ಕೇಂದ್ರ ಸರ್ಕಾರದ ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ ಮತ್ತು ರೈತ ಉತ್ಪಾದಕ ಸಂಸ್ಥೆಗಳ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಸಂಸ್ಥೆಗಳ ಮೇಳಕ್ಕೆ ಕೃಷಿ ಸಚಿವ ಎನ್.ಚೆಲುವ ನಾರಾಯಣಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ದೇಶ ಕೃಷಿ ಪ್ರಧಾನವಾಗಿದ್ದು, ಸಣ್ಣ ಹಿಡುವಳಿಗಳಿಂದ ಕೂಡಿದೆ. ಸಣ್ಣ ರೈತರು ಸಮಗ್ರ ಕೃಷಿ ಮತ್ತು ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಒತ್ತು ನೀಡಿದಾಗ ಸಾಲ ಬಾಧೆಯಿಂದ ಹೊರಬಂದು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲಿದೆ ಎಂದರು. ಕೃಷಿ ಕ್ಷೇತ್ರದ ಸಾಧಕ-ಬಾಧಕಗಳ ಕುರಿತು ಚರ್ಚಿಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಕೃಷಿ ಕ್ಷೇತ್ರದ ಏಳಿಗೆಗೆ ಕೊಡುಗೆ ನೀಡುತ್ತಿವೆ. ಸಮಾಜದ ಮುಖ್ಯ ಶ್ರಮಿಕ ವರ್ಗವಾದ ರೈತರು ಸಂಕಷ್ಟಗಳಿಂದ ಹೊರಬರಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಖಾತರಿ ಯೋಜನೆಗಳನ್ನು ಜಾರಿ ಮಾಡಿದೆ ಎಂದರು. ಕೃಷಿಕ ಎಲ್ಲಾ ರೀತಿಯಲ್ಲೂ ಸಬಲನಾಗಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಸಂಘಟಿಸಿ ಉತ್ಪಾದಕರ ಸರಪಳಿಯನ್ನು ಸದೃಡಗೊಳಿಸಲಾಗುತ್ತಿದೆ. ಸಂಪೂರ್ಣ ಸಹಕಾರಿ ತತ್ವದಡಿಯಲ್ಲಿ ಕೃಷಿ ಉತ್ಪಾದಕರ ಸಂಘಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ವೇಳೆ ರಾಯಚೂರು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ, ಜಲಾನಯನ ಇಲಾಖೆ ಆಯುಕ್ತ ಮಹೇಶ್ ಶಿರೂರ್ ಮತ್ತಿತರರು ಉಪಸ್ಥಿತರಿದ್ದರು.