ಕಾಳುಮೆಣಿಸಿನ ಧಾರಣೆ ಮತ್ತೆ ಏರಿಕೆಯ ಹಾದಿಯಲ್ಲಿದೆ.ಇದೀಗ 640 ರೂಪಾಯಿ ದಾಟಿ ಮುಂದೆ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಈಗ ಕಾಳುಮೆಣಸು ಉತ್ಪಾದನೆ ಕುಂಠಿತವಾಗಿದೆ. ವಿಯೆಟ್ನಾಂನಲ್ಲಿ ಗಣನೀಯ ಪ್ರಮಾಣದಲ್ಲಿ ಕಾಳುಮೆಣಸು ಇಳುವರಿ ಕುಸಿತವಾಗಿದೆ. ಬೇಡಿಕೆ ಹೆಚ್ಚುತ್ತಿದೆ.
ಮಲೆನಾಡು ಹಾಗೂ ಕರಾವಳಿಯ ರೈತರಿಗೆಅಡಿಕೆ(ArecaNut) ಜೊತೆ ಕ್ಕೋಕ್ಕೋ(coco), ತೆಂಗು(Coconut) ಜೊತೆ ಕಾಳುಮೆಣಸು(Pepper) ಕೂಡ ಮುಖ್ಯ ಬೆಳೆ(Main Crop). ವರ್ಷಕ್ಕೆ ಒಂದು ಬಾರಿ ಸಿಕ್ಕರೂ ಬೆಲೆಗೇನು ಮೋಸ ಇಲ್ಲ. ಈ ಬಾರಿ ಕರಿಮೆಣಸಿನ ಬೆಲೆ ಏರು ಗತಿಯಲ್ಲೇ(Price hike) ಸಾಗುತ್ತಿದೆ. ಸಾಂಬಾರ ಪದಾರ್ಥಗಳಿಗೆ ಇತ್ತೀಚೆಗೆ ಎಲ್ಲಿಲ್ಲದ ಬೇಡಿಕೆ. ಇದೀಗ ಅಡಿಕೆ, ಕ್ಕೋಕ್ಕೋ, ಕಾಫಿ ಜೊತೆಗೆ ಕಾಳುಮೆಣಸು ಕೂಡ ಭರ್ಜರಿ ಬೆಲೆ ಏರಿಕೆಯ ನಿರೀಕ್ಷೆ ಹೊಂದಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಕಾಳುಮೆಣಸು ಧಾರಣೆ 630-640 ರೂಪಾಯಿ ಕಂಡುಬಂದರೆ, ಖಾಸಗಿ ಮಾರುಕಟ್ಟೆಯಲ್ಲಿ ಶನಿವಾರ ಕೆಜಿಯೊಂದಕ್ಕೆ ಕಾಳುಮೆಣಸು 660 ರೂಪಾಯಿಗೆ ಮಾರಾಟ ಆಗುತ್ತಿದ್ದು ಕಳೆದ 6 ವರ್ಷಗಳಲ್ಲಿ ಗರಿಷ್ಟ ಧಾರಣೆ ಆಗಿದೆ.
ಫೆಬ್ರವರಿಯಲ್ಲಿ ಕಾಳುಮೆಣಸು ಧಾರಣೆ ಕೆಜಿಗೆ 500- 525 ರೂಪಾಯಿ ಆಸುಪಾಸಿನಲ್ಲಿ ಇತ್ತು. ಆ ಬಳಿಕ ಸತತವಾಗಿ ಬೆಲೆ ಏರುತ್ತಿದ್ದು ಗರಿಷ್ಟ ಮಟ್ಟಕ್ಕೆ ಏರುವ ಎಲ್ಲ ಸೂಚನೆ ಕಂಡು ಬರುತ್ತಿದೆ. ಸುಮಾರು 5 ವರ್ಷದ ಹಿಂದೆ ಕೆಜಿಗೆ 750 ರೂಪಾಯಿಗೆ ಏರಿದ್ದು ಈವರೆಗಿನ ಸಾರ್ವಕಾಲಿಕ ಬೆಲೆ ಆಗಿದೆ. ಇದೀಗ ಆ ಮಟ್ಟಕ್ಕೆ ಬೆಲೆ ಏರಬಹುದೇ ಎಂಬುದು ಬೆಳೆಗಾರರ ನಿರೀಕ್ಷೆ ಆಗಿದೆ. ಕಾಫಿ ಮತ್ತು ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆಯುತ್ತಿದ್ದ ಕಾಳುಮೆಣಸು ಬೆಳೆಗಾರರ ಪಾಲಿಗೆ ಇದೀಗ ಬಹು ಮಹತ್ವದ ಬೆಳೆ ಆಗುತ್ತಿದೆ.ಮೆಣಸಿಗೆ ವಿಶೇಷ ಆರೈಕೆ ಮಾಡಿ ಬೆಳೆಸುವ ಪ್ರಯತ್ನ ನಡೆದಿದೆ.
