ಕೃಷಿಯಲ್ಲಿ(Agriculture) ನಷ್ಟವೇ ಜಾಸ್ತಿ. ನಮಗೆ ಅದರ ಸಹವಾಸವೇ ಬೇಡ ಎಂದು ಪೇಟೆ ಪಟ್ಟಣ(City) ಸೇರಿ ಬದುಕಿಗಾಗಿ ಸಣ್ಣ ಉದ್ಯೋಗ(Job) ನೆಚ್ಚಿ, ನಮಗಿನ್ನು ಆ ಊರಿನ(Village) ಸಹವಾಸ ಬೇಡ ಎಂದು ಹೇಳುವವರೇ ಅಧಿಕ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ವೆಚ್ಚ, ಕಾಡುಪ್ರಾಣಿಗಳ ಹಾವಳಿ, ನೈಸರ್ಗಿಕ ವಿಕೋಪ, ಬೆಲೆ ಏರಿಳಿತದ ಆಟೋಟಪದಿಂದ ರೈತರು(Farmer) ಹೈರಾಣಾಗಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಇರುವೈಲ್ ಗ್ರಾಮದ ಶಂಕರ್ ಶೆಟ್ಟಿ ಅವರ ಇಡೀ ಕುಟುಂಬ ಭೂಮಿತಾಯಿಯನ್ನು ಹಸನಾಗಿಸಿ ಬೆವರು ಹರಿಸಿ ದುಡಿಯುವ ಮೂಲಕ ಸಮಗ್ರ ಕೃಷಿ ತತ್ವ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಮಿಶ್ರಕೃಷಿಯಿಂದ ರೈತನಿಗೆ ಸೋಲಿಲ್ಲ ಜಯದ ಮಾತೆ ಎಲ್ಲ ಎಂಬ ಧ್ಯೇಯ ವ್ಯಾಕ್ಯಕ್ಕೆ ಬಲ ತುಂಬಿದ್ದಾರೆ. ಅದೇ ರೀತಿ ಅವರ ಏಳು ಮಂದಿ ಮಕ್ಕಳು ಕೂಡ ತಂದೆಯ ಕೃಷಿ ಕನಸಿಗೆ ಸಾಥ್ ನೀಡುವ ಮೂಲಕ ಕೃಷಿ ಸ್ವರ್ಗವನ್ನೇ ರೂಪಿಸಿದ್ದಾರೆ.
ಶೆಟ್ಟರ ತುಂಬು ಕುಟುಂಬದ ಶ್ರಮ ಸಾಹಸದ ಕಥೆ ಇಲ್ಲಿದೆ : ಇರುವೈಲ್ ಶಂಕರ ಶೆಟ್ಟಿ ತಮಗೆ ದೊರೆತ ಪರಂಪರಾಗತ ಭೂಮಿಯಲ್ಲಿ ಅಡಿಕೆ, ತೆಂಗು, ವೀಳ್ಯದೆಲೆ, ಕಾಳುಮೆಣಸು, ತರಕಾರಿ ಬೆಳೆಯುತ್ತಿದ್ದರು. ಆದರೆ ಇವರ ಸಮಗ್ರ ಕೃಷಿ ಚಿಂತನೆಗೆ ದೊಡ್ಡ ಮಟ್ಟದ ಬೂಸ್ಟ್ ದೊರೆತಿದ್ದು, ಅಂದು ಜಗತ್ತನ್ನು ಆವರಿಸಿ ಸಾವಿರಾರು ಜನರನ್ನು ಕಂಗೆಡಿಸಿದ ಕೋವಿಡ್ ಮಹಾಮಾರಿ. ಅಂದು 2020ರ ಸಮಯ ಇಡೀ ದೇಶಕ್ಕೆ ಬೀಗ ಬಿದ್ದಂತೆ ರಸ್ತೆ ಗಳು ನಿರ್ಜನವಾಗಿರುತ್ತಿತ್ತು. ಪ್ರತಿಯೊಬ್ಬರಿಗೂ ಅಂದು ಮನೆಯಿಂದ ಹೊರಗೆ ಕಾಲಿಟ್ಟರೆ ನಮ್ಮನ್ನೆಲ್ಲಿ ಆ ಕೋವಿಡ್ ಮಹಾಮಾರಿ ಹೊಸಕಿ ಹಾಕುತ್ತದೆ ಎಂಬ ಭಯ. ಅಂತಹ ಸಮಯದಲ್ಲಿ ಟ್ರಾವೆಲ್ ಬ್ಯುಸೆನಸ್ ಮಾಡುತ್ತಿದ್ದ ಶೆಟ್ಟಿ ಅವರ ಪುತ್ರ ನವೀನ್ ಕೂಡ ಅನಿವಾರ್ಯವಾಗಿ ತಮ್ಮ ವಾಹನಗಳನ್ನು ಮನೆಯಲ್ಲಿ ನಿಲ್ಲಿಸಿ ಸುಮ್ಮನೆ ಕುಳಿತುಕೊಳ್ಳುವಂತಾಯಿತು.
