ಕೃಷಿ ಈ ದೇಶದ ಅನ್ನ. ಡಿಗ್ರಿ ಎನ್ನುವುದು ಓದಿನ ಪದವಿ. ಹೀಗಾಗಿ ಪದವಿಯು ಕೃಷಿಯಲ್ಲಿ ಆಧುನಿಕತೆಯನ್ನು, ತಂತ್ರಜ್ಞಾನವನ್ನು ಹೆಚ್ಚಿಸುವ , ಕೃಷಿಯಲ್ಲೂ ಯಶಸ್ಸು ಕಾಣುವ ದಾರಿಗಳಾಗಬೇಕು, ಸ್ವಾವಲಂಬನೆಯ ಮಾರ್ಗಗಳಾಗಬೇಕು. ಇದಕ್ಕೆ ಪೂರಕವಾಗಿ ಇಲ್ಲೊಬ್ಬ ರೈತ ಪಿಎಚ್.ಡಿ ಪದವಿ ಮುಗಿಸಿದರೂ ಬೇರೆ ಕೆಲಸಕ್ಕೆ ಹೋಗದೆ ತನ್ನದೆ 2 ಎಕರೆ ಜಮೀನಿನಲ್ಲಿ ಫಲತ್ತಾದ ಕೃಷಿಯನ್ನು ಮಾಡಿ 2022-23ರಲ್ಲಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ, 2025ನೇ ಸಾಲಿನಲ್ಲಿ ಧಾರವಾಡ ಶ್ರೇಷ್ಠ ಕೃಷಿಕ ಎನ್ನುವ ಪಟ್ಟವನ್ನು ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿ ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಪ್ರಗತಿಪರ ರೈತ ಶೌಕತ್ ಅಲಿ ಲಂಬೂನವರು ತಮ್ಮ 2 ಎಕರೆ ಜಮೀನಿನಲ್ಲಿ ಎರಡು ಮೊಳ ಉದ್ದದ ನುಗ್ಗೆಕಾಯಿ, ಪಪ್ಪಾಯಿ, ಪೇರಳೆ ಹಣ್ಣು, ಚಿಕ್ಕು, ಬದನೆಕಾಯಿ, ಮಾವಿನ ಹಣ್ಣು, ಸೇಬು, ಕಲ್ಲಂಗಡಿ, ಬಾಳೆ, ಕರಿಬೇವು, ಜಂಬೂ ನೇರಳೆ, ಲಿಂಬೆ, ಹಿರೇಕಾಯಿ, ಟೊಮೆಟೊ, ಬೆಂಡಿಕಾಯಿ, ಚವಳಿಕಾಯಿ, ಸೇರಿದಂತೆ ಹಲವಾರು ತರಕಾರಿಗಳನ್ನು ಬೆಳೆಸುವುದರ ಮೂಲಕ ಸಮಗ್ರ ಕೃಷಿ ಮಾಡಿದ್ದಾರೆ. ಕೃಷಿಯಲ್ಲಿ ಲಾಭವನ್ನೂ, ನೆಮ್ಮದಿಯನ್ನೂ ಕಂಡುಕೊಂಡಿದ್ದಾರೆ. ಈಗ ವರ್ಷಕ್ಕೆ 4 ರಿಂದ 5ಲಕ್ಷ ಆದಾಯವನ್ನು ಕೂಡಾ ಗಳಿಸುತ್ತಾರೆ.
ಇಷ್ಟೇ ಅಲ್ಲದೆ, ಇವರು ಬೆಳೆದ ಬೆಳೆ ದೇಶ ವಿದೇಶಕ್ಕೂ ಹೋಗುತ್ತದೆ. ಒಂದು ಕಡೆ ತರಕಾರಿ ಬೆಳೆದರೆ. ಇನ್ನೊಂದು ಕಡೆ ಸೇಬು, ತೆಂಗು, ರೂಜ್ ವೂಡ್, ಅಡಿಕೆ, ಡ್ರಾಗ್ಯನ್, ದಾಳಿಂಬೆ, ಗೋಡಂಬಿ, ಬೆಟ್ಟದ ನೆಲ್ಲಿಕಾಯಿ ಬೆಳೆಸಿದರೆ. ಜೊತೆಗೆ ಕೋಳಿ ಸಾಕಾಣಿಗೆ, ಮೀನು ಸಾಕಾಣಿಕೆ ಕೂಡಾ ಮಾಡಿಕೊಂಡಿದ್ದಾರೆ.

