“ಎಲೆಚುಕ್ಕಿ ಹೋಗೇ… ನಮ್ಮ ತ್ವಾಟದಿಂದ ಹೋಗೇ…! , ನೀ ಹೋಗದೇ ಹೋದರೆ ನಾ ಕೆರೆ ಬಾವಿ ಪಾಲೇ…..””
ಹೀಗೆ ಹಾಡುತ್ತಾ ನಿರಾಶಾದಾಯಕ ವಾಗಿರುವ ದಿನಗಳನ್ನು ಎದುರು ನೋಡುವ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಅಡಿಕೆ ಬೆಳೆಗಾರರ ದೃಷ್ಟಿಯಿಂದ ಈ ಕಿರು ಚಿಂತನೆ ಇದು.
ಈಗ್ಗೆ ಕೆಲವು ದಿನಗಳ ಹಿಂದೆ ನಾನು ಸಾಗರ ಸಮೀಪದ ಶ್ರೀಧರ ಸ್ವಾಮಿಗಳ ವರದಳ್ಳಿ ಗೆ ಹೋಗಿದ್ದೆ. ಶ್ರೀಧರಾಶ್ರಮದ ಕೇಂದ್ರ ಕಚೇರಿಯಲ್ಲಿ “ಶ್ರೀಧರ ಸ್ವಾಮಿಗಳು ಒಂದೊಮ್ಮೆ ಅಡಿಕೆಗೆ ಮಾರಕ ರೋಗ ಬಂದಾಗ ಮಂತ್ರಾಕ್ಷತೆ ಕೊಟ್ಟು ಆ ಅಡಿಕೆ ರೋಗವನ್ನು ಗುಣ ಮಾಡಿದ್ದರು” ಎಂಬ ಉಲ್ಲೇಖವನ್ನ ಅಲ್ಲಿನ ಫಲಕದಲ್ಲಿ ನೋಡಿದೆ.
ಬಹುಶಃ ಅದು 1972 ರ ಕಾಲ ಇರಬಹುದು. ಹಿರಿಯರು ಹೇಳಿದಂತೆ ಐವತ್ತು ವರ್ಷಗಳ ಹಿಂದೊಮ್ಮೆ ಈಗ ಅಡಿಕೆಗೆ ಬಂದಿರುವ ಎಲೆಚುಕ್ಕಿ ರೋಗದಂತೆ ಆಗಲೂ ಬಂದಿತ್ತು . ಆಗಿನಿಂದ “ಇನ್ನು ಅಡಿಕೆ ತೋಟ ನಂಬಿಕೊಂಡರೆ ಉಳಿಗಾಲವಿಲ್ಲ ” ಎಂಬ ಮಾತು ಅಡಿಕೆ ಬೆಳೆಗಾರರ ಮನೆಯಲ್ಲಿ ಆರಂಭವಾಯಿತು.
ಆಗಿನ್ನೂ ಅಡಿಕೆಯನ್ನ “ಸಾಂಪ್ರದಾಯಿಕ ಅಡಿಕೆ ಬೆಳೆಗಾರರು” ಮಾತ್ರ ಬೆಳೆಯುತ್ತಿದ್ದರು. ಆಗ ಅಡಿಕೆ ತಿನ್ನುವ ಮತ್ತು ಪೂಜನೀಯ ಉದ್ದೇಶ ದಿಂದ ಮಾತ್ರ ಬಳಸಲಾಗುತ್ತಿತ್ತು.
ಅದು ಜಮೀನ್ದಾರಿಕೆಯ ಸುವರ್ಣ ಕಾಲ, ಆಗಲೇ ದೊಡ್ಡ ಜಮೀನ್ದಾರರು “ಇನ್ನು ಅಡಿಕೆ ನಂಬಿಕೊಂಡರೆ ಆಗದು” ಎಂದು ತಮ್ಮ ಮಕ್ಕಳನ್ನು ಶಿವಮೊಗ್ಗ ಮೈಸೂರು ಬೆಂಗಳೂರಿಗೆ ಕಳಿಸಿ ಹೆಚ್ಚಿನ ವಿಧ್ಯಾಭ್ಯಾಸ ಮಾಡಿಸಿ ನೌಕರಸ್ಥರನ್ನಾಗಿ ಮಾಡ ತೊಡಗಿದರು. ಅದಕ್ಕೆ ಸರಿಯಾಗಿ ತದ ನಂತರದ ವರ್ಷಗಳಲ್ಲಿ ಭೂಸುಧಾರಣಾ ಕಾಯ್ದೆ ಬಂತು. ದೊಡ್ಡ ಜಮೀನ್ದಾರರು ಉಳಿಮೆ ಮಾಡಲು ಕೊಟ್ಟ “ಗೇಣಿ ” ಜಮೀನುಗಳು ಉಳುವವನ ಪಾಲಾಯಿತು.ಜಮೀನ್ದಾರರ ಜಮೀನು ಕರಗತೊಡಗಿತ್ತು.
