ರೈತರಿಗೆ ತಾನು ಬೆಳೆದ ಬೆಳೆಯ ಕೆಲಸ ಮಾಡಿಸುವುದೇ ದೊಡ್ಡ ತಾಪತ್ರಯದ ಕೆಲಸ. ಕೂಲಿ ಆಳುಗಳು ಇತ್ತೀಚಿನ ದಿನಗಳಲ್ಲಿ ಸಿಗೋದೆ ಕಷ್ಟ. ಉತ್ತರ ಕರ್ನಾಟಕ, ಉತ್ತರ ಭಾರತದ ಕಡೆಯಿಂದ ಕೆಲ ವಲಸೆ ಬಂದ ಕಾರ್ಮಿಕರು ಸಿಗುತ್ತಾರೆ. ಆದರೆ ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಎಷ್ಟು ಸೂಕ್ತ ಅನ್ನುವುದೇ ಸಂಕಟದ ಪ್ರಶ್ನೆ. ಬೇಡ ಅಂದ್ರೆ ಕೆಲಸ ಆಗಲ್ಲ. ಬೇಕು ಅಂದ್ರೆ ಕೆಲವೊಂದು ಭಾರಿ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.
ಇತ್ತೀಚೆಗೆ ಅಸ್ಸಾಂ ಕಾರ್ಮಿಕರಿಂದ ತೋಟದ ಮಾಲೀಕರ ಮೇಲೆ ಹಲ್ಲೆ, ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ತೋಟದ ಮಾಲೀಕರು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಇತ್ತೀಚೆಗೆ ಕಾಫಿ ಎಸ್ಟೇಟ್ ಒಂದರ ಕೂಲಿ ಲೈನಿನಲ್ಲಿದ್ದ ಅಸ್ಸಾಂ ಮೂಲದ ಕಾರ್ಮಿಕರು ಕ್ವಿಂಟಲ್ ಗಟ್ಟಲೇ ಕಾಳುಮೆಣಸು ಕಳ್ಳತನ ಮಾಡಿ ಸಿಕ್ಕಿಬಿದ್ದ ಪ್ರಕರಣ ನಡೆದಿದೆ.
ಬೇಲೂರು ತಾಲ್ಲೂಕು, ಅರೇಹಳ್ಳಿ ಠಾಣಾ ವ್ಯಾಪ್ತಿಯ ಕಾನಹಳ್ಳಿ ಗ್ರಾಮದ ರಂಜನ್ ಎಂಬುವವರ ಕಾಫಿ ಎಸ್ಟೇಟ್ ನಲ್ಲಿ ಈ ಪ್ರಕರಣ ನಡೆದಿದೆ. ರಂಜನ್ ಅವರು ತಮ್ಮ ತೋಟದ ಕಾಳುಮೆಣಸು ಫಸಲನ್ನು ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ವಹಿಸಿಕೊಟ್ಟಿದ್ದರು. ಸಕಲೇಶಪುರ ಮೂಲದ ಪಾಶ ಎನ್ನುವವರು ಕೇರಳದವರಿಂದ ಮೆಸಣು ಕೊಯ್ಯಲು ಉಪಗುತ್ತಿಗೆಗೆ ವಹಿಸಿಕೊಂಡಿದ್ದರು.
ಫೆಬ್ರುವರಿ 27ರಂದು ರಾತ್ರಿ ಸಮಯದಲ್ಲಿ ಅಸ್ಸಾಂ ಕಾರ್ಮಿಕರು ತೋಟದಲ್ಲಿ ಕಾಳುಮೆಣಸು ಕದ್ದು ಕೊಯ್ಯುವಾಗ ಸಿಕ್ಕಿಬಿದ್ದಿದ್ದಾರೆ. ನಂತರ ಅವರು ವಾಸವಾಗಿದ್ದ ಲೈನ್ ಬಳಿ ಪರಿಶೀಲಿಸಿದಾಗ ಕಾಳುಮೆಣಸನ್ನು ಅನೇಕ ಕಡೆ ಬಚ್ಚಿಟ್ಟಿದ್ದು ಕಂಡುಬಂದಿದೆ. ಲೈನ್ ನ ಬಳಿ ಇರುವ ಎರೆಹುಳು ಗೊಬ್ಬರ ತೊಟ್ಟಿಯಲ್ಲಿ ಹಸಿ ಮೆಣಸು ತುಂಬಿದ ನಾಲ್ಕೈದು ಮೂಟೆಗಳು ಪತ್ತೆಯಾಗಿವೆ.
