ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು

May 1, 2025
10:52 AM
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ! ಅದರಲ್ಲೂ ಮೂಗುತಿ, ಬಳೆ, ಕಿವಿಯೋಲೆ ಮಂಗಲಸೂತ್ರ, ಜನಿವಾರದಂತಹ  ಸಂಕೇತಗಳು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಹೇಗೆ ಸಹಕರಿಸಬಹುದು...
ಈ ವರ್ಷದ ಸಿ.ಇ.ಟಿ. ಪರೀಕ್ಷೆಗೆ ಹಾಜರಾಗಲು ಸರತಿಯ ಸಾಲಿನಲ್ಲಿ ನಿಂತು ಸಾಗುತ್ತಿದ್ದ ವಿದ್ಯಾರ್ಥಿಯನ್ನು ತಡೆದು “ಪರೀಕ್ಷೆಗೆ ಹಾಜರಾಗಬೇಕಿದ್ದರೆ ಜನಿವಾರ ತೆಗೆದಿಡಬೇಕು, ಇಲ್ಲವಾದರೆ ಕತ್ತರಿಸಲು ನಮಗೆ ಬಿಡಬೇಕು” ಎಂಬ ನಿಬಂಧನೆಗೆ ಒಳಗಾದಾಗಲೇ ಅಂತಹ ಒಂದು ನಿಯಮವು ಆತನ ಮತ್ತು ಅವನ ಅಮ್ಮನ ಅರಿವಿಗೆ  ಬಂತು! ಮುಂದೆ ಅದು ಸಾರ್ವಜನಿಕ ಸುದ್ದಿಯಾಯಿತು. ಅಲ್ಲಿಯವರೆಗೆ ಅದೆಲ್ಲಿತ್ತು? ಈ ಬಗ್ಗೆ ಒಂದು ಸಾರ್ವಜನಿಕ ಚರ್ಚೆಗೆ ಕರೆ ಕೊಡಲಾಗಿತ್ತೆ? ಅಥವಾ ಪರೀಕ್ಷೆಗೆ ಅರ್ಜಿ ಹಾಕುವಾಗಲೇ ಇದರ ಬಗ್ಗೆ ತಿಳಿಸಲಾಗಿತ್ತೇ? ಈ ನಿಯಮವನ್ನು ತಾನು ಮಾಡಿದ್ದೆಂದು ಯಾರಾದರೂ ಅಧಿಕಾರಿಗಳು ಹೊಣೆ ಹೊತ್ತು ಅದರ ಹಿಂದಿರುವ ಕಾರಣಗಳನ್ನು ವಿವರಿಸಿದ್ದು ಇದೆಯೇ?
ಈ ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಇಲ್ಲ. ಏಕೆಂದರೆ ಸಮಸ್ಯೆಯ ಚರ್ಚೆಯು ವಾಸ್ತವಿಕ ನೆಲೆಯಿಂದ  ಬೇರೆಯೇ ಅಂಗಳದಲ್ಲಿ ನಡೆಯುತ್ತದೆ. ಈ ನಿಯಮವನ್ನು ಅನ್ವಯಿಸಿದ ಅಧಿಕಾರಿಗಳ ತಲೆದಂಡವಾಗುತ್ತದೆ. ಆದರೆ ಈ ನಿಯಮವನ್ನು ರೂಪಿಸಿದ ಅಧಿಕಾರಿ ಸುಭದ್ರವಾಗಿ ಸುಖವಾಗಿ ನಗು ಚೆಲ್ಲುತ್ತ ತನ್ನ ಖಚೇರಿಯಲ್ಲಿ ಆರಾಮವಾಗಿ ಕುಳಿತಿರುತ್ತಾನೆ. ಆತ ಜಾತಿವಾದಿಯಾಗಿರಬಹುದು, ಮತೀಯ ಬದ್ಧತೆ ಹೊಂದಿದವನಾಗಿರಬಹುದು, ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಟೆನ್‍ಶನ್ ಕಡೆಗೆ ಸಂವೇದನೆ ಇಲ್ಲದವನಾಗಿರಬಹುದು. ಆತ ಯಾರೆಂದು ಗೊತ್ತಾಗುವುದು ತಾನು ಈ ನಿಯಮವನ್ನು ರೂಪಿಸಿದ್ದೇನೆಂದು ತನ್ನ ಹೊಣೆಯನ್ನು ಪ್ರಕಟಿಸಿದಾಗಲೇ. ಆದರೆ ಅದು ಯಾರೆಂದು ಬಹಿರಂಗವಾಗುವುದೇ ಇಲ್ಲ. ಉದಾಹರಣೆಗೆ ಜನಿವಾರಕ್ಕೆ ನಿಷೇಧ ಹೇರಿ ನಿಯಮವನ್ನು ಜಾರಿಗೊಳಿಸಿದ್ದು ತಪ್ಪೆಂದು ಪ್ರವೇಶ ನಿರಾಕರಿಸಿದವರಿಗೆ ಶಿಕ್ಷೆ ಪ್ರಕಟಿಸಿದಾಗ ಈ ನಿಯಮವನ್ನು ಮಾಡಿದ್ದು ಯಾರೆಂಬ ಚರ್ಚೆ ಬಂದೇ ಇಲ್ಲ. ಇದೇ ಸಮಸ್ಯೆ ಈಗ ರೈಲ್ವೆ ಇಲಾಖೆಯ ನರ್ಸಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಂದರ್ಭದಲ್ಲೂ ಉಂಟಾಗಿದೆ.
