂತರ ಕೈಯಲ್ಲಿ. ಅದರಲ್ಲೂ ದೊಡ್ಡ ದೊಡ್ಡ ಕಾಫಿ ಬೆಳೆಗಾರರ ಹಿಡಿತದಲ್ಲಿ. ಎಲ್ಲಾ ಪ್ಲಾಂಟರ್ಗಳ ಬಳಿಯೂ ದಾಖಲಾತಿ ಇರುವ ಭೂಮಿಯ ಎರಡರಿಂದ ಮೂರು ಪಟ್ಟುಗಳಷ್ಟು ಒತ್ತುವರಿ ಜಾಗವಿದೆ. ಹೆಚ್ಚಿನವರು 500 ರಿಂದ 1000 ಎಕರೆ ಭೂಮಿಯಿರುವವರೇ. ಅದರ ದೆಸೆಯಿಂದಾಗಿ ಪಶ್ಚಿಮ ಘಟ್ಟದ ಅತಿಸೂಕ್ಷ್ಮ ಕಾಡುಗಳು ನಾಶವಾಗಿವೆ. ಅಲ್ಲದೇ ಎಲ್ಲೂ ಕಂದಾಯ ಭೂಮಿ ಎಂಬುದು ಇಲ್ಲವೇ ಇಲ್ಲ ಎಂದಾಗಿದೆ. ದೊಡ್ಡ ದೊಡ್ಡ ಭೂ ಒತ್ತುವರಿಯಿಂದಾಗಿ ಕಾಫಿ ಸೀಮೆಯಾದ್ಯಂತ ಇವತ್ತು ಬಡವರಿಗೆ, ದಲಿತರಿಗೆ, ತಳ ಸಮುದಾಯಗಳ ಜನರಿಗೆ ಮನೆಕಟ್ಟಲು ಕೂಡಾ ಜಾಗವಿಲ್ಲ. ಸಾವಿರಾರು ಕುಟುಂಬಗಳು ವಸತಿ ರಹಿತರಾಗಿದ್ದಾರೆ. ಎಲ್ಲೋ ಸಣ್ಣ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ಸ್ವಲ್ಪವೂ ಸ್ವಂತ ಭೂಮಿಯಿಲ್ಲ. ಇದು ಅಸಂಖ್ಯಾತ ಭೂರಹಿತ ಕುಟುಂಬಗಳಿಗೆ ಕಾರಣವಾಗಿದೆ. ಈ ಕಾರಣದಿಂದಾಗಿ ದೊಡ್ಡ ದೊಡ್ಡ ಕಾಫಿ ಬೆಳೆಗಾರರ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಿ ಅದನ್ನು ವಸತಿ ರಹಿತರು ಮತ್ತು ಭೂರಹಿತರಿಗೆ ಹಂಚಬೇಕು.