ಶಿಕ್ಷಣ ಕ್ರಾಂತಿಯ ಆರಂಭದ ದಿನಗಳಾದ ಆ ಸಂಧರ್ಭದಲ್ಲಿ ದೊಡ್ಡ ಜಮೀನ್ದಾರರು ತಮ್ಮ ಮಕ್ಕಳನ್ನು ಜಮೀನು ನೋಡಿ ಕೊಳ್ಳಲು ಉಳಿಸಿಕೊಳ್ಳದೇ ಓದಿಸಿ ನೌಕರಸ್ಥರನ್ನಾಗಿ ಮಾಡತೊಡಗಿದರು. ಇದರ ಜೊತೆಗೆ ಆಗ ಕುಟುಂಬ ಯೋಜನೆಯ ಪ್ರಭಾವದಿಂದಾಗಿ ಮಕ್ಕಳನ್ನು ಮಾಡಿಕೊಳ್ಳುವ ವಿಷಯದಲ್ಲೂ ಜಮೀನ್ದಾರರು ಲೆಕ್ಕಾಚಾರ ಹಾಕತೊಡಗಿದರು. ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಕುಟುಂಬ ಯೋಜನೆಗೆ ಒಳಪಟ್ಟರು.
ಇದಕ್ಕೂ ಮೊದಲು ಜಮೀನ್ದಾರರು ಮನೆ ಗೆ ಒಬ್ಬನನ್ನಾದರೂ ಮಗನನ್ನು ಇಟ್ಟುಕೊಳ್ತಿದ್ದರು. ಆ ನಂತರದಿಂದ ಬುದ್ದಿವಂತ ರೈತರು ಅದರಿಂದಲೂ ಹಿಂದೆ ಸರಿದರು. ಅದರ ತತ್ಪರಿಣಾಮದಿಂದಲೇ ಈಗ ಮಲೆನಾಡು “ಸ್ವಾತಂತ್ರ್ಯ” ವೃದ್ದಾಶ್ರಮವಾಗಿರುವುದು.
ಇದಾಗಿ ಮೂವತ್ತು ಮೂವತ್ತೈದು ವರ್ಷಗಳ ನಂತರ ಕ್ರಮವಾಗಿ “ಗುಟ್ಕಾ ನಿಷೇಧ, ಅಡಿಕೆ ಹಾನಿಕಾರಕ -ನಿಷೇಧ
, ಅಡಿಕೆ ಆಮದು ಹೀಗೆ ಒಂದರ ಮೇಲೊಂದು ಅಡಿಕೆ ಮೇಲೆ ದಾಳಿಯಾಗ ತೊಡಗಿತು. ಹೀಗೆ ದಾಳಿಯಾದಾಗಲೆಲ್ಲಾ ಅಡಿಕೆ ಬೆಳೆಗಾರರು ಜಾಗೃತರಾಗಿ ” ಇನ್ನು ಅಡಿಕೆ ಗೆ ಭವಿಷ್ಯವಿಲ್ಲ “ಎಂಬ ತಮ್ಮ ಪುರಾತನ ನಂಬಿಕೆಗೆ ಪುಷ್ಟಿ ಯಾಗಿ ಜಾಗೃತರಾರಾಗಿ ನಡೆದುಕೊಂಡು ಮಲೆನಾಡಿನ ಅಡಿಕೆ ಬೆಳೆಗಾರರು ಎಂದರೆ ಬುದ್ದಿವಂತರು ಎಂಬುದನ್ನು ಸಾಕ್ಷತ್ತೀಕರಿಸ ತೊಡಗಿದರು.
ಆದರೆ ಈ ನಡುವೆ ಐವತ್ತು ವರ್ಷಗಳ ಹಿಂದೆ ಅಡಿಕೆಗೆ ಭವಿಷ್ಯವಿಲ್ಲ ಎಂಬ ಕಾಲದಿಂದ ಈ ಹೊತ್ತಿನ ವರೆಗೂ ಅಡಿಕೆ ಬೆಳೆ ಒಂದಕ್ಕೆ “ನೂರು ಪಟ್ಟು” ವಿಸ್ತರಣೆಯಾಗುತ್ತಲೇ ಹೋಗಿದೆ…!!
ನಮ್ಮ ಮಲೆನಾಡಿನಲ್ಲಿ ಅಡಿಕೆ ತೋಟಗಳು ವಿಸ್ತರಣೆಗೊಂಡಿದ್ದು ಅತಿ ಎಂದರೆ ಅತಿ “ನಿಧಾನವಾಗಿ”. ಬಯಲು ಸೀಮೆಯ ರೈತರು ಒಂದೇ ಬಾರಿಗೆ ಐದು ಹತ್ತು ಸಾವಿರ ಅಡಿಕೆ ಸಸಿ ಗಳನ್ನು ನೆಟ್ವರೆ ಮಲೆನಾಡಿನವರು ಒಂದು ವರ್ಷಕ್ಕೆ ನೂರು ಸಸಿ , ಇನ್ನೂರು ಸಸಿ ಹೀಗೆ ನೆಟ್ಟು ಅಡಿಕೆ ತೋಟ ವಿಸ್ತರಣೆ ಮಾಡಿಕೊಂಡಿದ್ದಾರೆ.