ಎಪ್ರಿಲ್ 29 ರಂದು ಜರಗುವ ಪ್ರವೇಶ ಪರೀಕ್ಷೆಯ ಅಭ್ಯರ್ಥಿಗಳು ಮಹಿಳೆಯರೇ ಆಗಿರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿಯೇ ಮಂಗಳ ಸೂತ್ರವನ್ನು ಪರೀಕ್ಷಾ ಕೊಠಡಿಯಲ್ಲಿ ಧರಿಸುವಂತಿಲ್ಲ ಎಂಬ ನಿಯಮವನ್ನು ಪ್ರವೇಶ ಪತ್ರದ ಪುಟ-7ರಲ್ಲಿ ನಮೂದಿಸಿದ್ದಾರಂತೆ. ಈ ವಿಚಾರ ಪತ್ರಿಕೆಗಳಲ್ಲಿ ಒಂದು ದಿನ ಮೊದಲೇ (ಅಂದರೆ 2025ರ ಎಪ್ರಿಲ್ 28 ರಂದು) ಪತ್ರಿಕೆಗಳಲ್ಲಿ ಜಗಜ್ಜಾಹೀರಾಗಿದೆ. ಆದರೆ ಪರೀಕ್ಷೆಗಾಗಿ ಓದುವುದರಲ್ಲೇ ಮುಳುಗಿದ ಅಭ್ಯರ್ಥಿಗಳಿಗೆ ತಿಳಿಯದೇ ಹೋಗಲೂಬಹುದು. ಅವರು ಸಹಜವಾಗಿ ಮಂಗಳಸೂತ್ರವನ್ನು ಧರಿಸಿಯೇ ಪರೀಕ್ಷೆಗೆ ಹೋಗಿ ಬಾಗಿಲಲ್ಲಿ ತಡೆಯಲ್ಪಟ್ಟು ಪೇಚಿಗೆ ಈಡಾಗಬಹುದು. ಅಥವಾ ಪತ್ರಿಕೆಗಳನ್ನು ಓದಿದವರು ಒಂದು ದಿನ ಮೊದಲಿನಿಂದಲೇ ಟೆನ್‍ಶನ್ ಅನುಭವಿಸಿ ಮಂಗಳಸೂತ್ರವನ್ನು ಮನೆಯಲ್ಲೇ ತೆಗೆದಿಟ್ಟು ಪರೀಕ್ಷೆಗೆ ಹೋಗಬಹುದು ಅಥವಾ ತೆಗೆದಿಡಲಾರದವರು ಮನೆಯಲ್ಲೇ ಉಳಿಯಬಹುದು. ಅವಿವಾಹಿತ ಮಹಿಳೆಯರು ಮಾತ್ರ ನಿರಾತಂಕವಾಗಿ ಪರೀಕ್ಷೆ ನೀಡಬಹುದು.
ಇದೇ 2025 ಎಪ್ರಿಲ್ 17 ರಮ್ದು ಜನಿವಾರ ಧರಿಸಿರುವುದೇ ಕಾರಣವಾಗಿ ಬೀದರ್ ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ಸಿ.ಇ.ಟಿ. ಪರೀಕ್ಷಾ ಕೊಠಡಿಗೆ ಪ್ರವೇಶ ನಿರಾಕರಣೆಗೊಂಡದ್ದರಿಂದ ಸುಚಿವೃತ್ ಕುಲಕರ್ಣಿ ಎಂಬ ವಿದ್ಯಾರ್ಥಿ ಗಣಿತ ಪರೀಕ್ಷೆಯಿಂದ ಹೊರಗುಳಿಯಬೇಕಾದ ಘಟನೆ ನಡೆಯಿತು. ಇದಲ್ಲದೆ ಸಾಗರ, ಧಾರವಾಡ, ಶಿವಮೊಗ್ಗ ಉಡುಪಿಯಲ್ಲಿಯೂ ಇಂತಹ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ. ಇದನ್ನು ಬಿ.ಜೆ.ಪಿ. ಪಕ್ಷದರವರಷ್ಟೇ ಅಲ್ಲದೆ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ  ನಾಯಕರೂ ಖಂಡಿಸಿದರು. ಆ ವಿದ್ಯಾರ್ಥಿಗೆ ನ್ಯಾಯ ಒದಗಿಸಲು ಒಬ್ಬರು ಇಂಜಿನಿಯರಿಂಗ್ ಕಾಲೇಜು ನಡೆಸುತ್ತಿರುವ ರಾಜಕಾರಣಿ, ನಂತರ ಒಬ್ಬರು ಸ್ವಾಮೀಜಿಗಳು ಮುಂದೆ ಬಂದರು. ಸದ್ಯ ಸರಾಸರಿ ಅಂಕಗಳನ್ನು ನೀಡಿ ನ್ಯಾಯ ಒದಗಿಸುವ ಪ್ರಕ್ರಿಯೆ ರೂಪುಗೊಂಡಿದೆ.