ಆದರೆ, ಅವರ ಮನಸ್ಸು ಏನನ್ನಾದರೂ ಸಾಧಿಸುವ ತುಡಿತದಲ್ಲಿತ್ತು. ಅದಕ್ಕೆ ತಕ್ಕಂತೆ ಮನೆಯಲ್ಲಿದ್ದ ಕೃಷಿ ಭೂಮಿಯನ್ನೇ ತಮ್ಮ ಪ್ರಯೋಗ ಶಾಲೆಯನ್ನಾಗಿ ಕಂಡರು. ಉಳಿದ ಯುವಕರಂತೆ ಮೊಬೈಲ್ ಒತ್ತುತ್ತಾ ಸಮಯ ಕಳೆಯದೆ, ಕಾಲವಿಧಿಯನ್ನು ಶಪಿಸದೇ, ಕೋವಿಡ್ ಬಗ್ಗೆ ಪ್ಯಾನಿಕ್ ಆಗದೇ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮುಂದಡಿಯಿಟ್ಟರು. ಮೊದಲಿಗೆ ಊರ ಕೋಳಿ ಸಾಕಲು ಆರಂಭಿಸಿದರು. ನಂತರ ಜೇನು, ಮುಂದೆ ಆಡು ಹೀಗೆ ಸಾಗುತ್ತದೆ ಸಮಗ್ರ ಕೃಷಿಯ ಸಮಚಿತ್ತದ ಪಯಣ. ಇದೀಗ ಶೆಟ್ಟರ ಮನೆಯಲ್ಲಿ 700 ಕ್ಕೂ ಅಧಿಕ ಊರ ಕೋಳಿ, 5 ಸಾವಿರಕ್ಕೂ ಅಧಿಕ ಬ್ರಾಯ್ಲರ್ ಕೋಳಿಗಳಿವೆ. ಅಲ್ಲದೆ ಆಡು, ಹಸು ಸಾಕಣೆ ಇದೆ.