ಕೇವಲ ಹತ್ತು ವರ್ಷಗಳ ಈಚೆ ನಮ್ಮಲ್ಲಿ ಸ್ವಲ್ಪ ದೊಡ್ಡ ಮಟ್ಟದ “ಜೆಸಿಬಿ” ಟ್ರಾಕ್ಟರ್ ಮುಂತಾದ ಯಂತ್ರ ಬಳಸಿ ಗುಡ್ಡ ಬೆಟ್ಟ ಗದ್ದೆ ಕರಗಿಸಿ ಅಡಿಕೆ ತೋಟಗಳು ವಿಸ್ತರಣೆ ಮಾಡಿದ್ದಾರೆ.ಯಾವಾಗ ಕೊರೋನ ಬಂತೋ ತದ ನಂತರ ನಮ್ಮ ಮಲೆನಾಡಿನಲ್ಲಿ ಅಡಿಕೆ ತೋಟ ವಿಸ್ತರಣೆ ರಾಕೆಟ್ ವೇಗ ಪಡೆದುಕೊಂಡಿತು.
ಮಲೆನಾಡಿನ ರೈತರು ಅಡಿಕೆ ವಿಸ್ತರಣೆ ಯ ಬಗ್ಗೆ ಬಹಳ ಜಾಗೃತೆ ವಹಿಸಿದ್ದಾರೆ. ಮೂಲ ಕೃಷಿಕರು , ಕೃಷಿಯೊಂದೇ ಉತ್ಪತ್ತಿ ಇರುವವರು ಹೆಚ್ಚು ಹೆಚ್ಚು ಅಡಿಕೆ ವಿಸ್ತರಣೆ ಗೆ ಮನಸು ಮಾಡಿಲ್ಲ. ಅವರಿಗೆ “ಅಡಿಕೆ ಭವಿಷ್ಯದ ಬಗ್ಗೆ ಸದಾ ಆತಂಕ”.
ಆದರೆ ಮೂಲ ಅಡಿಕೆ ಕೃಷಿಯೊಂದನ್ನೇ ನಂಬಿರುವ ಅಡಿಕೆ ಬೆಳೆಗಾರರಿಗೆ ಸರಿ ಸಮ ನಾಗಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ “ಹೊರಗಿನ ಬಂಡವಾಳಷಾಹಿಗಳು” ಅಡಿಕೆ ತೋಟವನ್ನು ” ತೆರಿಗೆ ಉಳಿತಾಯ, ಕಪ್ಪುಬಿಳಿ ಹಣ” ಇನ್ನಿತರ ಕಾರಣಕ್ಕೆ ಬಂಡವಾಳ ಹೂಡಿದ್ದಾರೆ.
ಅಡಿಕೆ ಬೆಳೆಗಾರರಲ್ಲಿ ನಾಲ್ಕು ಬಗೆಯವರಿದ್ದಾರೆ.
ಈ ನಾಲ್ಕು ವರ್ಗಗಳಲ್ಲಿ ಹೆಚ್ಚು ಕಡಿಮೆ ಮೊದಲ ಮೂರು ವರ್ಗ ಸಾಕಷ್ಟು ಆರ್ಥಿಕ ವಾಗಿ ಸಬಲವಾಗಿದೆ. ಈ ಮೂರು ವರ್ಗದ ಜಮೀನ್ದಾರರಲ್ಲಿ ಹೆಚ್ಚಿನವರು ಎರಡು ದೋಣಿಯಲ್ಲಿ ಕಾಲಿಟ್ಟುಕೊಂಡು ಸಂಚರಿಸುವವರು.ಇವರ ಸಂಪೂರ್ಣ ಅಡಿಕೆ ತೋಟ ಯಾವುದೇ ಬಗೆಯ ಹಾನಿಯಾಗಿ ನಾಶವಾದರೂ ಅಥವಾ ಅಡಿಕೆ ದರ ಸಂಪೂರ್ಣವಾಗಿ ನೆಲಕಚ್ಚಿದರೂ ಇವರು ಚೇತರಿಸಿಕೊಳ್ಳಲು ಸಾದ್ಯವಿರುವವರು.
