ತಮ್ಮ ಊರಿಗೆ ಒಂದಷ್ಟು ಕೈಗಾರಿಗಳು, ಕಂಪನಿಗಳು ಬಂದರೆ ಅಲ್ಲಿನ ಜನತೆಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆ ಜನರದ್ದು. ಆರ್ಥಿಕ ವ್ಯವಹಾರ ಕೂಡಾ ಉತ್ತಮವಾಗುತ್ತದೆ ಎಂಬ ಭರವಸೆ ನೀಡಿ 3-4 ದಶಕಗಳೇ ಕಳೆಯಿತು. ಆದರೆ ಇದ್ಯಾವುದೂ ಆಗಿಲ್ಲ..!. ಈ ಕತೆ ಮಂಗಳೂರಿನದ್ದು.
ಮಂಗಳೂರಿನಲ್ಲಿ ಈಗ ಬೃಹತ್ ಕೈಗಾರಿಕೆಗಳ ಬಣ್ಣ ಮಾತ್ರ ಒಂದೊಂದಾಗಿ ಕಳಚಿಕೊಳ್ಳುತ್ತಿದೆ. ಸಾರ್ವಜನಿಕ ರಂಗದ ಪ್ರತಿಷ್ಠಿತ ಕಂಪನಿಯಾದ ಎಂಆರ್ ಪಿಎಲ್ ಬಂದ ಬಳಿಕ ಸಾಲು ಸಾಲಾಗಿ ಲಗ್ಗೆ ಇಟ್ಟ ಬೃಹತ್ ಕೈಗಾರಿಕೆಗಳು ಉದ್ಯೋಗವೇನೋ ಸೃಷ್ಟಿಸಿದೆ. ಆದರೆ ಅದರಲ್ಲಿ ಸ್ಥಳೀಯರ ಪಾಲು ಕಡಿಮೆ. ಅನ್ಯ ರಾಜ್ಯಗಳ ನೌಕರರ ಪಾಲಾಗುತ್ತಿದೆ. ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಕೊಟ್ಟ ರೈತ – ಕೃಷಿಕರಿಗೆ ಈ ಕಂಪನಿಗಳು ಉಚಿತವಾಗಿ ರೋಗವನ್ನಂತು ಕೊಡುತ್ತಿದೆ. ಪರಿಸರಕ್ಕೆ ಮಹಾ ಕಂಟಕವಾಗಿ ಕಾಡುತ್ತಿವೆ…!. ಇದೀಗ ಹೋರಾಟ ಅನಿವಾರ್ಯವಾಗಿದೆ ಇಲ್ಲಿನ ಜನರಿಗೆ.
ಇದೀಗ ಕಳೆದ ನಾಲ್ಕೈದು ದಿನಗಳಿಂದ ಬೈಕಂಪಾಡಿ ಕೈಗಾರಿಕಾ ವಲಯ, ಎಂಆರ್ ಪಿಎಲ್, ಎಸ್ ಇಝಡ್ ತಮ್ಮ ಕೈಗಾರಿಕಾ ಮಾಲಿನ್ಯದ ತ್ಯಾಜ್ಯವನ್ನು ಫಲ್ಗುಣಿ ನದಿ ಸೇರುವ ತೋಕೂರು ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿ ಪೂರ್ತಿ ಕೊಳೆತು ನಾರುತ್ತಿದ್ದೆ. ಇದೆಲ್ಲ ನೇರವಾಗಿ ಪಲ್ಗುಣಿ ನದಿಗೆ ಸೇರುತ್ತಿದೆ ಎನ್ನುವುದು ಜನರ ಆರೋಪ.
ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗೆ ಹೋರಾಟ ಸಮಿತಿ ದೂರು ನೀಡಿದೆ. ಪ್ರಾದೇಶಿಕ ಅಧಿಕಾರಿ ರಮೇಶ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ನೀರಿನ ಸ್ಯಾಂಪಲ್ ಸಂಗ್ರಹಿಸಿದೆ. ಅಷ್ಟೇ ಅಲ್ಲದೆ ಕೈಗಾರಿಕಾ ಮಾಲಿನ್ಯ ಆಗುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿರುವುದಾಗಿ ತಂಡ ಒಪ್ಪಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥ ಕಂಪೆನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು, ಪಲ್ಗುಣಿ ನದಿಯನ್ನು ಉಳಿಸಲು ನಾಗರಿಕ ಹೋರಾಟ ಸಮಿತಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದೆ.
ಇದರಿಂದ ಜೋಕಟ್ಟೆ, ಕಳವಾರು ಗ್ರಾಮಗಳು ರೋಗಗ್ರಸ್ತಗೊಂಡಿವೆ. ಜನರಿಗೆ ಕಣ್ಣುರಿ, ಚರ್ಮರೋಗ ಶುರುವಾಗಿದೆ. ಉಬ್ಬಸ, ಉಸಿರಾಟ ಸಮಸ್ಯೆಯೂ ಅಧಿಕವಾಗಿದೆ. ಕಂಪೆನಿಗಳ ಮಾಲಿನ್ಯದಿಂದ ಪಲ್ಗುಣಿ ನದಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ. ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಅದಲ್ಲದೆ ಸ್ಥಳೀಯರಿಗೆ ಉದ್ಯೋಗ ನೀಡದೆ ಬೃಹತ್ ಕೈಗಾರಿಕಾ ಕಂಪನಿಗಳು ವಂಚನೆ ಎಸಗುತ್ತಿವೆ ಎಂದು ಜನರು ಆರೋಪಿಸುತ್ತಿದ್ದಾರೆ.