ಕಟ್ಟದ ಕೋಳಿಗಳ ನೆಚ್ಚಿನ ಸ್ಪಾಟ್ : ಕರಾವಳಿಯಲ್ಲಿ ಸಾಂಪ್ರದಾಯಿಕ ಕೋರಿ ಕಟ್ಟಕ್ಕೆ ಸಾವಿರಾರು ವರ್ಷಗಳ ಜನಪದ ಇತಿಹಾಸವಿದೆ. ಅದರೊಂದಿಗೆ ದೈವಿಕತೆಯೂ ಬೆರತಿದೆ. ಅದೇ ಕಾರಣಕ್ಕೆ ಊರಿನ ಕೋಳಿ ಕಟ್ಟ ಸಖತ್ ಫೇಮಸ್ ಆಗಿದೆ. ಕಟ್ಟದ ಕೋಳಿಗಳಿಗೂ ಸಹಜವಾಗಿಯೇ ಅಧಿಕ ಬೇಡಿಕೆಯಿದೆ. 8 ವರ್ಷದಿಂದ ಶೆಟ್ಟರ ಮನೆಯಲ್ಲಿ ಸಹಜ ವಾತಾವರಣದಲ್ಲಿ ಬೆಳೆದಿರುವ ಊರ ಕೋಳಿ (ಕಟ್ಟದ ಕೋರಿ)ಗೆ ಅದ್ಭುತ ಡಿಮಾಂಡ್ ಇದೆ. ಒಮ್ಮೆ ಕೋಳಿ ಕೊಂಡು ಹೋದವರು ಮತ್ತು ನಾಲ್ಕು ಜನರಿಗೆ ಹೇಳಿ, ಅದು ಬಾಯಿಂದ ಬಾಯಿಗೆ ಹರಡಿ ಬೆಳಗಾವಿಯವರೆಗೂ ಇವರ ಕೋಳಿಗಳು ಸಾಗಿವೆ.
ಅಂದರೆ, ಅಲ್ಲಿಗೂ ಕೂಡ ಕೋಳಿಗಳನ್ನು ಪೂರೈಸಿದ ಅನುಭವ ಇವರಲ್ಲಿದೆ. ಬೆಳ್ತಂಗಡಿ, ಉಡುಪಿ, ಉಜಿರೆ, ಪುತ್ತೂರು, ಬೆಳಗಾವಿಗೂ ಇವರು ಕೋಳಿಗಳನ್ನು ಕಳಿಸಿದ್ದಾರೆ. ಇದೀಗ 700 ಕ್ಕೂ ಅಧಿಕ ಕೋಳಿಗಳು ಇವರ ಬಳಿ ಇದೆ. ಶೆಟ್ಟರು ಕೋಳಿ ಗೂಡಿನ ಬಳಿ ಸಾಗಿ ಇದು ಕೆಂಪು ಉರಿಯ, ಇದು ನೀಲ, ಕಾವೇ ಮಂಜಲ್, ಇದು ಬೊಲ್ಲೆ ಕೋರಿ ಎಂದು ಕರೆದಾಗ ಮೂಕ ಪ್ರಾಣಗಳು ತಮ್ಮದೇ ಭಾಷೆಯಲ್ಲಿ ಓಗೊಡುವ ಪರಿ ಅನನ್ಯ. ಈ ಕೋಳಿಗಳಿಗೆ ಕಾಯಿಲೆ ಬಂದಾಗ ಊರಿನ ಮದ್ದನ್ನು ನೀಡುತ್ತಾರೆ. ಇದರಿಂದ ಕೋಳಿಗಳು ಸ್ಟ್ರಾಂಗ್ ಆಗಿ ಫೈಟಿಂಗ್ ನಲ್ಲಿ ಜಯ ಸಾಧಿಸುತ್ತವೆ ಎನ್ನುತ್ತಾರೆ ಶೆಟ್ಟರು.
ಕಾವು ಕೊಡಲು ಪ್ರತ್ಯೇಕ ಶೆಡ್, ಕೋಳಿಗಳಿಗೆ ಸ್ವಿಮ್ಮಿಂಗ್: ಊರಿನ ಕೋಳಿಗಳು ಮೇಟಿಂಗ್ ಆಗಲು, ನಂತರ ಕಾವು ಕೊಡಲು ಪ್ರತ್ಯೇಕ ಶೆಡ್ ವೊಂದನ್ನು ಶೆಟ್ಟರ ಕುಟುಂಬ ನಿರ್ಮಿಸಿದೆ. ಇದಕ್ಕೆ ಸಂಬಂಧಿಸಿದಂತೆ ಡೇಟ್ ಚಾರ್ಟ್ ಕೂಡ ಅಳವಡಿಸಿಕೊಂಡಿರುವುದು ಮತ್ತೊಂದು ವೈಶಿಷ್ಟ್ಯ. ಫೈಟರ್ ಕೋಳಿಗಳಿಗೆ ತಿಂಗಳಿನಲ್ಲಿ ಒಮ್ಮೆ ಈಜಲು ಕೆರೆಗೆ ಕೊಂಡುಹೋಗುತ್ತಾರೆ. ಇದರಿಂದ ಕೋಳಿಗಳು ಬಲಿಷ್ಠವಾಗುತ್ತವೆ ಎನ್ನುತ್ತಾರೆ.
