ಪ್ರತೀ ವರ್ಷ ಕಾವೇರಿ ನೀರು ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ವೈಮನಸ್ಸು ಇದ್ದೇ ಇರುತ್ತದೆ. ಸುಪ್ರೀಂ ಕೋರ್ಟ್ ನಿಂದ ಅಂತಿಮ ತೀರ್ಪು ಬಂದರು ಈ ರಗಳೆಗೆ ಕೊನೆಯೇ ಇಲ್ಲ. ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗುತ್ತಿದೆ. ತಮಿಳುನಾಡಿಗೆ ಕೆಆರ್ಎಸ್ ಡ್ಯಾಂನಿಂದ ನೀರು ಬಿಟ್ಟಿದ್ದಕ್ಕೆ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ಕಿಡಿಕಾರುತ್ತಿದ್ದಾರೆ. ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಲು ಒತ್ತಾಯಿಸಿದ್ದಾರೆ.
ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಮುಂದಾಗಿದೆ. ಇನ್ನು ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಪ್ರತಿಭಟನೆ ಮಾಡಲಿ ಆದರೆ, ಅವರ ನಾಯಕರು ಯಾರು ತಿಳಿಸಿ ಪ್ರತಿಭಟನೆ ಮಾಡಲಿ ಅಂತ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ತಮಿಳುನಾಡಿಗೆ ಕೆಆರ್ಎಸ್ ಡ್ಯಾಂನಿಂದ ನೀರು ಬಿಟ್ಟಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ಬಿಜೆಪಿ ಕಾವೇರಿ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಮೈಸೂರು ವಿಭಾಗದ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಸೇರಿದಂತೆ ಚಾಮರಾಜನಗರ, ಹಾಸನ, ರಾಮನಗರ ಜಿಲ್ಲೆಗಳ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಹೋರಾಟ ರೂಪರೇಷ ಬಗ್ಗೆ ಚರ್ಚಿಸಲಾಯಿತು.
ತಮಿಳುನಾಡಿಗೆ ಸರ್ಕಾರ ನೀರು ಬಿಡ್ತಿರೋ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ನೀರಿನ ಸಮಸ್ಯೆ ಒಂದು ಸರ್ಕಾರದ, ಒಂದು ಪಕ್ಷದ ಸಮಸ್ಯೆಯಲ್ಲ, ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಕೊಡಬೇಕು ಅಂತ ಹೇಳಿದರು. ಕಾವೇರಿ ವಿಚಾರದ ಹೋರಾಟ ರಾಜಕೀಯ ಹೋರಾಟ ಅಲ್ಲ. ನಾವು ಎಲ್ಲರೂ ರೈತರ ಪರ ಹೋರಾಟ ಮಾಡಬೇಕಿದೆ. ಸಾಕಷ್ಟು ವರ್ಷಗಳಿಂದ ಕಾವೇರಿ ವಿಚಾರ ತಮಿಳುನಾಡು ಪರವಾಗೆ ತೀರ್ಪುಗಳು ಬರ್ತಿದೆ. ಹಿಂದಿನಿಂದಲೂ ನಮ್ಮ ರೈತರಿಗೆ ಅನ್ಯಾಯ ಆಗ್ತಾ ಇದೆ. ಈ ಬಗ್ಗೆ ಸರ್ಕಾರ ಯಾಕೆ ಹೋರಾಟ ಮಾಡ್ತಿಲ್ಲ ಅಂತ ಪ್ರಶ್ನೆ ಮಾಡಬೇಕಾಗಿದೆ.
ಕಾವೇರಿ ವಿಚಾರ ಬರಿ ಮಂಡ್ಯಕ್ಕೆ ಸೀಮಿತವಾಗಿಲ್ಲ. ಕಾವೇರಿ ಕೊಳ್ಳದ ರಾಮನಗರ, ಬೆಂಗಳೂರು, ಮೈಸೂರು ಭಾಗದ ಎಲ್ಲರ ಜವಾಬ್ದಾರಿಯಾಗಿದೆ. ಪ್ರಾಧಿಕಾರದ ಸೂಚನೆಯಂತೆ ಕಾವೇರಿ ನೀರು ಹರಿಸಲಾಗ್ತಿದೆ ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ, ಇವರು ಹಾಗಾದ್ರೆ ಕೇಂದ್ರ ಸರ್ಕಾರದ ಪಾತ್ರ ಇದೆ ಅಂತ ಅವರು ಹೇಳುವುದರಲ್ಲಿ ಏನು ಅರ್ಥ ಇದೆ?
ಕೇಂದ್ರ ಸರ್ಕಾರದ ಕೈಯಲ್ಲಿ ಕಾವೇರಿ ಕೀ ಇದ್ದಿದ್ದರೆ ಹಿಂದೆ ಅಂಬರೀಶ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇರ್ತಿರಲಿಲ್ಲ. ಇಲ್ಲಿ ಮಳೆ ಆಗಿಲ್ಲ ಅಂದ ತಕ್ಷಣ ತಮಿಳುನಾಡಿನವರು ಆ್ಯಕ್ಟೀವ್ ಆಗಿ ನೀರು ಕೇಳ್ತಾರೆ. ಆದರೆ ಇಲ್ಲಿ ನಮ್ಮವರು ಆ ರೀತಿ ಆ್ಯಕ್ಟೀವ್ ಆಗಿ ಮಾಹಿತಿ ನೀಡೋದು ಅವರ ಜವಾಬ್ದಾರಿ. ಆದರೆ ಮಾಹಿತಿ ನೀಡುವುದರಲ್ಲಿ ನಮ್ಮವರ ನಿರ್ಲಕ್ಷ್ಯ ಇದೆ ಸಂಸದೆ ಸುಮಲತಾ ಕಿಡಿ ಕಾರಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.
Source : Digital Media