ವಿಯೆಟ್ನಾಂ ದೇಶದಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ರೊಬಸ್ಟಾ ಕಾಫಿ ಜೊತೆಗೆ ಮೆಣಸಿನ ಇಳುವರಿ ಕೂಡ ಗಮನಾರ್ಹವಾಗಿ ಕಡಿಮೆ ಆಗಿದೆ.ಇದರಿಂದ ಜಾಗತಿಕವಾಗಿ ಮೆಣಸಿನ ಧಾರಣೆ ಏರುತ್ತಿದೆ.ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಉತ್ಪಾದನೆ ನಡೆಯುತ್ತಿದೆ.ಆ ಪೈಕಿ ಶೇ.50ಕ್ಕೂ ಹೆಚ್ಚು ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲೇ ಬೆಳೆಯಲಾಗುತ್ತಿದೆ. ನಮ್ಮ ದೇಶದ ಆಂತರಿಕ ಬಳಕೆಗೆ ಈ ಪ್ರಮಾಣ ಕಡಿಮೆ ಆಗಿದ್ದು ಶ್ರೀಲಂಕಾ, ವಿಯೆಟ್ನಾಂ, ಬ್ರೆಜಿಲ್‍ನಂತಹ ದೇಶಗಳಿಂದ ಪ್ರತಿ ವರ್ಷ ಆಮದು ಮಾಡಲಾಗುತ್ತಿದೆ. 2019ರಲ್ಲಿ 2.8 ಲಕ್ಷ ಟನ್‍ಗೂ ಹೆಚ್ಚು ಮೆಣಸು ಬೆಳೆಯುತ್ತಿದ್ದ ಅಗ್ರಮಾನ್ಯ ದೇಶವಾದ ವಿಯೆಟ್ನಾಂನಲ್ಲಿ ಮೆಣಸಿನ ಇಳುವರಿ ತೀವ್ರವಾಗಿ ಕುಸಿದಿದೆ ಎನ್ನಲಾಗುತ್ತಿದೆ. ಈ ವರ್ಷ ಅಲ್ಲಿನ ಉತ್ಪಾದನೆ 1.8 ಲಕ್ಷ ಟನ್‍ಗೂ ಕಡಿಮೆ ಎಂಬ ಅದಾಂಜು ಇದೆ. ಕೆಟ್ಟ ಹವಾಮಾನದ ಜೊತೆಗೆ ವಯಸ್ಸಾದ ಬಳ್ಳಿಗಳಲ್ಲಿ ಇಳುವರಿ ಕುಸಿತ ಕೂಡ ಆಗಿರುವುದು ಉತ್ಪಾದನೆ ಕಡಿತ ಆಗಲು ಕಾರಣ ಆಗಿದೆ.
ವಿಶೇಷ ಗುಣಮಟ್ಟದ ಭಾರತ ಮೆಣಸಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್‍ಗೆ 8000 ಡಾಲರ್ ಬೆಲೆ ಇದೆ. ಬ್ರೆಜಿಲ್ ಮೆಣಸಿಗೆ 7700 ಬೆಲೆ ಇದ್ದರೆ, ವಿಯೆಟ್ನಾಂ ಮೆಣಸಿಗೆ 6500 ಡಾಲರ್ ಮತ್ತು ಮಲೇಶಿಯಾ ಮೆಣಸಿಗೆ 4900 ಡಾಲರ್ ಮಾತ್ರ ಬೆಲೆ ಇದೆ.
ಮಾಹಿತಿ : ರವಿ ಕೆಳಂಗಡಿ ಹಾಗೂ (ಅಂತರ್ಜಾಲ )