ಬ್ರಾಯ್ಲರ್ ಕೋಳಿಗಳಿಂದ 6 ಲಕ್ಷಕ್ಕಿಂತಲೂ ಅಧಿಕ ಆದಾಯ: ಶೆಟ್ಟರು ಊರಿನ ಫೈಟರ್ ಕೋಳಿಗಳಲ್ಲದೆ 12 ವರ್ಷದಿಂದ ಬ್ರಾಯ್ಲರ್ ಕೋಳಿ ಸಾಕಣೆಗೆ ದೊಡ್ಡ ಶೆಡ್‌ವೊಂದನ್ನು ನಿರ್ಮಿಸಿದ್ದಾರೆ. ಆದರೆ ಅದಕ್ಕೆ ದೊಡ್ಡ ಮಟ್ಟದ ವೆಚ್ಚವೇನೂ ಮಾಡಿಲ್ಲ. ಸಾಧಾರಣ ಶೆಡ್ ನಲ್ಲಿ ಕೋಳಿಗಳನ್ನು ಇರಿಸುತ್ತಾರೆ, ಆ ಮೂಲಕ ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ. ವರ್ಷದಲ್ಲಿ ಕೋಳಿ ಸಾಕಣೆ ಮೂಲಕ 6 ಲಕ್ಷಕ್ಕಿಂತಲೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ವರ್ಷಕ್ಕೆ 5 ಬಾರಿ ಕೋಳಿಗಳನ್ನು ಸೇಲ್ ಮಾಡುತ್ತಿದ್ದು, ಸೆಕೆಗಾಲದಲ್ಲಿ ನೀರಿನ ಕೊರತೆಯಾಗದಂತೆ, ಫೀಡ್ ಸಮರ್ಪಕವಾಗಿ ಪೂರೈಕೆ ಮಾಡಿದಲ್ಲಿ ಕೋಳಿ ಸಾಕಣೆ ಬದುಕಿಗೆ ದೊಡ್ಡ ಬಲ ನೀಡಲಿದೆ ಎನ್ನುತ್ತಾರೆ ಶೆಟ್ಟರು.