Advertisement

ಬ್ರಿಟಿಷ್ ರ ಕಾಲದಲ್ಲಿ ಮಲೆನಾಡಿನಲ್ಲಿ ಕಾಫಿ ಪ್ಲಾಂಟೇಶನ್ ಪ್ರಾರಂಭವಾಯಿತು. ಕಾಫಿಗೆ ಮುಕ್ತ ಮಾರುಕಟ್ಟೆ ಬಂದ ಮೇಲೆ ಅದರ ವಿಸ್ತರಣೆ ಎಲ್ಲೆ ಮೀರಿತು. ಇದ್ದ ಕಾಡು, ಗುಡ್ಡಗಳಗೆಲ್ಲಾ ಕಾಫಿ ಹಾಕಿದ ಶ್ರೀಮಂತರು ‘ಕಾಫಿ ಪರಿಸರಕ್ಕೆ ಪೂರಕವಾದ ಬೆಳೆ’ ಎಂದು ಸುಳ್ಳು ಕಥೆ ಕಟ್ಟಿದರು. ರಾಸಾಯನಿಕ ಗೊಬ್ಬರಗಳಿಲ್ಲದೇ ಫಸಲು ಕೊಡದ, ಅತೀ ಹೆಚ್ಚು ನೀರು ಬೇಡುವ ಕಾಫಿ ಎಂದೂ ಪರಿಸರಕ್ಕೆ ಪೂರಕವಲ್ಲ. ಅರೇಬಿಕಾ ತಳಿಯ ಗಿಡಗಳಿರುವ ಹಳೆಯ ತೋಟಗಳಲ್ಲಿ ನೆರಳಿಗೆ ಮರಗಳಿದ್ದರೂ ಈಗ ಅದೆಲ್ಲಾ ನಾಶವಾಗುತ್ತಿದೆ. ಅರೇಬಿಕಾ ತೋಟಗಳು ರೋಬಸ್ಟ್ ಆಗಿ ಬದಲಾಗುತ್ತಾ ಅಲ್ಲಿನ ಮರಗಳೆಲ್ಲಾ ಟಿಂಬರ್ ಗೆ ಹೋಗಿದೆ/ಹೋಗುತ್ತಿದೆ. ಬೇಸಿಗೆಯಲ್ಲಿ ತೋಟಗಳಿಗೆ ನೀರು ಹಾಯಿಸಬೇಕಾದ್ದರಿಂದ ಹಳ್ಳ- ನದಿಗಳೆಲ್ಲಾ ಬರಿದಾಗುತ್ತಿವೆ. ಹೆಚ್ಚಿನ ಎಸ್ಟೇಟ್ ಗಳಲ್ಲಿ ಪಲ್ಪರ್ ನೀರನ್ನು ನೇರವಾಗಿ ನೀರಿನ ಮೂಲಗಳಿಗೆ ಬಿಡುತ್ತಿರುವುದರಿಂದ ನದಿಗಳೆಲ್ಲಾ ಕಲುಷಿತಗೊಳ್ಳುತ್ತಿರುವುದು ವಾಸ್ತವ.

ವೈವಿಧ್ಯತೆ ಇಲ್ಲದ ಏಕಜಾತಿಯ ಕೃಷಿ ಎಂದೂ ಪರಿಸರ ವಿರೋಧಿಯೇ. ಹೀಗಿರುವಾಗ ಕಾಫಿಯನ್ನು ಪರಿಸರ ಸ್ನೇಹಿ ಎಂದು ಹೇಳುವುದೇ ಆತ್ಮವಂಚನೆ. ಅದೇನೇ ಇರಲಿ, ಇಲ್ಲಿಯ ದೈನಂದಿನ ಬದುಕು ಮತ್ತು ಜೀವನೋಪಾಯ ಕಾಫಿಯ ಮೇಲೆಯೇ ಅವಲಂಬಿತವಾಗಿದೆ. ಪಶ್ಚಿಮ ಘಟ್ಟದ ಮಳೆಕಾಡುಗಳ ಈ ಪ್ರದೇಶದಲ್ಲಿ, ಕಾಫಿಯಷ್ಟು ಚೆನ್ನಾಗಿ ಬೇರೆ ಯಾವುದೇ ಬೆಳೆ ಬರದಿರುವುದರಿಂದ, ಇಲ್ಲಿ ಕಾಫಿ ಅನಿವಾರ್ಯ. ಈ ಸತ್ಯವನ್ನು ಹಾಗೆಯೇ ಒಪ್ಪಿಕೊಳ್ಳೋಣ, ಕಾಫಿ ಬೆಳೆಯೋಣ, ಬದುಕೋಣ. ಆದರೆ ದೊಡ್ಡ ದೊಡ್ಡ ಒತ್ತುವರಿಗಳನ್ನು ಉಳಿಸಿಕೊಳ್ಳಲು ಅದಕ್ಕೆ ಪರಿಸರ ಸ್ನೇಹಿ ಎಂಬ ಸುಳ್ಳು ಕಥೆಯನ್ನು ಲೇಪಿಸುವುದು ಬೇಡ. ಹಿಂದೆಲ್ಲಾ ಕಾಫಿ ಸೀಮೆಯಾದ್ಯಂತ ಕರಾವಳಿ ಭಾಗಗಳಿಂದ ವಲಸೆ ಬಂದಿರುವ ತಳ ಸಮುದಾಯಗಳ ಜನರೇ ಅತೀ ಹೆಚ್ಚು ಕಾರ್ಮಿಕರು. ಈಗ ಆ ಜಾಗದಲ್ಲಿ ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಇತ್ಯಾದಿ ಹೊರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿದ್ದಾರೆ.

