ಹತ್ತಾರು ಎಕರೆ ತೋಟ, ಭೂಮಿ ಇದ್ದರೂ ಪೇಟೆಯಿಂದ ತರಕಾರಿ ಖರೀದಿ…!, ಅದೇ ಹಳ್ಳಿಯ, ಕೃಷಿ ಹಿನ್ನೆಲೆಯ ಕುಟುಂಬ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ನೆಲೆಸಿ 25*50 ಜಾಗದಲ್ಲಿ ತರಕಾರಿ ಬೆಳೆಸಿ ತಮ್ಮ ಮನೆಗೆ ನಮ್ಮದೇ ತರಕಾರಿ ಎಂಬ ಗುರಿಯನ್ನಿರಿಸಿ ತೊಡಗಿಸಿಕೊಂಡಿದ್ದಾರೆ. ಈ ತರಕಾರಿ ಕೃಷಿಯ ಯಶೋಗಾಥೆ ಇಲ್ಲಿದೆ….
ಬೆಂಗಳೂರು ಎಂಬ ಮಹಾನಗರಿಯಲ್ಲಿ ಕೃಷಿ ಮಾಡಲು ಸಾಧ್ಯವೇ…? ಇದೊಂದು ದೊಡ್ಡ ಪ್ರಶ್ನೆ… ಇನ್ನೊಂದು ಪ್ರಮುಖವಾದ ಪ್ರಶ್ನೆ ಹಾಗೂ ಸಮಸ್ಯೆ.. ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳ ವಿಲೇವಾರಿ ಹೇಗೆ…? ಒಂದು ದಿನ ತ್ಯಾಜ್ಯ ವಿಲೇವಾರಿಗೆ ಮಹಾನಗರ ಪಾಲಿಕೆಯ ವಾಹನ ಬಾರದೇ ಇದ್ದರೆ ಎಸೆಯುವುದು ಎಲ್ಲಿ…?. ಇದೆರಡೂ ಪ್ರಶ್ನೆಗಳಿಗೆ ಬೆಂಗಳೂರಿನಿಂದಲೇ ಉತ್ತರ ಇದೆ. ಮೂಲತ: ಕಾಸರಗೋಡು ಜಿಲ್ಲೆಯ ಕಿನ್ನಿಂಗಾರು ಬಳಿಯ ಕೂಳೂರಿನ ರವಿಪ್ರಸಾದ್ ಕೂಳೂರು ಹಾಗೂ ಅರ್ಚನಾ ಕೂಳೂರು ದಂಪತಿಗಳು ತರಕಾರಿ ಹಾಗೂ ಅವರ ಮನೆಯ ತ್ಯಾಜ್ಯಗಳಿಗೆ ಅವರೇ ಪರಿಹಾರ ಕಂಡುಕೊಂಡಿದ್ದಾರೆ. ಅವರ ಪ್ರಯತ್ನ ವರ್ಷ ಪೂರ್ತಿ ತರಕಾರಿ ಕೃಷಿ…!. ಇದೇ ಎಲ್ಲದಕ್ಕೂ ಪರಿಹಾರಕ್ಕೆ ಸಾಧ್ಯವಾದ್ದು.
ರವಿಪ್ರಸಾದ್ ಕೂಳೂರು ಅವರು ಐಟಿ ಉದ್ಯೋಗಿ. ಬೆಂಗಳೂರಿನ ಹೊರಮಾವು ಪ್ರದೇಶದಲ್ಲಿರುವ ಇವರು ಶನಿವಾರ, ಭಾನುವಾರ ತಮ್ಮದೇ 25*50 ಜಾಗದಲ್ಲಿ ಕೃಷಿ. ಅವರ ಪತ್ನಿ ಅರ್ಚನಾ ಕೂಳೂರು ಗೃಹಿಣಿ. ಕೃಷಿ ಕುಟುಂಬದ ಹಿನ್ನೆಲೆಯ ಇಬ್ಬರೂ ತರಕಾರಿ ಕೃಷಿ, ಗಾರ್ಡನಿಂಗ್ ನಲ್ಲಿ ಆಸಕ್ತಿ ಹೊಂದಿದವರು. ಸುಮಾರು 10 ವರ್ಷಗಳಿಂದಲೂ ತರಕಾರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2016 ರವರೆಗೆ ಸಣ್ಣ ಪ್ರಮಾಣದಲ್ಲಿ ತರಕಾರಿ ಬೆಳೆಸುತ್ತಿದ್ದರೆ, 2016 ರಲ್ಲಿ ಮನೆಯಲ್ಲಿ ಟೆರೇಸ್ ಗಾರ್ಡನಿಂಗ್ ಮಾಡುತ್ತಿದ್ದರು. ಆದರೆ ಮನೆಯ ಸುತ್ತಲೂ ಮಣ್ಣಿನ ನೆಲ ಇರಬೇಕು