ಅತಿಯಾಗಿ ವಾಣಿಜ್ಯೀಕರಣ(ಲೇ ಔಟ್, ಟೌನ್ ಶಿಪ್, 5 ಸ್ಟಾರ್ ಹೋಟೆಲ್ ಇತ್ಯಾದಿ) ಮಾಡಬಾರದು ಅಂತ ಜನವಸತಿ ಪ್ರದೇಶವನ್ನೂ(Residential Area) ಗಾಡಗಿಲ್ ವರದಿಯಲ್ಲಿ(Gadgil Report) ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿದ್ದು. ಆದರೆ ಇದರಿಂದ ಜನವಸತಿ ಪ್ರದೇಶ ಹೊರಗೆ ಇಡಿ ಅನ್ನುವವರಿಗೆ ವರದಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೇರಳದಲ್ಲಿ ಭೂ ಕುಸಿತಕ್ಕೆ ಸ್ವಂತ ಜಾಗ ಹೇಗೆ ಬೇಕಾದರೂ ವಾಣಿಜ್ಯೀಕರಣ ಮಾಡುತ್ತೇವೆ ಅನ್ನುವ ಅಹಂಕಾರವೇ ಕಾರಣ. ಇಷ್ಟಾದರು ಜನಕ್ಕೆ ಬುದ್ದಿ ಬಂದಿಲ್ಲ. ಮಲೆನಾಡಿನ ರೈತರು(Farmers) ಮತ್ತೆ ಪ್ರಕೃತಿಯ ಅನಾಹುತಗಳಿಗೆ(Natural disaster) ಒಳಗಾಗುವ ಎಲ್ಲಾ ಲಕ್ಷಣಗಳಿವೆ. ಜೊತೆಗೆ ಒತ್ತುವರಿ ತೆರವಿನ ಬಿಸಿ ಬೆಂಕಿ. ಹಾಗಾಗಿ ಯಾವುದನ್ನೂ ಸರಿಯಾಗಿ ಯೋಚಿಸಲಾರದ ಸ್ಥಿತಿಯಲ್ಲಿ ಇಲ್ಲಿನ ರೈತರಿದ್ದಾರೆ. ಆದರೆ ಇಲ್ಲಿನ ಹಾಲಿ ಮಾಜಿ ಜನಪ್ರತಿನಿದಿಗಳು ರೈತರು ಅಂದರೆ ವೇದಿಕೆಯೇರಿದ ತಮ್ಮ ಅಸಂಬದ್ದ ಪ್ರಲಾಪ ಮತ್ತು ಎದುರು ಪಕ್ಷದವರಿಗೆ ದ್ವೇಷ ಕಾರುವುದನ್ನ ಕೇಳುವ ಕಿವಿ ಅಷ್ಟೇ ಅಂದುಕೊಂಡ ಹಾಗಿದೆ.
ಇದೆಲ್ಲಾ ಯಾಕೆ ಹೇಳಬೇಕಾಯ್ತು ಅಂದ್ರೆ ಇದೇ ತಿಂಗಳು 17ರಂದು ಕೊಪ್ಪದಲ್ಲಿ ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ ಇತ್ತು. ಕೆಲಹೊತ್ತು ಸರಿದಾರಿಯಲ್ಲಿ ಹೋಗ್ತಿದ್ದ ಸಭೆ ಸ್ವಲ್ಪ ಹೊತ್ತಿಗೆ ದ್ವೇಷಕಾರುವ ಹಳಹಳಿಸುವ ಅಸಂಬದ್ದ ಪ್ರಲಾಪ ಮಾಡುವ ಸಭೆಯಾಗಿ ಬದಲಾಯ್ತು. ಅಲ್ಲಿ ಬಂದ ರೈತರು ತಮ್ಮ ಕೃಷಿ ಭೂಮಿ ಮತ್ತು ತಮ್ಮಬದುಕಿನ ಕುರಿತು ಆತಂಕಿತರಾಗಿ ಸೇರಿದ್ದರು. ಈ ಸಭೆಯಲ್ಲಿ ಏನಾದರು ಎಲ್ಲರೂ ಸಮಸ್ಯೆಯ ಪರಿಹಾರದ ಬಗ್ಗೆ ಏನಾದರು ಚರ್ಚೆ ಆಗಬಹುದು ಅದರಿಂದ ಏನಾದರು ಮನಸ್ಸಿಗೆ ಧೈರ್ಯ ಬರಬಹುದು ಭೂಮಿ ಉಳಿಸಿಕೊಳ್ಳುವ ಕಾರ್ಯಯೋಜನೆ ಬಗ್ಗೆ ದಾರಿಯ ಹೊಳಹುಗಳು ಸಿಗಬಹುದು ಅಂದುಕೊಂಡು ಬಂದಿದ್ದರು. ಅವರಿಗೆ ಗದ್ದೆ – ನೆಟ್ಟಿ ಇತ್ತು. ತೋಟಕ್ಕೆ ಔಷಧಿ ಹೋಡೆಯೋದಿತ್ತು, ಆದ್ರೂ ಬಂದಿದ್ರು. ಅವರ ಅಮೂಲ್ಯ ಸಮಯಗಳ ಬಗ್ಗೆ ಜನಪ್ರತಿನಿದಿಗಳಿಗೆ ಬೆಲೆಯೇ ಇಲ್ಲಾ. ಅವರ ಸಮಸ್ಯೆ ಬಗ್ಗೆ ಕಾಳಜಿಯಾಗಲಿ ಪರಿಹರಿಸೋ ಮಾರ್ಗದ ಬಗ್ಗೆ ಸ್ಪಷ್ಟ ತಿಳುವಳಿಕೆಯಾಗಲಿ ಇಲ್ಲಾ. ಅದು ಅವರ ಬೇಜವಾಬ್ದಾರಿ ತನ.
ಈ ಜನಪ್ರತಿನಿಧಿಗಳು ಸರ್ಕಾರ ಗಳು ಸರ್ಕಾರಿ ಇಲಾಖೆಗಳು ಅದಿಕಾರಿಗಳು ಹಲವಾರು ವರ್ಷ ದಿಂದ ಮಾಡಿಟ್ಟಿರುವ ವಿವೇಚನರಹಿತ ನಿರ್ಣಯಗಳು ಇವತ್ತು ಮಲೆನಾಡಿನ ಸಾಮಾನ್ಯ ರೈತರನ್ನ ಆತಂಕಕ್ಕೆ ದೂಡಿದೆ.
- ಕಾಫಿ ಬೆಳೆ ಪ್ರೋತ್ಸಾಹ ಕ್ಕಾಗಿ ಹಲವಾರು ಸಾವಿರ ಎಕರೆ ಜಾಗವನ್ನ ದುಡ್ಡಿದ್ದವರಿಗೆ ಟಿ.ಟಿ.ಹಾಕಿಸಿ ಮಂಜೂರು ಮಾಡಿದ್ದು.
- ವಾಸ ಮತ್ತು ಕೃಷಿ ಯೋಗ್ಯ ಮತ್ತು ಸಾರ್ವಜನಿಕ ಉಪಯೋಗಕ್ಕೆ ಅಂತ ಬಿಟ್ಟ ಜಾಗಗಳನ್ನ ಕಾಡು ಹಾಳು ಮೂಳು ಅಂತ ಘೋಷಣೆ ಮಾಡಿದ್ದು.
- ಅರಣ್ಯ ಇಲಾಖೆ ಯಾವುದೆ ಪರಿಸರ ಸೂಕ್ಷ್ಮತೆ ವೈಜ್ಞಾನಿಕ ತಿಳುವಳಿಕೆ ಇಲ್ಲದೆ ಸಾವಿರಾರು ಎಕರೆ ಜಾಗದಲ್ಲಿ ಅಕೇಶಿಯ ನೀಲಗಿರಿ ಅಂತಹ ಗಿಡಗಳನ್ನ ವೈವಿದ್ಯತೆ ಮತ್ತು ಔಷದೀಯ ಮೂಲಿಕೆಗಳಿರುವ ಜಾಗಗಳಲ್ಲಿ ನೆಟ್ಟಿದ್ದು(ಒತ್ತುವರಿ) ಮತ್ತೂ ಈಗಲೂ ಮತ್ತವೇ ಸಸ್ಯಗಳನ್ನ ನೆಡಲು ಹೊರಟಿರುವುದು.
- ಜೀವನಾವಶ್ಯಕತೆಗೆ ಮಾಡಿಕೊಂಡ ಜಮೀನಿಗೆ ಮತ್ತು ಮನೆಗಳಿಗೆ ಕಾಲಕಾಲಕ್ಕೆ ಪರಿಶೀಲಿಸಿ ಹಕ್ಕುಪತ್ರ ಕೊಡದಿರುವುದು.
ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳು ಸರ್ಕಾರಗಳ ಜನವಿರೋಧಿ ನೀತಿಯಾಗಿದೆ. ಆದರೆ ಮಲೆನಾಡಿನ ಎಲ್ಲಾ ಕೃಷಿಕರೂ ಸಮಸ್ಯೆನಲ್ಲಿ ಇದಾರಾ ಅಂದ್ರೆ ಇಲ್ಲಾ. ಅದರಲ್ಲಿ ಮದ್ಯಮ ಮತ್ತು ಸಣ್ಣರೈತರು ಮಾತ್ರಾ ಸಮಸ್ಯೆಯಲ್ಲಿರೋದು. ದೊಡ್ಡ ದೊಡ್ಡ ರೈತರೆಲ್ಲಾ ಹಣ ಮತ್ತು ಪ್ರಭಾವ ಬಳಸಿಕೊಂಡು ಕಾಲಕಾಲಕ್ಕೆ ದಾಖಲೆಗಳನ್ನ ಮಾಡಿಸಿಕೊಂಡಿದಾರೆ. ಸಣ್ಣ ಸಾಗುವಳಿದಾರರಿಗೆ ಪ್ರಭಾವವೂ ಇಲ್ಲಾ ಹಣವೂ ಇಲ್ಲಾ ಹಾಗಾಗಿ ಹಕ್ಕುಪತ್ರವೂ ಇಲ್ಲಾ. ಈಗ ದುಡಿದುಣ್ಣುತ್ತಿದ್ದು ನೆಮ್ಮದಿಯಿಂದ ಇದ್ದ ಇವರಿಗೆ ಈಗ ನೆಮ್ಮದಿಯೂ ಇಲ್ಲಾ.
ಈಗ ಏನು ಮಾಡಬಹುದು.?
- ಮೊದಲಿಗೆ ನಾವು ಸಾಗುವಳಿ ಮಾಡಿದ ಭೂಮಿ ಮತ್ತು ಮನೆಗಳಿಗೆ ಹಕ್ಕುಪತ್ರ ಕೊಡುವಂತೆ ಒತ್ತಾಯಿಸಬೇಕು
- .ಅರಣ್ಯ ಇಲಾಖೆಯ ಅವೈಜ್ಞಾನಿಕ ಕಾಡುಬೆಳೆಸುವ ದಂದೆಯನ್ನ ನಿಲ್ಲಿಸುವಂತೆ ಒತ್ತಾಯಿಸಬೇಕು.
- ಅರಣ್ಯ ಮತ್ತು ಕಂದಾಯ ಇಲಾಖೆಯ ಗೊಂದಲಗಳು ಅವರೇ ಪರಿಹರಿಸಿಕೊಂಡು ಅರಣ್ಯ ಯಾವುದು ಕಂದಾಯ ಭೂಮಿ ಯಾವುದು ಅಂತ ತೀರ್ಮಾನ ಮಾಡಿಕೊಳ್ಳಬೇಕು. ಆ ಮೂಲಕ ಅರ್ಹರಿಗೆ ಹಕ್ಕುಪತ್ರ ಕೊಡುವ ಕೆಲಸಕ್ಕೊಂದು ಮಾರ್ಗ ಸೂಚಿ ಸಿಗುತ್ತೆ.
ಇದೆಲ್ಲವನ್ನೂ ಸರ್ಕಾರಗಳು ಆದಷ್ಟು ಬೇಗ ಪರಿಹರಿಸಬೇಕು. ಯಾಕೆಂದರೆ ರೈತ ಆತಂಕದಲ್ಲೇ ದಿನದೂಡಲು ಆಗಲ್ಲಾ. ಬದುಕಿನ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡ್ತಾರೆ. ಹಾಗಾಗಿ ಸರ್ಕಾರಗಳು ಸಾದ್ಯವಾದಷ್ಟು ಕಾರ್ಯಸಾದುವಾದ ನಿರ್ಣಯವನ್ನ ಮತ್ತು ಪರಿಹಾರವನ್ನೂ ಬೇಗಲೇ ಜನರ ಮುಂದಿಟ್ಟರೆ ಒಳ್ಳೆಯದು. ಇಲ್ಲಾ ಅಂದ್ರೆ ಜನ ತಮ್ಮ ಹಕ್ಕಾದ ಮತ ಚಲಾಯಿಸುವ ನಿರ್ಣಯದಿಂದ ಹಿಂದೆ ಸರಿತಾರೆ. ಒಳ್ಳೆಯ ಜನಪರವಾದ ರೈತಪರವಾದ ನಿರ್ಣಯವನ್ನ ಸರ್ಕಾರ ತಗೊಳ್ಳಲಿ ಅಂತ ಒತ್ತಾಯಿಸೋಣವೇ.