ನಕಲಿ ಹಾಗೂ ಕಳಪೆ ಬೀಜಗಳ ಮಾರಾಟವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಹೊಸ ಕಾಯ್ದೆಯನ್ನು ರೂಪಿಸಲಾಗಿದ್ದು, ನೂತನ ಬೀಜ ಕಾಯ್ದೆ–2026ನ್ನು ಬರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸಿದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ವೇಳೆ ಹಲವು ರೈತರು ಕಳಪೆ ಮತ್ತು ನಕಲಿ ಬೀಜಗಳ ಮಾರಾಟ ಕುರಿತು ದೂರುಗಳನ್ನು ಸಲ್ಲಿಸಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ನಕಲಿ ಬೀಜಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ನೂತನ ಬೀಜ ಕಾಯ್ದೆಯು ರೈತರ ಹಿತ ರಕ್ಷಣೆಯೇ ಮುಖ್ಯ ಉದ್ದೇಶವಾಗಿದ್ದು, ಕಳಪೆ ಹಾಗೂ ನಕಲಿ ಬೀಜಗಳನ್ನು ಮಾರಾಟ ಮಾಡುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳ ವಿರುದ್ಧ ಕಠಿಣ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ 1966ರ ಬೀಜಗಳ ಕಾಯ್ದೆಯಡಿ ಗರಿಷ್ಠ 500 ರೂಪಾಯಿ ದಂಡ ಮಾತ್ರ ವಿಧಿಸಬಹುದಾಗಿತ್ತು. ಆದರೆ ಹೊಸ ಕಾಯ್ದೆಯಡಿ 30 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಗುರಿಪಡಿಸುವ ಅವಕಾಶ ಇರಲಿದೆ ಎಂದು ಸಚಿವರು ವಿವರಿಸಿದರು.
ಹೊಸ ಕಾಯ್ದೆಯನ್ವಯ ಬೀಜ ಉತ್ಪಾದಿಸುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಇದರಿಂದ ಬೀಜಗಳ ಮೂಲವನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ. ಇದು ನಕಲಿ ಬೀಜ ಜಾಲವನ್ನು ಭೇದಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ, ರೈತರ ನಡುವೆ ಪರಂಪರಗತವಾಗಿ ನಡೆದುಕೊಂಡು ಬಂದಿರುವ ಬೀಜಗಳ ಬಳಕೆ ಮತ್ತು ವಿನಿಮಯ ಪದ್ಧತಿಗೆ ನೂತನ ಕಾಯ್ದೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.