ಈ ಐದು ಹತ್ತು ಎಕರೆ ಅಡಿಕೆ ತೋಟದ ಜಮೀನ್ದಾರರ ಕುಟುಂಬದಲ್ಲಿ forth generation (ನಾಲ್ಕನೇ ಪೀಳಿಗೆ) ಯಲ್ಲಿ
ನೂರು ಜನ ಯುವ ಪೀಳಿಗೆಯಲ್ಲಿ ಒಬ್ಬ ಯುವಕ ಜಮೀನ್ದಾರಿಕೆ ಮುಂದುವರಿಸಿ ಕೊಂಡು ಹೋಗುವುದನ್ನೂ ನಾವು ಕಾಣು ವುದು ಅಪರೂಪ.
ಈ ಜಮೀನ್ದಾರರ ಅನೇಕ ಮನೆಗಳಲ್ಲಿ ರೈಟರ್ ಗಳಿದ್ದಾರೆ. ಮೂಲ ಮಾಲಿಕರು ನಗರ ಪ್ರದೇಶದಲ್ಲಿ ಉತ್ತಮ ಹುದ್ದೆಯಲ್ಲಿ ಇದ್ದಾರೆ. ಈ “ದೊಡ್ಡ ಜಮೀನಿನ ದೊಡ್ಡ ವರು” ಕಳೆದ ಐವತ್ತು ವರ್ಷಗಳಿಂದ “ಅಡಿಕೆ ಗೆ ಭವಿಷ್ಯವಿಲ್ಲ ” ಎಂಬ ಸದಾ ಕಾಲದ ಮಾತಿನಿಂದ ಎಚ್ಚರಿಕೆಯಿಂದ ಜಮೀನಿನ ನಿರ್ವಹಣೆ ಮಾಡಿಯೂ ಒಂದು ಅಂತರ ಕಾದುಕೊಂಡಿದ್ದಾರೆ.
ಆದರೆ ನಾವೀಗ ಚಿಂತನೆ ಮಾಡಬೇಕಾಗಿ ರುವುದು ಸದಾ ಆರ್ಥಿಕ ಏರಿಳಿತ ಗಳ ಹೋಯ್ದಾಟದ ನಡುವೆ ಜೀವನ ಅಭದ್ರತೆಯಲ್ಲೇ ನಡೆಸಿಕೊಂಡು ಹೋಗುತ್ತಿರುವ ,ಅಡಿಕೆ ಉತ್ತಮ ದರ ಎಂದೂ ಸಿಗದ ಈ ಬಡ ಮದ್ಯಮ ವರ್ಗದ ಚಿಕ್ಕ ಹಿಡುವಳಿದಾರರ ಬಗ್ಗೆ…. ಈ ನಾಲ್ಕನೇ ವರ್ಗದ ಅಡಿಕೆ ಬೆಳೆಗಾರರಿಗೆ ವ್ಯವಸ್ಥೆಯ ಯಾವ ರಕ್ಷಣೆಯೂ ಇಲ್ಲವಾಗಿದೆ. ಈ ಚಿಕ್ಕ ಹಿಡುವಳಿ ಚಿಕ್ಕ ಬಾಗಾಯ್ತಿನ ಅಡಿಕೆ ಉತ್ಪತ್ತಿ ನಂಬಿಕೊಂಡು ಮನೆ ನಿರ್ವಹಣೆ, ಸಾಲಸೋಲ ಮಾಡಿಕೊಂಡು ಹೆಣಗಾಡುತ್ತಾ ಈ ನಾಲ್ಕನೇ ವರ್ಗ ಜೀವನ ನೆಡೆಸುತ್ತಿದ್ದಾರೆ.
ಅಡಿಕೆ ಹಳದಿಎಲೆ ಅಡಿಕೆ ಎಲೆಚುಕ್ಕಿ ರೋಗ ಬಾಧೆ … ಅಡಿಕೆ ತೋಟ ನಾಶ ವಾದರೆ ಮುಂದೇನು… ? ಎಂಬ ಪ್ರಶ್ನೆ ಇನ್ನಿಲ್ಲದಂತೆ ಕಾಡುತ್ತಿರುವುದು ಇತರೆ ಮೂರು ವರ್ಗದವರಿಗಿಂತ ಇವರಿಗೇ ಹೆಚ್ಚು.ಎಲೆಚುಕ್ಕಿ ರೋಗ ಹತ್ತಿರದಲ್ಲೇ ಇದೆ. ನಾಳೆ ನಮ್ಮ ತೋಟವನ್ನು ಆವರಿಸಿದರೆ ನನ್ನ ಮುಂದಿನ ಬದುಕು ನೆಡೆಯುವುದು ಹೇಗೆ….?
ಈ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ರಲ್ಲೂ ಅಷ್ಟೇ.., ಐವತ್ತು ದಾಟಿದವರೇ ಅಧಿಕ. ಈ ಮದ್ಯ ವಯಸ್ಸಿನಲ್ಲಿ ಯಾವ ಊರಿಗೆ “ಗುಳೇ ” ಹೋಗಿ ಈ ಮದ್ಯವಯಸಿನ ಮದ್ಯಮ ವರ್ಗದ ಕೃಷಿಕರು ಏನು ಕೆಲಸ ಮಾಡಿ ಜೀವನ ಕಟ್ಟಿ ಕೊಳ್ಳುತ್ತಾರೆ…?