Advertisement

ಬಹಳ ಹಿಂದೆ ಕರಾವಳಿಯಿಂದ ಬಂದು ಪ್ಲಾಂಟೇಶನ್ ಗಳ ಲೈನ್ ಮನೆಗಳಲ್ಲಿ ಇದ್ದವರು ನಿಧಾನಕ್ಕೆ ಸಮೀಪದ ಖಾಲಿ ಜಾಗಗಳಲ್ಲಿ ಸಣ್ಣ ಮನೆ ಕಟ್ಟಿಕೊಂಡಿದ್ದಾರೆ. ಇವತ್ತು ಮಕ್ಕಳಿಗೆ ಅಲ್ಪ ಸ್ವಲ್ಪ ಶಿಕ್ಷಣ ಕೊಡಿಸಿದ್ದಾರೆ. ಅದರಲ್ಲಿ ಹೆಚ್ಚಿನ ಯುವಜನರು ಸಣ್ಣ ಪುಟ್ಟ ಉದ್ಯೋಗಗಳನ್ನರಸಿ ಬೆಂಗಳೂರು, ಮಂಗಳೂರು ಸೇರಿದಂತೆ ನಗರಗಳನ್ನು ಸೇರಿ ಹೇಗೋ ಬದುಕು ತೆಗೆಯುತ್ತಿದ್ದಾರೆ. ಕೆಲವರು ಆಟೋ, ಗ್ಯಾರೇಜ್, ಅಂಗಡಿ, ಹೋಟೆಲ್ ಇತ್ಯಾದಿ ಸ್ವಯಂ ಉದ್ಯೋಗಗಳನ್ನು ಮಾಡುತ್ತಾ ಕಷ್ಟಗಳ ನಡುವೆಯೇ ಬದುಕು ಕಟ್ಟಿಕೊಂಡಿದ್ದಾರೆ. ಕೆಲವೇ ಕೆಲವರು ಇವತ್ತಿಗೂ ತಂದೆ-ತಾಯಿಗಳೊಂದಿಗೆ ಕಾಫಿ ಪ್ಲಾಂಟೇಶನ್ ಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ನಲವತ್ತು ಐವತ್ತು ವರ್ಷಗಳ ಈ ಬೆಳವಣಿಗೆಯ ನಡುವೆ ಇಲ್ಲಿರುವ ಕಾಫಿ ಎಸ್ಟೇಟ್ಗಳ ವಿಸ್ತೀರ್ಣ ದುಪ್ಪಟ್ಟಾಗಿದೆ.

ಇಲ್ಲಿನ ಸ್ಥಳೀಯ ಬಡವರಿಗೆ ಹಾಗೂ ನಲವತ್ತು ಐವತ್ತು ವರ್ಷಗಳಿಂದ ಇಲ್ಲಿ ಬಂದು ನೆಲೆಸಿರುವ ಈ ಕಾರ್ಮಿಕ ಕುಟುಂಬಗಳಿಗೆ, ಇವತ್ತು ಕೃಷಿ ಮಾಡಲು, ಬದುಕು ಕಟ್ಟಿಕೊಳ್ಳಲು ಸ್ವಲ್ಪವೂ ಭೂಮಿಯಿಲ್ಲ. ದುರಂತವೆಂದರೆ ಹೆಚ್ಚಿನವರಿಗೆ ಮನೆ ಕಟ್ಟಲು ಕೂಡಾ ಜಾಗವಿಲ್ಲ. ಎಲ್ಲೋ ಇರುವ ಚೂರು ಖಾಲಿ ಜಾಗದಲ್ಲಿ ಇವರು ಮನೆ ಕಟ್ಟಿದರೂ, ಅರಣ್ಯ ಇಲಾಖೆ ಅದನ್ನು ‘ಅಕ್ರಮ ನಿವೇಶನ’ ಎಂದು ಕೆಡವುತ್ತದೆ. ಅಲ್ಪಸ್ವಲ್ಪ ಗಿಡ ಹಾಕಿ ತೋಟ ಮಾಡಿದರೂ, ಅರಣ್ಯಾಧಿಕಾರಿಗಳು ಅದನ್ನು ಕಡಿದು ಹಾಕುತ್ತಾರೆ. ಈ ಮಧ್ಯೆ ದೊಡ್ಡವರ ಒತ್ತುವರಿ, ಅಕ್ರಮ ಟಿಂಬರ್ ಸಾಗಾಣಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ಅದನ್ನು ಮಾತ್ರ ಅರಣ್ಯ ಇಲಾಖೆ ಪ್ರಶ್ನಿಸುವುದೇ ಇಲ್ಲ.

