ಬರ, ಅತಿವೃಷ್ಟಿ ಬೆಳೆ ನಷ್ಟದಿಂದ ಕಳೆದ 10 ತಿಂಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ರೈತರು ಅತಿವೃಷ್ಟಿ, ಪ್ರವಾಹ, ಬೆಳೆಹಾನಿಯಿಂದ ನಲುಗಿ ಹೋಗಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸುಮಾರು 70 ಸಾವಿರ ಹೆಕ್ಟೇರ್ ಗೂ ಅಧಿಕ ಬೆಳೆಹಾನಿಯಾಗಿದೆ. ನೆರೆ, ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಹಾನಿಯಾಗಿದ್ದು, ಕೃಷಿ, ತೋಟಗಾರಿಕೆ, ತರಕಾರಿ ಬೆಳೆಗಳೂ ಹಾನಿಯಾಗಿವೆ. ಜಿಲ್ಲೆಯ ಬಹುತೇಕ ರೈತರು ಬೆಳೆಹಾನಿ ಹಾಗೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಯಾಗಿದೆ.
ಹಾವೇರಿ ಜಿಲ್ಲೆಯಲ್ಲಿ 2022 ರ ಜನವರಿಯಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಫೆಬ್ರವರಿಯಲ್ಲಿ 10, ಮಾರ್ಚ್ 13, ಏಪ್ರಿಲ್ 10, ಮೇ 10, ಜೂನ್ 9, ಜುಲೈ 8, ಆಗಸ್ಟ್ 12, ಸೆಪ್ಟೆಂಬರ್ 20, ಅಕ್ಟೋಬರ್ 7 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸರ್ಕಾರವು ಬೆಳೆ ವಿಮೆಯಂತಹ ಯೋಜನೆ ಮಾಡಿದ್ದರೂ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಯ ಮೂಲಕವೂ ರೈತರಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಕೆಲವು ರೈತರು ಹೇಳಿದ್ದರು. ಹೀಗಾಗಿ ಆರ್ಥಿಕ ಸಂಕಷ್ಟವು ರೈತರನ್ನು ಕಾಡುತ್ತಿರುವುದು ಈ ಸಮಸ್ಯೆಗಳಿಗೆ ಕಾರಣವಾಗಿದೆ.