ಸರ್ಕಾರ ಈವರೆಗೂ ಹೀಗಿನ ಅಡಿಕೆ ರೋಗದಿಂದ ನಾಶವಾದ ಸಣ್ಣ ಅತಿಸಣ್ಣ ಅಡಿಕೆ ಬೆಳೆಗಾರರಿಗೆ ಏನು ಪರಹಾರ ಕೊಟ್ಟಿದೆ….?
ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಿದೆಯೇ …?!! ಪ್ರಮುಖ ಪಕ್ಷಗಳು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿದ್ದರೂ ಕೂಡ ಈ ಅನಾದಿಕಾಲದ ಅಡಿಕೆ ರೋಗ ಸಮಸ್ಯೆ ಗೆ ಪರಿಹಾರ ಸಿಕ್ಕಿಲ್ಲ.ಸಣ್ಣ ಅತಿ ಸಣ್ಣ ಅಡಿಕೆ ಬೆಳೆಗಾರ ತನ್ನ ದೈನೇಸಿ ಸ್ಥಿತಿಯನ್ನು ಯಾರಿಗೆ ಹೇಳಿಕೊಳ್ಳಬೇಕು..?
ಧ್ವನಿ ಯಿರುವ ದೊಡ್ಡವರಿಗೆ ಸೂಕ್ತ ಸ್ಥಾನ ಮಾನ ಕೊಟ್ಟು ವ್ಯವಸ್ಥೆಯ ದೋಷದ ಬಗ್ಗೆ “ಧ್ವನಿ” ಎತ್ತದಂತೆ ಸುಮ್ಮನಾಗಿಸು ತ್ತಾರೆ. ಇವರಿಗೆ ಬಡ ಮದ್ಯಮ ವರ್ಗದವರ “ಬವಣೆ” ಗಳಿಲ್ಲ. ಅಕಸ್ಮಾತ್ತಾಗಿ ಬಡ ಮದ್ಯಮ ವರ್ಗದವರ ಬವಣೆಗಳು ಇವರಿಗೆ ನಿಲುಕಿದರೂ ವ್ಯವಸ್ಥೆ ಇವರ ಧ್ವನಿಯನ್ನ “ಅಡಗಿಸಿದೆ”. ನಿಜಕ್ಕೂ ಬಡ ಮದ್ಯಮ ವರ್ಗದ ಕೃಷಿಕ ರಿಗೆ ಅಸಂಖ್ಯ ಬವಣೆಗಳಿವೆ. ಆದರೆ ಅದನ್ನು ಆಳುವ ವ್ಯವಸ್ಥೆ ಗೆ ಮನ ಮುಟ್ಟಿಸುವ ” ಧ್ವನಿ ” ಇಲ್ಲ.
ಇದು ಇಷ್ಟೇ “ಹಸಿವಿರುವವನಿಗೆ ಧ್ವನಿ ಇಲ್ಲ… ಧ್ವನಿ ಇರುವವನಿಗೆ ” ಹಸಿವಿಲ್ಲ”…!! ಎಂದಿನಂತೆ ಎಲ್ಲ ಪ್ರೊಟೋಕಾಲ್ ಗಳು ತನ್ನಂತಾನೇ ನೆಡೆಯುತ್ತದೆ.ಅಷ್ಟೇ…
ಸಣ್ಣ ಅತಿ ಸಣ್ಣ ಅಡಿಕೆ ಬಾಗಾಯ್ತಿನ ಜಮೀನ್ದಾರರು ಈ ವ್ಯವಸ್ಥೆ ತನ್ನ ಚೌಕಟ್ಟಿನಾಚೆ ಬಂದು ತನ್ನ ಬವಣೆಗೆ ಆಗುತ್ತದೆ ಎಂಬ ಆಸೆ ಬಿಟ್ಟು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವತ್ತಾ ಯೋಚಿಸಿ ಯೋಜಸಿ ಮುಂದಡಿಯಿಡಬೇಕಿದೆ.
ನಮ್ಮ ಲಗೇಜಿಗೆ ನಾವೇ ಜವಾಬ್ದಾರರು.. ಇದಿಷ್ಟೇ...
ಖಂಡಿತವಾಗಿಯೂ ಇವತ್ತು ಎಲೆಚುಕ್ಕಿ ರೋಗ ಪೀಡಿತರ ಸಾಲಿನಲ್ಲಿ ಬೇರೆಯವರಿದ್ದರೆ ನಾಳೆ ನಾವಿರುವುದು ನಿಸ್ಸಂದೇಹ. ಯಾವ ಪವಾಡವೂ ನೆಡೆಯದು. ಎಲೆಚುಕ್ಕಿ ರೋಗಕ್ಕೆ ಸದ್ಯಕ್ಕಂತೂ ಪರಿಹಾರ ಸಿಗದು. ಆ ಆಸೆ ಬೇಡ..
