ನಮ್ಮ ದೇಶದಲ್ಲಿ ಹಬ್ಬ, ಧಾರ್ಮಿಕ ಸಮಾರಂಭಗಳ ಸಮಯದಲ್ಲಿ ಪರಿಸರದ ಮೇಲೆ ಯಾವ ರೀತಿ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಯಾರೂ ಗಮನವಿಟ್ಟುಕೊಳ್ಳುವುದಿಲ್ಲ. ನದಿಗಳನ್ನು ಕಲುಷಿತಗೊಳಿಸುವುದು, ಪ್ರಾಣಿಬಲಿ, ವಾಯುಮಾಲಿನ್ಯ, ಶಬ್ದ ಮಾಲಿನ್ಯ ಇತ್ಯಾದಿಗಳನ್ನು ನಾವೇ ನಮ್ಮ ಹಬ್ಬಗಳಲ್ಲಿ ಮಾಡುತ್ತೇವೆ. ಇದರಿಂದ ಪರಿಸರದ ಮೇಲೆ ಅದೇಷ್ಟೋ ಪ್ರಭಾವ ಬೀರುತ್ತವೆ ಎಂಬುದನ್ನು ನಾವು ತಿಳಿಯಬೇಕು ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಅಭಯ್ ಓಕಾಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡುವುದನ್ನು ಸಾಂವಿಧಾನಿಕ ಹಕ್ಕುಗಳಿಂದ ಹೇಗೆ ರಕ್ಷಿಸಲಾಗುವುದಿಲ್ಲ ಎಂಬುದರ ಬಗ್ಗೆ ತೀಕ್ಷ್ಣವಾದ ಎಚ್ಚರಿಕೆ ನೀಡಿದರು. ಸಂವಿಧಾನವು ಪ್ರತಿಯೊಬ್ಬ ನಾಗರಿಕನು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳುತ್ತದೆಯಾದರೂ, ರಾಜಕಾರಣಿಗಳು ಹೆಚ್ಚಾಗಿ ಧಾರ್ಮಿಕ ಭಾವನೆಗಳನ್ನಷ್ಟೇ ಗಮನಿಸುತ್ತಾರೆ ಮತ್ತು ಮೂಢನಂಬಿಕೆಗಳನ್ನು ಪ್ರಶ್ನಿಸುವವರನ್ನು ಬೆಂಬಲಿಸುವ ಬದಲು ಅವರ ಮೇಲೆ ದಾಳಿ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಭಾರತವು ಸವಾಲುಗಳನ್ನು ಎದುರಿಸುತ್ತಲೇ ಇದೆ ಎಂದು ಅವರು ಹೇಳಿದರು.
2027 ರಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ನೂರು ವರ್ಷ ಹಳೆಯ ಮರಗಳನ್ನು ಕಡಿಯುವ ಪ್ರಸ್ತಾಪವಿದೆ. ಇದರಿಂದ ಪರಸರಕ್ಕೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ತಿಳಿದುಕೊಳ್ಳಬೇಕಲ್ಲವೇ?. ಇದರಿಂದ ನಾಗರಿಕರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆಂದು ಅರ್ಥವಾಗುತ್ತದೆ. ಅಲ್ಲದೇ ಇದ್ದರೆ, ಹಬ್ಬಗಳ ಸಮಯದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಮತ್ತು ಬಲಿ ನೀಡುವುದು ಅಥವಾ ಧ್ವನಿವರ್ಧಕಗಳ ವಿವೇಚನಾರಹಿತ ಬಳಕೆಯನ್ನು ನಾವು ಅನುಮತಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಹಲವು ಹಬ್ಬಗಳು ಮತ್ತು ಆಚರಣೆಗಳು ನದಿಗಳು, ಸರೋವರಗಳು ಮತ್ತು ಸಮುದ್ರಗಳನ್ನು ಕಲುಷಿತಗೊಳಿಸುತ್ತವೆ, ಅಂತಹ ಮಾಲಿನ್ಯವು ಧಾರ್ಮಿಕ ಸ್ವಾತಂತ್ರ್ಯವೆಂದು ಸಮರ್ಥಿಸಲಾಗುವುದಿಲ್ಲ ಎಂದು ಅವರು ಹೇಳಿದರು.