ಮಹಾರಾಷ್ಟ್ರದಿಂದ ಬಂದ ಆಡು ಮನೆ ಬೆಳಗಿತು : ಮಹಾರಾಷ್ಟ್ರದಿಂದ ಶೆಟ್ಟಿ ಅವರು ರಾಜಸ್ಥಾನ ತಳಿಯ 5 ಆಡುಗಳನ್ನು ಮೊದಲು ಇವರು ತಂದಿದ್ದರು. ಇದೀಗ ಇದೇ ಆಡುಗಳು ಮರಿ ಇಟ್ಟು ಕುಟುಂಬ ದೊಡ್ಡದಾಗಿದೆ. ರಂಜಾನ್ ಹಬ್ಬದ ವೇಳೆ ಈ ಆಡುಗಳಿಗೆ ಭರ್ಜರಿ ಡಿಮಾಂಡ್ ಇದೆ. ಆ ವೇಳೆ 15-20 ಸಾವಿರಕ್ಕೆ ನಮ್ಮ ಮನೆಯಿಂದಲೇ ಆಡುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆಡುಗಳಿಗೆ ನಾವು ಸಿಂಪಲ್ ಆಗಿ ಅಡಿಕೆ ಮರದ ಅಟ್ಟವೊಂದನ್ನು ನಿರ್ಮಿಸಿದ್ದೇವೆ. ಅದಕ್ಕಾಗಿ ಹೆಚ್ಚಿನ ಆಹಾರವೇನು ನೀಡುವುದಿಲ್ಲ. ಮಧ್ಯಾಹ್ನ ನಂತರ ಹೊರಗೆ ಬಿಡುತ್ತೇವೆ. ನೈಸರ್ಗಿಕವಾಗಿ ದೊರೆಯುವ ಸೊಪ್ಪು ಸೌದೆಯನ್ನೇ ಅವುಗಳು ತಿನ್ನುತ್ತವೆ ಎಂದು ತಮ್ಮ ಅನುಭವದ ಮಾತು ಹೇಳುತ್ತಾರೆ ಶೆಟ್ಟರು. ಹೊಟ್ಟೆ ನೋವಿನ ಸಮಸ್ಯೆ ಇವುಗಳಿಗೆ ಕಾಡುವ ಪ್ರಮುಖ ಸಮಸ್ಯೆ ಅದನ್ನು ನಿವಾರಿಸಿದಲ್ಲಿ ಹೆಚ್ಚೇನು ತಾಪತ್ರಯವಿಲ್ಲ ಎಂದು ವಿವರಿಸುತ್ತಾರೆ. ಕರಾವಳಿ ತಂದ ಮೊದಲ ಸಮಯದಲ್ಲಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಆದರೆ ಇದೀಗ ಅದೆಲ್ಲ ಸಮಸ್ಯೆ ನಿವಾರಣೆಯಾಗಿದೆ. ಆದರೆ ಆಡಿನ ಗಾತ್ರ ಚಿಕ್ಕದಾಗಿದೆ ಎನ್ನುತ್ತಾರೆ.
ಅಜೋಲ ಕೃಷಿ ಕಮಾಲ್: ಕೋಳಿಗಳಿಗೆ ಆಹಾರವಾಗಿ ನೀಡಲು ಅಜೋಲ ಬೆಳೆಗೆ ಪ್ಲಾಸ್ಟಿಕ್ ತೊಟ್ಟಿಯೊಂದನ್ನು ನಿರ್ಮಿಸಿದ್ದಾರೆ. ಅಜೋಲದಿಂದ ಕೋಳಿಗಳಿಗೆ ಹೆಚ್ಚಿನ ಪ್ರೋಟಿನ್ ಅಂಶ ದೊರೆಯುವ ಕಾರಣ ಈ ತೊಟ್ಟಿ ನಿರ್ಮಿಸಿದ್ದಾರೆ.
ಹಸು ಸಾಕಣೆ: ಶಂಕರ್ ಶೆಟ್ಟಿ ಅವರು ಹಸು ಸಾಕಣೆಯಲ್ಲಿಯೂ ಹಿಂದೆ ಬಿದ್ದಿಲ್ಲ. ಹಲವು ಹಸುಗಳನ್ನು ಹೊಂದಿರುವ ಈ ಕುಟುಂಬ ಹೈನುಗಾರಿಕೆಗೆ ಅನುಕೂಲವಾಗುವಂತೆ ಹುಲ್ಲುಕತ್ತರಿಸುವ ಯಂತ್ರ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿಕೊಂಡು ಶಹಬ್ಬಾಸ್ ಎನಿಸಿಕೊಂಡಿದೆ.