ನೇರವಾಗಿ ಅಡಿಕೆ ಉತ್ಪತ್ತಿ ಯನ್ನೇ ನಂಬಿಕೊಂಡ ಸಣ್ಣ ಅತಿಸಣ್ಣ ಅಡಿಕೆ ಬೆಳೆಗಾರರು ಯಾರೋ “ದೊಡ್ಡವರು” , ಸಂಘ ಸಂಸ್ಥೆಗಳು ” ನಮ್ಮೊಂದಿಗೆ ಇದ್ದಾರೆ ಎಂದು ನಂಬಿ ಮೈಮರೆಯುವುದು ಬೇಡ...
ನಮ್ಮ ಸಮಾಜದಲ್ಲಿ ಅನುಕರಣೆ ಅತಿ ಹೆಚ್ಚು. ಕುರಿ ಮಂದೆಯಂತೆಯೇ… ಅದೇ ಬಗೆಯಲ್ಲಿ ಕೃಷಿಯಲ್ಲೂ ಅಷ್ಟೇ. ಅಡಿಕೆ ಬೆಳೆ ವಿಸ್ತರಣೆ ಮಾಡುತ್ತಿರುವ ಮತ್ತು ಅಡಿಕೆ ಭವಿಷ್ಯದ ವಿಚಾರದಲ್ಲೂ ಅಷ್ಟೇ….
ಜಾಗೃತೆ ಚಿಂತನೆಯಿಲ್ಲ. ದೊಡ್ಡ ಬೆಳೆಗಾರರು ಅಡಿಕೆಯ ವಿಚಾರದಲ್ಲಿ ರೋಗ ಬಂದು ನಾಶವಾಗುವ ತನಕವೂ ಅಡಿಕೆ ಉತ್ಪತ್ತಿ ಬಳಸಿಕೊಳ್ತಾರೆ. ಒಂದೊಮ್ಮೆ ಅಡಿಕೆ ರೋಗದಿಂದ ನಾಶ ವಾದರೆ ಇಲ್ಲ ಅಡಿಕೆ ದರ ಬಿದ್ದು ಹೋಗುವ ತನಕವೂ ಅಡಿಕೆ ಬೆಳೆಯುತ್ತಾರೆ. ತದ ನಂತರ ಇನ್ನೊಂದು ಬೆಳೆ ಇನ್ನೊಂದು ಉದ್ಯೋಗ… ಅಷ್ಟೇ.
ದೊಡ್ಡವರಿಗೆ ಈ ಅಡಿಕೆ ಕೃಷಿ ಎಂಬುದು ಒಂದು ಬಗೆಯಲ್ಲಿ ಬರಡೆಮ್ಮೆ ಕರಾವು ಇದ್ದಂತೆ. ಆದರೆ ಸಣ್ಣ ಅತಿಸಣ್ಣ ಅಡಿಕೆ ಬೆಳೆಗಾರರು ನಮ್ಮ ಜೊತೆಗೆ ” ದೊಡ್ಡ ವರು” ಇದ್ದಾರೆ ಅಥವಾ ಯಾರೋ ನಮ್ಮ ಜೊತೆಗೆ ಇದ್ದಾರೆ ,
ಎಲ್ಲರಿಗಾಗಿದ್ದು ನಮಗಾಗುತ್ತದೆ ಎಂಬ “ಪುರಾತನ ಸಿದ್ಧಾಂತ” ದಿಂದ ಹೊರಬರದಿದ್ದರೆ , ಭವಿಷ್ಯದ ಬಗ್ಗೆ ಜಾಗೃತೆ ಯಾಗದಿದ್ದರೆ ಅನಾಹುತ ಗ್ಯಾರಂಟಿ.
