ಮುಂಗಾರು ಮಳೆ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿಯಲ್ಲಿ ಮಾತ್ರ ಸುರಿಯುತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ವರುಣ ಕೃಪೆ ತೋರಿಲ್ಲ. ಇದರಿಂದ ರಾಜ್ಯದ ಜೀವನಾಡಿಗಳಲ್ಲಿ ಒಂದಾದ ಕೆಆರ್ಎಸ್ ಡ್ಯಾಂ ನಲ್ಲಿ ನೀರಿನ ಮಟ್ಟ ಮತ್ತಷ್ಟು ಕುಸಿತವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಿಂದ ನಾಲೆಗಳಿಗೆ ನೀರು ಬಿಟ್ಟಿರೋದರಿಂದ ನೀರಿನ ಮಟ್ಟ ಒಂದೇ ವಾರದಲ್ಲಿ 78 ಅಡಿಗೆ ಕುಸಿದಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕನ್ನಂಬಾಡಿ ಕಟ್ಟೆಯಲ್ಲಿ, ಈಗ 78 ಅಡಿ ಮಾತ್ರ ನೀರು ಇದೆ. ಕಳೆದ ವಾರ 12 ಟಿಎಂಸಿ ಇದ್ದ ನೀರು ಇಂದು(ಜೂ.22) 10 ಟಿಎಂಸಿಗೆ ಕುಸಿತ ಕಂಡಿದೆ.ಬಳಕೆಗೆ 3 ಟಿಎಂಸಿ ನೀರು ಮಾತ್ರ ಲಭ್ಯ ಇದೆ.
ಇದೀಗ ಉಳಿದಿರುವ 10 ಟಿಎಂಸಿಯಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್, ಇದೀಗ ಬಳಕೆಗೆ ಲಭ್ಯ ಇರುವುದು ಕೇವಲ 3 ಟಿಎಂಸಿ ನೀರು ಮಾತ್ರ. ಇದರಿಂದ ಕೆಲವೇ ದಿನಗಳಲ್ಲಿ ರಾಜಧಾನಿ ಬೆಂಗಳೂರಿಗರಿಗೆ ಜಲ ಕ್ಷಾಮ ಎದುರಾಗುವ ಭೀತಿ ಎದುರಾಗಿದ್ದು, ಮಳೆ ಬೀಳದಿದ್ದರೆ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದರಲ್ಲಿ ಸಂದೇಹವಿಲ್ಲ. ಈ ಕಾರಣ ಉಳಿದಿರುವ ನೀರನ್ನ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಚಿಂತನೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ನಾಲೆಗಳಿಗೆ ನೀರು ನಿಲ್ಲಿಸಲು ನಿರ್ಧಾರ ಮಾಡಲಾಗಿದೆ.