ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಕಾಡಾನೆಗಳ ಕಾಟ ಹೆಚ್ಚಾಗಿದೆ. ಇದರಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸುಳ್ಯ ತಾಲೂಕಿನ ನಡುಗಲ್ಲು ಬಳಿಯ ಕೊರಂಬಟ ಎಂಬಲ್ಲಿ ಕೃಷಿಕ ರವಿ ಎಂಬವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಅಡಿಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹಾನಿ ಮಾಡಿವೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಸೇಸಪ್ಪ ಗೌಡ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಡಿಕೆ ಹಾಗೂ ತೆಂಗಿನ ಮರಗಳಿಗೆ ಹಾನಿ ಮಾಡಿವೆ. ಇತ್ತೀಚೆಗಿನ ದಿನಗಳಲ್ಲಿ ಚಾರ್ಮಾಡಿ ಪರಿಸರದಲ್ಲೂ ಕಾಡಾನೆ ಹಾವಳಿ ಹೆಚ್ಚಾಗಿದೆ. ಧರ್ಮಸ್ಥಳ ಗ್ರಾಮದ ಕಲ್ಲೇರಿ ಬಳಿ ಹೆದ್ದಾರಿ ಬದಿಯಲ್ಲಿ ಶುಕ್ರವಾರ ಕಾಡಾನೆ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಎಂಬಲ್ಲಿ ಗುರುವಾರ ತಡರಾತ್ರಿ ಕಾಡಾನೆಗಳ ಹಿಂಡು ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ನುಗ್ಗಿ ಅಡಿಕೆ ಮರ ಹಾಗೂ ತೆಂಗಿನ ಮರಗಳನ್ನು ಧ್ವಂಸ ಮಾಡಿವೆ. ಕೆಂಪಯ್ಯ ಗೌಡ ಎಂಬವರ ಭತ್ತ ಕೃಷಿಗೂ ಹಾನಿಯಾಗಿರುವುದು ತಿಳಿದು ಬಂದಿದೆ.
ಕಾಡಾನೆಗಳ ಕಾಟದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. pic.twitter.com/QqlaCCHQOF
— theruralmirror (@ruralmirror) September 15, 2023
Advertisement
ಸುಳ್ಯ ತಾಲೂಕಿನ ಬಾಳುಗೋಡು, ಕೊಲ್ಲಮೊಗ್ರ, ಆಲೆಟ್ಟಿ , ಮಂಡೆಕೋಲು ಸೇರಿದಂತೆ ಹಲವು ಕಡೆಗಳಲ್ಲಿ ಕಾಡಾನೆ ಕಾಟ ಇದೆ. ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲೂ ಕಾಡಾನೆ ಕಾಟ ಇದೆ.
ಧರ್ಮಸ್ಥಳ ಗ್ರಾಮ ಪಂಚಾಯತ್‌ನಲ್ಲಿ ಈ ಬಗ್ಗೆ ಸಮಾಲೋಚನಾ ಸಭೆ ನಡೆದಿದೆ. ಧರ್ಮಸ್ಥಳ ಗ್ರಾಮದ ನೇರ್ತನೆ ಪರಿಸರದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗುತ್ತಿದ್ದು, ಕೃಷಿಗೆ ಹಾನಿಯನ್ನು ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ ನೇರ್ತನೆ ಪರಿಸರದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಕಳುಹಿಸುವ ಕಾರ್ಯ ತುರ್ತಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸೋಲಾರ್ ಬೇಲಿ ಅಳವಡಿಸಲು ಸರ್ಕಾರ ಅನುದಾನ ನೀಡುವುದರಿಂದ ಈ ಬಗ್ಗೆಯೂ ಪ್ರಯತ್ನಿಸಲಾಗುವುದು. ರೈತರು ಸೋಲಾರ್ ಬೇಲಿ ಅಳವಡಿಸುವುದಾದರೆ ಅರಣ್ಯ ಇಲಾಖೆಯಿಂದ ಅನುದಾನ ನೀಡುವುದಾಗಿ ಅವರು ತಿಳಿಸಿದರು.