ಅಡಿಕೆ ರೋಗ ಬಂದು ನಾಶವಾದರೆ ಅಡಿಕೆಯ ಅವಲಂಬಿಸಿದ ಅಥವಾ ಅಡಿಕೆಯ ಆಂಶಿಕ ನೆರಳಿನಡಿಯಲ್ಲಿ ಬೆಳೆವ ಯಾವುದೇ ಅಂತರ್ ಬೆಳೆ ಬೆಳೆಯಲು ಸಾದ್ಯವಿಲ್ಲ ಅಥವಾ ಬಹಳ ಕಷ್ಟ. ಉದಾಹರಣೆಗೆ ಈಗ ಉತ್ತಮ ಬೆಲೆ ಯಿರುವ “ಕಾಳುಮೆಣಸು” ಬೆಳೆ. ಒಂದು ವೇಳೆ ಇದು ಹಂಬಿಸಿದ ಅಡಿಕೆ ಮರವೇ ರೋಗ ಪೀಡಿತ ವಾಗಿ ಮರ ಸತ್ತು ಹೋದಲ್ಲಿ ಕಾಳುಮೆಣಸಿನ ಬೆಳೆಯ ಭವಿಷ್ಯವೂ ಮುಗೀತು. ಹೀಗೆ ಅಡಿಕೆ ತೋಟದ ನೆರಳಿನ ಆಧಾರದ ಏಲಕ್ಕಿ, ಕಾಫಿ, ಜಾಯಿಕಾಯಿ ಜಾಪತ್ರೆ ಸೇರಿದಂತೆ ಅಡಿಕೆಯ ಎಲ್ಲಾ ಅಂತರ್ ಬೆಳೆಯೂ ಅಷ್ಟೇ. ಕೃತಕ ನೆರಳು ಪರದೆ ಹಾಕಿ ನಿರ್ವಹಣೆ ಮಾಡುವುದೂ ಮಳೆ ಗಾಳಿ ಯ ಸಂಧರ್ಭದಲ್ಲಿ ಇಂತಹ ನಿರ್ಮಾಣ ಗಳನ್ನು ಉಳಿಸಿಕೊಳ್ಳಲು ಕಷ್ಟ.
ಬಹಳಷ್ಟು ಉಪ ಬೆಳೆ ಅಥವಾ ಮಲೆನಾಡಿನಲ್ಲಿ ಅಡಿಕೆಗೆ ಪರ್ಯಾಯ ಬೇರೆ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಮಾರುಕಟ್ಟೆ ಮತ್ತು ಮಂಗ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಅಡಿಕೆ ಬದಲಿ ಬೆಳೆ ಮತ್ತು ಜೀವನ ಮಾರ್ಗಗಳ ಕುರಿತು ಸಣ್ಣ ಮದ್ಯಮ ವರ್ಗದ ಅಡಿಕೆ ಬೆಳೆಗಾರರು ಈ ತಕ್ಷಣದಿಂದಲೇ ಖಂಡಿತವಾಗಿಯೂ ಜಾಗೃತೆ ಯಾಗಲೇ ಬೇಕು.
ನೆನಪಿಡಿ ಅಡಿಕೆ ಬೆಳೆಗಾರ ಬಂಧುಗಳೇ, ಅಡಿಕೆ ಬೆಲೆ ಮತ್ತು ಬೆಳೆ ಎರಡೂ ಅತಿ ಶೀಘ್ರವಾಗಿ ಬಿದ್ದು ಹೋಗಲಿದೆ. ಆ ಬಗ್ಗೆ ಯಾವ ಅನುಮಾನವೂ ಇಲ್ಲ. ಈ ನಾಶ ಅಥವಾ ಅವಸಾನದ ಪ್ರಕ್ರಿಯೆ ಈಗ ರೋಗಭಾದೆಯ ತೀವ್ರ ಪರಿಣಾಮದಲ್ಲಿರುವವರು – ರೋಗ ಪೀಡಿತ ಪ್ರದೇಶಗಳು ತಕ್ಷಣಕ್ಕೇ ನಷ್ಟ ಕ್ಕೊಳಗಾದರೆ ಈಗ ಆರೋಗ್ಯವಂತ ವಾಗಿರುವ ಮಲೆನಾಡು -ಕರಾವಳಿಯ ಭಾಗದ ಎಲ್ಲಾ ಅಡಿಕೆ ತೋಟಗಳನ್ನು ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಆವರಿಸಲಿದೆ. ಇದಕೆ ಯಾವ ಸಂಶಯ ಬೇಡ. ಅಕಸ್ಮಾತ್ತಾಗಿ ರೋಗ ಬಾಧೆ ಕಾಡದಿದ್ದರೂ “ಅಡಿಕೆ ವಿಸ್ತರಣೆ ಬಾಧೆ” ಯಂತೂ ನಿಚ್ಚಳವಾಗಿ ಕಾಡಿ ಬೆಲೆ ಕುಸಿತವಂತೂ ನೂರಕ್ಕೆ ನೂರರಷ್ಟು ಅಡಿಕೆ ಬೆಳೆಗಾರರ ಕಾಡಲಿದೆ.
ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಈ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಸಾಂಪ್ರದಾಯಿಕ ಅಡಿಕೆ ಬೆಳೆಯಲಾಗದ ಮತ್ತು ಸಾಂಪ್ರದಾಯಿಕ ಅಡಿಕೆ ಗೆ ಪ್ರತ್ಯೇಕ ಹೆಚ್ಚು ಬೆಲೆ ಇಲ್ಲದ ಕಾರಣಕ್ಕೆ ಅಡಿಕೆ ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶದಲ್ಲಿ ನಿಧಾನವಾಗಿ ಕಾಣೆಯಾಗುವುದು ಖಾತ್ರಿ. ಬುದ್ದಿವಂತ ಮಲೆನಾಡು – ಕರಾವಳಿಯ ಅಡಿಕೆ ಬೆಳೆಗಾರರು ಈ ಬಗ್ಗೆ ಜಾಗೃತೆ ಯಾಗಲಿ ಎಂಬುದು ನನ್ನ ಈ ಲೇಖನದ ಆಶಯ.
