ಮುಂದಿನ 25 ವರ್ಷಗಳಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ಅಗತ್ಯವಾದ ಯೋಜನೆಗಳನ್ನು ಹಣಕಾಸು ಆಯೋಗವು ರೂಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.………ಮುಂದೆ ಓದಿ……..
ಚೆನ್ನೈನಲ್ಲಿ ನಾಗರಿಕ ವೇದಿಕೆ ಏರ್ಪಡಿಸಿದ್ದ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಅಮೆರಿಕಾದ ತೆರಿಗೆ ನೀತಿ, ಉಕ್ರೇನ್ ಯುದ್ಧ, ಚೈನಾದ ವ್ಯಾಪಾರ ವ್ಯವಹಾರಗಳು ಸೇರಿದಂತೆ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಯುವಪೀಳಿಗೆಯನ್ನು ಸನ್ನದ್ಧಗೊಳಿಸಬೇಕಾಗಿದೆ. ಅದಕ್ಕಾಗಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲು ಸಹ ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ದೇಶದ ಎಲ್ಲ ಜಿಲ್ಲೆಗಳಲ್ಲೂ ಕ್ಯಾನ್ಸರ್ ನಿಗಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಕೃಷಿ ಕ್ಷೇತ್ರದಲ್ಲೂ ಗಣನೀಯ ಅಭಿವೃದ್ಧಿಯನ್ನು ನಿರೀಕ್ಷಿಸಲಾಗಿದ್ದು, ದೇಶದ ಸುಮಾರು 112 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕೃಷಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ದೇಶದ ಹಿಂದುಳಿದಿರುವ 109 ಜಿಲ್ಲೆಗಳಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿಸಿದ್ದಾರೆ. ಇದಲ್ಲದೆ, ಕೃತಕಬುದ್ಧಿಮತ್ತೆ ಹಾಗೂ ಹೊಸ ಸಂಶೋಧನೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಂದ ತಮಿಳುನಾಡಿಗೂ ಸಾಕಷ್ಟು ಅನುಕೂಲವಾಗಿದೆ. ಜನ್ ಧನ್ ಯೋಜನೆಯಿಂದ 12 ಲಕ್ಷ ಜನರಿಗೆ ಅನುಕೂಲವಾದರೆ ಸುಮಾರು 89 ಲಕ್ಷ ಕುಟುಂಬಗಳಿಗೆ ಹೊಸ ನೀರಿನ ಸಂಪರ್ಕಗಳು ದೊರೆತಿವೆ. 41 ಲಕ್ಷ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಸಂಪರ್ಕಗಳ ಸಹಾಯಧನ ಯೋಜನೆ ದೊರೆತಿದೆ ಎಂದು ಅವರು ಹೇಳಿದರು.