ಈ ಪ್ರಕರಣದ ಬಿಸಿ ಇನ್ನೂ ಇರುವಾಗಲೇ ಇನ್ನೊಂದು ವಿದ್ಯಮಾನ ಜರಗಿದೆ. ಜನಿವಾರದ ನಿಷೇಧದ ನಿಯಮವನ್ನು ಖಂಡಿಸುವಲ್ಲಿ ಮಂಚೂಣಿಯಲ್ಲಿದ್ದ ಬಿ.ಜೆ.ಪಿ. ನೇತೃತ್ವದ ಸರಕಾರವೇ ಈಗ ಕೇಂದ್ರದಲ್ಲಿದೆ. ಅದರ ಅಧೀನದಲ್ಲೇ ಇರುವ ರೈಲ್ವೇ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಿರುವುದು ರೈಲ್ವೇ ಸಚಿವಾಲಯಕ್ಕೆ ತಿಳಿಯದೆ ಹೋಯಿತೇ? ಈ ಸೂಚನೆಗಳನ್ನು ಪ್ರವೇಶ ಪತ್ರದಲ್ಲೇ ಮುದ್ರಿಸಿರುವುದರಿಂದ ಇದು ಯಾರದೇ ಒಳಸಂಚಿನ ಭಾಗವಾಗಿರುವುದು ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಭಾವನೆಯುಳ್ಳ ಪಕ್ಷದ ಆಡಳಿತದಲ್ಲೂ ಹೀಗಾಗುತ್ತಿರುವುದಾದರೆ ನಮ್ಮ ಸಂಸ್ಕೃತಿಯ ರಕ್ಷಣೆಗೆ ಮತ್ಯಾರಿದ್ದಾರೆ? ಜನಿವಾರದ ಗೌರವಕ್ಕೆ ತತ್ವಾರ ಬಂದಾಗ ಕಾಂಗ್ರೆಸ್ ಪಕ್ಷದ ಮಂತ್ರಿಗಳೂ ಮುಖ್ಯ ಮಂತ್ರಿಗಳೂ ತಪ್ಪಿತತ್ಥರಿಗೆ ಶಿಕ್ಷೆ ನೀಡುವಂತೆ ಆಜ್ಞೆ ಮಾಡಿದ್ದಾರೆಂಬುದು ಸಮಾಧಾನಕರವಾದ ಅಂಶ.
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ! ಅದರಲ್ಲೂ ಮೂಗುತಿ, ಬಳೆ, ಕಿವಿಯೋಲೆ ಮಂಗಲಸೂತ್ರ, ಜನಿವಾರದಂತಹ  ಸಂಕೇತಗಳು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಹೇಗೆ ಸಹಕರಿಸಬಹುದು? ಈ ಬಗ್ಗೆ ನಿಯಮಗಳನ್ನು ಮಾಡಿದವರಲ್ಲಿ ವಿವರಣೆಗಳಿವೆಯೆ? ಮಂಗಲಸೂತ್ರದಲ್ಲಿ ಏನಾದರೂ ಬ್ಲೂಟೂತ್ ಅಡಗಿಸಿಟ್ಟು ಅಕ್ರಮ ಮಾಡಿದ ಉದಾಹರಣೆಗಳಿವೆಯೆ? ಕಿವಿಗೆ ತೂತು ಮಾಡಿ ಒಳನುಗ್ಗಿಸಿ ಗಟ್ಟಿ ಮಾಡಿಟ್ಟ ಓಲೆ ಹಾಗೂ ಮೂಗುತಿಯಂತಹ ಸರಳ ಆಭರಣಗಳನ್ನು ಅಕ್ರಮಕ್ಕೆ ಹೇಗೆ ಉಪಯೋಗಿಸಬಹುದು? ಇನ್ನು ಅಂಗಿ ಬನಿಯನ್‍ಗಳ ಒಳಗೇ ಇರುವ ಜನಿವಾರಕ್ಕೆ ಗುಟ್ಟಾಗಿ ಉತ್ತರಗಳನ್ನು ಹೇಳಿ ಕೊಡುವ ಮಾಂತ್ರಿಕ ಶಕ್ತಿ ಇದೆಯೆಂದು ನಂಬಲಾಗಿದೆಯೇ? ಅದೇನಾದರೂ ದೈವಿಕ ಸ್ಮರಣ ಶಕ್ತಿಯನ್ನು ಕೊಡುತ್ತದೆಯೆ? ಇಂತಹ ಯಾವುದೇ ಪುರಾವೆಗಳಿಲ್ಲದೆ ಹಿಂದೂ ಧರ್ಮದ ಸಂಕೇತಗಳಿಗೆ ಕೊಕ್ ಕೊಡುವುದೆಂದರೆ ಅದು ಅಭ್ಯರ್ಥಿಯ ಆತ್ಮಶಕ್ತಿಯನ್ನು ಕುಂದಿಸುವುದಲ್ಲದೆ ಬೇರೇನೂ ಅಲ್ಲ.
ಇಂಗ್ಲಿಷ್ ಮಿಡಿಯಂ ಬೇಕೆಂದು ಕ್ರಿಶ್ಚಿಯನ್ ಶಾಲೆಗಳಿಗೆ ಹೋದ ಹಿಂದೂ ಹೆಣ್ಮಕ್ಕಳಿಗೆ ಬಳೆ ಮತ್ತು ಬಿಂದಿ ತೆಗೆಯಬೇಕೆಂಬ ನಿಷೇಧಗಳ ಅನುಭವ ಇರುತ್ತದೆ. ಅವರು ಅದಕ್ಕೆ ಹೊಂದಿಕೊಂಡಿರಬಹುದು. ಆದರೆ ಸಾಂಪ್ರದಾಯಿಕ ಉಪನಯನ ಆಗಿದ್ದು ಜಪಾನುಷ್ಟಾನ ಮಾಡುವ ಹುಡುಗನಿಗೆ ಜನಿವಾರ ತೆಗೆಯುವುದೆಂದರೆ ತನ್ನ ದೇಹದ ಒಂದು ನರತಂತುವನ್ನು ಎಳೆದು ತೆಗೆದಂತಹ ನೋವಾಗಬಹುದು. ಅದೇ ರೀತಿ ಮಂಗಲಸೂತ್ರವನ್ನು ತೆಗೆದಿಡುವುದೆಂದರೆ ಸುಮಂಗಲೆಯರಿಗೆ ಪ್ರಾಣಾಂತಿಕ ಸಂಕಟವಾಗಬಹುದು! ಅಂತಹ ಆಘಾತಕ್ಕೆ ಒಳಗಾಗಿ ಪರೀಕ್ಷಾ ಕೊಠಡಿಗೆ ನುಗ್ಗಿದರೂ ಉತ್ತರಗಳನ್ನು ಬರೆಯುವಾಗ ಅವರ ಮನಸ್ಸು ಗೊಂದಲಕ್ಕೆ ಒಳಗಾಗಬಹುದು. ಇದು ಅವರ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಇದ್ಯಾವುದರ ಬಗ್ಗೆಯೂ ಯೋಚಿಸದೆ ನಿಯಮಗಳನ್ನು ಹೇರುವವರಿಗೆ ಒಂದೋ ಸ್ವಂತ ಮಕ್ಕಳಿಲ್ಲ, ಅಥವಾ ಅವರಿಗೆ ಹಿಂದು ಧಾರ್ಮಿಕ ಪ್ರಜ್ಞೆಯ ಅರಿವಿಲ್ಲ. ಇಂತಹವರ ಕೈಯಲ್ಲಿ ನಮ್ಮ ದೇಶದಲ್ಲೇ ನಮ್ಮದೇ ಪ್ರಜೆಗಳು ಅರ್ಹತೆ ಇದ್ದೂ ಉದ್ಯೋಗಹೀನರಾಗುವ ದುರವಸ್ಥೆಗೊಳಗಾಗುತ್ತಾರೆ. ಇದು ತಪ್ಪಿಸಬೇಕಾದ ಒಂದು ಪ್ರಕ್ರಿಯೆ.
(ವಿ.ಸೂ: ಈ ಬರಹ ಪ್ರಕಟದ ವೇಳೆಗೆ ಕೆಲವು ನಿಯಮಗಳು ಬದಲಾವಣೆಗೆ ಸೂಚಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಮುಂದೆ ಇಂತಹ ಘಟನೆಗಳು ನಡೆಯಬಾರದು ಎನ್ನುವುದು ಉದ್ದೇಶವಾಗಿದೆ )

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!
May 18, 2025
7:07 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror

Join Our Group