Advertisement

ಕಾಫಿ ಸೀಮೆಯಾದ್ಯಂತ ಇಂತಹ ಒತ್ತುವರಿದಾರರೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು. ಇವರೇ MLA, MP, ಜಿಲ್ಲಾ ಪಂಚಾಯತ್ ಮೆಂಬರ್ ಗಳಾಗುವುದು. ಈ ಶ್ರೀಮಂತರೇ ಕಾಫಿ ಸೀಮೆಯಾದ್ಯಂತ ಎಲ್ಲಾ ಅಧಿಕಾರದ ಹುದ್ದೆಯಲ್ಲಿರುವುದು. ಇವರೆಲ್ಲಾ ಪಕ್ಷಾತೀತವಾಗಿ ‘ಕಾಫಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಗುತ್ತಿಗೆಗೆ ಕೊಡಿ’ ಎಂದು ಇವತ್ತು ಹೇಳುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಬಡವರ ಮೇಲಿನ ಕಾಳಜಿಯೆಂದು ನಟಿಸುತ್ತಿದ್ದಾರೆ.

ಕಾಫಿ ಎಸ್ಟೇಟ್ಗಳಲ್ಲಿ ಹೊಟ್ಟೆ ಪಾಡಿಗಾಗಿ ದೂರದ ಊರುಗಳಿಂದ ಕೆಲಸಕ್ಕೆ ಬಂದಿರುವ
ವಲಸೆ ಕಾರ್ಮಿಕರಿಗೆ ಸರಿಯಾದ ಮೂಲ ಸೌಲಭ್ಯಗಳಿಲ್ಲ. ಅವರಿಗೆ ಶುದ್ಧ ಕುಡಿಯುವ ನೀರು, ಯೋಗ್ಯವಾದ ವಸತಿ, ಆರೋಗ್ಯ ತಪಾಸಣೆ, ಮಕ್ಕಳಿಗೆ ಶಿಕ್ಷಣ ಯಾವುದೂ ಇಲ್ಲ. ಅದನ್ನೆಲ್ಲಾ ಹೇಳಿದರೆ ಅದು ಬೇರೆಯದೇ ಕಥೆಯಾಗುತ್ತದೆ ಬಿಡಿ. ಇವತ್ತು ಕಾಫಿ ಪ್ಲಾಂಟೇಶನ್ ಗಳ 90% ಕೆಲಸಗಾರರು ಹೊರ ರಾಜ್ಯದವರು. ಹೀಗಿರುವಾಗ ಭೂಮಿಯನ್ನು ಸರ್ಕಾರ ವಾಪಸ್ಸು ತೆಗೆದುಕೊಂಡರೆ, ಸ್ಥಳೀಯರು ಕೆಲಸ ಕಳೆದು ಕೊಳ್ಳುವುದು ಎಲ್ಲಿಂದ ಬಂತು? ಸ್ಥಳೀಯರು ನಮಗೆ ಮನೆ ಕಟ್ಟಲು ಜಾಗ ಕೊಡಿ, ಕೃಷಿ ಮಾಡಲು ಭೂಮಿ ಕೊಡಿ ಎಂದು ಇವತ್ತು ಕೇಳುತ್ತಿದ್ದಾರೆ. ಈ ಬೇಡಿಕೆ ತುಂಬಾ ನ್ಯಾಯಯುತವಾಗಿದೆ. ಅವರ ಎದೆಯ ದನಿಗಳನ್ನು ನಾವು ಕೇಳಿಸಿಕೊಳ್ಳಬೇಕಾಗಿದೆ.