ಜೇನು ಕೃಷಿ: ಶಂಕರ್ ಶೆಟ್ಟಿ ಅವರ ಕುಟುಂಬ ಜೇನು ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದು, ಅಡಕೆ ಕೃಷಿಗೆ ಪೂರಕವಾದ ಜೇನಿನ ಮಹತ್ವ ಅರಿತು ಕಳೆದೆರಡು ವರ್ಷಗಳಿಂದ ತೋಟದಲ್ಲಿನ ಹಲವು ಕಡೆ ಜೇನು ಪಟ್ಟಿಗೆ ಇರಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಕಾರ ಮರೆಯಲು ಹೇಗೆ ಸಾಧ್ಯ: ಶಂಕರ್ ಶೆಟ್ಟಿಯವರ ಅಡಿಕೆ ತೋಟಕ್ಕೆ ನೀರಿನ ಕೊರತೆ ಬಹುವಾಗಿ ಕಾಡಿತ್ತು. ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆರವು ಪಡೆದು ಬೋರ್ ಹಾಕಿ ತೋಟಕ್ಕೆ ನೀರಿನ ಮೂಲ ಕಂಡುಕೊಂಡು ಅಡಿಕೆ ಕೃಷಿಗೆ ಭದ್ರ ಜಲಮೂಲ ಕಂಡುಕೊಂಡಿದ್ದಾರೆ.
ಕುಟುಂಬದ ಸಹಕಾರ: ಪತ್ನಿ ಸರ್ವಾಣಿ, ಅತ್ತೆ, ಗರಿಷ್ಠ ಶಿಕ್ಷಣ ಪಡೆದಿರುವ ಪುತ್ರರಾದ ನವೀನ್, ವಿನಯ್, ಧನಂಜಯ, ಚೇತನ್, ಗುರುಪ್ರಸಾದ್, ಚಿದಾನಂದ, ಚರಣ್ ಅವರು ತಂದೆ ಶಂಕರ್ ಶೆಟ್ಟಿ ಅವರ ಕೃಷಿ ಕಾರ್ಯಕ್ಕೆ ಹೆಗಲು ಕೊಟ್ಟು ದುಡಿಯುತ್ತಿದ್ದು, ಕೃಷಿ ಭೂಮಿಯನ್ನು ನಂದನವನದಂತೆ ಕಂಗೊಳಿಸುವಂತೆ ಮಾಡಿದ್ದಾರೆ. ಕೃಷಿ ಅಳಿದರೆ ದೇಶ ಅಳಿಯುತ್ತದೆ. ಪ್ರಧಾನಿ, ಆಗಲಿ ರಾಷ್ಟ್ರಪತಿಯೇ ಆಗಲಿ ಬೆಳಗ್ಗೆ ಎದ್ದ ತಕ್ಷಣ ರೈತ ಉತ್ಪಾದಿಸಿದ ಅಮೃತ ಸಮಾನವಾದ ಹಾಲನ್ನು ಕುಡಿದು ದಿನ ಆರಂಭಿಸುತ್ತಾರೆ. ಕಂಪ್ಯೂಟರ್ ಮುಂದೆ ಕುಳಿತು ದೇಶಕ್ಕೆ ಅನ್ನ ನೀಡಲು ಸಾಧ್ಯವಿಲ್ಲ. ರೈತ ಭೂಮಿಗಿಳಿದು ಬೆವರು ಹರಿಸಲೇಬೇಕು. ದೇಶದ ಪ್ರಗತಿಯಾಗಲು ರೈತರು ಅಭಿವೃದ್ಧಿಯಾದರೆ ಮಾತ್ರ ಸಾಧ್ಯ. ಅದೇ ರೀತಿ ಶಂಕರ್ ಶೆಟ್ಟಿ ಅವರ ಇಡೀ ಕುಟುಂಬ ಭೂಮಿಯನ್ನು ಕೃಷಿ ಸ್ವರ್ಗವನ್ನಾಗಿಸಿದೆ. ಸಮಗ್ರ ಕೃಷಿ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿರುವ ಶಂಕರ ಶೆಟ್ಟಿ ಅವರ ಕುಟುಂಬವನ್ನು ಸರ್ಕಾರ ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
(ಮನೋಹರ್ ಶೆಟ್ಟಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ)