ಶಾಲೆಯ ವಾರ್ಷಿಕೋತ್ಸವದಲ್ಲಿ ಕೃಷಿ ಸಾಧಕನಿಗೆ ಸನ್ಮಾನ. ಇಂತದೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ. ಕಳೆದ ಹಲವು ವರ್ಷಗಳಿಂದ ಈ ಗೌರವ ಕಾರ್ಯಕ್ರಮ ನಡೆಯುತ್ತಿದೆ. ಕೃಷಿ, ಗ್ರಾಮೀಣ ಭಾಗದ ಸಾಧಕರೇ ಇವರ ಆಯ್ಕೆ. ಈ ಬಾರಿ ಕಾಳುಮೆಣಸು ಕೃಷಿ ಸಾಧಕ ಸುರೇಶ್ ಬಲ್ನಾಡು ಅವರು ಗೌರವಾರ್ಪಣೆಗೆ ಆಯ್ಕೆಯಾದವರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯವು ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಆಂಗ್ಲಮಾಧ್ಯಮ ಶಾಲೆಯ ಮೂಲಕ ಗುಣಮಟ್ಟದ ಶಿಕ್ಷಣದಿಂದ ಗಮನ ಸೆಳೆದಿದೆ. ಈ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಲೆಯ ಸಂಸ್ಥಾಪಕ ಕುಮಾರ ನಾಯರ್ ಅವರ ಹೆಸರಿನಲ್ಲಿ “ಕುಮಾರ ನಾಯರ್ ಎಕ್ಸೆಲೆನ್ಸ್ ಅವಾರ್ಡ್” ನೀಡಲಾಗುತ್ತಿದೆ. ಕಳೆದ ಸುಮಾರು 10 ವರ್ಷಗಳಿಂದಲೂ ಈ ಪ್ರಶಸ್ತಿ ನೀಡಲಾಗುತ್ತಿದೆ. ವಿಶೇಷ ಎಂದರೆ ಈ ಪ್ರಶಸ್ತಿಗೆ ಗ್ರಾಮೀಣ ಭಾಗದ ಸಾಧಕರು, ಕೃಷಿ ಸಾಧಕರನ್ನೇ ಆಯ್ಕೆ ಮಾಡಲಾಗುತ್ತದೆ. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯರ್ ಹಾಗೂ ಸಂಚಾಲಕ ಚಂದ್ರಶೇಖರ ನಾಯರ್ ಮತ್ತು ಆಡಳಿತ ಮಂಡಳಿ ಸದಸ್ಯರು ಈ ಆಯ್ಕೆಯನ್ನು ಮಾಡುತ್ತಾರೆ.

ಈ ವರ್ಷ ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡು ಅವರು ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿರುವ ಕೃಷಿಕ, ಗ್ರಾಮೀಣ ಭಾಗದ ವೈದ್ಯರು, ಮಿಶ್ರ ಕೃಷಿಯ ಮೂಲಕ ಯಶಸ್ಸು ಕಂಡಿರುವ ಕೃಷಿಕ… ಹೀಗೇ ಇಲ್ಲಿ ನೀಡಿರುವ ಪ್ರಶಸ್ತಿ ಆಯ್ಕೆ ಸಾಗುತ್ತದೆ.

ಕೃಷಿ ಹಾಗೂ ಗ್ರಾಮೀಣ ಎರಡೂ ಕ್ಷೇತ್ರಗಳು ಹೆಚ್ಚಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೃಷಿಯನ್ನು ತೊರೆಯುವ ಮಂದಿಯೇ ಇಂದಯ ಹೆಚ್ಚು. ಗ್ರಾಮೀಣ ಭಾಗದಲ್ಲಿ ವ್ಯವಸ್ಥೆಗಳೇ ಇಲ್ಲ ಎನ್ನುವ ಮಂದಿ ಹೆಚ್ಚು. ವ್ಯವಸ್ಥೆಗಳ ಸುಧಾರಣೆಗೆ ಏನು ಮಾಡಬೇಕು ಹಾಗೂ ಏನು ಮಾಡಬಹುದು ಎನ್ನುವ ಯೋಚನೆ ಕಡಿಮೆ. ಇರುವ ವ್ಯವಸ್ಥೆಗಳನ್ನು ಜನರಿಗೆ ಹೇಗೆ ತಲುಪಿಸಬೇಕು ಎನ್ನುವ ಯೋಚನೆ ಇಲ್ಲವೇ ಇಲ್ಲ ಎನ್ನಬಹುದು. ಅಂತಹದ್ದರಲ್ಲಿ ಗ್ರಾಮೀಣ ಭಾಗದಲ್ಲೂ ಸಾಧನೆ ಮಾಡಬಹುದು, ವಿದ್ಯಾರ್ಥಿಗಳಿಗೂ ಅಂತಹ ಸಾಧನೆ ಪ್ರೇರಣೆಯಾಗಬೇಕು.