Advertisement

ಇವರೇ ಜೊತೆಗೆ ಕಾಫಿ ಸೀಮೆ ಹಾಗೂ ಮಲೆನಾಡಿನಾದ್ಯಂತ ಮೂವತ್ತು ನಲವತ್ತು ವರ್ಷಗಳಿಂದ ಎರಡ್ಮೂರು ಎಕರೆ ಕೃಷಿ ಮಾಡಿಕೊಂಡು ಬದುಕುತ್ತಿರುವವರಿದ್ದಾರೆ. ಇದರಲ್ಲಿ ಹೆಚ್ಚಿನವರ ಸಾಗುವಳಿಗೆ ದಾಖಲೆಗಳಿಲ್ಲ. ಇಂತವರಿಗೆ ಆ ಭೂಮಿಯನ್ನು ಮಂಜೂರು ಮಾಡಬೇಕಿದೆ. ಈಗಿನ ಕಾನೂನುಗಳ ಪ್ರಕಾರ ನೂರು ಎಕರೆ ಜಮೀನಿದ್ದವರು ಮಾಡಿದರೂ ಒತ್ತುವರಿ, ಏನೂ ಜಾಗವೇ ಇಲ್ಲದವರು ಸಾಗುವಳಿ ಮಾಡಿದರೂ ಒತ್ತುವರಿ. ಇದು ಬಡವರಿಗೆ ತುಂಬಾ ಅನ್ಯಾಯ ಮಾಡುತ್ತಿದೆ. ಮಲೆನಾಡಿನಲ್ಲಿ ವಸತಿ ರಹಿತರು, ಭೂ ರಹಿತರು ಮತ್ತು ಜೀವನೋಪಾಯಕ್ಕೆ ಮಾಡಿದ ಒತ್ತುವರಿ ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕಿದೆ.

ಮಲೆನಾಡಿನಾದ್ಯಂತ ಎಲ್ಲೆಡೆ ಬಲಾಢ್ಯರ ಒತ್ತುವರಿ, ಅದನ್ನು ಬಿಟ್ಟರೆ ಅರಣ್ಯ ಪ್ರದೇಶ. ಎಲ್ಲೂ ಕಂದಾಯ ಭೂಮಿಯಿಲ್ಲ. ಕಾಫಿ ಪ್ಲಾಂಟೇಶನ್ ಗಳ ಒತ್ತುವರಿ ತೆರವುಗೊಳಿಸಿದರೆ ಕಂದಾಯ ಭೂಮಿ ಪುನಃ ಸರ್ಕಾರಕ್ಕೆ ಸಿಗುತ್ತದೆ. ಅದನ್ನು ವಸತಿ ಮತ್ತು ಭೂರಹಿತರ ಸಮಗ್ರ ಪಟ್ಟಿ ತಯಾರಿಸಿ ಅವರಿಗೆ ಹಂಚಲಿ. ಹಾಗೆಯೇ ಸಣ್ಣ ಹಿಡುವಳಿದಾರರ ಸಾಗುವಳಿಯನ್ನು ಮಂಜೂರು ಮಾಡಲಿ. ಈ ಮಂಜೂರಾತಿಯಲ್ಲಿ 5 ಎಕರೆಯೊಳಗಿನದು ಮಾತ್ರ ಆಗಿರುವಂತೆ ಹಾಗೂ ಅಕ್ರಮ, ಲೋಪಗಳು ಸಂಭವಿಸದಂತೆ ನೋಡಿಕೊಳ್ಳಲಿ.

Advertisement
ಬರಹ
ನಾಗರಾಜ ಕೂವೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ
ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ
November 21, 2024
6:59 PM
by: The Rural Mirror ಸುದ್ದಿಜಾಲ
ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ
November 21, 2024
6:53 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror