ಇದು ಸಣ್ಣ ಕೆಲಸವಲ್ಲ..!. ಇದೊಂದು ಸಾಹಸ…ಏನದು ಕೆಲಸ ?. ಕಾಡು ಮಾವು ತಳಿ ಸಂರಕ್ಷಣೆ. ಈಗ ಅದನ್ನು ನಾಡ ಮಾವು ಆಗಿ ಪರಿವರ್ತಿಸಿಕೊಂಡು ತಳಿ ಸಂರಕ್ಷಣೆಯ ಕೆಲಸ. ಒಂದಲ್ಲ.. ಎರಡಲ್ಲ 400 ಕ್ಕೂ ಹೆಚ್ಚು ಮಾವಿನ ತಳಿಗಳು ಈಗಾಗಲೇ 5 ಎಕರೆ ಜಾಗದಲ್ಲಿ ನೆಲೆಯೂರಿದೆ. ಇನ್ನೂ ಒಂದಷ್ಟು ಗಿಡಗಳು ಬರಲಿದೆ. ಇದೊಂದು ಮಾವಿನ ಜೀನ್ ಬ್ಯಾಂಕ್. ಈ ಸಾಹಸ ಮಾಡಿದರು ಕೃಷಿಕ, ಪಶುವೈದ್ಯ ಡಾ.ಮನೋಹರ ಉಪಾಧ್ಯ.
ಬಂಟ್ವಾಳ ತಾಲೂಕಿನ ಕೋಡಪದವು ಬಳಿಯ ಕುಕ್ಕಿಲದಲ್ಲಿ ಪಶುವೈದ್ಯ ಡಾ.ಮನೋಹರ ಉಪಾಧ್ಯ ಅವರು ಸುಮಾರು 5 ಎಕ್ರೆ ಜಾಗದಲ್ಲಿ ನಾಡ ಮಾವಿನ ತಳಿಯ ಸಂರಕ್ಷಣೆಯ ಕೆಲಸದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಸುಮಾರು 400 ಗಿಡಗಳನ್ನು ನಾಟಿ ಮಾಡಿದ್ದಾರೆ. ಮಾವಿನ ಜೀನ್ ಬ್ಯಾಂಕ್ ಮಾಡುವುದೇ ಇವರ ಉದ್ದೇಶ. ಅಳಿದು ಹೋಗುವ ಕಾಡ ಮಾವು ಬಹಳ ಔಷಧೀಯ ಗುಣಗಳು, ರುಚಿಕರವಾದ ಹಣ್ಣುಗಳು ಸೇರಿದಂತೆ ವಿವಿಧ ಉತ್ಕೃಷ್ಟ ತಳಿಗಳು ಇದೆ.ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಹಾಗೂ ಇತರ ಕಾರಣಗಳಿಂದ ಇಂದು ಅಂತಹ ಮರಗಳು ನಾಶವಾಗುತ್ತಿದೆ. ಹೀಗಾಗಿ ಈಗ ಆ ಗಿಡಗಳ ಸಂರಕ್ಷಣೆ ಆಗದೇ ಇದ್ದರೆ ಮುಂದಿನ ತಲೆಮಾರಿಗೆ ಶ್ರೇಷ್ಟ ಮಾವು ಸಿಗಲಾರದು ಎಂದು ಉದ್ದೇಶದಿಂದ ಯಾವುದೇ ವಾಣಿಜ್ಯ ಲಾಭ ಬಯಸದೇ ಈ ನಾಡ ಮಾವು ಸಂರಕ್ಷಣೆಯ ಕೆಲಸ ಆರಂಭಿಸಿದ್ದಾರೆ ಡಾ.ಮನೋಹರ ಉಪಾಧ್ಯ ಅವರು. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರಕನ್ನಡ ಈ ನಾಲ್ಕು ಜಿಲ್ಲೆಗಳನ್ನು ತೆಗೆದುಕೊಂಡರೇ ಸುಮಾರು ಬಗೆಯ ಮಾವಿನ ತಳಿಗಳು ಇವೆ.ಅದರಲ್ಲಿ ನಮಗೆ ಲಭ್ಯವಾಗುವ ಶ್ರೇಷ್ಟ ತಳಿಗಳನ್ನು ಮಾತ್ರಾ ಇಲ್ಲಿ ದಾಖಲಿಸಿ ಅವುಗಳನ್ನು ನಾಟಿ ಮಾಡಲಾಗುತ್ತದೆ. ಹಣ್ಣು, ಮಿಡಿ ಸೇರಿದಂತೆ ಆ ಮರದ ಗುಣ ಧರ್ಮಗಳನ್ನೂ ದಾಖಲಿಸಿಕೊಂಡು ಕಸಿ ಗಿಡ ನಾಟಿ ಮಾಡಲಾಗುತ್ತಿದೆ. ಹೀಗೆ ಈಗಾಗಲೇ 400 ಕ್ಕೂ ಹೆಚ್ಚು ಗಿಡಗಳ ನಾಟಿ ಆಗಿದೆ. ಇನ್ನಷ್ಟು ಸಂಗ್ರಹವನ್ನು ಮಾಡುತ್ತಾರೆ ಮನೋಹರ ಉಪಾಧ್ಯ. ಹೀಗೆ ಸಂಗ್ರಹವಾದ ಗಿಡಗಳು ಜೀನ್ ಬ್ಯಾಂಕ್‌ನಲ್ಲಿ ದಾಖಲಾಗುತ್ತದೆ, ಮುಂದೆ ಯಾರು ಬೇಕಾದರೂ, ಯಾವಾಗ ಬೇಕಾದರೂ ಈ ಗಿಡಗಳಿಂದ ಸಯಾನ್ ಪಡೆದು ಗಿಡಗಳನ್ನು ಬೆಳೆಸಬಹುದು ಎನ್ನುತ್ತಾರೆ ಡಾ.ಮನೋಹರ್ ಅವರು.
ಮಿತ್ರರು ಶ್ರೇಷ್ಟ ತಳಿಯ ಮಾವಿನ ಗಿಡದ ಬಗ್ಗೆ ಹೇಳಿದರೆ , ಆ ಗಿಡ ಸಯಾನ್ ತಂದು ಕಸಿ ಮಾಡಿ ಗಿಡ ಬೆಳೆಸಿ ನಾಟಿ ಮಾಡುತ್ತಿದ್ದಾರೆ ಮನೋಹರ್ ಉಪಾಧ್ಯ ಅವರು. ಪರಿಸರದಿಂದ ಬಂದನ್ನು ಪರಿಸರಕ್ಕೆ ಕೊಡುವುದು ಮಾತ್ರಾ ನಮ್ಮ ಕೆಲಸ. ಇಲ್ಲಿ ನಾವೆಲ್ಲಾ ನಿಮಿತ್ತ ಮಾತ್ರಾ ಆಗಿದ್ದೇವೆ. ಪರಿಸರವೇ ಎಲ್ಲವನ್ನೂ ಮಾಡುತ್ತದೆ, ಹಣಕ್ಕಾಗಿ, ಆದಾಯಕ್ಕಾಗಿ ಬೇರೆಯೇ ಉದ್ಯೋಗ ಇದೆ, ಕೃಷಿಯೂ ಇದೆ ಎನ್ನುವ ಮನೋಹರ್ ಉಪಾಧ್ಯ ಅವರು, ಇನ್ನಷ್ಟು ಗಿಡಗಳ ಸಂಗ್ರಹದಲ್ಲಿ ಈಗ ತೊಡಗಿದ್ದಾರೆ.
ಮಂಗಳೂರಿನಲ್ಲಿ ಪಶುವೈದ್ಯರಾಗಿ ಕೆಲಸ ಮಾಡುತ್ತಿರುವ ಡಾ.ಮನೋಹರ್ ಅವರು ಕೋಡಪದವು ಬಳಿಯ ಕುಕ್ಕಿಲದ ಪ್ರದೇಶದಲ್ಲಿ ಜಾಗ ಖರೀದಿಸಿ ಮಾವು ತಳಿ ಸಂರಕ್ಷಣೆಯ ಕೆಲಸ ಮಾಡುತ್ತಿದ್ದಾರೆ. ಸದ್ಯ ಗಿಡಗಳಿಗೆ ವಾರಕ್ಕೊಮ್ಮೆ ನೀರುಣಿಸುತ್ತಾರೆ. ಗಿಡಗಳ ಆರೈಕೆಯನ್ನೂ, ನಿರ್ವಹಣೆಯನ್ನೂ ನಿರಂತರವಾಗಿ ಮಾಡುತ್ತಿದ್ದಾರೆ. ಈಗಾಘಲೇ ನಾಟಿ ಮಾಡಿರುವ ಪ್ರತೀ ಗಿಡದ ವಿವರವನ್ನು ಪುಸ್ತಕದಲ್ಲಿ ಬರೆದಿರಿಸಿದ್ದಾರೆ. ಗಿಡಗಳ ಸಂಖ್ಯೆಗೆ ಅನುಗುಣವಾಗಿ ವಿವರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಮುಂದೆ ಆ ಮರದ ಗುಣ ಧರ್ಮಗಳನ್ನೂ ದಾಖಲಾತಿ ಮಾಡಲಾಗುವುದು ಎನ್ನುತ್ತಾರೆ ಮನೋಹರ್ ಅವರು. ಸಾಕಷ್ಟು ಕೆಲಸ ಇದೆ, ಆದರೂ ಕೂಡಾ ಮುಂದಿನ ಪೀಳಿಗೆಗೆ, ಪರಿಸರಕ್ಕೆ ಕೊಡುಗೆ ನೀಡಬೇಕಾದ್ದು ಧರ್ಮ ಎಂದು ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.