ನಂತರ ಲೈನಿನ ಒಳಗೆ ಪರಿಶೀಲಿಸಿದಾಗ ಲೈನಿನ ಸಿಮೆಂಟ್ ನೆಲವನ್ನು ಅಗೆದು, ಅಲ್ಲಿ ಗುಂಡಿ ತೋಡಿ ಅದರೊಳಗೆ ಒಣಗಿದ ಮೆಣಸಿನ ಮೂಟೆಗಳನ್ನು ಬಚ್ಚಿಟ್ಟಿದ್ದು ಕಂಡು ಬಂದಿದೆ. ಒಂದು ಟಾರ್ಪಲ್ ನಲ್ಲಿ ಅಡಗಿಸಿಟ್ಟಿದ ಮೆಣಸಿನ ಮೇಲೆ ಪರಿಶೀಲನೆಗೆ ಬಂದಾಗ ಮಹಿಳೆಯೊಬ್ಬರನ್ನು ಮಲಗಿಸಿ ಆರೋಗ್ಯ ಸರಿಯಿಲ್ಲ ಎಂದು ನಾಟಕವಾಡಿದ್ದಾರೆ.
ಹೀಗೆ ಅನೇಕ ಕಡೆ ಕಾಳುಮೆಣಸು ಬಚ್ಚಿಟ್ಟಿದ್ದು ಕಂಡು ಬಂದಿದೆ. ಕದ್ದುಕೊಯ್ದ ಕಾಳುಮೆಣಸನ್ನು ತಮ್ಮ ಕೂಲಿ ಲೈನಿನ ಒಳಗೆ ಒಲೆಯಲ್ಲಿ ಹುರಿದು ಒಣಗಿಸುತ್ತಿದ್ದರು ಎಂದು ತಿಳಿದುಬಂದಿದೆ. ರಂಜನ್ ಅವರ ಎಸ್ಟೇಟ್ ಲೈನಿನಲ್ಲಿ ಕಳೆದ ಒಂದು ವರ್ಷದಿಂದ 42 ಮಂದಿ ಅಸ್ಸಾಂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರ ಲೈನ್ ತೋಟದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಕಾರ್ಮಿಕರು ರಾತ್ರಿ ಸಮಯದಲ್ಲಿ ತೋಟಕ್ಕೆ ತೆರಳಿ ಅಲ್ಲಿಂದ ಮೆಣಸು ಕದ್ದು ಕೊಯ್ದು ಲೈನಿನ ಬಳಿ ಬಚ್ಚಿಡುತ್ತಿದ್ದರು ಎಂದು ತಿಳಿದುಬಂದಿದೆ.
ಇವರು ಈಗಾಗಲೇ ಬಹಳಷ್ಟು ಮೆಣಸನ್ನು ಮಾರಾಟ ಮಾಡಿರುವ ಶಂಕೆ ಇದೆ. ಕಾರ್ಮಿಕರ ಕಳ್ಳಾಟದಲ್ಲಿ ತೋಟದ ಮೇಸ್ತ್ರಿಯೂ ಶಾಮೀಲಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಲೆನಾಡಿನ ಕಾಫಿ ತೋಟಗಳ ತುಂಬಾ ಬಂದು ಸೇರಿರುವ ಅಸ್ಸಾಂ ಕಾರ್ಮಿಕರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪೊಲೀಸ್ ಇಲಾಖೆಯೂ ಈ ಬಗ್ಗೆ ಕ್ರಮ ಜರುಗಿಸಬೇಕಾಗಿದೆ. ತಮ್ಮ ತಮ್ಮ ಠಾಣೆಯ ವ್ಯಾಪ್ತಿಯ ಕಾಫಿ ಎಸ್ಟೇಟ್ ಗಳಲ್ಲಿ ಇರುವ ಅಸ್ಸಾಂ ಕಾರ್ಮಿಕರ ವಿವರ ಪಡೆದು ಆಯಾ ತಂಡದ ಮುಖಂಡರನ್ನು ಕರೆದು ಸೂಕ್ತ ಮುನ್ನೆಚ್ಚರಿಕೆ ನೀಡಬೇಕಾಗಿದೆ. ಇಲ್ಲದೇ ಹೋದರೆ ಅಸ್ಸಾಂ ಕಾರ್ಮಿಕರು ಕಾಫಿನಾಡಿನ ನೆಮ್ಮದಿಗೆ ಕಂಟಕವಾಗಿ ಪರಿಣಮಿಸುತ್ತಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…