ಎಂಬುದು ಇವರ ಅಪೇಕ್ಷೆ ಆಗಿತ್ತು. ತರಕಾರಿ ಹಾಗೂ ಗಾರ್ಡನಿಂಗ್ ನಲ್ಲಿ ಅರ್ಚನಾ ಬಹುವಾದ ಆಸಕ್ತಿ ಹೊಂದಿದವದರು. ಸಮಯ ಇದ್ದಾಗಲೆಲ್ಲಾ ತರಕಾರಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಬಿಡುವಿನ ನಡುವೆ ಟೆರೇಸ್ ಗಾರ್ಡನಿಂಗ್ ಮೂಲಕ ಬದನೆ, ಸೌತೆ, ಅವರೆ, ಅಲಸಂಡೆ ಮೊದಲಾದ ತರಕಾರಿಗಳನ್ನು ಮಾಡುತ್ತಿದ್ದರು. ಆದರೆ ಇಲ್ಲಿ ಊರಿಗೆ ಬರುವ ವೇಳೆ ನೀರಿನ ಸಮಸ್ಯೆಯಿಂದ ಒಣಗುತ್ತಿತ್ತು. ಇದಕ್ಕಾಗಿ ಅಟೋಮೆಟಿಕ್ ನೀರಿನ ವ್ಯವಸ್ಥೆಯನ್ನು ಕೂಡಾ ಚಾಲೂ ಮಾಡಿದ್ದರು. ಹಾಗಿದ್ದರೂ ಅರ್ಚನಾ ಅವರ ನಿರೀಕ್ಷೆಯ ಹಾಗೆ ಕೆಲಸ ಆಗಿರಲಿಲ್ಲ.
2019 ರಲ್ಲಿ ಸಮೀಪದ ಸೈಟ್ ಖರೀದಿ ಮಾಡಿದರು. ಅಲ್ಲಿಂದ ನಂತರ ತಮ್ಮ ಕೃಷಿ ಆಸಕ್ತಿಗೆ ಇನ್ನಷ್ಟು ಬಲ ಸಿಕ್ಕಿತು. ಮೊದಲು ತೆಂಗಿನ ಗಿಡ ನೆಟ್ಟರು. ಬಳಿಕ ಬೆಟ್ಟದ ನೆಲ್ಲಿ, ಚಿಕ್ಕು, ನಿಂಬೆ ಸೇರಿದಂತೆ ಹಲವು ಗಿಡಗಳನ್ನೂ ಬೆಳೆಸಲು ಆರಂಭಿಸಿದರು. ಈಗ ಬಾಳೆ, ನುಗ್ಗೆ, ದಾಳಿಂಬೆ, ಸೀತಾಫಲ, ಪೇರಳೆ, ಮೆಹೆಂದಿ, ನಿಂಬೆ, ಚಿಕ್ಕು, ದಾಳಿಂಬೆ, ಕಬ್ಬು, ಕರಿಬೇವು, ಅರಿಶಿನ, ಶುಂಠಿ, ಕೆಸವು, ಮೆಣಸು, ತೊಂಡೆ, ಅಲಸಂದೆ, ಬದನೆ, ಸೊಪ್ಪು, ದಾಸವಾಳ, ಮಲ್ಲಿಗೆ, ಕೇಪುಳೆ ಇದೆಲ್ಲ ಇದೆ. ಇದರ ಜೊತೆಗೆ ಸೋರೆ, ಹೀರೇಕಾಯಿ, ಮೂಲಂಗಿ, ಸೊಪ್ಪು, ಬೆಂಡೆ ವರ್ಷಪೂರ್ತಿ ಆಗುವ ಹಾಗೆ ಪ್ರಯತ್ನ ಮಾಡುತ್ತಾರೆ.ಜಾಜಿ, ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ, ಮುತ್ತು ಮಲ್ಲಿಗೆ , ಬ್ರಾಹ್ಮಿ, ಪುದೀನಾ, ಸಾಂಬ್ರಾಣಿ, ವಿಟಮಿನ್ ಸೊಪ್ಪು ಇತ್ಯಾದಿಗಳೂ ಬೆಳೆಯುತ್ತಿದ್ದಾರೆ. ಅವರ ಮನೆ ಬಳಕೆಗೆ ಯಾವದೆಲ್ಲಾ ಬೇಕೋ ಅದೆಲ್ಲಾ ಬೆಳೆಯಲು ಸಾಧ್ಯವಾಗಿದೆ.ಈ ಕೃಷಿ ಕಾರ್ಯ ಕೋವಿಡ್ ಸಮಯದಲ್ಲಿ ನಗರದಲ್ಲಿ ಇರುವ ಇವರಿಗೆ ತೀರಾ ಉಪಯೋಗವಾಯಿತು. ಆ ಸಮಯದಲ್ಲಿ ಹೆಚ್ಚಿನ ತರಕಾರಿ ಬೆಳೆಯಲು ಸಾಧ್ಯವಾಯಿತು. ಅದರ ಜೊತೆಗೆ ತೀರಾ ಖುಷಿಯ ವಾತಾವರಣವೂ ಸೃಷ್ಟಿಯಾಯಿತು.