ಕೃಷಿಯೂ ಅಷ್ಟೇ. ಕುಮಾರಸ್ವಾಮಿ ವಿದ್ಯಾಲಯ ಸೇರಿದಂತೆ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲ ನಗರದಲ್ಲೂ ಕೃಷಿ ಆದಾಯದಿಂದಲೇ ಓದುವ ಮಕ್ಕಳು ಹೆಚ್ಚು. ಆದರೆ ದುರಂತ ಎಂದರೆ ಅಂತಹ ಕೃಷಿ ಬದುಕೇ ಇಂದು ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಸಾಧನೆಯೇ ಕಷ್ಟ ಎನ್ನುವ ಮಾತುಗಳು ಅಲ್ಲಲ್ಲಿ ಕೇಳುತ್ತವೆ. ಈ ನಡುವೆ ಕೃಷಿಯಲ್ಲಿ ಇನ್ನು ಭವಿಷ್ಯ ಇಲ್ಲ ಎನ್ನುವ ಆತಂಕ ಇನ್ನೊಂದು ಕಡೆ. ಕೃಷಿ ಆದಾಯವೇ ಇಲ್ಲ ಎನ್ನುವ ನೆಗೆಟಿವ್ ಮಾತುಗಳೇ ಗಟ್ಟಿಯಾಗುವ ಕಾಲದಲ್ಲಿ, ಕೃಷಿಯಲ್ಲೂ ಸಾಧನೆ ಮಾಡಬಹುದು ಎನ್ನುವುದನ್ನು ವಿದ್ಯಾರ್ಥಿಗಳಿಗೂ ತೋರಿಸಬೇಕು. ಕೃಷಿ ಮಾಡುವ ಪೋಷಕರಿಗೂ ಧೈರ್ಯ ತುಂಬಬೇಕು, ಮಾದರಿಗಳನ್ನು ತೋರಿಸಬೇಕು. ಈ ಎರಡೂ ಕೆಲಸ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯುತ್ತಿದೆ.
ಕೃಷಿ ಸ್ವ ಉದ್ಯೋಗ ನೀಡಬಲ್ಲದು, ಮಾತ್ರವಲ್ಲ ಕೃಷಿಯೇ ಈ ದೇಶದ ಮುಖ್ಯ ಆಧಾರ. ಆದರೆ, ವಿದ್ಯಾಭ್ಯಾಸವನ್ನು ಮಾಡಿ, ತಾಂತ್ರಿಕ ಪದವಿಗಳನ್ನೂ ಮಾಡಿದ ನಂತರವೂ ಕೃಷಿಯನ್ನು ವೈಜ್ಞಾನಿಕವಾಗಿ ಹೇಗೆ ಮಾಡಬಹುದು..? ಇದನ್ನು ಕೂಡಾ ವಿದ್ಯಾರ್ಥಿಗಳಿಗೆ ತೋರಿಸಿ, ಮಾದರಿಗಳನ್ನು ಮುಂದಿಡಬೇಕಾಗಿದೆ. ಶಿಕ್ಷಣ ಎನ್ನುವುದು ಮಾಹಿತಿಯಷ್ಟೇ ಅಲ್ಲ, ವಿದ್ಯಾರ್ಥಿಯ ಬದುಕನ್ನು ರೂಪಿಸುವ ದಾರಿ. ಶಿಕ್ಷಣ ಹಣ ಗಳಿಸುವ ದಾರಿಯಷ್ಟೇ ಅಲ್ಲ, ಶಿಕ್ಷಣ ಎನ್ನುವ ಮಾನಸಿಕ ನೆಮ್ಮದಿ, ಸಾಧನೆಯ ದಾರಿಗಳನ್ನೂ ಕಂಡುಕೊಳ್ಳುವ ದಾರಿ ಎನ್ನುವುದು ಮಕ್ಕಳಿಗೂ ಅರಿವಾಗಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಹೀಗಾಗಿ, ಒಂದು ಶಾಲಾ ವಾರ್ಷಿಕೋತ್ಸವದಲ್ಲಿ ಕೃಷಿ, ಗ್ರಾಮೀಣ ಕ್ಷೇತ್ರವನ್ನು ಆಯ್ಕೆ ಮಾಡಿ, ಅಲ್ಲಿ ಸಾಧನೆ ಮಾಡಿರುವ ಮಂದಿಯನ್ನು ಗುರುತಿಸಿ ಗೌರವಿಸುವ ಕೆಲಸ ಇನ್ನೊಂದಿಷ್ಟು ಶಾಲೆಗಳಿಗೂ ಮಾದರಿಯಾಗಬೇಕು. ಕುಮಾರಸ್ವಾಮಿ ವಿದ್ಯಾಲಯದ ಈ ಕೆಲಸ ಗ್ರಾಮೀಣ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಮ್ಮೆ, ರಾಜ್ಯಕ್ಕೂ ಮಾದರಿ.