ಕೊನೆಯದಾಗಿ ಸಮಸ್ತ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರಿಗೆ ಟೊಮ್ಯಾಟೊ ಬೆಳೆ ಮಾರುಕಟ್ಟೆಯ ಉದಾಹರಣೆ ಕೊಟ್ಟು ಲೇಖನ ಮುಗಿಸುತ್ತಿದ್ದೇನೆ.
ಟೊಮ್ಯಾಟೊ ಬೆಲೆ ಕೇವಲ ಮೂರು ತಿಂಗಳಲ್ಲಿ “ಇನ್ನೂರು” ರೂಪಾಯಿಯಿಂದ “ಇಪ್ಪತ್ತು” ರೂಪಾಯಿ ಗೆ ಬಂದಿದೆ. ಬೆಲೆ ಬಂದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಮಾಲು ಇದ್ದ ರೈತರು ಅದರ “ಲಾಭ” ಪಡೆ ದುಕೊಂಡರು. ಈಗ ಇಪ್ಪತ್ತು ರೂಪಾಯಿ ಗೆ ಕುಸಿದಿದೆ. ಅದೆಷ್ಟೋ ಜನ ರೈತರು “ನಷ್ಟ ” ಕ್ಕೀಡಾಗುತ್ತಾರೆ. ಉತ್ತಮ ಲಾಭ ಸಿಕ್ಕರೆ ಸುಗ್ಗಿ. ಇಲ್ಲ ಅಂದರೆ ಕೇಳುವವರಿಲ್ಲ. ಕೆಲವೊಮ್ಮೆ ಟೊಮ್ಯಾಟೊ ಬೆಳೆ ಬೆಳೆದು ಕೊಯ್ದು ಮಾರುಕಟ್ಟೆ ಗೆ ತಂದ ಅಸಲು ಕೂಡ ಎಪಿಎಂ ಸಿ ಯಲ್ಲಿ ಸಿಗದೇ ರೈತರು ಎಪಿಎಂ ಸಿ ಆವರಣದಲ್ಲೇ ಟೊಮ್ಯಾಟೊ ಚೆಲ್ಲಿ ಹೋದದ್ದಿದೆ…!!!
ಹಾಗೆ ಅಂತಹ ಸಂದರ್ಭದಲ್ಲಿ ಟೊಮ್ಯಾಟೊ ಬೆಳೆಗಾರನ ಬವಣೆಯನ್ನ ವ್ಯವಸ್ಥೆ (ಸರ್ಕಾರದ ಸಂಬಂಧಿಸಿದ ಇಲಾಖೆ) ಕೇಳುವುದಿಲ್ಲವೂ ಹಾಗೆಯೇ ಮುಂದೊಮ್ಮೆ “ಅಡಿಕೆ ಬೆಳೆಯ” ವಿಷಯದಲ್ಲೂ ಇಂತಹ ಅನುಭವವೇ ಅಡಿಕೆ ಬೆಳೆಗಾರರಿಗೆ ಕಾಯುತ್ತಿದೆ. ಆಗಲೂ ಸರ್ಕಾರ , ಸಂಘ ಸಂಸ್ಥೆಗಳು ಕೇಳುವುದಿಲ್ಲ. ಏಕೆಂದರೆ ಸರ್ಕಾರಕ್ಕೆ ಟೊಮ್ಯಾಟೊ ಬೆಳೆಯುವವನೂ ರೈತ ಮತ್ತು ಅಡಿಕೆ ಬೆಳೆಗಾರನೂ ರೈತ . ಸರ್ಕಾರ ರೈತರನ್ನ ಎಂದಿಗೂ ತಾರತಮ್ಯ ಮಾಡುವುದಿಲ್ಲ..
ಇಲ್ಲಿ ಯಾರನ್ನೋ ದೂಷಿಸಲು ಬರದು.ಈ ವ್ಯವಸ್ಥೆ ಇರುವುದೇ ಹೀಗೆ… ರೈತರೇ ಎಚ್ಚರವಾಗಿ…. ಜಾಗೃತರಾಗಿ .
ಅಡಿಕೆ ಬೆಳೆಯ ಕ್ಷೇತ್ರದ ಹೊರಗಿನ ಬೆಳೆ – ಉದ್ಯಮ ಮಾರುಕಟ್ಟೆ ಯ ಪರ್ಯಾಯ ಜೀವನ ಮಾರ್ಗ ಹುಡುಕಿಕೊಳ್ಳಿ ಅಷ್ಟೇ….
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…