ನಗರದ ತರಕಾರಿ ಕೃಷಿ ಸವಾಲುಗಳು : ನಗರದ ತರಕಾರಿ ಕೃಷಿಗೆ ಸವಾಲುಗಳೂ ಇವೆ. ಅದರಲ್ಲಿ ಪ್ರಮುಖವಾಗಿ ತರಕಾರಿ ಗಿಡಗಳಿಗೆ ಬೇಕಾದ ಚಪ್ಪರದ ವ್ಯವಸ್ಥೆ, ಗೂಟಗಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಇದೆಲ್ಲವೂ ಹೆಚ್ಚು ಖರ್ಚು ಬರುತ್ತದೆ. ವಾಣಿಜ್ಯ ದೃಷ್ಟಿಯಿಂದ ಮಾತ್ರವೇ ನೋಡಿದರೆ ಇದು ಲಾಭವಾಗದು. ಆದರೆ ಖುಷಿ ಹೆಚ್ಚು ಇರುತ್ತದೆ ಎನ್ನುತ್ತಾರೆ ಅರ್ಚನಾ. ಕಳೆದ ಬಾರಿ ತೊಂಡೆ ಚಪ್ಪರ ಸಂಪೂರ್ಣವಾಗಿ ಕಬ್ಬಿಣದಿಂದಲೇ ಮಾಡಲಾಗಿತ್ತು. ಅದು ಮುಂದೆಯೂ ಉಪಯೋಗವಾಗುತ್ತದೆ. ಆದರೆ ಮೊದಲ ವರ್ಷದ ಇಳುವರಿಯ ನಂತರ ಒಂದು ಕೆಜಿ ತೊಂಡೆಕಾಯಿಯ ಖರ್ಚು ಲೆಕ್ಕ ಹಾಕಿದರೆ ವಿಪರೀತ ಅಂತ ಅನಿಸುತ್ತದೆ ಎಂದು ಹೇಳುತ್ತಾರೆ ಅರ್ಚನಾ. ಹಳ್ಳಿಯಂತೆಯೇ ತರಕಾರಿ ಕೃಷಿಗೆ ಹಕ್ಕಿಗಳು, ಅಳಿಲು ಬರುತ್ತದೆ. ಅದೆಲ್ಲವನ್ನೂ ನಿಯಂತ್ರಿಸುವುದು ಕೂಡಾ ಇರುತ್ತದೆ. ಕೀಟನಾಶಕ ಎಂದೂ ಬಳಕೆ ಮಾಡಿಲ್ಲ, ಗೋಮೂತ್ರ ಸಮೀಪಲ್ಲೇ ಇರುವ ಹಿತೈಷಿ ಕುಟುಂಬದವರು ನೀಡುತ್ತಾರೆ. ಜೀವಾಮೃತ, ಕಡ್ಲೆ ಹಿಂಡಿ, ಮನೆಯ ತ್ಯಾಜ್ಯಗಳ ಕಂಪೋಸ್ಟ್ ಗೊಬ್ಬರವಾಗಿ ಬಳಕೆ. ಬಸವನ ಹುಳದ ಕಾಟ ವಿಪರೀತವಾಗಿರುತ್ತದೆ, ಇದನ್ನು ರಾತ್ರಿ ವೇಳೆ ಹಿಡಿದು ಉಪ್ಪುನೀರಿಗೆ ಹಾಕುವ ಕೆಲಸ ಮಾಡಬೇಕಾಗುತ್ತದೆ ಎನ್ನುತ್ತಾರೆ ಅರ್ಚನಾ. ಇಷ್ಟೆಲ್ಲಾ ಶ್ರಮದ ಬಳಿಕ ಮನೆ ಬಳಕೆಯಾಗಿ ಹೆಚ್ಚಾದ ತರಕಾರಿಗಳನ್ನು ಆಪ್ತರಿಗೆ ಹಂಚುವುದು, ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಅರ್ಚನಾ ಕೂಳೂರು.
ಮನೆಯ ತ್ಯಾಜ್ಯ ಮಾತ್ರವಲ್ಲ ಸಮೀಪದ ಮನೆಯದ್ದೂ ಬಳಕೆ: ತರಕಾರಿ ಕೃಷಿಗೆ ಮನೆಯ ತ್ಯಾಜ್ಯಗಳದ್ದೇ ಕಂಪೂಸ್ಟ್ ಬಳಕೆ. 2010 ರಿಂದ ಮನೆಯ ಕಸವನ್ನು ಎಲ್ಲೂ ಹೊರಗೆ ಎಸೆದಿಲ್ಲ, ಎಲ್ಲವೂ ಕಂಪೋಸ್ಟ್ ಮಾಡಿ ಗೊಬ್ಬರ. ಮನೆಯದ್ದು ಸಾಲದೆ, ಹತ್ತಿರದ ಮನೆಯದ್ದೂ ಬಳಕೆ. ಮನೆಯ ವೆಟ್ ವೇಸ್ಟ್ ಇಲ್ಲೇ ಬಳಕೆಯಾಗುತ್ತದೆ. ಬೆಂಗಳೂರಿನ ಬಹುತೇಕ ಮಂದಿ ವೆಟ್ ವೇಸ್ಟ್ ಬಹುದೊಡ್ಡ ಸಮಸ್ಯೆ. ಈಗ ಈ ಮೂಲಕ ಸಮಸ್ಯೆ ಇಲ್ಲ. ಸಾವಯವ ಮಾದರಿಯಲ್ಲಿಯೇ ಬೆಳೆಯುವ ಈ ತರಕಾರಿ ಕೂಡಾ ರುಚಿಯಲ್ಲೂ ಉತ್ತಮವಾಗಿರುತ್ತದೆ ಎನ್ನುತ್ತಾರೆ ಅರ್ಚನಾ.
ಒಣಗಿಸಲು ಡ್ರೈಯರ್ : ಬಾಳೆಹಣ್ಣು , ಅರಸಿನ ಮೊದಲಾದ ವಸ್ತುಗಳನ್ನು ಒಣಗಿಸಲು ವಿಶೇಷವಾದ ಡ್ರೈಯರ್ ತಯಾರು ಮಾಡಿದ್ದಾರೆ ಅರ್ಚನಾ ಅವರ ಪತಿ ರವಿಪ್ರಸಾದ್ ಕೂಳೂರು. ಇದರಿಂದ ಯಾವ ವಸ್ತುಗಳೂ ಹಾಳಾಗದಂತೆ ಸಂಗ್ರಹಿಸಿಡಲೂ ಉಪಯೋಗವಾಗುತ್ತದೆ. ಮೂರು ದಿನಗಳಲ್ಲಿ ಹಣ್ಣುಗಳು ಒಣಗುತ್ತದೆ.
ಸಮಸ್ಯೆಗಳಾದಾಗ ಗ್ರೂಪುಗಳು : ಗಾರ್ಡನಿಂಗ್ ನಲ್ಲಿ ಯಾವುದಾದರೂ ಸಮಸ್ಯೆಗಳು ಕಂಡುಬಂದಾಗ, ರೋಗ, ಗಿಡಗಳಲ್ಲಿ ವ್ಯತ್ಯಾಸ ಆದಾಗ ಕೆಲವು ನಗರ ಸಂಬಂಧಿ ತರಕಾರಿ, ಕೃಷಿ ಗುಂಪುಗಳಿಗೆ ಪೋಸ್ಟ್ ಮಾಡಿದಾಗ ಮಾಹಿತಿ ನೀಡುತ್ತಾರೆ. ವಿಶೇಷವಾಗಿ ಹೊರಮಾವು ಗ್ರೂಪು, ರಾಜಾಜಿನಗರ ಗ್ರೂಪು ಅದರ ಮೂಲಕ ನೆರವು, ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎನ್ನುತ್ತಾರೆ ಅರ್ಚನಾ.
ಇದರ ಜೊತೆಗೆ ಆನ್‌ಲೈನ್ ಕ್ಲೋತಿಂಗ್ ವ್ಯವಹಾರ ಮಾಡುವ ಅರ್ಚನಾ ಅವರು ಕ್ರೀಡೆಗಳಲ್ಲೂ ಆಸಕ್ತಿ ಹೊಂದಿದ್ದಾರೆ. ತನ್ನ ಎಲ್ಲಾ ಕೃಷಿ ಚಟುವಟಿಕೆಗೆ ಇವರ ಪತಿ ಸಹಕಾರ ನೀಡುತ್ತಾರೆ. ಕೃಷಿಯಲ್ಲೂ ಆಸಕ್ತಿ ಹೊಂದಿರುವ ರವಿಪ್ರಸಾದ್ ಅವರು ಕೂಡಾ ತರಕಾರಿ ಕೃಷಿಯಲ್ಲಿ ಸೇರಿಕೊಳ್ಳುತ್ತಾರೆ.