ಚಾಮರಾಜನಗರ ಜಿಲ್ಲೆಯ(Chamarajanagara) ಒಟ್ಟು ಐದು ತಾಲ್ಲೂಕಿನಲ್ಲಿ ಪಂಚಾಯತ್(Panchayat) ಮಟ್ಟದಲ್ಲಿ ಸಹಜ ಕೃಷಿ(Organic Farming) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ರೈತರು ಮತ್ತು ಚಾಮರಾಜನಗರ ಜಿಲ್ಲಾಡಳಿತ, ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಕೃಷಿ ವಿಜ್ಞಾನ ಕೇಂದ್ರದ(Horticulture, Agriculture, Animal Husbandry, Agricultural Science centre)ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಲಾಯಿತು.
ಚಾಮರಾಜನಗರ ಜಿಲ್ಲೆಯ ಒಟ್ಟು 130 ಗ್ರಾಮ ಪಂಚಾಯಿತಿಗಳ ಪೈಕಿ ಕನಿಷ್ಠ 50 ಪಂಚಾಯಿತಿಗಳನ್ನು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು,ಸಹಜ ಕೃಷಿ ಮಾಡಲು ಇಚ್ಛಿಸುವ ಆಯ್ದ ರೈತರಿಗೆ ಹನಿ ನೀರಾವರಿ, ವಿವಿಧ ಸಸ್ಯಗಳು, ಮಾನವ ಶ್ರಮ ಮತ್ತು ಅವಶ್ಯವಿರುವ ಇತ್ಯಾದಿ ಒಳಹರಿವುಗಳನ್ನು ಮತ್ತು ಸೂಕ್ತ ತರಬೇತಿ ಒದಗಿಸಕೊಡುವ ಮೂಲಕ ಸಹಜ ಕೃಷಿಯನ್ನು ಅಳವಡಿಸಲು ನೆರವು ನೀಡಲು ಕಾರ್ಯಯೋಜನೆಯನ್ನು ರೂಪಿಸಲಾಯಿತು.
ಸಹಜ ಕೃಷಿಯನ್ನು ಮಾಡುವುದರಿಂದ ಹವಾಮಾನ ಬದಲಾವಣೆಗೆ ಪರಿಹಾರ, ಮಣ್ಣು ಮತ್ತು ನೀರಿನ ಸಂರಕ್ಷಣೆ, ರಾಸಾಯನಿಕ ಮುಕ್ತ ಆಹಾರ ಮತ್ತು ಮುಖ್ಯವಾಗಿ ರೈತರು ಸುಸ್ಥಿರ ಆದಾಯವನ್ನು ಪಡೆಯಬಹುದು ಎಂದು ಸದರಿ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಯವರು ಬಹಳ ಆಸಕ್ತಿಯಿಂದ ಒಪ್ಪಿಗೆ ನೀಡಿದ್ದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲಿ ಜಾರಿ ಮಾಡಲು ರೈತರೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದರು ಹಾಗು ಚಾಮರಾಜನಗರ ಜಿಲ್ಲೆಯಲ್ಲಿ ಅನುಷ್ಠಾನವಾಗುವ ಸಹಜ ಕೃಷಿ ಮಾದರಿ ಇಡೀ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ತುಮಕೂರಿನ ಗಾಂಧೀ ಸಹಜ ಬೇಸಾಯ ಶಾಲೆಯ ವಿಜ್ಞಾನಿ ಡಾ ಮಂಜುನಾಥ್ ಅವರು ಕಾರ್ಯಯೋಜನೆ ಅಳವಡಿಸಲು ಬೇಕಾದ ರೂಪುರೇಷಗಳ ಮಾಹಿತಿಯನ್ನು ಸವಿವರವಾಗಿ ಸಭೆಯಲ್ಲಿ ಮಂಡಿಸಿದರು, ರೈತರ ನಿಯೋಗದ ನೇತೃತ್ವವನ್ನು ರೈತ ಸಂಘದ ಮುಖಂಡರಾದ ಹೊನ್ನುರು ಪ್ರಕಾಶ್ ವಹಿಸಿದ್ದರು.ಸಹಜ ಕೃಷಿಯನ್ನು ತಮ್ಮ ಜಮೀನಿನಲಿ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಚಾಮರಾಜನಗರ ಜಿಲ್ಲೆಯ ರೈತರು ಈ ಸಮೊಹಿಕ ಪ್ರಯತ್ನದಲ್ಲಿ ಭಾಗಿಯಾಗಿ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಹಕಾರ ನೀಡುವಂತೆ ಮತ್ತು ಈ ಚಳುವಳಿಯ ಭಾಗವಾಗಿ ಕೆಲಸ ಮಾಡಲು ಮುಕ್ತ ಮನಸ್ಸು ಹೊಂದಿರುವವರು ಸಂಪರ್ಕ ಮಾಡುವಂತೆ ಕೋರಲಾಗಿದೆ.